ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶ; ನಿಟ್ಟುಸಿರು ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಆ. 22: ಖಾತೆ ಕ್ಯಾತೆ ಕುರಿತು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಂತಿಮ ಸಂದೇಶ ರವಾನಿಸಿದೆ. ಶನಿವಾರದವರೆಗೂ ಖಾತೆ ಹಂಚಿಕೆ ಕುರಿತು ಬಿಜೆಪಿಯಲ್ಲಿನ ಅಸಮಾಧಾನ ಶಮನವಾಗಿರಲಿಲ್ಲ. ಖಾತೆ ಹಂಚಿಕೆ ಕುರಿತು ಮತ್ತೆ ಮಾತನಾಡಿದ್ದ ಸಚಿವ ಆನಂದ್ ಸಿಂಗ್, ಪಿಚ್ಚರ್ ಅಭೀ ಬಿ ಬಾಕಿ ಹೈ (ಸಿನಿಮಾ ಇನ್ನೂ ಮುಗಿದಿಲ್ಲ) ಎಂದು ಹೇಳಿಕೆ ಕೊಟ್ಟಿದ್ದರು.
ಜೊತೆಗೆ ಸಚಿವರಾದ ಎಂ.ಟಿ.ಬಿ. ನಾಗರಾಜ, ಬಿ. ಶ್ರೀರಾಮುಲು ಅವರೂ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇಬ್ಬರೂ ಸಚಿವರು ಮಾಜಿ ಸಿಎಂ ಯಡಿಯೂರಪ್ಪ ಜೊತೆಗೆ ಚರ್ಚಿಸಿದ ಬಳಿಕ ಸುಮ್ಮನಾಗಿದ್ದಾರೆ. ಆದರೆ ಆನಂದ್ ಸಿಂಗ್ ಮಾತ್ರ ಸಂಪುಟ ಸಭೆಗೂ ಹಾಜರಾಗದೇ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ.
ಹೀಗಾಗಿ ಮತ್ತೆ ಖಾತೆ ಹಂಚಿಕೆ ಅಸಮಾಧಾನ ಹೆಚ್ಚಾಗದಂತೆ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊನೆಯೆ ಸಂದೇಶವನ್ನು ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಬಿಜೆಪಿಯಲ್ಲಿ ಮುಂದೇನಾಗಬಹುದು? ಎಂಬ ಬಿಸಿಬಿಸಿ ಚರ್ಚೆ ಶುರುವಾಗಿವೆ ಎಂಬ ಮಾಹಿತಿ ಬಂದಿದೆ. ಅಷ್ಟಕ್ಕೂ ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ಕಳುಹಿಸಿರುವ ಸಂದೇಶ ಏನು?

ಆನಂದ್ ಸಿಂಗ್ ಕೊಟ್ಟಿದ್ದ ಗಡುವು ಅಂತ್ಯ!
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ತಾವು ಬಯಸಿದ ಖಾತೆ ನೀಡುವಂತೆ ಆನಂದ್ ಸಿಂಗ್, ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಪಟ್ಟು ಹಿಡಿದು ಸಿಎಂ ಬೊಮ್ಮಾಯಿಗೆ ಸಮಸ್ಯೆಯನ್ನುಂಟು ಮಾಡಿದ್ದರು. ಕೊನೆಗೆ ಎಂ.ಟಿ.ಬಿ. ನಾಗರಾಜ ಈಗಿರುವ ಖಾತೆಯಲ್ಲಿಯೇ ಮುಂದುವರೆಯುವುದಾಗಿ ಹೇಳಿಕೊಂಡಿದ್ದರು. ಆದರೆ ಆನಂದ್ ಸಿಂಗ್ ಮಾತ್ರ ಸಿಎಂಗೆ ಖಾತೆ ಬದಲಾವಣೆಗೆ ಗಡುವು ನೀಡಿದ್ದರು. ಜೊತೆಗೆ ಹೈಕಮಾಂಡ್ ಭೇಟಿಗೂ ಹೋಗುವುದಾಗಿ ಹೇಳಿದ್ದರು.

'ಪಿಚ್ಚರ್ ಅಭೀ ಬಿ ಬಾಕಿ ಹೈ' ಎಂದಿರುವ ಸಿಂಗ್!
ಖಾತೆ ಬದಲಾವಣೆ ಕುರಿತು ಆನಂದ್ ಸಿಂಗ್ ನೀಡಿದ್ದ ಗಡುವಿನ ಅವಧಿ ಮುಗಿದಿದೆ. ಹೀಗಾಗಿ ತಮಗೆ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಿ ಕೊಂಡಿದ್ದಾರೆ. ಜೊತೆಗೆ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳುವುದರೊಂದಿಗೆ ಮತ್ತೆ ಬಿಜೆಪಿಯಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಆದರೆ ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಖಾತೆ ಬದಲಾವಣೆಗೆ ಸಚಿವ ಆನಂದ್ ಹೀಗೆ ಪಟ್ಟು ಹಿಡಿದಲ್ಲಿ ಏನು ಮಾಡಬೇಕು ಎಂಬ ಸೂಚನೆಯನ್ನು ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ರವಾನಿಸಿದೆ ಎಂಬ ಮಾಹಿತಿ ಬಂದಿದೆ.

ಕೊಟ್ಟ ಜವಾಬ್ದಾರಿ ನಿರ್ವಹಿಸದಿದ್ದರೆ...?
ಬಯಸಿದ ಖಾತೆ ನೀಡಿಲ್ಲ ಎಂದು ಮುನಿಸಿಕೊಂಡು ಖಾತೆ ಬದಲಾವಣೆಗೆ ಒತ್ತಡ ಹೇರುವ ಸಚಿವರಿಗೆ ಬಿಜೆಪಿ ಹೈಕಮಾಂಡ್, ಕೊಟ್ಟ ಜವಾಬ್ದಾಾರಿ ನಿರ್ವಹಿಸದಿದ್ದರೆ ರಾಜೀನಾಮೆ ಸ್ವೀಕರಿಸುವ ಸಂದೇಶ ರವಾನಿಸಿದೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಮತ್ತೆ ಒತ್ತಡ ಹಾಕಿ ರಾಜೀನಾಮೆ ಕೊಡುವ ಬ್ಲಾಕ್‌ಮೇಲ್ ಮಾಡಿದರೆ, ರಾಜೀನಾಮೆ ಸ್ವೀಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂದೇಶಕ್ಕೆೆ ಮೆತ್ತಗಾಗಿದ್ದ ಎಂ.ಟಿ.ಬಿ. ನಾಗರಾಜ!
ಹೈಕಮಾಂಡ್ ಸಂದೇಶದ ಹಿನ್ನೆಲೆಯಲ್ಲಿಯೇ ತಮ್ಮ ಖಾತೆ ಬದಲಾಯಿಸದಿದ್ದರೆ ತಮ್ಮ ನಡೆ ಬೇರೆ ಇರುತ್ತದೆ ಎಂದು ಹೇಳಿಕೆ ಕೊಟ್ಟಿದ್ದ ಸಚಿವ ಎಂ.ಟಿ.ಬಿ. ನಾಗರಾಜ ಅವರನ್ನು ಸಚಿವ ಆರ್. ಅಶೋಕ ಮನವೊಲಿಸುವ ಮೂಲಕ ಸಮಾಧಾನ ಮಾಡಿದ್ದರು. ಜೊತೆಗೆ ಹೈಕಮಾಂಡ್ ಕುರಿತು ವಿವರಿಸಿದ್ದರು. ಹೀಗಾಗಿ ಸಧ್ಯಕ್ಕೆೆ ಎಂ.ಟಿ.ಬಿ ನಾಗರಾಜ ತಮಗೆ ಕೊಟ್ಟಿದ್ದ ಖಾತೆಯಲ್ಲಿಯೇ ಮುಂದುವರೆದಿದ್ದಾರೆ. ಇದೇ ಎಚ್ಚರಿಕೆಯನ್ನು ಈಗ ಆನಂದ್ ಸಿಂಗ್‌ಗೆ ಕೊಡಲಾಗಿತ್ತು.

ಪಿಚ್ಚರ್ ಕೇಸಾ ಚಾಲೂ ಹೋತಾ ಹೈ? ಎಂದ ರಾಜೂಗೌಡ!
ಆನಂದ್ ಸಿಂಗ್ ಅಸಮಾಧನದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ರಾಜೂಗೌಡ, ಆನಂದ್ ಸಿಂಗ್ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಕೂಡ ಬರುತ್ತಾರೆ. ನಾವೂ ಕೂಡ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಧಾನ ಇರುವುದು ಸತ್ಯ. ಆದ್ರೆ ಅದನ್ನು ಹೈಕಮಾಂಡ್ ಬದಲಿಗೆ, ಮುಖ್ಯಮಂತ್ರಿಗಳ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದಾರೆ. ಆನಂದ್ ಸಿಂಗ್ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿದ್ದರು. ಥಿಯೇಟರ್ ಬಂದ್ ಹೈ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ? ಅಂತ ನಾವು ಕಾಲೆಳೆದಿದ್ದೇವೆ ಎಂದು ರಾಜೂಗೌಡ ನಗುತ್ತ ಮಾತನಾಡಿದ್ದಾರೆ.
ಹೀಗಾಗಿ ಖಾತೆ ಬದಲಾವಣೆಯಿಂದ ಹಿಂದಕ್ಕೆ ಸರಿದಿರುವ ಸಚಿವ ಆನಂದ್ ಸಿಂಗ್, ಇರುವ ಖಾತೆಯಲ್ಲಿಯೇ ಮುಂದುವರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಖಾತೆ ಬದಲಾವಣೆಗೆ ಒತ್ತಾಯಿಸಿ ಯಾರಾದರೂ ರಾಜೀನಾಮೆ ಕೊಟ್ಟಲ್ಲಿ ಸ್ವೀಕರಿಸಿ ಬೇರೆಯವರಿಗೆ ಸಚಿವಸ್ಥಾನ ಕೊಡಿ ಎಂದು ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ಸೂಚನೆ ಕೊಟ್ಟಿದೆ ಎಂಬ ಮಾಹಿತಿಯಿದೆ.












Click it and Unblock the Notifications