ಟೆಕ್ಕಿಗಳಿಗೆ ಸಿಹಿಸುದ್ದಿ, ನಿವೃತ್ತಿ ವಯೋಮಿತಿ ಏರಿಕೆ
ಬೆಂಗಳೂರು, ಜನವರಿ 11: ಪ್ರಮುಖ ಬೆಳವಣಿಗೆಯೊಂದರಲ್ಲಿ ಐಟಿ ಕಂಪನಿಯೊಂದು ಭಾರತೀಯ ಉದ್ಯೋಗಿಗಳ ನಿವೃತ್ತಿ ವಯೋಮಿತಿ ಏರಿಕೆ ಮಾಡಿದೆ. ಹೊಸ ನಿಯಮ 2024ರ ನವೆಬರ್‌ನಿಂದಲೇ ಜಾರಿಗೆ ಬಂದಿದೆ. ಅನುಭವಿ ಉದ್ಯೋಗಿಗಳ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದೆ. ವಯೋಮಿತಿ ಏರಿಕೆ ಕುರಿತು ಕಂಪನಿಯ ಉದ್ಯೋಗಿಗಳಿಗೆ ಆಂತರಿಕವಾಗಿ ಇ-ಮೇಲ್ ಕಳಿಸಿ ಮಾಹಿತಿಯನ್ನು ನೀಡಲಾಗಿದೆ.
ಕಾಗ್ನಿಜೆಂಟ್ ಭಾರತೀಯ ಉದ್ಯೋಗಿಗಳ ನಿವೃತ್ತಿ ವಯೋಮಿತಿಯನ್ನು 58 ರಿಂದ 60ಕ್ಕೆ ಏರಿಕೆ ಮಾಡಿದೆ. ಭಾರತದಲ್ಲಿನ ಎಲ್ಲಾ ಕಾರ್ಯನಿರ್ವಹಣಾ ಸ್ಥಳಗಳಿಗೆ ಇದು ಅನ್ವಯವಾಗಲಿದೆ ಎಂದು ಕಂಪನಿಯ ಆಂತರಿಕ ಸಂದೇಶದಲ್ಲಿ ತಿಳಿಸಲಾಗಿದೆ. ಅನುಭವಿ ಉದ್ಯೋಗಿಗಳನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಹಲವಾರು ಐಟಿ ಕಂಪನಿಗಳು ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58ಕ್ಕೆ ನಿಗದಿ ಮಾಡಿವೆ. ಇಂತಹ ಸಮಯದಲ್ಲಿ ಕಾಗ್ನಿಜೆಂಟ್ ಭಾರತೀಯ ಉದ್ಯೋಗಿಗಳ ನಿವೃತ್ತಿ ವಯೋಮಿತಿಯನ್ನು 60ಕ್ಕೆ ಏರಿಕೆ ಮಾಡಿದೆ. ವಿದೇಶದಿಂದ ಪೇ ರೋಲ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೇ ಭಾರತಕ್ಕೆ ಮರಳಿದ ಉದ್ಯೋಗಿಗಳಿಗೂ ಸಹ ಈ ನಿಯಮ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ನಿವೃತ್ತಿ ಸೌಲಭ್ಯಗಳು: ಉದ್ಯೋಗಿಗಳ ವಯೋಮಿತಿ ಏರಿಕೆಯಾದರೂ ಸಹ ಪಿಎಫ್ ಸೇರಿದಂತೆ ನಿವೃತ್ತಿ ಸೌಲಭ್ಯಗಳು 58ನೇ ವರ್ಷಕ್ಕೆ ಅಂತ್ಯವಾಗುತ್ತದೆ. ವಿಶೇಷ ಅನುಮತಿಯನ್ನು ಪಡೆದು ಪಿಎಫ್ ಅನ್ನು ಸಹ ಮುಂದುವರೆಸಬಹುದು ಎಂದು ಹೇಳಿದೆ. 2024ರ ನವೆಂಬರ್‌ನಿಂದಲೇ ಈ ನಿಯಮ ಜಾರಿಗೆ ಬಂದಿದೆ ಎಂದು ಉದ್ಯೋಗಿಗಳಿಗೆ ಮಾಹಿತಿ ನೀಡಲಾಗಿದೆ.
ಕಾಗ್ನಿಜೆಂಟ್‌ನ ಸಿಇಒ ರವಿಕುಮಾರ್ ಎಸ್. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಏಪ್ರಿಲ್‌ನಲ್ಲಿ ಅವರು ಒಂದು ಬಾರಿಯ ಹೆಚ್ಚುವರಿ ವೇತನ ಏರಿಕೆಯನ್ನು ಘೋಷಣೆ ಮಾಡಿದ್ದರು. ಕಂಪನಿಯ ವಾರ್ಷಿಕ ವೇತನ ಏರಿಕೆಯ ಒಂದು ತಿಂಗಳ ಬಳಿಕ ಈ ಘೋಷಣೆ ಮಾಡಲಾಗಿತ್ತು. 2024ರ ಸೆಪ್ಟೆಂಬರ್‌ನಲ್ಲಿ 13,000 ಉದ್ಯೋಗಿಗಳು ವಾಪಸ್ ಆಗಿದ್ದಾರೆ ಎಂದು ಸಿಇಒ ರವಿಕುಮಾರ್ ಎಸ್. ಹೇಳಿದ್ದರು.
ನಿವೃತ್ತಿ ವಯೋಮಿತಿ 58 ರಿಂದ 60ಕ್ಕೆ ಏರಿಕೆ ಮಾಡಿದ ಕ್ರಮವು ಹೊಸ ಮಾನದಂಡಗಳಿಗೆ ಹೊಂದಿಕೊಳ್ಳಲು ಸಹಾಯಕವಾಗಿದೆ. ಸಮರ್ಥ ವ್ಯಕ್ತಿಗಳನ್ನು ಆಕರ್ಷಿಸಲು ಮತ್ತು ಅವರನ್ನು ಕಾಪಾಡಿಕೊಳ್ಳಲು ಕಂಪನಿ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪೇರೋಲ್ ಬದಲಾವಣೆ ಇಲ್ಲದೇ ಸ್ಥಳಾಂತರಗೊಂಡವರಿಗೂ ಇದು ಅನ್ವಯವಾಗುವುದರಿಂದ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ಒಂದು ಸಂವಾದದಲ್ಲಿ ಸಿಇಒ ರವಿ ಕುಮಾರ್ ಎಸ್. ಜಾಗತಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಕಂಪನಿಯ ನೀತಿಗಳ ಕುರಿತು ಮಾತನಾಡಿದ್ದರು. ಜಾಗತಿಕ ತಂತ್ರಜ್ಞಾನ ಪರಿಸರದಲ್ಲಿ ಭಾರತದ ಮಹತ್ವ ಹೆಚ್ಚುತ್ತಿರುವ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಕಾಗ್ನಿಜಂಟ್ ಭಾರತದಲ್ಲಿ 2,50,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಮೊದಲು ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಾರ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಸಣ್ಣ ನಗರಗಳಲ್ಲೂ ಕಂಪನಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಎರಡನೇ ಹಂತದ ನಗರಗಳಲ್ಲೂ ಕಾರ್ಯಾಚರಣೆ ಮಾಡುವುದಕ್ಕೆ ಇಂಧೋರ್ ಉದಾಹರಣೆಯಾಗಿದೆ ಎದಂದು ಹೇಳಿದ್ದರು.












Click it and Unblock the Notifications