ಚಿಕ್ಕಬಳ್ಳಾಪುರದಲ್ಲಿ ಕೆಲಸ ಖಾಲಿ ಇದೆ; ಜ. 17ರ ತನಕ ಅರ್ಜಿ ಹಾಕಿ
ಚಿಕ್ಕಬಳ್ಳಾಪುರ, ಡಿಸೆಂಬರ್ 26; ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮಾಡಲು 17/1/2024 ಕೊನೆಯ ದಿನವಾಗಿದೆ.
ಶೀಘ್ರಲಿಪಿಗಾರ ಗ್ರೇಡ್-3 8, ಬೆರಳಚ್ಚುಗಾರ 14, ಬೆರಳಚ್ಚು ನಕಲುಗಾರ 6, ಚಾಲಕ 1 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಕರ್ನಾಟಕ ಅಧೀನ ನ್ಯಾಯಾಲಯಗಳ ಲಿಪಿಕ ಮತ್ತು ಇತರ ಹುದ್ದೆಗಳ ನೇಮಕಾತಿ ತಿದ್ದುಪಡಿ ನಿಯಮಗಳು 2021. ಕರ್ನಾಟಕ ನಾಗರೀಕ ಸೇವಾ (ಶೀಘ್ರಲಿಪಿಗಾರರ ಹಾಗೂ ಬೆರಳಚ್ಚುಗಾರರ ಹುದ್ದೆಗಳಿಗೆ ನೇಮಕಾತಿ) ನಿಯಮಗಳು 1983 ಅನ್ವಯ ಹುದ್ದೆಗಳನ್ನು ತುಂಬಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್‌ಸೈಟ್ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 200 ರೂ. ಮತ್ತು ಪ್ರವರ್ಗ-1, ಪ್ರವರ್ಗ 2ಎ, 2ಬಿ, 3ಎ, 3ಬಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿಸಬೇಕು.
ಅಭ್ಯರ್ಥಿಗಳಿಗೆ ಸೂಚನೆಗಳು
* ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಮೊದಲು ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು. ಸರಿಯಾದ ಮಾಹಿತಿ ನೀಡದೇ ಇರುವ ಮತ್ತು ಅಪೂರ್ಣ ಮಾಹಿತಿಯ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
* ಅಭ್ಯರ್ಥಿಗಳು ವಿವಿಧ ವರ್ಗಗಳಿಗೆ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಸದರಿ ಅರ್ಜಿಯಲ್ಲಿಯೇ ತಾವು ಕ್ಲೇಮು ಮಾಡುವ ತಮ್ಮ ಮೀಸಲಾತಿಗಳ ಬಗ್ಗೆ ನಮೂದಿಸತಕ್ಕದ್ದು.
* ಅಭ್ಯರ್ಥಿಗಳು ಮೊಬೈಲ್ ಸಂಖ್ಯೆಯನ್ನು ಹಾಗೂ ಇ-ಮೇಲ್ ಐಡಿಯನ್ನು ಕಡ್ಡಾಯವಾಗಿ ನಮೂದಿಸುವುದು. ಒಂದು ವೇಳೆ ಎಸ್‌ಎಂಎಸ್ ಅಥವಾ ಇ-ಮೇಲ್ ಮುಖಾಂತರ ಅಭ್ಯರ್ಥಿಗಳಿಗೆ ಸಂದೇಶ ತಲುಪದಿದ್ದಲ್ಲಿ ಪ್ರಾಧಿಕಾರವು ಹೊಣೆಯಾಗುವುದಿಲ್ಲ.
* ಅಭ್ಯರ್ಥಿಯು ಆನ್ ಲೈನ್ ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನೂ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಹಾಗೂ ಶುಲ್ಕವನ್ನು ತುಂಬಿದ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅರ್ಹತಾ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.
* ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.
* ಅರ್ಹ ಅಭ್ಯರ್ಥಿಗಳಿಗೆ ಎಸ್ ಎಂ ಎಸ್ ಮತ್ತು ಇ-ಮೇಲ್ ಮುಖಾಂತರ ಮಾತ್ರ ಮಾಹಿತಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಸದರಿ ಪಟ್ಟಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಗೆ / ಸಂದರ್ಶನಕ್ಕೆ ಕರೆಯಲಾಗುವುದು. ಅರ್ಹತಾ ಪರೀಕ್ಷೆಗೆ ಅಥವಾ ಸಂದರ್ಶನದ ಮಾಹಿತಿಯನ್ನು ಪತ್ರ ವ್ಯವಹಾರದ ಮೂಲಕ ಮಾಡಲಾಗುವುದಿಲ್ಲ.
* ಆನ್ ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸೇವಾ ನಿರತ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಸದರಿ ಹುದ್ದೆಗೆ ಆಯ್ಕೆಯಾದ ಪಕ್ಷದಲ್ಲಿ ಆಯ್ಕೆ ಪಟ್ಟಿ ಪ್ರಕಟವಾದ 30 ದಿನಗಳೊಳಗೆ ಪಡೆಯತಕ್ಕದ್ದು.
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ, ಮಹಿಳಾ ಅಭ್ಯರ್ಥಿಗಳು ಮಾಜಿ ಸೈನಿಕ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು, ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮೀಸಲಾತಿಗಳಿಗಾಗಿ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ ಆ ಹುದ್ದೆಗಳನ್ನು ಆಯಾ ಪಂಗಡಗಳ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
* ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆಯಾದ 3 ತಿಂಗಳ ಒಳಗೆ ಸರ್ಕಾರವು ಅನುಮೋದಿಸಿದ ಏಜೆನ್ಸಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರದ ಆದೇಶದ ಪ್ರಕಾರ ಉತ್ತೀರ್ಣರಾಗತಕ್ಕದ್ದು.
ಹುದ್ದೆಗಳ ವಿದ್ಯಾರ್ಹತೆ, ವೇತನ ಶ್ರೇಣಿ, ಅರ್ಜಿ ಸಲ್ಲಿಕೆ ಮಾಹಿತಿ ಮುಂತಾದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೋಡಿ.
https://chikkaballapur.dcourts.gov.in/












Click it and Unblock the Notifications