Gram Panchayat; 1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕ
ಬೆಂಗಳೂರು, ಜನವರಿ 18: ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ಕರ್ನಾಟಕ ಸರ್ಕಾರ ಶೀಘ್ರವೇ ನೀಡಲಿದೆ. ವಿವಿಧ ಇಲಾಖೆಗಳ ನೇಮಕಾತಿಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಗಳ ನೇಮಕಾತಿ ಸಹ ನಡೆಯಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಗಳು ಬರುತ್ತವೆ. ಇವುಗಳಲ್ಲಿ ಪಿಡಿಒ, ಕಾರ್ಯದರ್ಶಿ ಹುದ್ದೆಗಳಿವೆ. ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡುವ ಗ್ರಾಮ ಲೆಕ್ಕಿಗ (ಗ್ರಾಮ ಆಡಳಿತಾಧಿಕಾರಿ) ಹುದ್ದೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ.

ಗ್ರಾಮ ಲೆಕ್ಕಿಗ ಹುದ್ದೆಗಳ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದಾರೆ. "ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
"ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಜೊತೆಗೆ 357 ಸರ್ವೆಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 590 ಹುದ್ದೆಗಳ ನೇಮಕಾತಿಗೆ ಸಂಪುಟ ಸಭೆಯಲ್ಲಿ ಅನುಮತಿ ಪಡೆಯಲಾಗುವುದು" ಎಂದು ತಿಳಿಸಿದ್ದಾರೆ.
"ನೇಮಕಾತಿಯಾದ 750 ಸರ್ವೆಯರ್‌ಗಳಿಗೆ ತರಬೇತಿ ಕೊಡಲಾಗಿದೆ. ಅವರೂ ಕಾರ್ಯಾರಂಭ ಮಾಡಲಿದ್ದಾರೆ. ಇದರಿಂದ ಕಂದಾಯ ಜಮೀನುಗಳ ಸಮೀಕ್ಷೆ ಕಾರ್ಯ ಸುಲಭವಾಗಲಿದೆ" ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
2023ರಲ್ಲಿ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ (Village Administrative Officer) ಎಂದು ಪುನರ್ ಪದನಾಮೀಕರಿಸಿ ಆದೇಶ ಹೊರಡಿಸಿತ್ತು. ಆದರೆ ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಗ್ರಾಮ ಲೆಕ್ಕಿಗ ಹುದ್ದೆಯ ಪದನಾಮ ಬದಲಾವಣೆ ಬಗ್ಗೆ ಎಲ್ಲಾ ಪ್ರಾದೇಶಿಕ ಆಯುಕ್ತರರಿಂದ ಅಭಿಪ್ರಾಯ ಕೋರಲಾಗಿತ್ತು. ನಾಲ್ಕು ಪ್ರಾದೇಶಿಕ ಆಯುಕ್ತರುಗಳು ಗ್ರಾಮಲೆಕ್ಕಿಗರು ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಬಹುದೆಂದು ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಪದನಾಮ ಬದಲಾವಣೆ ಮಾಡಲಾಗಿತ್ತು.
ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಗ್ರಾಮಲೆಕ್ಕಿಗರು (Village Accountant) ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ (Village Administrative Officer) ಎಂದು ಮರು ಪದನಾಮೀಕರಿಸಿ ಆದೇಶ ಹೊರಡಿಸಲಾಗಿತ್ತು.
ಕಂದಾಯ ಇಲಾಖೆಯ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಮಹತ್ತರವಾದ ಹುದ್ದೆ ಇದು. ಗ್ರಾಮೀಣ ಮಟ್ಟದಲ್ಲಿರುವ ಸರ್ಕಾರದ ಅಧಿಕಾರಿ ಎಂದರೆ ಗ್ರಾಮ ಲೆಕ್ಕಿಗ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಈ ಹಿಂದೆ ಹೇಳಿತ್ತು.












Click it and Unblock the Notifications