ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ

By: ಗುರು ಕುಂಟವಳ್ಳಿ
Subscribe to Oneindia Kannada

ನಿನ್ನ ನಾ ನೋಡಿದ್ದು ಇದೇ ಮೊದಲಲ್ಲ. ಆದರೆ, ನಮ್ಮ ಕಾಲೇಜಿನ ಕ್ಯಾಂಪಸ್‌ನಲ್ಲಿ ನೋಡಿದ್ದು ಅದೇ ಮೊದಲು. ತಲೆ ತಗ್ಗಿಸಿಕೊಂಡು ನೀನು ನಡೆದು ಬರುತ್ತಿದ್ದದ್ದು ನೋಡಿ ನಾನು ಮರುಳಾದೆ....

ಅದು ಜೂನ್ ತಿಂಗಳು. ಶಿವಮೊಗ್ಗದಲ್ಲಿ ಮಳೆ ರಚ್ಚೆ ಹಿಡಿದವರಂತೆ ಸುರಿಯುತ್ತಿತ್ತು. ನೀನು ಹಿಡಿದಿದ್ದ ಹಸಿರು ಬಣ್ಣದ ಛತ್ರಿಯ ಮೇಲಿದ್ದ ಅರಿಶಿಣ ಬಣ್ಣದ ಹೂಗಳು ಮಳೆಯಲ್ಲಿ ತೊಯ್ದು ನಗುತ್ತಿದ್ದವು.

ಬೀಸುತ್ತಿದ್ದ ತಣ್ಣನೆಯ ಗಾಳಿ ನಿನ್ನ ಮುಖಕ್ಕೆ ಮಳೆಯ ನೀರನ್ನು ಚಿಮುಕಿಸುತ್ತಿತ್ತು, ಅದೇ ಮಳೆಯ ನೀರು ನನ್ನಲ್ಲಿ ಪ್ರೀತಿಯ ಮೊಳಕೆಯೊಡೆಯುವಂತೆ ಮಾಡಿತು. ಬೆಳ್ಳಿಯ ಕಾಲ್ಗೆಜ್ಜೆ ತೊಟ್ಟು ನೀನು ಕಾಲಿಟ್ಟಿದ್ದು ಕಾಲೇಜಿಗೆ ಮಾತ್ರವಲ್ಲ ನನ್ನ ಹೃದಯಕ್ಕೆ.

love

'ನಮಗೆ ಅಧಿಕಾರ ಬೇಕಾಗೋದು ಅನಾಹುತದ ಕೆಲಸ ಮಾಡಲು ಮಾತ್ರ. ಇಲ್ಲವಾದರೆ ಉಳಿದ ಎಲ್ಲಾ ಕೆಲಸಗಳಿಗೂ ಪ್ರೀತಿಯೊಂದು ಜೊತೆಗಿದ್ದರೆ ಸಾಕು' ಈ ಮಾತನ್ನು ಹೇಳಿದ್ದು ಚಾರ್ಲಿ ಚಾಪ್ಲಿನ್. [ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]

ನಿಜ ಕಣೇ ನಿನ್ನ ಕಣ್ಣಲ್ಲಿನ ಮಿಂಚು, ಗುಳಿ ಕೆನ್ನೆಯ ನಗು, ಗುಂಗುರು ಕೂದಲಿನ ಮಾರುದ್ದದ ಜಡೆ ನೋಡಿದಾಗ ನನ್ನಲ್ಲಿ ಮಿಂಚಿನ ಸಂಚಾರವಾಯಿತು. ನಿನ್ನ ಹೆಸರು, ಕಾಂಬಿನೇಶನ್ ತಿಳಿದುಕೊಳ್ಳಲು ಕಾತರನಾಗಿದ್ದ ನನಗೆ ದೇವರೇ ಅವಕಾಶ ಒದಗಿಸಿದ್ದ.

ನಿನ್ನದೇ ಗುಂಗಿನಲ್ಲಿ ಅರ್ಧಬಂರ್ದ ಪಾಠ ಕೇಳಿಸಿಕೊಂಡು ಕ್ಲಾಸಿನಿಂದ ಹೊರಬರುವಾಗ ನೀನು ಬಾಗಿಲ ಬಳಿ ನಿಂತಿದ್ದೆ. ಈ ಬಾರಿ ತಲೆ ತಗ್ಗಿಸಿಕೊಂಡು ಹೋಗುವ ಸರದಿ ನನ್ನದಾಗಿತ್ತು. ಏಕೆಂದರೆ, ನಿನ್ನ ಜೊತೆ ನಮ್ಮ ಮೇಡಮ್ ಮಾತನಾಡುತ್ತಾ ನಿಂತಿದ್ದರು.

ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ನಿನ್ನ ಕನಸು, ನಿನ್ನನ್ನು ನನ್ನ ಹತ್ತಿರಕ್ಕೆ ಕರೆತಂದಿತ್ತು. ಒಂದು ದಿನ ನೀನು ಬಂದು ಹೆಸರು ಹೇಳಿ, ಪರಿಚಯ ಮಾಡಿಕೊಂಡಾಗ ನನ್ನ ಸಂತೋಷಕ್ಕೆ ಕೊನೆಯೇ ಇರಲಿಲ್ಲ. ನೀನು ಅಂದು ಹೇಳಿದ ಎರಡಕ್ಷರದ ಹೆಸರನ್ನು ಇಂದಿಗೂ ನಾನು ಮರೆತಿಲ್ಲ.

ನಾನೆಂದು ನಿನ್ನ ಬೇಸರಗೊಂಡ ಮುಖ ನೋಡಿಲ್ಲ. ಸದಾ ನಗುಮೊಗದಿಂದ ಇರುತ್ತಿದ್ದ ನಿನ್ನನ್ನು ನೋಡಿ ನಾನು ಸೋತು ಹೋಗಿದ್ದೆ. ನಿನ್ನ ನಗುವಿನ ಭಿಕ್ಷೆ ಇರಲು ನಾನೆಂದೂ ಬಡವನಲ್ಲ ಕಣೇ....

ನಿನಗೆ ನೆರವಾಗಿ ಬಂದು ನನ್ನ ಮನದಲ್ಲಿ ಅಡಗಿದ್ದ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನಾ ನನ್ನನ್ನೆ ಮರೆತು ಬಿಡುವೆ. ಅದಕ್ಕಾಗಿಯೇ ಈ ಪತ್ರ ಬರೆಯುವ ವಿಚಿತ್ರ ಸಾಹಸ.

ನಿನ್ನ ಬಗ್ಗೆ ಇನ್ನಷ್ಟು ಹೇಳಬೇಕೆಂದು ಅನ್ನಿಸುತ್ತಿದ್ದರೂ ಬರೆಯಲು ಆಗುತ್ತಿಲ್ಲ. ನಿನ್ನ ನೆನಪಲ್ಲಿ ನಾನು ಪದಗಳನ್ನೇ ಮರೆಯುತ್ತೇನೆ. ನಾನು ಬರೆದ ಪ್ರತಿ ಅಕ್ಷರ ಓದಿದರೆ ನಿನಗೆ ನನ್ನ ಮೇಲೆ ಮಾತ್ರವಲ್ಲ ನಿನ್ನ ಮೇಲೆಯೂ ಪ್ರೀತಿ ಹುಟ್ಟುತ್ತದೆ ಎನ್ನುವುದು ನನ್ನ ನಂಬಿಕೆ. ನಿನ್ನ ಉತ್ತರ ಮತ್ತು ಅದೇ ಮುಗ್ಧ ನಗುವಿಗಾಗಿ ಕಾಯುತ್ತಿದ್ದೇನೆ....

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Valentines Day Special : My dear, I will never forget the day when you walked into the college campus with green umbrella. That unforgettable scene of rainy water sprinkling on your lovely face made me fall in love instantly. A love letter is not just enough to express my affection. I am waiting for your mesmerizing smile.
Please Wait while comments are loading...