ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತಿದ್ದಕ್ಕೆ ಶುದ್ಧೀಕರಣ ಮಾಡಿದ ಜಿಎಸ್‌ಬಿ ಸಮುದಾಯದ ಮುಖಂಡರು!?
ಮಂಗಳೂರು, ನವೆಂಬರ್ 25: ಶ್ರೀ ವೆಂಕಟರಮಣ ಸ್ವಾಮಿಯ ಪಲ್ಲಕ್ಕಿಯನ್ನು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೊತ್ತಿದ್ದಕ್ಕೆ, ಪಲ್ಲಕ್ಕಿ ಅಪವಿತ್ರವಾಯಿತೆಂದು ಪಲ್ಲಕ್ಕಿಯನ್ನು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಮುಖಂಡ ಶುದ್ಧಗೊಳಿಸಿದ ಆರೋಪ ಕೇಳಿಬಂದಿದೆ.
ನವೆಂಬರ್ 19ರ ಶುಕ್ರವಾರ ಕಾರ್ತಿಕ ಹುಣ್ಣಿಮೆ ದಿನದಂದು ಬೆಳ್ತಂಗಡಿಯ ಲಾಯಿಲ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಪ್ರಯುಕ್ತ ದೇವರ ಪಲ್ಲಕ್ಕಿ ಮೆರವಣಿಗೆ ನಡೆದಿದೆ. ಬೆಳ್ತಂಗಡಿಯ ಮುಖ್ಯ ಪೇಟೆಯಲ್ಲಿ ಈ ಪಲ್ಲಕ್ಕಿ ಮೆರವಣಿಗೆ ನಡೆದಿದ್ದು, ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಅಲ್ಲಿದ್ದವರ ಒತ್ತಾಯಕ್ಕೆ ಮಣಿದು ದೇವರ ಪಲ್ಲಕ್ಕಿಗೆ ಹೆಗಲು ನೀಡಿದ್ದರು.

ಪಲ್ಲಕ್ಕಿ ಅಶುದ್ಧವಾಗಿದೆ ಎಂದ ಜಿಎಸ್‌ಬಿ ಮುಖಂಡರು
ಬಳಿಕ ತಾವು ದೇವರ ಪಲ್ಲಕ್ಕಿ ಹೊತ್ತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಒಂದು ಜಿಎಸ್‌ಬಿ ಸಮುದಾಯದ ಸಂಪ್ರದಾಯಸ್ಥ ಜನರಲ್ಲಿ ಅಸಮಾಧಾನ ಉಂಟಾಗಿದೆ.
ಪಲ್ಲಕ್ಕಿಯನ್ನು ಹೊರಬೇಕಾದರೆ ಹಲವು ನಿಯಮಗಳಿವೆ. ಜನಿವಾರ ಹಾಕಿದವರು ಮಾತ್ರ ಪಲ್ಲಕ್ಕಿಯನ್ನು ಹೊರಬೇಕು. ಪಲ್ಲಕ್ಕಿ ಹೊರುವವನು ಶುಚೀರ್ಭೂತನಾಗಿರಬೇಕು. ಪಲ್ಲಕ್ಕಿಯನ್ನು ಹೊರಲೂ ಕಮಿಟಿಯನ್ನು ಮಾಡಲಾಗಿದ್ದು, ಅದರ ವಿರುದ್ಧವಾಗಿ ಅನ್ಯ ಜಾತಿಯ ವ್ಯಕ್ತಿಯೋರ್ವ ಪಲ್ಲಕ್ಕಿಯನ್ನು ಹೊತ್ತಿರುವುದರಿಂದ ಪಲ್ಲಕ್ಕಿ ಅಶುದ್ಧವಾಗಿದೆ ಎಂದು ಜಿಎಸ್‌ಬಿ ಸಮುದಾಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತಾ ಹೇಳಲಾಗಿದೆ.

ಯುವಕರಿಬ್ಬರ ಒತ್ತಾಯಕ್ಕೆ ಮಣಿದು ಪಲ್ಲಕ್ಕಿ ಹೊತ್ತ ಶಾಸಕ
ನವೆಂಬರ್ 19ರ ಶುಕ್ರವಾರ ಸಂಜೆಯ ವೇಳೆಗೆ ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜಾ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದ್ದರು. ಆ ಬಳಿಕ ದೇವರ ಪಲ್ಲಕ್ಕಿ ಮೆರವಣಿಗೆ ಆರಂಭವಾಗಿತ್ತು. ಕೆಲ ಹೊತ್ತಿನ ಬಳಿಕ ಪಲ್ಲಕ್ಕಿ ಬೆಳ್ತಂಗಡಿ ಪೇಟೆಯ ಬಳಿ ಸಾಗುತ್ತಿದ್ದಂತೆಯೇ ಹರೀಶ್ ಪೂಂಜಾ ಕೂಡಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಜಿಎಸ್‌ಬಿ ಸಮುದಾಯಕ್ಕೆ ಸೇರಿದ ಯುವಕರಿಬ್ಬರು ಶಾಸಕ ಹರೀಶ್ ಪೂಂಜಾಗೆ ಪಲ್ಲಕ್ಕಿ ಹೊರುವಂತೆ ಕೇಳಿಕೊಂಡಿದ್ದರು. ಯುವಕರ ಒತ್ತಾಯಕ್ಕೆ ಮಣಿದು ಶಾಸಕ ಪೂಂಜಾ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು.
ಪಲ್ಲಕ್ಕಿ ಉತ್ಸವದ ಸಂಪ್ರದಾಯ ಮುರಿದ ಹಿನ್ನಲೆಯಲ್ಲಿ ಯುವಕರಿಬ್ಬರನ್ನು ಜಿಎಸ್‌ಬಿ ಸಮುದಾಯದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಯುವಕರಿಗೆ ಸಮುದಾಯದ ಸ್ವಾಮೀಜಿ ಬುದ್ಧಿವಾದ ಹೇಳಿ ಪಲ್ಲಕ್ಕಿಗೆ ಪ್ರಾಥಮಿಕ ಪರಿಹಾರ ಕಾರ್ಯವನ್ನು ಸೂಚಿಸಿದ್ದಾರೆ. ಪಲ್ಲಕ್ಕಿಯ ಶುದ್ಧೀಕರಣ ಪ್ರಕ್ರಿಯೆ ನಡೆದಿದೆ ಅಂತಾ ಹೇಳಲಾಗಿದೆ.

ಗೃಹಪ್ರವೇಶ, ಶವಸಂಸ್ಕಾರ ಅಂತಾ ತಿರುಗುವ ಶಾಸಕ
ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಹರೀಶ್ ಪೂಂಜಾ ಜಾಗದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಪಲ್ಲಕ್ಕಿ ಅಪವಿತ್ರವಾಯಿತು ಅಂತಾ ಪುಕಾರು ಎಬ್ಬಿಸುತ್ತಿದ್ದರು. ದಿನವಿಡೀ ಮದುವೆ, ಗೃಹಪ್ರವೇಶ, ಶವಸಂಸ್ಕಾರ ಅಂತಾ ತಿರುಗುವ ಶಾಸಕ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ದೇವರ ಪಲ್ಲಕ್ಕಿಯನ್ನು ಹೊತ್ತಿದ್ದು ಮೈಲಿಗೆಯಾಗಲಿಲ್ಲವೇ? ಪಲ್ಲಕ್ಕಿ ಹೊರುವವರು ಮನೆಯಿಂದ ಸ್ನಾನ ಮಾಡಿ ನೇರ ದೇಗುಲಕ್ಕೆ ತೆರಳಿ ಪಲ್ಲಕ್ಕಿಯನ್ನು ಹೊರಬೇಕಾದ ಸಂಪ್ರದಾಯವನ್ನು ಮುರಿದದ್ದು ಧರ್ಮ ವಿರೋಧ ಅಲ್ವೇ ಎಂಬ ಆಕ್ರೋಶ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ದಲಿತರಿಗೂ ಪಲ್ಲಕ್ಕಿ ಹೊರುವ ಅವಕಾಶ ನೀಡಬೇಕು
ಮತ್ತೊಂದೆಡೆ ಬೆಳ್ತಂಗಡಿಯ ದಲಿತ ಸಂಘಟನೆಗಳ ಮುಖಂಡರೂ ಶಾಸಕ ಪಲ್ಲಕ್ಕಿ ಹೊತ್ತ ವಿಚಾರವಾಗಿ ಮೌನ ಮುರಿದಿದ್ದಾರೆ. ಶಾಸಕರಿಗೆ ಪಲ್ಲಕ್ಕಿಯನ್ನು ಹೊರಲು ಅವಕಾಶ ನೀಡಿದ ಸಮುದಾಯದ ಮುಖಂಡರು ಬೇರೆಯವರಿಗೆ ಯಾಕೆ ನೀಡುವುದಿಲ್ಲ. ದಲಿತರಿಗೂ ಪಲ್ಲಕ್ಕಿ ಹೊರುವ ಅವಕಾಶ ನೀಡಬೇಕೆಂದು ಆಗ್ರಹ ಮಾಡಿದ್ದಾರೆ.
ಅಸ್ಪೃಶ್ಯತೆ ವಿಚಾರದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಗೆ ವಾದ- ಪ್ರತಿವಾದ ತಾರಕ್ಕೇರಿರುವ ಸಂದರ್ಭದಲ್ಲಿ ಅನ್ಯ ಜಾತಿಯ ಶಾಸಕ ಪಲ್ಲಕ್ಕಿ ಮುಟ್ಟಿದ ಎಂಬ ಕಾರಣಕ್ಕಾಗಿ ಪಲ್ಲಕ್ಕಿ ಶುದ್ಧೀಕರಣ ಮಾಡಿದ ಘಟನೆ ಈಗ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಚರ್ಚೆಗಳು ಆರಂಭವಾಗಿವೆ.

ಗೊಂದಲ ಆಗಿರುವುದು ನಿಜ
ಘಟನೆ ಬಗ್ಗೆ ಜಿಎಸ್‌ಬಿ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಸ್ವಲ್ಪ ಗೊಂದಲಗಳಾಗಿರುವುದು ನಿಜ. ಆದರೆ ಅದನ್ನು ಅಂದೇ ಪರಿಹಾರ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ಸತ್ಯಕ್ಕೆ ದೂರವಾಗಿದೆ. ನಮ್ಮ ಸಮುದಾಯದ ಮುಖಂಡರು ಈ ವಿಚಾರವನ್ನು ಅಂದೇ ಬಗೆಹರಿಸಿದ್ದೇವೆ. ಈ ವಿಚಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲಾ ಎಂದು ಹೇಳಿದ್ದಾರೆ.












Click it and Unblock the Notifications