ಸಿರಿ-ಸಂಭ್ರಮದ ಯುಗಾದಿಗೊಂದು ಮುನ್ನುಡಿ!
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು - ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು.
ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಬೇವು-ಬೆಲ್ಲ
ಎಲ್ಲರ ಬಾಳಲ್ಲೂ ಸುಖ-ದುಃಖ, ಒಳ್ಳೆಯದು-ಕೆಟ್ಟದ್ದು, ಕರ್ಮ-ಫಲ ಇದ್ದೇ ಇರುವುದು. ಇದೊಂದು ಬ್ಯಾಲೆನ್ಸ್ ಶೀಟು ಇದ್ದ ಹಾಗೆ. ಎಷ್ಟು ಸ್ವೀಕರಿಸುವರೋ ಅಷ್ಟನ್ನೇ ಮರಳಿ ಕೊಡಬೇಕು, ಬರುವಾಗ ಏನೂ ತರದೆ ಬಂದಂತೆ ಕೊನೆಯಲ್ಲಿ ಹೋಗುವುದು. ಅದಕ್ಕೇ ಇಂದಿನ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ಬೇವಿನಲ್ಲಿ ಇರುವ ಶಕ್ತಿ ನಿಜವಾಗಿಯೂ ಬೆಲ್ಲದಲ್ಲಿಲ್ಲ. ತಿಂದ ಮೇಲೆ ಬೆಲ್ಲವು ಹೊಟ್ಟೆಯಾಳಗೆ ಉರಿ ಅಥವಾ ಶಾಖವನ್ನು ಉಂಟು ಮಾಡಿದರೆ, ಅದೇ ನಾಲಗೆಗೆ ಕಹಿಯಾದ ಬೇವು ಆ ಉರಿಯನ್ನು ಶಮಿಸುವುದು.
ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ।
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ।।
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯೆ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.












Click it and Unblock the Notifications