1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಸಚಿವರ ಮಹತ್ವದ ಸೂಚನೆ
ಬೆಂಗಳೂರು, ಅಕ್ಟೋಬರ್ 16; ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕಾಲೇಜು ಶಿಕ್ಷಣ ಇಲಾಖೆಯಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಳಂಬವಾಗುತ್ತಲೇ ಇದೆ. 2021ರಲ್ಲಿ ಆರಂಭವಾದ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆಯ್ಕೆಯಾದ ಅಭ್ಯರ್ಥಿಗಳ ಕೈಗೆ ಆದೇಶ ಪ್ರತಿ ಇನ್ನೂ ಸಿಕ್ಕಿಲ್ಲ.
ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ. ಸಿ. ಸುಧಾಕರ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು ಇವರಿಗೆ ಟಿಪ್ಪಣಿಯೊಂದನ್ನು ಕಳಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

ಟಿಪ್ಪಣಿಯ ವಿವರಗಳು; ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕಾಲೇಜು ಶಿಕ್ಷಣ ಇಲಾಖೆಯಲ್ಲಿ 1,242 ಸಹಾಯಕ ಪ್ರಾಧ್ಯಾಪಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿತ್ತು. ಅದರಂತೆ 2021ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಿರುವುದು ಕಂಡುಬಂದಿದೆ ಎಂದು ಸಚಿವರ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಾಲಾದ ಈ ಪ್ರಕರಣವು ಬಾಕಿಯಿದ್ದು, ಈಗಾಗಲೇ ದೋಷಿಗಳನ್ನು ಗುರುತಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸಿ, ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದ್ದು, ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು, ಪ್ರಕರಣವು ವಿಚಾರಣೆಯಲ್ಲಿರುತ್ತದೆ.
ಪ್ರಸಕ್ತ ನೇಮಕಾತಿಗೆ ಸಂಬಂಧಿಸಿದಂತೆ ಬೇರೆ ಯಾವುದೇ ಪ್ರಕರಣಗಳು ತನಿಖಾಧಿಕಾರಿಗಳ ಮುಂದೆ ಇರುವುದಿಲ್ಲವೆಂದು ಹಾಗೂ ಹೈದರಾಬಾದ್-ಕರ್ನಾಟಕ ಮೀಸಲಾತಿ ಸಂಬಂಧಪಟ್ಟ ಪ್ರಕರಣವು ನ್ಯಾಯಾಲಯದಲ್ಲಿ ಇತ್ತೀಚೆಗೆ ಇತ್ಯರ್ಥವಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಆಯ್ಕೆಯಾದ ಅಭ್ಯರ್ಥಿಗಳು ನನಗೆ ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿ, ಕೂಡಲೇ ನೇಮಕಾತಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಸದರಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿ ಮೂರು ವರ್ಷಗಳು ಸಮೀಪಿಸುತ್ತಿದ್ದು, ಇನ್ನು ವಿಳಂಬಕ್ಕೆ ಅವಕಾಶ ನೀಡದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಹೊರಡಿಸಲು ನಿಯಮಾನುಸಾರ ಕೈಗೊಳ್ಳಬೇಕಾದ ಪೂರ್ವಭಾವಿ ಎಲ್ಲಾ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದೆ ಎಂದು ಸಚಿವರು ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.
ಬೃಹತ್ ಪ್ರತಿಭಟನೆ ನಡೆದಿತ್ತು; ಈ ನೇಮಕಾತಿ ಪ್ರಕ್ರಿಯೆಗೆ 2021ರ ಸೆಪ್ಟೆಂಬರ್ 30ರಂದು ಚಾಲನೆ ನೀಡಲಾಗಿತ್ತು. 26 ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಈ ಎಲ್ಲಾ ಪ್ರಕ್ರಿಯೆ ಮುಗಿದು ಮೂರು ವರ್ಷ ಸಮೀಪಿಸುತ್ತಿದೆ. ಮೆರಿಟ್ ಪಟ್ಟಿಯಲ್ಲಿ ಹೆಸರು ಇರುವ ಕಾರಣ ಕೆಲವರನ್ನು ಅತಿಥಿ ಶಿಕ್ಷಕ ಹುದ್ದೆಯಿಂದ ಕೈ ಬಿಡಲಾಗಿತ್ತು.
ಆದರೆ ನೇಮಕಾತಿ ಆದೇಶ ಸಿಗದ ಕಾರಣ ಅತ್ತ ಅತಿಥಿ ಶಿಕ್ಷಕ ಹುದ್ದೆಯೂ ಇಲ್ಲ, ಇತ್ತ ಸಹಾಯಕ ಪ್ರಾಧ್ಯಾಪಕ ಹುದ್ದೆಯೂ ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ನೇಮಕಾತಿ ಆದೇಶ ನೀಡಬೇಕು ಎಂದು ಬೆಂಗಳೂರಿ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಹೋರಾಟವೂ ನಡೆದಿತ್ತು.











Click it and Unblock the Notifications