
Infographics: ಕರ್ನಾಟಕದಲ್ಲಿ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಸಾಧಾರಣದಿಂದ ಭಾರಿ ಮಳೆ ಬರವು ಸಾಧ್ಯತೆ ಇದೆ. ಈ ಪೈಕಿ ಮಲೆನಾಡಿಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಅಲ್ಲಲ್ಲಿ ಮುಂಗಾರು ಮಳೆಯ ಅಬ್ಬರ ಕಂಡು ಬಂದಿದೆ. ಶುಕ್ರವಾರ ಬಿಡುಗಡೆಗೊಂಡ ಹವಾಮಾನ ವರದಿ ಪ್ರಕಾರ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ಮಲೆನಾಡು ಒಳಗೊಂಡ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜುಲೈ 30ರವರೆಗೆ ಭಾರಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಮುಂಗಾರು ಅಧಿವೇಶನ: ಅಮಾನತುಗೊಂಡ ಸಂಸದರಿಂದ ಮುಂದುವರೆದ ಪ್ರತಿಭಟನೆ
ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ವಿವಿಧೆಡೆ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಆಗಲಿದೆ. ಈ ಹಿನ್ನೆಲೆ ಅವೆಲ್ಲ ಜಿಲ್ಲೆಗಳಿಗೆ ಜುಲೈ 30ರಂದು 'ಯೆಲ್ಲೋ ಅಲರ್ಟ್' ಕೊಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಜತೆಗೆ ವಿವಿಧ ರಾಜ್ಯಗಳಲ್ಲೂ ಮಳೆ
ಹವಾಮಾನದಲ್ಲಿ ಉಂಟಾಗಿರುವ ಏರುಪೇರುಗಳಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಮುಂದುವರಿದಿದೆ. ಕಳೆದ 24ಗಂಟೆಗಳಲ್ಲಿ ದೇಶದ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ್, ಓಡಿಶಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಹಿಮಾಚಲಯ ಪ್ರದೇಶಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಿದೆ. ಇದು ಮುಂದಿನ ನಾಲ್ಕೈದು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದ.ಕ.ಒಳನಾಡಿಗೆ ಅಧಿಕ ಮಳೆ ನೀರಿಕ್ಷೆ
ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಬಳ್ಳಾರಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ದಾವಣೆಗೆರೆಗಳಲ್ಲಿ ಮುಂದಿನ ನಾಲ್ಕು ದಿನ ಪೈಕಿ ಮೊದಲ ಎರಡು ದಿನ ಅಂದರೆ ಶನಿವಾರ ಹಾಗೂ ಭಾನುವಾರ ಸಾಧಾರಣದಿಂದ ಅತೀ ಭಾರಿ ಮಳೆ ಬರಲಿದೆ. ಇವುಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ನಂತರದ ಎರಡು ದಿನ ಮಲೆನಾಡು ವ್ಯಾಪ್ತಿಗೆ ಬರುವ ಕೊಡಗು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಆಗಲಿದ್ದು, ಈ ನಾಲ್ಕು ಜಿಲ್ಲೆಗಳಿಗೆ ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗೆ ಮುಂದಿನ 48ಗಂಟೆ ಮಳೆ ಹೇಗಿರಲಿದೆ
ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಕಂಡು ಬಂದಿದೆ. ಸಂಜೆವರೆಗೆ ಎಲ್ಲಿಯೂ ನಗರದಲ್ಲಿ ಮಳೆ ದಾಖಲಾದ ಬಗ್ಗೆ ವರದಿಯಾಗಿಲ್ಲ. ಮುಂದಿನ 48ಗಂಟೆ ನಗರದಲ್ಲಿ ಒಂದೆರಡು ಕಡೆಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಮೋಡ ಮುಸುಕಿನ ವಾತಾವರಣವೇ ಮುಂದುವರಿಯಲಿದೆ. ಈ ವೇಳೆ ಗರಿಷ್ಠ 28 ಡಿ.ಸೆ. ಹಾಗೂ ಕನಿಷ್ಠ 20ಡಿ.ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಇದರ ಹೊರತು ಗಮನಾರ್ಹ ಮುನ್ಸೂಚನೆಗಳು ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಾದ್ಯಂತ 48ಗಂಟೆ ಧಾರಾಕಾರ ಮಳೆ ಸಾಧ್ಯತೆ
ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳು, ಮಲೆನಾಡಿನ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಅತಿ ಭಾರಿ ಮಳೆ ಬರುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಮುಂಗಾರಿನ ಮಾರುತಗಳು ಸಕ್ರಿಯವಾಗಿವೆ. ಈ ಕಾರಣದಿಂದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳು ಒಳಗೊಂಡಂತೆ ದಕ್ಷಿಣ ಒಳನಾಡಿನ ಹಾಸನ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಮೈಸೂರು, ದಾವಣಗೆರೆ, ಮಂಡ್ಯ, ಚಾಮರಾಜ ನಗರ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿಗಳಲ್ಲಿ ಅಲ್ಲಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ದಾಖಲಾದ ತಾಪಮಾನ ಪಟ್ಟಿ
ಬೆಂಗಳೂರಿನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ತೇವಾಂಶ 54ರಷ್ಟು ದಾಖಲಾಗಿದೆ. ಗಾಳಿಯ ವೇಗ ಗಂಟೆಗೆ 26ಕಿ.ಮೀ ಕಂಡು ಬಂದಿದೆ. ಬಾಗಲಕೋಟೆಯಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 57ರಷ್ಟು ತೇವಾಂಶ ದಾಖಲಾಗಿದೆ. ಮಂಗಳೂರಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 63ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 63ರಷ್ಟು ತೇವಾಂಶ ಇದೆ. ಮೈಸೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 54ರಷ್ಟು ದಾಖಲಾಗಿದ್ದು, ಬಳ್ಳಾರಿಯಲ್ಲಿ 33ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 51ರಷ್ಟು ಇದೆ ಎಂದು ತಿಳಿದು ಬಂದಿದೆ.
ರಾಯಚೂರಲ್ಲಿ 34ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 44ರಷ್ಟು ತೇವಾಂಶ , ಚಿತ್ರದುರ್ಗದಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 53ರಷ್ಟು ತೇವಾಂಶ ದಾಖಲಾಗಿದೆ. ಇನ್ನು ಕಲಬುರಗಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 51ರಷ್ಟು ತೇವಾಂಶ, ಚಿಕ್ಕಮಗಳೂರು 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 66ರಷ್ಟು ತೇವಾಂಶ ಕಂಡು ಬಂದಿದೆ.