PSI Recruitment Scam; ಮರು ಪರೀಕ್ಷೆ ದಿನಾಂಕ ಘೋಷಿಸಿದ ಕೆಇಎ
ಬೆಂಗಳೂರು, ನವೆಂಬರ್ 22: ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಈ ಹಿಂದೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದು ಪರೀಕ್ಷೆ ರದ್ದುಗೊಳಿಸಲಾಗಿತ್ತು.
ಬುಧವಾರ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮರು ಪರೀಕ್ಷೆ ದಿನಾಂಕದ ಕುರಿತು ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಯ ಮರು ಪರೀಕ್ಷೆಯನ್ನು ಡಿಸೆಂಬರ್ 23ರ ಶನಿವಾರ ನಡೆಸಲಾಗುತ್ತದೆ.

ಪೊಲೀಸ್ ಇಲಾಖೆ ಈ ಹಿಂದೆ ನಡೆಸಿದ್ದ ಪರೀಕ್ಷೆಗೆ ಅರ್ಹತೆ ಪಡೆದವರು ಮರು ಪರೀಕ್ಷೆಗೂ ಅರ್ಹರು ಎಂದು ಸ್ಪಷ್ಟಪಡಿಸಲಾಗಿದೆ. ಈ ಬಾರಿ ಮರು ಪರೀಕ್ಷೆ ಬೆಂಗಳೂರು ನಗರದಲ್ಲಿ ಮಾತ್ರ ನಡೆಯುವ ಸಾಧ್ಯತೆ ಇದ್ದು, ಅಂತಿಮ ಆದೇಶ ಪ್ರತಿ ಇನ್ನೂ ಲಭ್ಯವಾಗಿಲ್ಲ.
ನವೆಂಬರ್ 11ರಂದು ಕರ್ನಾಟಕ ಹೈಕೋರ್ಟ್ 545 ಪಿಎಸ್‌ಐ ನೇಮಕಾತಿಯ ಮರು ಲಿಖಿತ ಪರೀಕ್ಷೆ ನಡೆಸಲು ಆದೇಶಿಸಿತ್ತು. ಸರ್ಕಾರದ ಜೊತೆ ಚರ್ಚೆ ನಡೆಸಿದ ಬಳಿಕ ಕೆಇಎ ಮರು ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಿದೆ.
ಮರು ಪರೀಕ್ಷೆಗೆ ಆದೇಶ; ಸರ್ಕಾರ ಪರೀಕ್ಷೆ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ 111 ಪುಟಗಳ ತೀರ್ಪು ನೀಡಿತ್ತು. ಪರೀಕ್ಷೆಯ ಅಕ್ರಮದಲ್ಲಿ ಬ್ಲೂಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾದ ಸಂಶಯಗಳು ಹಾಗೆಯೇ ಇದೆ. ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲಎಂದು ಹೈಕೋರ್ಟ್ ಹೇಳಿತ್ತು.
ಮರುಪರೀಕ್ಷೆ ನಡೆಸುವ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದಿದ್ದ ಹೈಕೋರ್ಟ್, ಸ್ವತಂತ್ರ ಸಂಸ್ಥೆಯಿಂದಲೇ ಮರು ಪರೀಕ್ಷೆ ನಡೆಸುವಂತೆ ತಾಕೀತು ಮಾಡಿತ್ತು. ಕೋರ್ಟ್ ತನ್ನ ತೀರ್ಪಿನಲ್ಲಿ 53 ಅಭ್ಯರ್ಥಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. 52 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಆದೇಶದಲ್ಲಿ ತಿಳಿಸಿತ್ತು.
ಈ ಹಿಂದೆ ಅರ್ಜಿಗಳ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಮರು ಪರೀಕ್ಷೆಗೆ ತಡೆ ನೀಡಿತ್ತು. ಆದರೆ ಅಂತಿಮ ಆದೇಶದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಮರು ಪರೀಕ್ಷೆ ನಡೆಸುವ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. ಮರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದಾಗ 2021ರಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದವು. ಬ್ಲೂಟುತ್ ಬಳಕೆ, ಒಎಂಆರ್ ಶೀಟ್ ತಿದ್ದಿರುವುದುದ ಸೇರಿ ಹಲವು ಅಕ್ರಮಗಳ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿಯನ್ನೇ ತನಿಖಾಧಿಕಾರಿಗಳು ಬಂಧಿಸಿದ್ದರು.
ಅಭ್ಯರ್ಥಿಗಳ ನೇಮಕದ ಆಯ್ಕೆಪಟ್ಟಿ ಪ್ರಕಟವಾದ ಬಳಿಕ 52 ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು. ಆ ಅಭ್ಯರ್ಥಿಗಳು ಪೊಲೀಸ್ ಇಲಾಖೆ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಕರ್ನಾಟಕದ ಪೊಲೀಸ್ ಇಲಾಖೆ ಡಿಬಾರ್ ಮಾಡಿತ್ತು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಆರೋಪಿಗಳಿಗೆ ಬಿಜೆಪಿ ಜೊತೆ ನಂಟಿದೆ ಎಂದು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಆರೋಪಿಸಿತ್ತು.
ಕರ್ನಾಟಕ ಸರ್ಕಾರ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದ ಆರೋಪದ ಕಾರಣ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವುದಾಗಿ 2022ರ ಏಪ್ರಿಲ್ 29ರಂದು ಘೋಷಣೆ ಮಾಡಿತ್ತು. ಇದಕ್ಕೆ ಪರೀಕ್ಷೆ ಬರೆದಿದ್ದ ಕೆಲವು ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು. ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications