Varamahalakshmi festival 2023: ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ, ರಾಯಚೂರು ಜಿಲ್ಲೆಯಲ್ಲಿ ದರ ಹೀಗಿದೆ
ರಾಯಚೂರು, ಆಗಸ್ಟ್, 25: ವರಮಹಾಲಕ್ಷಿ ಹಬ್ಬವನ್ನು ಇಂದು (ಆಗಸ್ಟ್ 25) ಸಂಭ್ರಮ ಸಡಗರದಿಂದ ಆಚರಿಸಲು ದೇವಸೂಗೂರು ಹೋಬಳಿ ವ್ಯಾಪ್ತಿಯ ಜನತೆ ಸಿದ್ಧವಾಗಿದ್ದು, ನಿನ್ನೆ (ಗುರುವಾರ) ಬೆಳಗ್ಗೆಯಿಂದಲೇ ಹೂವು ಮತ್ತು ಹಣ್ಣಿನ ಖರೀದಿಗೆ ಮುಗಿಬಿದ್ದಿದ್ದರು. ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿಯ ಉತ್ಸಾಹವೂ ಹೆಚ್ಚಿತ್ತು.
ಶಕ್ತಿನಗರ, ದೇವಸೂಗೂರು ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ಗ್ರಾಹಕರು ಜಮಾಯಿಸಿದ್ದರು. ವರಮಹಾಲಕ್ಷಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮೀ ಫೋಟೋಗಳನ್ನು ಕೂರಿಸಿ ಪೂಜಿಸುವುದು ವಾಡಿಕೆಯಾಗಿದೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂಗಳು ಮತ್ತು ಹಣ್ಣುಗಳು ಬೇಕೆ ಬೇಕಾಗುತ್ತದೆ. ಹಾಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ದರ ಏರಿಕೆಯ ನಡುವೆಯೂ ಹೂವು ಮತ್ತು ಹಣ್ಣಿನ ಖರೀದಿ ಭರಾಟೆ ಜೋರಾಗಿಯೇ ಇದೆ.

ಮಳೆ ಕೊರತೆಯಿಂದ ಮಾರುಕಟ್ಟೆಗೆ ಹೂವುಗಳ ಆವಕ ಕಡಿಮೆಯಾಗಿದ್ದು, ದರ ದುಬಾರಿಯಾಗಿದೆ. ಈ ಹಬ್ಬದಲ್ಲೇ ಹೂವಿನ ಬೆಳೆಗಾರರು ಸ್ವಲ್ಪ ಲಾಭ ಕಾಣುತ್ತಾರೆ. ಲಕ್ಷ್ಮಿ ಪೂಜೆಯ ವೇಳೆ ವಿವಿಧ ಬಗೆಯ ಹಣ್ಣುಗಳನ್ನು ಜೋಡಿಸುವುದರಿಂದ ಹಣ್ಣುಗಳ ದರ ಸ್ವಲ್ಪ ಏರಿಕೆಯಾಗಿದೆ. ಅಲ್ಲದ ಕೆಲವು ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇನ್ನು ಸೊಪ್ಪಿನ ಬೆಲೆ ಕಡಿಮೆಯಾಗಿದೆ.
ಸಾಮಾನ್ಯವಾಗಿ ಶ್ರಾವಣ ಬಂತೆಂದರೆ ಸಾಕು ಹೂವಿಗೆ ಬೇಡಿಕೆ ಹೆಚ್ಚು. ಈ ಕಾರಣಕ್ಕೆ ದರದಲ್ಲಿ ಭಾರೀ ಏರಿಕೆಯಾಗಿದೆ ಎಂದು ಹೂವಿನ ವ್ಯಾಪಾರಿ ಮೌನೇಶ್, ಮೌಲಾ ಅವರು ತಿಳಿಸಿದರು. ಅಲ್ಲದೆ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಮುನ್ನಾದಿನ ಗುರುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಮನೆಯಲ್ಲಿ ಅಷ್ಟ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದು, ಈ ಕಾರಣದಿಂದಾಗಿ ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ಮಾರುಕಟ್ಟೆಯಲ್ಲಿ ಬಾಳೆ ದಿಂಡು, ಮೋಸಂಬಿ, ದಾಳಿಂಬೆ, ಸಪೋಟಾ, ಪೇರಲ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳು, ಮಲ್ಲಿಗೆ, ಕನಕಾಂಬರಿ, ಸೇವಂತಿಗೆ, ಕ್ಯಾದಗಿ ಸೇರಿದಂತೆ ವಿವಿಧ ಹೂಗಳ ಖರೀದಿ ಜೋರಾಗಿತ್ತು. ಹಾಗೆಯೇ ಮಾರುಕಟ್ಟೆಯಲ್ಲಿ ಗ್ರಾಹಕರು ಹೂವು ಹಾಗೂ ಹಣ್ಣುಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೌಕಾಸಿ ಮಾಡುತ್ತಿರುವುದು ಕಂಡುಬಂದಿತು.
ಪೂಜೆಯಿಂದ ಅಷ್ಟ ಐಶ್ವರ್ಯ ಪಾಪ್ತಿ
ವರಮಹಾಲಕ್ಷ್ಮಿ ವ್ರತವು ಕೃಷ್ಣ ಧರ್ಮರಾಜನಿಗೆ ಮಾಡಿದ ಉಪದೇಶವಾಗಿದೆ. ಪಾಂಡವರು ವನವಾಸದಲ್ಲಿ ಇದ್ದಾಗ ಅದರಿಂದ ಪಾರಾಗಲು, ಅಷ್ಟೈಶ್ವರ್ಯ ಪಾಪ್ತಿಗಾಗಿ ಮಾಡಿರುವ ವ್ರತವಾಗಿದೆ. ಈ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಗೆ ಸಮೀಪದ ಶುಕ್ರವಾರದಂದು ಆಚರಣೆ ಮಾಡಲಾಗುತ್ತದೆ ಎಂದು ಸಂಸ್ಕೃತ ವಿದ್ವಾಂಸ ಮುಕುಂದಾಚಾರ ಜೋಶಿ ತಿಳಿಸಿದರು.












Click it and Unblock the Notifications