ಉಪನಯನವೂ ... ಉಪಾಕರ್ಮವೂ...
ಉಪನಯನ ಒಂದು ಧಾರ್ಮಿಕ ಹಾಗೂ ಅರ್ಥಪೂರ್ಣವಿಧಿ. ವಿದ್ಯಾಭ್ಯಾಸಕ್ಕೆ ಬಾಲಕನನ್ನು ಗುರುಕುಲಕ್ಕೆ ಕಳುಹಿಸುವ ಮುನ್ನ ಅವನ ಒಳಗಣ್ಣು ತೆರೆಸಲೆಂದೇ ಆಚರಿಸುವ ವಿಧಿ.
ಉಪನಯನ ಎಂಬ ಸಂಸ್ಕಾರ ಬದುಕಿನ ಒಂದು ಮಹತ್ವದ ಮಜಲು. ಬ್ರಾಹ್ಮಣ ಬಾಲಕನಿಗೆ 8ನೇ ವಯಸ್ಸಿನಲ್ಲಿ (ತಾಯಿಯ ಗರ್ಭದಿಂದ) ಕ್ಷತ್ರಿಯ ಬಾಲಕನಿಗೆ 8ನೇ ವಯಸ್ಸಿನಲ್ಲೂ ಹಾಗೂ ವೈಶ್ಯ ಯುವಕನಿಗೆ 16ನೇ ವಯಸ್ಸಿನಲ್ಲೂ ಉಪನಯನ ಮಾಡಬೇಕು ಎಂದು ಹೇಳುತ್ತದೆ ಶಾಸ್ತ್ರ .
ತಾಯಿಯ ಗರ್ಭದಲ್ಲಿ ನವಮಾಸ ಕಳೆದು ಜನಿಸುವ ಮಗು ಉಪನಯನ ಕಾಲದಲ್ಲಿ ಗುರುದೀಕ್ಷೆ ಪಡೆವ ಮೂಲಕ ಗುರುವಿನ ಕರಕಮಲ ಸಂಜಾತನಾಗಿ ಎರಡನೇ ಹುಟ್ಟನ್ನು ಪಡೆಯುತ್ತಾನಂತೆ. ಅದಕ್ಕಾಗೇ ಉಪನಯನ ಮಾಡಿಕೊಳ್ಳುವ ಈ ಮೂರೂ ಕುಲದವರನ್ನು ದ್ವಿಜರೆಂದು ಕರೆಯುವುದು. ದ್ವಿ ಎಂದರೆ ಎರಡು, ಜ ಎಂದರೆ ಹುಟ್ಟು. ಹೀಗಾಗಿ ಎರಡು ಬಾರಿ ಹುಟ್ಟುವವನು ದ್ವಿಜ.
ಉಪನಯನಾನಂತರ ಬ್ರಹ್ಮಚಾರಿಯ ಜೀವನ ಆರಂಭ. ಆಚಾರ್ಯರಿಂದ ದೀಕ್ಷೆ ಪಡೆದ ವಟು, ಧರ್ಮ, ಕರ್ಮ, ಸಂಧ್ಯಾಕ್ರಮಗಳನ್ನು ಅರಿಯುತ್ತಾನೆ. ಬ್ರಾಹ್ಮಣ್ಯ ಒಂದು ವೃಕ್ಷವಿದ್ದಂತೆ. ಆ ವೃಕ್ಷಕ್ಕೆ ಸಂಧ್ಯಾವಂದನೆಯೇ ಮೂಲ ಅರ್ಥಾತ್ ಬೇರು. ವೇದಗಳೇ ಕೊಂಬೆಗಳು, ಯಜ್ಞ - ಯಾಗಾದಿಗಳು, ಶ್ರೌತ ಸ್ಮಾರ್ತ ಕರ್ಮಗಳೇ ಎಲೆಗಳು .ಅದಕ್ಕಾಗೇ ಜನ್ಮನಾ ಜಾಯತೇ ಶೂದ್ರಃ, ಸಂಸ್ಕಾರಾತ್ ದ್ವಿಜಯಚ್ಚತೇ ಎಂದು ಹೇಳುವುದು.
ಅಂದರೆ, ಹುಟ್ಟಿನಿಂದ ಎಲ್ಲರೂ ಶೂದ್ರರಾಗೇ ಹುಟ್ಟುತ್ತಾರೆ. ಇಲ್ಲ ಶೂದ್ರ ಎಂಬುದು ಶ್ರೀಸಾಮಾನ್ಯ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಆತ ಸಂಸ್ಕಾರ ಬಲದಿಂದ ಹಾಗೂ ಆಚಾರದಿಂದ ಎರಡನೇ ಜನ್ಮ ಪಡೆದವನಾಗಿ ಬ್ರಾಹ್ಮಣ್ಯವನ್ನು ಸಂಪಾದಿಸುತ್ತಾನೆ. ಬ್ರಾಹ್ಮಣಿಕೆಗೆ ಅರ್ಹನಾಗುತ್ತಾನೆ.












Click it and Unblock the Notifications