ಕೊಡಗಿನಲ್ಲಿ ಕೆಲಸ ಖಾಲಿ ಇದೆ: ವೇತನ 30 ರಿಂದ 58 ಸಾವಿರ ರೂ.ಗಳು
ಮಡಿಕೇರಿ, ಡಿಸೆಂಬರ್ 24; ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 16/1/2025 ಆಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 30,350 ರಿಂದ 58,250 ರೂ. ತನಕ ವೇತನವನ್ನು ನಿಗದಿ ಮಾಡಲಾಗಿದೆ. ಒಟ್ಟು ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ಸಂಖ್ಯೆ 32.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಕಿರಿಯ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಹುದ್ದೆಗಳ ಮೀಸಲಾತಿ ಇತರೆ ವರ್ಗ 9, ಮಹಿಳಾ ಅಭ್ಯರ್ಥಿ 11, ಗ್ರಾಮೀಣ ಅಭ್ಯರ್ಥಿ 7, ಅಂಗವಿಕಲರು 3, ಮಾಜಿ ಸೈನಿಕ, ಕನ್ನಡ ಮಾಧ್ಯಮ 1 ಹುದ್ದೆಗಳು.

ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 16/1/2025 ಕೊನೆಯ ದಿನವಾಗಿದೆ ಮತ್ತು ಶುಲ್ಕವನ್ನು ಪಾವತಿ ಮಾಡಲು 17/1/2025 ಕೊನೆಯ ದಿನ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಲು ವೆಬ್‌ಸೈಟ್ www.kodagudccbank.com
ವಯೋಮಿತಿ, ಇತರ ವಿವರಗಳು: ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಶೇ 55 ಕನಿಷ್ಟ ಅಂಕಗಳಿಕೆಯ ವಾಣಿಜ್ಯೇತರ ಪದವಿ ಅಥವಾ ಶೇ 50 ಕನಿಷ್ಟ ಅಂಕಗಳಿಕೆಯ ವಾಣಿಜ್ಯ ಪದವಿ. ಡಿಪ್ಲೊಮೋ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಮತ್ತು ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ. ಕನಿಷ್ಟ 6 ತಿಂಗಳು ಕಡಿಮೆ ಇಲ್ಲದ ಡಿಪ್ಲೊಮೋ ಇನ್ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ಸ್ ಸರ್ಟಿಫಿಕೇಟ್ ಕೋರ್ಸ್ ಮಾಡಿರತಕ್ಕದ್ದು.
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಗರಿಷ್ಟ ಸಾಮಾನ್ಯ ವರ್ಗಕ್ಕೆ 36 ವರ್ಷಗಳು, ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ 38 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ವರ್ಗಗಳಿಗೆ 40 ವರ್ಷಗಳು ಹಾಗೂ ಸರ್ಕಾರಿ ಆದೇಶದ ಅನುಸಾರ ಅಂಗವಿಕಲರು ಮತ್ತು ವಿಧವೆಯರಿಗೆ 10 ವರ್ಷ ಮತ್ತು ಮಾಜಿ ಸೈನಿಕರಿಗೆ ಮಿಲಿಟರಿ ಸೇವೆಯಲ್ಲಿ ಸೇವೆ ಸಲ್ಲಿಸಿದ ಅವಧಿ ಹಾಗೂ ಕನಿಷ್ಟ 15 ವರ್ಷ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವಂತಿರಬೇಕು.
ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು ಹಾಗೂ ಆನ್‌ಲೈನ್ ನೀಡಿರುವ ಸೂಚನೆಗಳನ್ವಯ ಅರ್ಜಿ ಭರ್ತಿ ಮಾಡತಕ್ಕದ್ದು. ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ದಾಖಲೆಗಳನ್ನು ಅಥವಾ ತಪ್ಪು ಅಪೂರ್ಣ ಮಾಹಿತಿಗಳನ್ನು ನೀಡಿದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ತಿರಸ್ಕೃತ ಅರ್ಜಿಗಳ ಅರ್ಜಿ ಶುಲ್ಕ ಹಿಂದಿರುಗಿಸಲಾಗುವುದಿಲ್ಲ ಎಂದು ಅಧಿಸೂಚನೆ ಹೇಳಿದೆ.
ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಾದಲ್ಲಿ ರೂ. 1750 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1, ಮಹಿಳೆಯರು ಮತ್ತು ಅಂಗವಿಕಲರಿಗೆ ರೂ. 1250 ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಚಲನ್ ಅನ್ನು ಅಪ್‌ಲೋಡ್ ಮಾಡುವುದು, ನಿಗದಿತ ಅರ್ಜಿ ಶುಲ್ಕ ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು ಅರ್ಜಿಗಳಲ್ಲಿ ಅಪ್‌ಲೋಡ್ ಮಾಡುವ ಮಾಹಿತಿಗಳ ಆಧಾರದ ಮೇಲೆ ಅವರುಗಳು ಲಿಖಿತ ಪರೀಕ್ಷೆಗೆ ಅರ್ಹರೇ ಎಂಬುದನ್ನು ಬ್ಯಾಂಕು ಪರಿಶೀಲಿಸಿ, ಮೇಲ್ನೋಟಕ್ಕೆ ಅರ್ಹರೆಂದು ಕಂಡು ಬಂದ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಗೆ ಕರೆ ಪತ್ರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ಅಭ್ಯರ್ಥಿಗಳು ಕರೆ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿರುತ್ತದೆ.
ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ (ಓದಲು ಮತ್ತು ಬರೆಯಲು) ಕಡ್ಡಾಯ. ಅಭ್ಯರ್ಥಿ ಈಗಾಗಲೇ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹ ಸಂಸ್ಥೆಯ ಮುಖ್ಯಸ್ಥರ ಅನುಮತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣವನ್ನು ನೀಡದೇ ರದ್ದುಗೊಳಿಸುವ ಅಥವಾ ಮುಂದೂಡುವ ಅಧಿಕಾರವನ್ನು ಆಡಳಿತ ಮಂಡಳಿ ಹೊಂದಿರುತ್ತದೆ.
ನೇಮಕಾತಿಯಾದ ಅಭ್ಯರ್ಥಿಗಳ ಪರೀಕ್ಷಣಾವಧಿ (ಪ್ರೊಬೆಷನರಿ) ಐದು ವರ್ಷಗಳು. ಇದನ್ನು ವಿಸ್ತರಿಸುವ ಅಧಿಕಾರ ಬ್ಯಾಂಕಿನ ಆಡಳಿತ ಮಂಡಳಿ ಕಾಯ್ದಿರಿಸಿದೆ. ಅಭ್ಯರ್ಥಿಗಳ ಜೊತೆ ಬ್ಯಾಂಕು ಯಾವುದೇ ಪತ್ರ, ಇ-ಮೇಲ್ ವ್ಯವಹಾರವನ್ನು ನಡೆಸುವುದಿಲ್ಲ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ (ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ) ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 7204179845.












Click it and Unblock the Notifications