ಮೊದಲು ಓದಿ: ಅಫ್ಘಾನಿಸ್ತಾನದ ಉದ್ಧಾರಕ್ಕೆ ಭಾರತ ಹೂಡಿಕೆ ಮಾಡಿರುವ ಹಣವೆಷ್ಟು?

ಕಾಬೂಲ್, ಆಗಸ್ಟ್ 17: ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ನಂತರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆಯು ಅಲರ್ಟ್ ಆಯಿತು. ತನ್ನ ಆಕ್ರಮಣಕಾರಿ ನೀತಿ ಪ್ರದರ್ಶಿಸಲು ಆರಂಭಿಸಿದ ನಾಲ್ಕು ತಿಂಗಳಿನಲ್ಲೇ ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಮೊದಲಿಗೆ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ವಶಕ್ಕೆ ಪಡೆದುಕೊಂಡಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರು ಆಘಾತಕ್ಕೊಳಗಾದರು. ಮುಂದಿನ ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ.

1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಶರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಆಡಳಿತಕ್ಕೆ ಮರಳಿರುವುದನ್ನು ಮತ್ತೊಂದು ಕರಾಳ ಯುಗದ ಆರಂಭ ಎಂದು ಅರ್ಥೈಸಲಾಗುತ್ತಿದೆ. ದೇಶದ ಆರ್ಥಿಕ ಪ್ರಗತಿ ಮತ್ತು ಫ್ಘಾನಿಸ್ತಾನದಲ್ಲಿ ಹೆಚ್ಚು ಹೂಡಿಕೆ ಮಾಡಿದ ದೇಶಗಳು ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳೊಂದಿಗಿನ ಸಂಬಂಧಗಳಲ್ಲಿ ಅನಿಶ್ಚಿತತೆ ಎದ್ದು ಕಾಣುತ್ತಿದೆ. ಅಂಥ ರಾಷ್ಟ್ರಗಳಿಂದ ಭಾರತ ಕೂಡ ಹೊರತಾಗಿಲ್ಲ. ಅಫ್ಘಾನ್ ಮತ್ತು ಭಾರತದ ನಡುವೆ ಅಶ್ಚಿತತೆ ಭೀತಿ ಸೃಷ್ಟಿಗೆ ಕಾರಣವೇನು?, ತಾಲಿಬಾನ್ ಆಡಳಿತದಿಂದ ಉಭಯ ರಾಷ್ಟ್ರಗಳ ನಡುವಿನ ಸಂಪರ್ಕ ಕೊಂಡಿ ಕತ್ತರಿಸುತ್ತದೆಯೇ?, ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಭವಿಷ್ಯವೇನು?, ಭಾರತ ಮಾಡಿರುವ ಹೂಡಿಕೆಯ ಗತಿಯೇನು?, ಎಂಬ ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಅಫ್ಘಾನಿಸ್ತಾನ ಮತ್ತು ಭಾರತ ಮಧ್ಯೆ ಅನಿಶ್ಚಿತತೆ ಭೀತಿ

ಅಫ್ಘಾನಿಸ್ತಾನ ಮತ್ತು ಭಾರತ ಮಧ್ಯೆ ಅನಿಶ್ಚಿತತೆ ಭೀತಿ

ಅಫ್ಘಾನಿಸ್ತಾನದ ಜೊತೆಗಿನ ಭವಿಷ್ಯದ ಬಗ್ಗೆ ಸೃಷ್ಟಿಯಾಗಿರುವ ಅನಿಶ್ಚಿತತೆಯ ಭೀತಿಯನ್ನು ಭಾರತ ಕೂಡ ಎದುರಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಬೆಂಬಲಿತ ಸರ್ಕಾರ ರಚನೆಯಾದ ದಿನದಿಂದಲೂ ಅಫ್ಘಾನಿಸ್ತಾನದಲ್ಲಿ ಅಭಿವೃದ್ಧಿಪರ ಯೋಜನೆಗಳಲ್ಲಿ ಭಾರತ ಕೂಡ ಪಾಲು ಹೊಂದಿದೆ. ಎರಡು ದಶಕಗಳಿಂದ ಅಫ್ಘಾನ್ ಪುನರ್ ನಿರ್ಮಾಣ ಹಾಗೂ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಭಾರತವು ಬೆಂಬಲವಾಗಿ ನಿಂತಿದೆ. ಇದೀಗ ಅದೇ ದೇಶದಲ್ಲಿ ತಾಲಿಬಾನ್ ಆಡಳಿತ ಶುರುವಾಗುತ್ತಿದ್ದಂತೆ ಭಾರತ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರ ಮಧ್ಯೆ ಕಾಬೂಲ್‌ನಲ್ಲಿದ್ದ ದೂತವಾಸ ಕಚೇರಿಯ 120 ಸಿಬ್ಬಂದಿಯನ್ನು ಮಂಗಳವಾರ ವಾಪಸ್ ಕರೆ ತರಲಾಗಿದೆ.

ತಾಲಿಬಾನ್ ಉಗ್ರ ಸಂಘಟನೆ ನಿಯಂತ್ರಿಸಲ್ಪಡುವ ಸರ್ಕಾರದೊಂದಿಗೆ ಭಾರತವು ಯಾವ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ನಿರ್ವಹಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ ಲೆಕ್ಕಾಚಾರ

ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ ಲೆಕ್ಕಾಚಾರ

ಭಾರತವು ಅಫ್ಘಾನಿಸ್ತಾನದೊಂದಿಗೆ ಸುದೀರ್ಘ ಅವಧಿಯ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನ ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಿದೆ. ಭಾರತವು ಹೂಡಿಕೆಗಳಿಗೆ ಮತ್ತು ದ್ವಿಪಕ್ಷೀಯ ವ್ಯಾಪಾರ ಹಾಗೂ ದೇಶಕ್ಕೆ ಅಗತ್ಯವಾದ ಅಭಿವೃದ್ಧಿಗೆ ನೆರವು ನೀಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಭಾರತದ ಕಾರ್ಯತಂತ್ರ ಹಿತಾಸಕ್ತಿಗೆ ಅಫ್ಘಾನಿಸ್ತಾನ ನಿರ್ಣಾಯಕ ಎನಿಸಿದೆ. 2001ರ ನಂತರ ಅಫ್ಘಾನಿಸ್ತಾನದ ಭವಿಷ್ಯ ರೂಪಿಸಲು ನೆರವಾಗುವ ರಸ್ತೆಗಳು, ಶಾಲೆ, ಆಸ್ಪತ್ರೆಗಳು, ಅಣೆಕಟ್ಟುಗಳು ಮತ್ತು ಇತರ ಹಲವು ನಿರ್ಣಾಯಕ ಯೋಜನೆಗಳನ್ನು ನಿರ್ಮಿಸಲು ಭಾರತವೇ ಸಹಕಾರ ನೀಡಿದೆ.

ಅಫ್ಘಾನಿಸ್ತಾನದಲ್ಲಿ 3 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಭಾರತ ಹೂಡಿಕೆ ಮಾಡಿದೆ. ದೇಶದ 400ಕ್ಕೂ ಹೆಚ್ಚು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಹೂಡಿಕೆಯನ್ನು ಮಾಡಲಾಗಿದೆ. 2015ರಲ್ಲಿ ಅಫ್ಘಾನಿಸ್ತಾನ ಸಂಸತ್ತು ನಿರ್ಮಾಣ ಕಾರ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 90 ಬಿಲಿಯನ್ ಡಾಲರ್ ಘೋಷಿಸಿದ್ದರು.

ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ಮೂಸೌಕರ್ಯ ಅಭಿವೃದ್ಧಿ

ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ಮೂಸೌಕರ್ಯ ಅಭಿವೃದ್ಧಿ

ಕಳೆದ 2011 ರಲ್ಲಿ ಭಾರತ-ಅಫ್ಘಾನಿಸ್ತಾನ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಇದರಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಿತು. ಒಪ್ಪಂದದ ಭಾಗವಾಗಿ "ವ್ಯಾಪಾರ ಮತ್ತು ಉದ್ಯಮದ ಪ್ರತಿನಿಧಿಗಳ ನಡುವಿನ ಸಹಕಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ದೃಷ್ಟಿಯಿಂದ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರವನ್ನು ಬಲಪಡಿಸುವ ಭರವಸೆ ನೀಡಲಾಗಿದೆ. ಅಫ್ಘಾನಿಸ್ತಾನವು ಭಾರತೀಯ ಮಾರುಕಟ್ಟೆಗೆ ಸುಂಕ ರಹಿತ ಪ್ರವೇಶವನ್ನು ಪಡೆಯಿತು. 2019-20ರ ವೇಳೆಗೆ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 1 ಬಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿರುವುದು ಭಾರತದೊಂದಿಗಿನ ವ್ಯಾಪಾರ ಸಂಬಂಧಕ್ಕೆ ಆತಂಕ ಸೃಷ್ಟಿಸಿದೆ. ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ತಕ್ಷಣ ಹಾಗೂ ಸಮಗ್ರ ಕದನ ವಿರಾಮ ಪ್ರಕ್ರಿಯೆ ನಡೆಯುವ ಬಗ್ಗೆ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ವಾಣಿಜ್ಯ ವಿಮಾನಗಳ ಮೂಲಕ ವಾಪಸ್ ಕಳುಹಿಸುವಂತೆ ಕೇಳಲಾಗಿದೆ ಎಂದು ಹೇಳಿದ್ದಾರೆ. "ನಾವು ಹಿಂದುಗಳು ಮತ್ತು ಸಿಖ್ಖರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಖಚಿತಪಡಿಸುತ್ತೇವೆ" ಎಂದು ಬಗ್ಚಿ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಕುರಿತು ಹೇಳಿದ್ದಾರೆ. ಆದಾಗ್ಯೂ, ಸ್ಥಳಾಂತರಿಸುವ ಬಗ್ಗೆ ಯಾವುದೇ ರೀತಿಯ ಔಪಚಾರಿಕ ಕಾರ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ನವೆಂಬರ್ 2020ರಲ್ಲಿ ಜಿನೀವಾದಲ್ಲಿ ನಡೆದ ಅಫ್ಘಾನಿಸ್ತಾನ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಅಫ್ಘಾನಿಸ್ತಾನದ ಎಲ್ಲಾ 34 ಪ್ರಾಂತ್ಯಗಳಲ್ಲಿ ಭಾರತ 400ಕ್ಕೂ ಅಧಿಕ ಯೋಜನೆಗಳನ್ನು ಕೈಗೊಂಡಿದ್ದು, ಅದರ ಯಾವುದೇ ಭಾಗವನ್ನು ಇದುವರೆಗೂ ಮುಟ್ಟಿಲ್ಲ", ಎಂದು ಹೇಳಿದ್ದರು. ಈ ಯೋಜನೆಗಳ ಕಥೆ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ.

ಅಣೆಕಟ್ಟು ಮತ್ತು ವಿದ್ಯುತ್, ರಸ್ತೆ ಕಾಮಗಾರಿಗಳಲ್ಲಿ ಹೂಡಿಕೆ

ಅಣೆಕಟ್ಟು ಮತ್ತು ವಿದ್ಯುತ್, ರಸ್ತೆ ಕಾಮಗಾರಿಗಳಲ್ಲಿ ಹೂಡಿಕೆ

ಸಲ್ಮಾ ಅಣೆಕಟ್ಟು:

ಭಾರತದ ಅತ್ಯುನ್ನತ ಯೋಜನೆಗಳಲ್ಲಿ ಒಂದಾದ ಹೆರಾತ್ ಪ್ರಾಂತ್ಯದ 42MW ಸಲ್ಮಾ ಅಣೆಕಟ್ಟು ಇರುವ ಪ್ರದೇಶದಲ್ಲಿ ಈಗಾಗಲೇ ಹೋರಾಟ ನಡೆಸಲಾಗುತ್ತಿದೆ. ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟು ಒಂದು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಯಾಗಿದ್ದು ಇದನ್ನು ಎಲ್ಲಾ ಅಡೆತಡೆಗಳ ನಡುವೆಯೂ ನಿರ್ಮಿಸಲಾಗಿದ್ದು, 2016ರಲ್ಲಿ ಪ್ರಾರಂಭಿಸಲಾಯಿತು. ಆದರೆ ಇತ್ತೀಚಿನ ವಾರಗಳಲ್ಲಿ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿದ ತಾಲಿಬಾನ್, ಭದ್ರತಾ ಅಧಿಕಾರಿಗಳನ್ನು ಕೊಂದು ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ವಿದ್ಯುತ್ ಕಾಮಗಾರಿ:

ವಿದ್ಯುತ್ ಸರಬರಾಜನ್ನು ಹೆಚ್ಚಿಸಲು ಬಾಗ್ಲಾನ್ ಪ್ರಾಂತ್ಯದ ರಾಜಧಾನಿ ಪುಲ್-ಇ-ಕುಮ್ರಿಯಿಂದ 220 ಕೆವಿ ಡಿಸಿ ಸರಬರಾಜು ಹೆಚ್ಚಿಸುವ ಉದ್ದೇಶದಿಂದ ಅಫ್ಘಾನಿಸ್ತಾನದಲ್ಲಿನ ಇತರೆ ಭಾರತೀಯ ಯೋಜನೆಗಳಲ್ಲಿ ವಿದ್ಯುತ್ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರದೇಶಗಳಲ್ಲಿ ಭಾರತೀಯ ಗುತ್ತಿಗೆದಾರರು ಮತ್ತು ಸಿಬ್ಬಂದಿ ದೂರಸಂಪರ್ಕ ಮತ್ತು ಮೂಲಸೌಕರ್ಯವನ್ನು ಪುನಃಸ್ಥಾಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ:

ಗಡಿ ರಸ್ತೆಗಳ ಸಂಘಟನೆಯ 218 ಕಿಲೋಮೀಟರ್ ಜರಂಜ್-ದೇಲಾರಾಮ್ ಹೆದ್ದಾರಿ ಮತ್ತೊಂದು ಉನ್ನತ ಯೋಜನೆಯಾಗಿದೆ. ಅಫ್ಘಾನಿಸ್ತಾನದಲ್ಲಿ ಇರಾನಿನ ಗಡಿಯ ಹತ್ತಿರದಲ್ಲಿ ಜರಂಜ್ ಎಂಬ ಪ್ರದೇಶವಿದೆ. 150 ಮಿಲಿಯನ್ ಡಾಲರ್ ಹೆದ್ದಾರಿಯು ಖಾಶ್ ರುದ್ ನದಿಯಿಂದ ಜಲಾಂಜ್‌ನ ಈಶಾನ್ಯದ ಡೆಲಾರಾಮ್‌ಗೆ ಹೋಗುತ್ತದೆ, ಅಲ್ಲಿ ಇದು ದಕ್ಷಿಣದಲ್ಲಿ ಕಂದಹಾರ್, ಪೂರ್ವದಲ್ಲಿ ಗಜನಿ ಮತ್ತು ಕಾಬೂಲ್, ಉತ್ತರದಲ್ಲಿ ಮಜರ್-ಐ-ಶರೀಫ್ ಮತ್ತು ಪಶ್ಚಿಮದಲ್ಲಿ ಹೆರಾತ್ ಅನ್ನು ಸಂಪರ್ಕಿಸುವ ರಿಂಗ್ ರಸ್ತೆಯನ್ನು ಸೇರುತ್ತದೆ.

ಸ್ಟಾರ್ ಪ್ಯಾಲೇಸ್:

2016ರಲ್ಲಿ ಅಫಘಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಪ್ರಧಾನಿ ಮೋದಿ ಕಾಬೂಲ್‌ನಲ್ಲಿ ಪುನರ್ನಿರ್ಮಿತ ಸ್ಟೋರ್ ಪ್ಯಾಲೇಸ್ ಅನ್ನು ಪುನರಾರಂಭಿಸಿದರು. ಇದನ್ನು ಮೂಲತಃ 1800ರ ಕೊನೆಯಲ್ಲಿ ನಿರ್ಮಿಸಲಾಯಿತು ಮತ್ತು 1919 ರಾವಲ್ಪಿಂಡಿ ಒಪ್ಪಂದದ ತಾಣವಾಗಿ ಕಾರ್ಯನಿರ್ವಹಿಸಿತು. ಇದು ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕೆ ಕಾರಣವಾಯಿತು. 1965ರವರೆಗೆ ಇದೇ ಕಟ್ಟಡವು ಅಫ್ಘಾನ್ ವಿದೇಶಾಂಗ ಸಚಿವರ ಮತ್ತು ಸಚಿವಾಲಯದ ಕಚೇರಿ ಆಗಿತ್ತು. ಇದರ ಮರುಸ್ಥಾಪನೆಗಾಗಿ 2009 ರಲ್ಲಿ ಭಾರತ, ಅಫ್ಘಾನಿಸ್ತಾನ, ಅಗಾ ಖಾನ್ ಅಭಿವೃದ್ಧಿ ನೆಟ್‌ವರ್ಕ್‌ನಿಂದ ತ್ರಿಪಕ್ಷೀಯ ಒಪ್ಪಂದ ಮಾಡಲಾಯಿತು.

ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ, ವ್ಯಾಪಾರದ ಸತ್ಯ

ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ, ವ್ಯಾಪಾರದ ಸತ್ಯ

* ಭಾರತವು ಅಫ್ಘಾನಿಸ್ತಾನ ಜೊತೆಗೆ ಸೌಹಾರ್ದಯುತ ಮತ್ತು ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಕಳೆದ 2 ದಶಕಗಳಲ್ಲಿ ರಾಷ್ಟ್ರ ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತವು ಸಕ್ರಿಯ ಪಾತ್ರ ವಹಿಸಿದೆ

* ದಕ್ಷಿಣ ಏಷ್ಯಾದಲ್ಲಿ ಕಾರ್ಯತಂತ್ರದ ಮಿತ್ರನಾಗಿರುವ ಹಿನ್ನೆಲೆ ಅಫ್ಘಾನಿಸ್ತಾನದಲ್ಲಿ ಭಾರತ ಹೆಚ್ಚು ಹೂಡಿಕೆ ಮಾಡಿದೆ

* ಅಫ್ಘಾನಿಸ್ತಾನದಲ್ಲಿ ಭಾರತವು 400ಕ್ಕೂ ಹೆಚ್ಚು ಮೂಲಸೌಕರ್ಯ ಯೋಜನೆಗಳು ಸೇರಿದಂತೆ 3 ಬಿಲಿಯನ್‌ ಡಾಲರ್ ಗಿಂತ ಹೆಚ್ಚು ಹೂಡಿಕೆ ಮಾಡಿದೆ.

* 2011ರಲ್ಲಿ ಉಭಯ ರಾಷ್ಟ್ರಗಳು ಭಾರತ-ಅಫ್ಘಾನಿಸ್ತಾನ ಕಾರ್ಯತಂತ್ರದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದವು, ಇದು ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಿತು.

* 2019-20ರ ವೇಳೆಗೆ, ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 1 ಬಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

* ಅಫ್ಘಾನಿಸ್ತಾನದಲ್ಲಿ ಭಾರತದ ಅನುದಾನಿತ ಯೋಜನೆಗಳಲ್ಲಿ ಒಂದು ಸಲ್ಮಾ ಅಣೆಕಟ್ಟು ಅಥವಾ ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟು ಯೋಜನೆಯಾಗಿದೆ.

* ಭಾರತವು 90 ಮಿಲಿಯನ್ ಡಾಲರ್ ವೆಚ್ಚದಲ್ಲಿ ಅಫ್ಘಾನ್ ಸಂಸತ್ತು ನಿರ್ಮಾಣವು ಮತ್ತೊಂದು ಉನ್ನತ ಯೋಜನೆಯಾಗಿದೆ.

ಭಾರತದಿಂದ ಆರೋಗ್ಯ ವಲಯದಲ್ಲಿ ಹೂಡಿಕೆ

ಭಾರತದಿಂದ ಆರೋಗ್ಯ ವಲಯದಲ್ಲಿ ಹೂಡಿಕೆ

ಭಾರತ 1972ರಲ್ಲಿ ಕಾಬೂಲ್‌ನಲ್ಲಿ ಮಕ್ಕಳ ಆಸ್ಪತ್ರೆಯ ಪುನರ್ ನಿರ್ಮಾಣಕ್ಕೆ ನೆರವು ನೀಡಿತು. 1985ರಲ್ಲಿ ಅದೇ ಆಸ್ಪತ್ರೆಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು. 'ಭಾರತೀಯ ವೈದ್ಯಕೀಯ ಮಿಷನ್‌ಗಳು' ಹಲವಾರು ಸ್ಥಳಗಳಲ್ಲಿ ಉಚಿತ ಸಮಾಲೋಚನಾ ಶಿಬಿರಗಳನ್ನು ಆಯೋಜಿಸಿದವು. ಯುದ್ಧದ ನಂತರದಲ್ಲಿ ಕಾಲುಗಳನ್ನು ಕಳೆದುಕೊಂಡ ಸಾವಿರಾರು ಜನರಿಗೆ ಜೈಪುರ ಪಾದವನ್ನು ಅಳವಡಿಸಲಾಯಿತು. ಭಾರತವು ಕ್ಲಿನಿಕ್‌ಗಳನ್ನು ಅಭಿವೃದ್ಧಿಪಡಿಸಿರುವ ಗಡಿ ಪ್ರಾಂತ್ಯಗಳಲ್ಲಿ ಬದಾಕ್ಷಾನ್, ಬಲ್ಖ್, ಕಂದಹಾರ್, ಖೋಸ್ಟ್, ಕುನಾರ್, ನಂಗರ್‌ಹರ್, ನಿಮ್ರುಜ್, ನೂರಿಸ್ತಾನ್, ಪಾಕ್ತಿಯಾ ಮತ್ತು ಪಾಕ್ತಿಕಾ ಸಹ ಸೇರಿವೆ.

ಭಾರತವು ಸಾರಿಗೆ ವಲಯದಲ್ಲಿ ಮಾಡಿರುವ ಹೂಡಿಕೆ

ಭಾರತವು ಸಾರಿಗೆ ವಲಯದಲ್ಲಿ ಮಾಡಿರುವ ಹೂಡಿಕೆ

ಭಾರತವು ನಗರ ಸಾರಿಗೆಗಾಗಿ 400 ಬಸ್‌ಗಳು ಮತ್ತು 200 ಮಿನಿ ಬಸ್‌ಗಳು, ಪುರಸಭೆಗಳಿಗಾಗಿ 105 ಯುಟಿಲಿಟಿ ವಾಹನಗಳು, ಅಫ್ಘಾನ್ ರಾಷ್ಟ್ರೀಯ ಸೇನೆಗೆ 285 ಮಿಲಿಟರಿ ವಾಹನಗಳು ಮತ್ತು ಐದು ನಗರಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಿಗೆ 10 ಆಂಬ್ಯುಲೆನ್ಸ್‌ಗಳನ್ನು ನೀಡಿದೆ ಎಂದು ಎಂಇಎ ತಿಳಿಸಿದೆ. ಅಫ್ಘಾನಿಸ್ತಾನದ ರಾಷ್ಟ್ರೀಯ ವಾಹಕವಾದ ಅರಿಯಾನಾ ತನ್ನ ಕಾರ್ಯಾಚರಣೆ ಪುನರಾರಂಭಿಸಿದಾಗ ಅದಕ್ಕೆ ಮೂರು ಏರ್ ಇಂಡಿಯಾ ವಿಮಾನಗಳನ್ನು ನೀಡಲಾಗಿತ್ತು.

ತಾಲಿಬಾನ್ ಹಿಡಿತ ಕಳೆದುಕೊಂಡಿದ್ದ ಇತಿಹಾಸ

ತಾಲಿಬಾನ್ ಹಿಡಿತ ಕಳೆದುಕೊಂಡಿದ್ದ ಇತಿಹಾಸ

1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಗುರುತಿಸಿಕೊಂಡಿದ್ದ ಹಿನ್ನೆಲೆ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆ ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+