Janmashtami 2022 : ಕೃಷ್ಣ ಜನ್ಮಾಷ್ಟಮಿ: ಸಮಯ, ವ್ರತ, ಉಪವಾಸ, ಪೂಜಾ ವಿಧಾನ
ದೇಶದೆಲ್ಲೆಡೆ ಈಗ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ ಸಡಗರ. ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ (8ನೇ ದಿನ) ದಿನದಂದು ಹುಟ್ಟಿದ್ದು. ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18 ಮತ್ತು 19ರಂದು ನಡೆಯುತ್ತಿದೆ.
ಶ್ರೀಕೃಷ್ಣ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಎಂಟನೇ ಅವತಾರ. ಬಹುತೇಕ ಹಿಂದೂಗಳಿಗೆ ಕೃಷ್ಣ ನೆಚ್ಚಿನ ದೇವರು. ಅದರಲ್ಲೂ ಉತ್ತರ ಭಾರತದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಬಹಳ ವೈಭವೋಪೇತವಾಗಿ ಆಚರಿಸುತ್ತಾರೆ. ನೀವು ಹಿಂದಿ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ತುಣುಕುಗಳನ್ನು ನೋಡಿರಬಹುದು.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯ ರಾಜ್ಯಗಳಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಉಪವಾಸ ವ್ರತ, ವಿಶೇಷ ಭಕ್ಷ್ಯ ಭೋಜನ, ವಿಶೇಷ ಪೂಜೆ ಇತ್ಯಾದಿ ನಡೆಯುತ್ತವೆ.
ಈ ಲೇಖನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಘಳಿಗೆ, ಉಪವಾಸ ಸಮಯ, ಪ್ರಸಾದ ಇತ್ಯಾದಿ ಬಗ್ಗೆ ಮಾಹಿತಿ ಇದೆ.

ಕೃಷ್ಣ ಜನ್ಮಾಷ್ಟಮಿ 2022 ಸಮಯ
ಅಷ್ಟಮಿ ತಿಥಿ ಆರಂಭ: ಆಗಸ್ಟ್ 18, ಗುರುವಾರ ರಾತ್ರಿ 9:20ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 19, ಶುಕ್ರವಾರ ರಾತ್ರಿ 10:59ಕ್ಕೆ
ರೋಹಿಣಿ ನಕ್ಷತ್ರ ಆರಂಭ: ಆಗಸ್ಟ್ 20, ಶನಿವಾರ ರಾತ್ರಿ 1:53ಕ್ಕೆ
ರೋಹಿಣಿ ನಕ್ಷತ್ರ ಅಂತ್ಯ: ಆಗಸ್ಟ್ 21, ಭಾನುವಾರ ಬೆಳಗ್ಗೆ 4:40ಕ್ಕೆ

ಕೃಷ್ಣ ಜನ್ಮಾಷ್ಟಮಿ ಉಪವಾಸ ಯಾವಾಗ?
ಶ್ರೀಕೃಷ್ಣ ಹುಟ್ಟಿದ್ದು ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿಯಂದು. ಇವರ ಜನ್ಮನಕ್ಷತ್ರ ರೋಹಿಣಿ. ಆದರೆ, ಈ ವರ್ಷ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಬಿದ್ದಿಲ್ಲ. ಅಷ್ಟಮಿ ತಿಥಿಯೇ ಉದಯ ತಿಥಿಯಾಗಿದೆ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 18ರಂದು ಆರಂಭವಾಗಿ 19ನೇ ತಾರೀಖಿನವರೆಗೂ ಇರಲಿದೆ. ಹೀಗಾಗಿ, ಈ ಎರಡು ದಿನಗಳೂ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಇನ್ನು, ಆಗಸ್ಟ್ 19ರಂದು ಅಷ್ಟಮಿ ತಿಥಿ ಉದಯ ತಿಥಿಯಾಗುವುದರಿಂದ, ಅಂದು ಉಪವಾಸ ಆಚರಿಸಬೇಕು ಎಂದು ಜ್ಯೋತಿಷಿಗಳು ತೀರ್ಮಾನಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಾನಗಳು
ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಅದು ಬಹಳ ವೈಭವ. ಎಲ್ಲಾ ಕೃಷ್ಣ ಮಂದಿರಗಳಲ್ಲಿ ವಿಶೇಷ ಅಲಂಕಾರ ಇರುತ್ತದೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ದಹಿ ಹಂಡಿ (ಮೊಸರು ಕುಡಿಕೆ) ಉತ್ಸವ ಆಚರಿಸಲಾಗುತ್ತದೆ. ಮೊಸರು ತುಂಬಿದ ಕುಡಿಕೆಯನ್ನು ಒಡೆಯುವ ಆಟ ಬಹಳ ರಂಜನೀಯ.
ಕೃಷ್ಣನಿಗೆ ಬೆಣ್ಣೆ, ಮೊಸರು ಎಂದರೆ ಬಹಳ ಪ್ರಿಯ. ಹೀಗಾಗಿ, ಮೊಸರು ಕುಡಿಕೆ ಒಡೆಯುವ ಆಟ ಉತ್ತರ ಭಾರತದಲ್ಲಿ ಬಹಳ ಜನಪ್ರಿಯ. ಕೃಷ್ಣ ಹುಟ್ಟಿದ ಮತ್ತು ಬೆಳೆದರೆನ್ನಲಾದ ವೃಂದಾವನ ಮತ್ತು ಮಥುರಾದಲ್ಲಂತೂ ಜನರ ಸಡಗರ ಸಂಭ್ರಮ ವರ್ಣಾತೀತ.
ಕೃಷ್ಣನಿಗೆ ಪ್ರಿಯವಾದ ಅನೇಕ ತಿನಿಸುಗಳನ್ನು ಈ ಹಬ್ಬದಲ್ಲಿ ತಯಾರಿಸಲಾಗುತ್ತದೆ. 56 ವಿಧಗಳ ಭೋಗ ಪ್ರಸಾದಗಳನ್ನು ಕೃಷ್ಣನಿಗೆ ನೈವೇದ್ಯವಾಗಿ ಇರಿಸಲಾಗುತ್ತದೆ. ಮಧ್ಯರಾತ್ರಿ ಸ್ವತಃ ಶ್ರೀಕೃಷ್ಣನೇ ಆಗಮಿಸಿ ಈ ನೈವೇದ್ಯವನ್ನು ಸ್ವೀಕರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ.

ಕರ್ನಾಟಕದಲ್ಲಿ ಹೇಗೆ ಆಚರಣೆ?
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಿ ಕೃಷ್ಣನಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲೂ ಕೃಷ್ಣನ ಫೋಟೊಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಣ್ಣು, ಹಂಪಲು, ಸಿಹಿ ತಿನಿಸುಗಳನ್ನು ದೇವರಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಇಡೀ ದಿನ ಉಪವಾಸ ಆಚರಿಸಲಾಗುತ್ತದೆ. ಕರ್ನಾಟಕದ ಕೆಲವೆಡೆ ಹುಲಿವೇಷ ನೃತ್ಯಗಳೂ ನಡೆಯುತ್ತವೆ. ರಾಜ್ಯದ ವಿವಿಧೆಡೆ ಮಕ್ಕಳಿಗೆ ಕೃಷ್ಣ ವೇಷದ ಸ್ಪರ್ಧೆಗಳು ನಡೆಯುವುದು ವಿಶೇಷ. ಪುಟ್ಟ ಹೆಣ್ಮಕ್ಕಳು ಈ ದಿನ ರಾಧಾ ವೇಷಧಾರಿಯಾಗಿ ಕಂಗೊಳಿಸುವುದುಂಟು. ಇಸ್ಕಾನ್ ಮಂದಿರಗಳಲ್ಲಿ ಎರಡು ದಿನ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತವೆ.
ಮಹಾರಾಷ್ಟ್ರದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಜನಪ್ರಿಯ. ಎತ್ತರದಲ್ಲಿ ಮೊಸರಿರುವ ಕುಡಿಕೆಯನ್ನು ಹಗ್ಗದಿಂದ ಕಟ್ಟಿ ನೇತುಬಿಡಲಾಗಿರರುತ್ತದೆ. ಪಿರಮಿಡ್ ಆಕಾರದಲ್ಲಿ ರಚನೆಯಾಗುವ ಎರಡು ಗುಂಪುಗಳ ನಡುವೆ ಕುಡಿಕೆ ಒಡೆಯುವ ಸ್ಪರ್ಧೆ ನಡೆಯುತ್ತದೆ. ಪ್ರತೀ ಗುಂಪಿನಿಂದ ಒಬ್ಬ ವ್ಯಕ್ತಿ ಮೇಲೇರಿ ಕುಡಿಕೆ ಒಡೆಯಬೇಕು. ಯಾರು ಮೊದಲು ಕುಡಿಕೆ ಒಡೆಯುತ್ತಾರೋ ಆ ಗುಂಪು ಗೆಲ್ಲುತ್ತದೆ.
ಇನ್ನು, ಜಮ್ಮುವಿನಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಗಾಳಿಪಟದ ಉತ್ಸವ ಇರುತ್ತದೆ. ಉತ್ತರ ಪ್ರದೇಶ ಹಾಗು ಸುತ್ತಮುತ್ತಲಿನ ಜನರು ಅಂದು ಮಥುರಾಗೆ ಭೇಟಿ ನೀಡಿ ಅಲ್ಲಿನ ದೇವಸ್ಥಾನದಲ್ಲಿ ಕೃಷ್ಣನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಪ್ರತೀ ವರ್ಷದ ಕೃಷ್ಣಾಷ್ಟಮಿಯಂದು ಮಥುರಾಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications