ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಹಬ್ಬಗಳ ಸಡಗರ

By ತೇಜಶಂಕರ ಸೋಮಯಾಜಿ, ಶೃಂಗೇರಿ
|
Google Oneindia Kannada News

ಸಹ್ಯಾದ್ರಿಯ ಸಾಲುಪರದೆಯ ಮುಂದೆ ಭದ್ರೆಯನ್ನು ಅಪ್ಪಿಕೊಳ್ಳಲು ನಿಶ್ಶಬ್ದವಾಗಿ ಹರಿಯುವ ತುಂಗೆ, ರಾಜಬೀದಿಯ ಆ ತುದಿಯಿಂದಲೇ ಕಾಣುವ -ಸಹ್ಯಾದ್ರಿಗೇ ಸವಾಲೊಡ್ಡುವಂತೆ ವಿರಾಜಮಾನವಾಗಿರುವ ಭವ್ಯವಾದ ರಾಜಗೋಪುರ, ಇಂದಿಗೂ ಎಲ್ಲರನ್ನು ನಿಬ್ಬೆರಗಾಗಿಸುವ - ಪೂರ್ವಿಕರ ಕಲಾಸಾಧನೆಗೆ ಕೈಗನ್ನಡಿಯಾದ ಕಲ್ಲಿನ ದೇಗುಲ, ಸಂಗೀತವೋ - ಸಾಹಿತ್ಯವೋ ಅಥವಾ ಇನ್ನಾವುದೋ ಪ್ರಕಾರದ ವಿದ್ಯೆಗಾಗಲೀ ಸದ್ಬುದ್ಧಿಗಾಗಲೀ ಅಧಿದೇವತೆಯಾಗಿರುವ ಜಗತ್ತಿಗೇ ಜನನಿಯಾಗಿರುವ ತಾಯಿಯ ತವರು...

ಹೌದು ಅದೇ.. ನಮ್ಮ ಶೃಂಗೇರಿ. ಶಾರದೆಯು ನಮ್ಮನ್ನು ಹರಸಲು ನೆಲೆಸಿರುವ ನೆಲ. ಹಾಗೆಯೇ ಆ ಭಾರತಿಯು ಪುಂವದ್ಭಾವದಿಂದ ಜಗದ್ಗುರು ಭಾರತೀತೀರ್ಥ ಮಹಾಸ್ವಾಮಿಗಳವರ ರೂಪವೆತ್ತಿ - ಜಗದ್ಗುರು ವಿಧುಶೇಖರಭಾರತಿಗಳೆಂಬ ಶಿಷ್ಯಸಮೇತರಾಗಿ ಭಕ್ತಜನರನ್ನು ಪರಿಪಾಲಿಸುತ್ತಿರುವ - ಶ್ರೀಮಚ್ಛಂಕರಭಗವತ್ಪಾದರಿಂದ ಪ್ರತಿಷ್ಠಾಪಿಸಲ್ಪಟ್ಟ ಚತುರಾಮ್ನಾಯ ಪೀಠಗಳಲ್ಲಿ ಪ್ರಖ್ಯಾತವೂ ಪ್ರಪ್ರಥಮವೂ ಆದ ಪುಣ್ಯಭೂಮಿ. ಸಂಸ್ಕೃತಿ ಸಂಸ್ಕಾರಗಳ ನೆಲೆವೀಡು. ಧರ್ಮಮಾತ್ರಮಾರ್ಗವಾಗಿರುವ ಒಂದು ಅದ್ವಿತೀಯ ಸಂಸ್ಥಾನ ನಮ್ಮ ಶೃಂಗೇರಿ ಶಾರದಾಪೀಠ.

ಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತ

ಸಾಧಾರಣವಾಗಿ ನಮಗೆ ವರ್ಷದ ಆದಿಯಾದ ಯುಗಾದಿಯಿಂದ ಫಾಲ್ಗುಣ ಮಾಸದ ತನಕ ಒಂದಿಲ್ಲೊಂದು ಹಬ್ಬದ ಸಡಗರ ಇದ್ದೇ ಇರುತ್ತದೆ . ಅದರಲ್ಲಿ ಕೊಂಚ ವಿರಾಮ ನೀಡುವುದು ಈ ಮಳೆಗಾಲದ ಅವಧಿ. ಜನರು ಆಷಾಢ ಮಾಸವನ್ನೋ ಅಥವಾ ಕರ್ಕಾಟಕ ಮಾಸವನ್ನೋ ಲೆಕ್ಕದಲ್ಲಿ ಇಟ್ಟುಕೊಂಡು ಶೂನ್ಯಮಾಸದ ಆಚರಣೆಗಳ ಕಾರಣಗಳಿಂದ ಅಷ್ಟಾಗಿ ಯಾವುದೇ ಕಾರ್ಯಕ್ರಮಗಳಿರದೆ ಬಿಡುವಿನಲ್ಲಿರುತ್ತಾರೆ. ಒಂದು- ಒಂದುವರೆ ತಿಂಗಳುಗಳ ಕಾಲದ ಈ ಅವಧಿಯಲ್ಲಿ ಮಳೆಗಾಲದ ಒಂದಷ್ಟು ಕೆಲಸ ಮುಗಿಸಿ ಬೇಸಿಗೆಯಲ್ಲಿ ಮಾಡಿಟ್ಟ ಹಲಸಿನ ಹಪ್ಪಳ ತಿನ್ನುತ್ತಾ ಕಾಫಿ ಕುಡಿದರೆ ಸಾರ್ಥಕ ಜೀವನದ ಭಾವವು ಮನದಲ್ಲಿ ಮೂಡುತ್ತದೆ.

ಮನೆಯಲ್ಲಿ ಬಾಯಿಪಾಠ ಹೇಳುವಾಗ ಶ್ರಾವಣ - ಭಾದ್ರಪದಕ್ಕೆ ವರ್ಷ ಋತು ಎಂದಾಗ ಅರ್ಥವಾಗದ ವೈಜ್ಞಾನಿಕತೆ ಈಗೀಗ ಈ ಮಾಸದಲ್ಲಿ ಮಳೆಯನ್ನು ನೋಡಿ ತಿಳಿಯುತ್ತಿದೆ. ಬೇಕಾದಷ್ಟು ಮಳೆಯಿಲ್ಲದೇ ಇದ್ದರೂ ವರ್ಷದಲ್ಲಿ ಹೆಚ್ಚಾಗಿ ಮಳೆಯಾಗುವುದು ಈ ವರ್ಷಕಾಲದಲ್ಲೇ. ಇಂಥ ಸಮಯದಲ್ಲೂ ನಮ್ಮ ಶೃಂಗೇರಿ ಒಂದಷ್ಟು ಕಾರ್ಯಕ್ರಮಗಳಿಂದ ಜನರನ್ನು ತನ್ನತ್ತ ಬರಮಾಡಿಕೊಳ್ಳುತ್ತದೆ. ಶ್ರಾವಣದಲ್ಲಿ ನಡೆದ ಅಂತಹ ಕೆಲವು ಕಾರ್ಯಕ್ರಮಗಳು ನೋಡಿ ಹೀಗಿದೆ.

ಕಾರ್ತೀಕದಲ್ಲೂ ಇದೇ ರೀತಿ ಪೂಜೆ

ಕಾರ್ತೀಕದಲ್ಲೂ ಇದೇ ರೀತಿ ಪೂಜೆ

ಜಗದ್ಗುರುಗಳವರು ಸಾಧಾರಣವಾಗಿ ಪ್ರತಿನಿತ್ಯ ರಾತ್ರಿ ರತ್ನಗರ್ಭಗಣಪತಿಯ ಜೊತೆ ಶ್ರೀ ಚಂದ್ರಮೌಳೀಶ್ವರಸ್ವಾಮಿಯ ಪೂಜೆಯನ್ನು ಮಾಡುತ್ತಾರೆ. ಇದಲ್ಲದೆ ವಿಶೇಷ ದಿನಗಳಲ್ಲಿ ಮಧ್ಯಾಹ್ನವೂ ಜಗದ್ಗುರುಗಳವರು ಚಂದ್ರಮೌಳೀಶ್ವರ ಪೂಜೆಯನ್ನು ನೆರವೇರಿಸುವುದುಂಟು. ಆ ವಿಶೇಷ ದಿನಗಳಲ್ಲಿ ಶ್ರಾವಣ ಸೋಮವಾರವೂ ಸೇರುತ್ತದೆ. ಸರಿಸುಮಾರು 12 ಗಂಟೆಯ ವೇಳೆಗೆ ಆರಂಭವಾಗುವ ಪೂಜೆಯು 2 ಗಂಟೆಯವರೆಗೂ ಇರುತ್ತದೆ. ಈ ಪೂಜೆಯ ಕಾಲದಲ್ಲಿ ನಡೆಯುವ ಫಲಪಂಚಾಮೃತಸ್ನಾನವನ್ನು ನೋಡಲು ಕಣ್ಣು ಪುಣ್ಯಮಾಡಿರಬೇಕು. ಅತಿ ವಿಶೇಷವಾದ ರೀತಿಯಲ್ಲಿ ಕ್ಷೀರ ಮೊದಲಾದ ಪಂಚಾಮೃತ ಮತ್ತು ದ್ರಾಕ್ಷಿ ಗೋಡಂಬಿ ಬಾದಾಮಿಗಳಾದಿಯಾಗಿ ಒಣಹಣ್ಣುಗಳ ಅಭಿಷೇಕದ ನಂತರ ನಮಕ - ಚಮಕಗಳಿಂದ ಅಭಿಷೇಕ ಅರ್ಚನೆಗಳು ಇರುತ್ತವೆ. ದೇಶದ ನಾನಾಭಾಗಗಳಿಂದ ಈ ಪೂಜೆಗಾಗಿ ಹಲವಾರು ಭಕ್ತರು ಆಗಮಿಸುತ್ತಾರೆ. ಕಾರ್ತಿಕ ಮಾಸದ ಸೋಮವಾರವೂ ಇದೇ ರೀತಿಯ ಪೂಜೆ ನಡೆಯುತ್ತದೆ. ಈಗಂತು ಶ್ರೀಶಂಕರವಾಹಿನಿಯಲ್ಲಿ ಇದರ ನೇರ ಪ್ರಸಾರವನ್ನೂ ನೋಡಬಹುದಾಗಿದೆ.

ಜಗದ್ಗುರು ವಿಧುಶೇಖರ ಭಾರತಿಗಳ ವರ್ಧಂತಿ

ಜಗದ್ಗುರು ವಿಧುಶೇಖರ ಭಾರತಿಗಳ ವರ್ಧಂತಿ

ಶೃಂಗೇರಿ ಶ್ರೀ ಶಾರದಾಪೀಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಭಾರತೀತೀರ್ಥರ ಉತ್ತರಾಧಿಕಾರಿಗಳಾದ ಜಗದ್ಗುರು ವಿಧುಶೇಖರಭಾರತಿ ಮಹಾಸ್ವಾಮಿಗಳ ಜನ್ಮ ಜಯಂತಿಯು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಅಂದರೆ ನಾಗರಪಂಚಮಿಯಂದು ನಡೆಯಿತು. ಭಕ್ತರ ಅಭೀಷ್ಟದಂತೆ ಅಪ್ಪಣೆಯ ಅಡಿಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಗದ್ಗುರು ವಿಧುಶೇಖರಭಾರತಿ ಮಹಾಸ್ವಾಮಿಗಳು ಜಯಂತಿಯ ಹಿಂದಿನ ದಿನ ಶ್ರೀ ಕಾಲಭೈರವನನ್ನು ಪೂಜಿಸಿದರು. ಲೋಕಕಲ್ಯಾಣಾರ್ಥವಾಗಿ ಮಹಾರುದ್ರಯಾಗವು ಮಹಾಗಣಪತಿಹೋಮವು ನಡೆಯಿತು. ಆಷಾಢ ಮಾಸದ ಪೌರ್ಣಮಿಯಿಂದ ಭಾದ್ರಪದ ಮಾಸದ ಪೌರ್ಣಮಿಯ ತನಕ ಚಾತುರ್ಮಾಸ್ಯವ್ರತದ ಕಾರಣ ಈ ಎಲ್ಲ ಕಾರ್ಯಕ್ರಮಗಳು ನರಸಿಂಹವನದಲ್ಲಿಯೇ ನಡೆಯುತ್ತದೆ. ವರ್ಧಂತಿಯ ದಿನ ಬೆಳಿಗ್ಗೆ ಆಹ್ನಿಕದರ್ಶನ ಮತ್ತು ಸಭಾಕಾರ್ಯಕ್ರಮದಲ್ಲಿ ಅನುಗ್ರಹಭಾಷಣ ನಮ್ಮನ್ನು ಕೃತಾರ್ಥರನ್ನಾಗಿಸುತ್ತದೆ.

ಶ್ರೀಮಠೀಯ ಪಾಠಶಾಲೆಯ ವಾರ್ಷಿಕೋತ್ಸವ

ಶ್ರೀಮಠೀಯ ಪಾಠಶಾಲೆಯ ವಾರ್ಷಿಕೋತ್ಸವ

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವನೃಸಿಂಹಭಾರತಿ ಮಹಾಸ್ವಾಮಿಗಳವರು 1895ರಲ್ಲಿ ಮನ್ಮಥನಾಮ ಸಂವತ್ಸರದ ಶ್ರಾವಣ ಶುದ್ಧ ಷಷ್ಠಿಯಂದು ವೇದ ಶಾಸ್ತ್ರಗಳ ರಕ್ಷಣೆಗೆಂದು ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯನ್ನು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸದ್ವಿದ್ಯೆಯನ್ನು ಈ ಪಾಠಶಾಲೆ ನೀಡುತ್ತಾ ಅನ್ವರ್ಥನಾಮವುಳ್ಳದ್ದಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಶಿಷ್ಯರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಪಾಠಶಾಲೆಯಲ್ಲಿ ಪೂರ್ವತನ ಗುರುಗಳ ಜಯಂತಿ, ಗಣಪತಿ ಉತ್ಸವ, ಗೀತಾಜಯಂತಿ, ಪ್ರತಿ ಪಕ್ಷದಲ್ಲಿಯೂ ಪ್ರದೋಷಪೂಜೆ, ಕಾರ್ತಿಕಮಾಸದಲ್ಲಿ ವಿಶೇಷವಾಗಿ ಮಹಾಪ್ರದೋಷಪೂಜೆ ಇರುತ್ತದೆ. 127 ವರ್ಷಗಳ ಸುದೀರ್ಘ ಕಾಲದಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾದ ಈ ಪಾಠಶಾಲೆಯ ವಾರ್ಷಿಕೋತ್ಸವ ಶ್ರಾವಣದ ಶುದ್ಧ ಷಷ್ಠಿಯಂದು ಜಗದ್ಗುರುಗಳ ಸಮ್ಮುಖದಲ್ಲಿ ನಡೆಯುತ್ತದೆ. ಜಗದ್ಗುರುಗಳ ಅನುಗ್ರಹ ಭಾಷಣ, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಗಳಿಗೆ ಬಹುಮಾನ ವಿತರಣೆ ಅಲ್ಲಿನ ಮರೆಯಲಾಗದ ಕ್ಷಣಗಳು. ನಾನು ಕೂಡ ಅದೇ ಪಾಠಶಾಲೆಯ ವಿದ್ಯಾರ್ಥಿ ಎಂಬುದೇ ನನ್ನ ಹೆಮ್ಮೆ.

ವರಮಹಾಲಕ್ಷ್ಮೀವ್ರತ

ವರಮಹಾಲಕ್ಷ್ಮೀವ್ರತ

ಲಕ್ಷ್ಮಿ ಎಂದರೆ ಯಾರು ತಾನೆ ತಿರುಗಿ ನೋಡಲಾರರು ಹೇಳಿ. ಅಂತಹ ಮಹಾದೇವಿ ಮಾಯಾದೇವಿಯವಳು. ಎಲ್ಲರೂ ಪ್ರತಿನಿತ್ಯ ಆಕೆಯನ್ನು ಪೂಜಿಸುವವರಾದರೂ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಲಾಯಿತು. ಶೃಂಗೇರಿಯಲ್ಲಿಯೂ ಅಂದು ವಿಶೇಷ ಪೂಜೆ. ಶಾರದೆಗೆ ಬಳೆಗಳಿಂದ ಅಲಂಕರಿಸಿದ್ದರು. ಗುರುಭವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಲಕ್ಷ್ಮಿಯನ್ನು ಮುಸ್ಸಂಜೆ ಜಗದ್ಗುರುಗಳವರು ಆರಾಧಿಸಿದರು. ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ, ಸುವಾಸಿನಿ ಪೂಜೆಯನ್ನು ಮಾಡಿ ಸರ್ವರಿಗೂ ಸಂಪತ್ತು ಲಭಿಸಲಿ ಆ ತಾಯಿಯಲ್ಲಿ ಪ್ರಾರ್ಥನೆ ಮಾಡಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣಾಷ್ಟಮಿಯ ಆಚರಣೆ ನಡೆಯಿತು. ಗುರುಭವನದ ಖಾಸಾಪೂಜಾಮಂಡಪದಲ್ಲಿ ಗುರುಗಳು ಪೂಜಿಸಿದರೆ, ಶಾರದಾಲಯದ ಪಕ್ಕದಲ್ಲಿ ಶ್ರೀ ಮಠದ ವತಿಯಿಂದ ವಾಸುದೇವನನ್ನು ಆರಾಧಿಸಲಾಯಿತು. ಆ ಅಚ್ಯುತ ಅತ್ಯಂತ ಸಾಹಸಿಗ, ಕುಶಲಿ, ಚತುಷಷ್ಠಿಕಲಾಭಿಜ್ಞನಾಗಿದ್ದಾನೆ. ಅಂತೆಯೇ ಅವನ ಜನ್ಮಾಷ್ಟಮಿಯ ಮರುದಿನ ವಿದ್ಯಾಶಂಕರ ದೇವಾಲಯದ ಎದುರು ಜಾರುಗಂಬ ಸ್ಪರ್ಧೆಕೂಡ ನಡೆಯಿತು. ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮದ ಜೊತೆ ಮನಸ್ಸನ್ನು ಹಗುರಾಗಿಸುತ್ತದೆ ನಮ್ಮ ಶೃಂಗೇರಿ.

ಸದಾ ಸನ್ಮಾರ್ಗದಲ್ಲಿ ನಡೆಸುವ ದಾರಿದೀಪ

ಸದಾ ಸನ್ಮಾರ್ಗದಲ್ಲಿ ನಡೆಸುವ ದಾರಿದೀಪ

ಶೃಂಗೇರಿಯ ವಿಶೇಷವೇನೆಂದು ಕೇಳಿದರೆ ಅನೇಕ ಉತ್ತರ ನೀಡಬಹುದು. ಮನುಷ್ಯನ ಧಾರ್ಮಿಕತೆ ಆಧ್ಯಾತ್ಮಿಕತೆಗಳ ಜೊತೆಗೆ ಸಾಮಾಜಿಕತೆಗೆ ಒಂದು ಬೆಸುಗೆ ಇರಲೇಬೇಕು. ಆಗಷ್ಟೇ ಧರ್ಮಾಚರಣೆ ನಮ್ಮ ಸನಾತನ ಸಂಸ್ಕೃತಿಗೆ ಸೋಪಾನವಾಗುತ್ತದೆ. ಇದಕ್ಕೆ ಪೂರಕ ವಾತಾವರಣ ನೀಡುವುದು ನಮ್ಮ ಶೃಂಗೇರಿ. ಮನುಷ್ಯ ಆಧುನಿಕನಾಗುತ್ತಾ ಸಂಕುಚಿತನಾಗುತ್ತಿದ್ದಾನೆ. ಹಾಗಿದ್ದರೂ ಇಂದು ಸಮಾಜಕ್ಕೂ ಮನುಜಕುಲಕ್ಕೂ ಸೇತುವೆ ಈ ಮಠ - ಮಾನ್ಯಗಳು. ಆ ಮಠಗಳ ಅಗ್ರಪಂಕ್ತಿಯ ಅಗ್ರಸ್ಥಾನದಲ್ಲಿ ನಿಲ್ಲುವುದೇ ಶ್ರೀಶೃಂಗೇರಿ ಶಾರದಾಪೀಠ‌. ಅವಿಚ್ಛಿನ್ನ ಗುರುಪರಂಪರೆಯ ಈ ಪೀಠ ಶಿಷ್ಯಕೋಟಿಯ ಒಳಿತಿಗೆ ಸಮಾಜಮುಖಿಕಾರ್ಯಗಳಿಗೆ ಕಟಿಬದ್ಧವಾಗಿದೆ. ಆದರೂ ತನ್ನ ಧರ್ಮಮಾರ್ಗದ ಸೀಮೆಯನ್ನೆಂದೂ ದಾಟಿಲ್ಲ. ಸರ್ವರನ್ನೂ ಸದಾ ಸನ್ಮಾರ್ಗದಲ್ಲಿ ನಡೆಸುವ ದಾರಿದೀಪವಾದ ಈ ಪೀಠಕ್ಕೆ ಜಗದ್ಗುರುಗಳ ಹೃತ್ಪದ್ಮಗಳಿಗೆ ಸದಾ ನಮಸ್ಕಾರಗಳು.

English summary
Sringeri Sharadamba temple witnessed series of festivals during Shravana masa. Birthday of Vidhushekhara Bharati, Krishna Janmashtami, Varamahalakshmi pooja, pathashala anniversary etc. An article by Jejashankara Somayaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X