Foxconn Recruitment: 2026ಕ್ಕೆ 50,000ಕ್ಕೂ ಅಧಿಕ ಉದ್ಯೋಗ ನೇಮಕಾತಿ ಗುರಿ: ಎಂಬಿ ಪಾಟೀಲ್
ಬೆಂಗಳೂರು: ಕೋಟ್ಯಾಂತರ ರೂಪಾಯಿ ಹೂಡಿಕೆಯೊಂದಿಗೆ ಆಪಲ್ ಐಫೋನ್ ತಯಾರಿಕಾ ಕಂಪನಿ 'ಫಾಕ್ಸ್‌ಕಾನ್' (Foxconn) ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೇವನಹಳ್ಳಿಯಲ್ಲಿ ತನ್ನ ಬೃಹತ್ ಘಟಕ ಸ್ಥಾಪಿಸಿದೆ. ಇದಾಗಿ ಕೆಲವೇ ತಿಂಗಳಲ್ಲಿ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಇದರಲ್ಲಿ ಶೇಕಡಾ 80ರಷ್ಟು ಮಹಿಳೆಯರಿಗೆ ಅವಕಾಶ ನೀಡಿರುವುದು ವಿಶೇಷವಾಗಿದೆ.
ಇದೇ ವಿಚಾರವನ್ನು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹಂಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ರೂಪಿಸಿರುವ ಉದ್ಯಮಸ್ನೇಹಿ ವಾತಾವರಣ ಮತ್ತು ಕೈಗಾರಿಕಾ ಸ್ಥಾಪನೆಗೆ ನೀಡುತ್ತಿರುವ ಸಕ್ರಿಯ ಬೆಂಬಲದಿಂದ ಇದೆಲ್ಲ ಸಾಧ್ಯವಾಗಿದೆ. ಫಾಕ್ಸ್‌ಕಾನ್ ಸಂಸ್ಥೆ ದೇವನಹಳ್ಳಿಯಲ್ಲಿ ಐಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಅದರ ಬೆನ್ನಲ್ಲೆ ಬೃಹತ್ ಉದ್ಯೋಗ ನೇಮಕಾತಿ ಮಾಡಿಕೊಂಡಿದೆ ಎಂದರು.

ಫಾಕ್ಸ್‌ಕಾನ್ ಕೆಲವೇ ತಿಂಗಳಲ್ಲಿ 30,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಭಾರತದಲ್ಲಿ ಯಾವುದೇ ಕಾರ್ಖಾನೆಗೆ ಸಾಧ್ಯವಾಗದಂತ ಸಾಧನೆಯನ್ನು ಫಾಕ್ಸ್‌ಕಾನ್ ಅತಿವೇಗದಲ್ಲಿ ಮಾಡಿದೆ. ಉದ್ಯೋಗ ವಿಸ್ತರಣೆಯ ಐತಿಹಾಸಿಕ ಸಾಧನೆಯಾಗಿದೆ.
ಈ ಘಟಕದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಲ್ಲಿ ಶೇ.80ರಷ್ಟು ಮಹಿಳೆಯರೇ ಇದ್ದಾರೆ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೂ ಮಹತ್ವದ ಕೊಡುಗೆ ನೀಡಲಾಗಿದೆ ಎಂದು ಶ್ಲಾಘಿಸಿದರು.
50,000ಕ್ಕೂ ಅಧಿಕ ಉದ್ಯೋಗ ಗುರಿ
ಫಾಕ್ಸ್‌ಕಾನ್ ನಿಂದ 30,000 ಉದ್ಯೋಗ ಅವಕಾಶಗಳು ದೊರೆತಿವೆ. 24,000ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಲಭಿಸಿದೆ. ಮುಂದಿನ ಒಂದು ವರ್ಷದಲ್ಲಿ 2026 ಅಂತ್ಯದ ವೇಳೆಗೆ 50,000ಕ್ಕೂ ಅಧಿಕ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಎಂಬಿ ಪಾಟೀಲರು ತಿಳಿಸಿದರು.
2024-29ರ ನೂತನ ಕೈಗಾರಿಕಾ ನೀತಿಯಡಿ, ಮಹಿಳಾ ಉದ್ಯೋಗಿಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಹೊಂದಿರುವ ಕೈಗಾರಿಕೆಗಳಿಗೆ ಕರ್ನಾಟಕ ಸರ್ಕಾರ ವಿಶೇಷ ಪ್ರೋತ್ಸಾಹಗಳನ್ನು ನೀಡುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಫಾಕ್ಸ್‌ಕಾನ್ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಲಾಗಿದೆ. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಕರ್ನಾಟಕ ಮುನ್ನಡೆಯುತ್ತಿದೆ. ಕರ್ನಾಟಕವು ಎಲ್ಲಾ ರೀತಿಯ ಕೈಗಾರಿಕಾ ಬೆಳವಣಿಗೆಗೆ ದಿಕ್ಕು ತೋರಿಸುವ ತನ್ನ ನಾಯಕತ್ವ ಸಾಬೀತುಪಡಿಸುತ್ತಿದೆ ಎಂದು ಅವರು ವಿವರಿಸಿದರು.
14,000 ಕೋಟಿ ರೂಪಾಯಿ ಹೂಡಿಕೆ
ರಾಜ್ಯ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ವಿದೇಶಿ ಕಂಪನಿಗಳ ಹೂಡಿಕೆ ಹೆಚ್ಚಳಕ್ಕೆ ಅಗತ್ಯ ಸಹಕಾರ ನೀಡುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ 14,000 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಪಾಕ್ಸ್‌ಕಾನ್, ಕಳೆದ ವರ್ಷ 2024ರಲ್ಲಿ ದೇವನಹಳ್ಳಿಯಲ್ಲಿ ತನ ಹೊಸ ತಯಾರಿಕಾ ಘಟಕ ಆರಂಭಿಸಿತ್ತು. ಅದಕ್ಕಾಗಿ ಸುಮಾರು 300 ಎಕರೆ ಭೂಮಿಯನ್ನು ಸರ್ಕಾರ ಹಸ್ತಾಂತರಿಸಿತ್ತು. ಹೂಡಿಕೆ, ಘಟಕದ ಕಾರ್ಯಾರಂಭಕ್ಕೆ ಅಗತ್ಯ ಸಹಕಾರ ನೀಡಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ಭರ್ಜರಿ ನೇಮಕಾತಿ ಮಾಡಿಕೊಳ್ಳುವ ಮೂಲಕ ರಾಜ್ಯದ ನಿರುದ್ಯೋಗಿಗಳಿಗೆ ಪಾಕ್ಸ್‌ಕಾನ್ ಆಸರೆಯಾಗಿದೆ.












Click it and Unblock the Notifications