ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ರಂಗೋಲಿ ಹಾಕುತ್ತೀರಾ?

By Staff
|
Google Oneindia Kannada News

ನಮ್ಮ ಅಮ್ಮ ದಿನವೂ ರಂಗೋಲಿ ಹಾಕುತ್ತಿದ್ದರು, ನಾವೂ ಹಾಕುತ್ತೇವೆ ಎಂದು ಕೆಲವರೂ, ರಂಗೋಲಿ ಹಾಕದಿದ್ದರೆ ಅತ್ತೆ ಬೈಯುತ್ತಾರೆ ಎಂದು ಕೆಲವರೂ ಹೇಳುತ್ತಾರೆ. ರಂಗೋಲಿ ಹಾಕುವುದು ಏಕೆ ಅಂತ ಅಜ್ಜಿಯನ್ನು ಕೇಳಿದರೆ ಒಂದು ಅಡಗೂಲಜ್ಜಿ ಕತೆಯನ್ನೇ ಹೇಳುತ್ತಾರೆ. ನೀವೂ ರಂಗೋಲಿ ಹಾಕುತ್ತೀರಾ? ಹಾಕಿದರೂ ಸರಿ , ಇಲ್ಲದಿದ್ದರೂ ಸರಿ ಯಾವುದಕ್ಕೂ ನಿಮ್ಮ ಒಲವು-ನಿಲವು, ಕಷ್ಟ- ಸುಖ ಕುರಿತು ನಮ್ಮ ಓದುಗ ಬಳಗಕ್ಕೆ ತಿಳಿಸಿ.

ಮುಂಜಾನೆಯೇ ಎದ್ದು, ಮನೆಯ ಮುಂದಿರುವ ಕಸವನ್ನು ಗುಡಿಸಿ, ಸಗಣಿಯ ನೀರಿನಿಂದ ಸಾರಿಸಿ ಭೂಮಿಯ ಮೇಲೋಂದು ಹಸಿರು ಕ್ಯಾನ್‌ವಾಸ್‌ ಸಿದ್ಧಗೊಳಿಸಿ, ಬಿಳಿಯ ರಂಗೋಲಿಯ ಪುಡಿಯಿಂದ ಹತ್ತಾರು ಚುಕ್ಕಿಗಳನ್ನಿಟ್ಟು, ರೇಖೆಗಳನ್ನು ಎಳೆದು, ಆನಂತರ ರಂಗೋಲಿಯ ರೇಖೆಗಳ ಮಧ್ಯದಲ್ಲಿ ಅರಿಶಿನ, ಕುಂಕುಮವನ್ನು ತುಂಬಿ ಮನೆಯ ಮುಂದೆ ನಗೆ ಮೊಲ್ಲಿಗೆಯ ಚಿತ್ತಾರವನ್ನು ಮೂಡಿಸುವುದು ಗ್ರಾಮೀಣ ಮಹಿಳೆಯರಿಗೆ ಇಂದೂ ನಿತ್ಯದ ಕಾಯಕ.

ಪಟ್ಟಣ ಪ್ರದೇಶಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ರೆಡಿ ಮಾಡಿ, ಅಡಿಗೆ, ತಿಂಡಿ ಮುಗಿಸಿ, ತಾವೂ ಸಿದ್ಧರಾಗಿ ಕಚೇರಿಗೆ ಹೋಗುವ ಮಹಿಳೆಯರು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಬಿಡಲಾರದೆ ಹೊಸಿಲ ಮೇಲೊಂದೆರಡು ಎಳೆ ಎಳೆದು, ತಮ್ಮ ಮುಂದಿನ ಕೆಲಸದಲ್ಲಿ ನಿರತರಾಗುತ್ತಾರೆ. ಇನ್ನು ಕೆಲವರು ತಮ್ಮ ಮನೆಯ ಮುಂದಿನ ಸಿಮೆಂಟ್‌ ನೆಲದ ಮೇಲೆ ಆಯಿಲ್‌ ಪೇಯಿಂಟ್‌ನಿಂದ ಅಳಿಸದಂತೆ ರಂಗೋಲಿಯ ಬರೆದು, ದಿನನಿತ್ಯ ಅದರ ಮೇಲೆ ಶಾಸ್ತ್ರಕ್ಕೆ ರಂಗೋಲಿಯ ಪುಡಿ ಉದುರಿಸಿ ಕೃತಾರ್ಥರಾದೆವೆಂದುಕೊಳ್ಳುತ್ತಾರೆ. ಮತ್ತೆ ಕೆಲವರು ಅಂಗಡಿಗಳಲ್ಲಿ ಸಿದ್ಧಪಡಿಸಿಟ್ಟ ರಂಗೋಲಿಯ ಸ್ಟಿಕ್ಕರ್‌ಗಳನ್ನು ತಂದು ದೇವರ ಮನೆಯಲ್ಲಿ, ಮುಂಬಾಗಿಲಿನಲ್ಲಿ ಅಂಟಿಸಿ ಹಿಂದಿನಿಂದ ನಡೆದು ಬಂದ ಸಂಪ್ರದಾಯವನ್ನು ತಾವೂ ಪಾಲಿಸುತ್ತಿದ್ದೇವೆ ಎಂದು ಸಮಾಧಾನ ಪಟ್ಟಕೊಳ್ಳುತ್ತಾರೆ.

ಮನೆ ಮುಂದೆ ರಂಗೋಲಿ ಹಾಕುವುದು ಏಕೆ? ಎಲ್ಲರೂ ನಿತ್ಯ ತಮ್ಮ ಮನೆಯ ಮುಂದೆ ರಂಗೋಲಿ ಹಾಕುವುದಾದರೂ ಏಕೆ? ಸಾಮಾನ್ಯವಾಗಿ ಗೃಹಿಣಿಯರಿಂದ ಸಿಗುವ ಉತ್ತರ ಒಂದೇ, ನಮ್ಮ ಅಮ್ಮ ದಿನವೂ ರಂಗೋಲಿ ಹಾಕುತ್ತಿದ್ದರು, ನಾವೂ ಹಾಕುತ್ತೇವೆ. ರಂಗೋಲಿ ಹಾಕದಿದ್ದರೆ, ಅತ್ತೆ ಬೈಯುತ್ತಾರೆ ಅದಕ್ಕೆ ಹಾಕುತ್ತೇನೆ. ವಯಸ್ಸಾದ ಅಜ್ಜಿಯನ್ನು ರಂಗೋಲಿ ಹಾಕುವುದು ಏಕೆ? ಎಂದಾಗ ಒಂದು ಅಡಗೂಲಜ್ಜಿ ಕತೆಯನ್ನೇ ಹೇಳುತ್ತಾರೆ. ಆ ಕತೆ ಏನು ಗೊತ್ತೆ.

ಆಯುಷ್ಯ ಮುಗಿದೊಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬರುವ ಯಮಧರ್ಮರಾಜ, ಒಮ್ಮೆ ಪತಿವ್ರತೆಯಾಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯ ಹುಟ್ಟುವ ವೇಳೆಗೇ ಪ್ರತ್ಯಕ್ಷನಾದನಂತೆ. ಅಷ್ಟೊತ್ತಿಗಾಗಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ, ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಸಾಧ್ವಿಯ ಕಂಡು ಕಠೋರ ಹೃದಯದ ಯಮನ ಹೃದಯವೂ ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ.

ರಂಗೋಲಿಯ ಕಂಡು ಪ್ರಸನ್ನನಾದ ಯಮದೇವ ವತ್ಸೆ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ ಬಂದಿದ್ದೆ. ನಿನ್ನ ಈ ಸುಂದರ ರಂಗೋಲಿ ನನ್ನನ್ನು ಆಕರ್ಷಿಸಿದೆ. ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ ವರ ಇತ್ತನಂತೆ. ಅದಕ್ಕೇ ಅಂದಿನಿಂದ ಇಂದಿನ ವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರಂತೆ.

ಇದು ನಿಜವೇ ಆಗಿದ್ದರೆ, ಇಂದು ನಮ್ಮ ದೇಶದ ಜನಸಂಖ್ಯೆ 100 ಕೋಟಿಯ ಬದಲು ನೂರಾರು ಕೋಟಿಯೇ ಆಗಿರುತ್ತಿತ್ತು. ಬಹುಶಃ ಮನೆಯ ಹೆಣ್ಣು ಮಕ್ಕಳು ಬೇಗನೆ ಎದ್ದು ಮನೆಗೆಲಸದಲ್ಲಿ ತೊಡಗಲಿ ಎಂಬ ಕಾರಣಕ್ಕಾಗಿ ಹೀಗೆ ಶಾಸ್ತ್ರ, ಪುರಾಣದ ನೆರವನ್ನು ನಮ್ಮ ಪೂರ್ವಿಕರು ಪಡೆದಿದ್ದರೆಂದು ಕಾಣುತ್ತದೆ.

ಶಾಸ್ತ್ರವೂ ಪೂರೈಸಿತು, ವ್ಯಾಯಾಮವೂ ಆಯಿತು : ಈ ರಂಗೋಲಿಯ ಹಿಂದೊಂದು ವೈಜ್ಞಾನಿಕ ಸತ್ಯ ಅಡಗಿರುವುದಂತೂ ಸತ್ಯ. ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ - ಶುಭ್ರವಾದ ವಾಯುವನ್ನು ಉಸಿರಾಡುತ್ತಾ, ದೇಹವನ್ನು ಬಾಗಿಸಿ ಮಾಡುವ ಈ ಕೆಲಸ ಒಂದು ಉತ್ತಮ ವ್ಯಾಯಾಮವೇ ಸರಿ. ಮಿಗಿಲಾಗಿ ರಂಗೋಲಿ ಮನೆಯ ಮುಂದಿನ ಅಲಂಕಾರವೂ ಹೌದು. ಮನೆಗೆ ಬರುವವರನ್ನು ಆದರದಿಂದ ನಗುನಗುತ್ತಾ ಸ್ವಾಗತಿಸುವುದರ ಸಂಕೇತ ರಂಗೋಲಿ ಎಂದರೆ ತಪ್ಪಿಲ್ಲ. ಹಬ್ಬ ಹರಿದಿನಗಳು ಬಂದರಂತೂ ನಗರ - ಪಟ್ಟಣ - ಹಳ್ಳಿಯೆಂಬ ಭೇದವಿಲ್ಲದೆ ಮಹಿಳೆಯರೆಲ್ಲ ರಾತ್ರಿಯೇ ತಮ್ಮ ಮನೆಯ ಮುಂದಿನ ಜಾಗವನ್ನು ಸ್ವಚ್ಛಗೊಳಿಸಿ, ನೀರಿನಿಂದ ತೊಳೆದು, ಸಾರಿಸಿ, ಗುಡಿಸಿ ರಂಗು ರಂಗಿನ ವಿವಿಧ ನಮೂನೆಗಳ ಚುಕ್ಕಿ - ಚಿತ್ತಾರಗಳನ್ನು ಮೂಡಿಸುತ್ತಾರೆ.

ಪಕ್ಕದ ಮನೆಯ ಮೀನಾಕ್ಷಿಗಿಂತ, ತಾನು ಹಾಕಿದ ರಂಗೋಲಿ ಚೆನ್ನಾಗಿರಬೇಕು, ನನ್ನ ರಂಗೋಲಿಯನ್ನು ನಾಲ್ಕು ಜನ ನಿಂತು ನೋಡಿ, ಮೆಚ್ಚಬೇಕು ಎಂಬ ಉತ್ಸಾಹ, ಬಯಕೆ ಎಲ್ಲ ಹೆಂಗೆಳೆಯರಲ್ಲೂ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಈ ಯಾಂತ್ರಿಕ ಯುಗದಲ್ಲಿ - ಆಧುನಿಕತೆಯ ನಾಗಾಲೋಟದಲ್ಲಿ ರಂಗೋಲಿ ಮರೆಯಾಗುತ್ತಿದೆ. ನಶಿಸುತ್ತಿರುವ ಈ ರಂಗೋಲಿ ಸಂಸ್ಕೃತಿಯನ್ನು ಉಳಿಸಲು ಕೆಲವು ಸಂಘಸಂಸ್ಥೆಗಳು ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸುತ್ತಿವೆ. ಬೀದಿ ಬೀದಿಗಳಲ್ಲಿ ನಡೆವ ಗಣೇಶೋತ್ಸವ, ರಾಜ್ಯೋತ್ಸವಗಳಲ್ಲೂ ರಂಗೋಲಿ ಸ್ಪರ್ಧೆ ಇಂದು ಕೇಂದ್ರ ಬಿಂದುವಾಗಿದೆ.

ಹಿಂದೆ ಗೃಹಿಣಿಯರು, ಮನೆಯಲ್ಲಿ ಅಕ್ಕಿ ಹಿಟ್ಟು ತಿರುವಿ ಅದನ್ನು ಪೇಯಿಂಟ್‌ನಂತೆ ತಯಾರಿಸಿ ಮನೆಯಲ್ಲೆಲ್ಲಾ ರಂಗೋಲಿಯನ್ನು ಹಾಕುತ್ತಿದ್ದರು, ವಾರ ಹದಿನೈದು ದಿನವಾದರೂ ಅಳಿಸದಂತೆ ಅವು ಅಚ್ಚಳಿಯದೇ ಉಳಿಯುತ್ತಿದ್ದವು. ಈಗ ಈ ಸ್ಥಾನವನ್ನು ಪೇಯಿಂಟ್‌ಗಳು ಆಕ್ರಮಿಸಿವೆ. ಮಿಗಿಲಾಗಿ ಅಂಗಡಿಯಲ್ಲಿ ದೊರಕುವ ಹಲವು ವರ್ಣದ ರಂಗೋಲಿ ಪುಡಿಗಳು ರಂಗೋಲಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿವೆ. ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳು ರಂಗೋಲಿ ಇಲ್ಲದೆ ನಡೆಯುವುದೇ ಇಲ್ಲ. ಹಸೆ ಮಣೆಯ ಕೆಳಗೆ ಶಾಸ್ತ್ರಕ್ಕಾದರೂ ರಂಗೋಲಿ ಹಾಕುವ ಪರಿಪಾಠ ಇದೆ. ರಂಗೋಲಿ ಸಿಗದಿದ್ದಾಗ ಸೀಮೆ ಸುಣ್ಣ ಅರ್ಥಾತ್‌ ಚಾಕ್‌ಪೀಸ್‌ ಬಳಸಿ ರಂಗೋಲಿ ಇಡುವವರೂ ಇದ್ದಾರೆ.

ಸಾಂಪ್ರದಾಯಿಕ ಕಲೆ : ರಂಗೋಲಿ ಒಂದು ಸಾಂಪ್ರದಾಯಿಕ ಕಲೆ. ಇದು ಕೇವಲ ಅಲಂಕಾರದ ದ್ಯೋತಕವಷ್ಟೇ ಅಲ್ಲ. ಮುಂಜಾನೆ ಮನೆಯಿಂದ ಹೊರಡುವವರಿಗೂ, ಮನೆಗೆ ಬರುವವರಿಗೂ ಸುಪ್ರಭಾತದ ನವ ಚೈತನ್ಯವನ್ನು ಮೂಡಿಸುತ್ತವೆ. ಮನ್ನೋಲ್ಲಾಸಗೊಳಿಸಿ ಹೊರಟ ಕಾರ್ಯ ಶುಭವಾಗಲೆಂದು ಹಾರೈಸುತ್ತವೆ. ಈಗ ಶ್ರಾವಣಾರಂಭ. ಶ್ರಾವಣ ಹಬ್ಬಗಳ ಮಾಸ. ಮಂಗಳಗೌರಿ ವ್ರತದಿಂದ ಆರಂಭವಾಗಿ, ವರಮಹಾಲಕ್ಷ್ಮೀ ವ್ರತ, ಉಪಾಕರ್ಮಗಳೇ ಮೊದಲಾದ ತಿಂಗಳಿಡೀ ಹಬ್ಬದಲ್ಲಿ ರಂಗೋಲಿಯ ಪಾತ್ರ ಮಹತ್ವವಾಗಿರುತ್ತದೆ. ದೇವರ ಪೀಠದ ಕೆಳಗೆ, ದೇವರ ಮುಂದೆ ರಂಗೋಲಿ ಹಾಕದವರೇ ವಿರಳ.

ರಂಗೋಲಿಯಲ್ಲಿ ದೇವರನ್ನು ಬರೆದು ಪೂಜಿಸುವ ಪರಿಪಾಠವೂ ಹಿಂದೂಗಳಲ್ಲಿದೆ. ರಥಸಪ್ತಮಿಯಂದು ಒಂಟಿ ಚಕ್ರದ ಸೂರ್ಯ ರಥವನ್ನು ಬರೆದು ಪೂಜಿಸಿದರೆ, ನಾಗರ ಪಂಚಮಿಯಂದು ನಾಗರ ಹಾವಿನ ಚಿತ್ರ ಬರೆಯಲು ರಂಗೋಲಿಯೇ ಬೇಕು. ಶ್ರೀಕೃಷ್ಣ ಜನ್ಮಾಷ್ಠಮಿಯಂದು ಮನೆಯ ಬಾಗಿಲಿನಿಂದ ದೇವರ ಮನೆಯವರೆಗೆ ಶ್ರೀಕೃಷ್ಣನ ಹೆಜ್ಜೆ ಅಥವಾ ಪಾದದ ಗುರುತು ಬರೆಯಲು ರಂಗೋಲಿ ಬಳಸಲಾಗುತ್ತದೆ. ಮದುವೆಯ ಮನೆಯಲ್ಲಿ ಹಸೆ ಮಣೆಯಿಂದ ಹಿಡಿದು ಬೀಗರ ಎಲೆಯ ಮುಂದೆ, ಭೂಮದೂಟದ ಎಲೆಯನ್ನು ಅಲಂಕರಿಸಲು ತರಹೇವಾರಿ ರಂಗೋಲಿಗಳನ್ನು ಬಿಡುವುದು ವಾಡಿಕೆ.

ಹಿಂದೆ ಪತ್ರಿಕೆಗಳಲ್ಲಿ ಉಡುಪಿಯ ಚಿತ್ರ ಕುಟೀರ ರಚಿಸಿ ಕಳುಹಿಸುತ್ತಿದ್ದ ಹೊಸ ಬಗೆಯ ರಂಗೋಲಿಯ ಚಿತ್ರಗಳು ಪ್ರಕಟವಾಗುತ್ತಿದ್ದವು. ಈ ರಂಗೋಲಿಯ ಚಿತ್ತಾರಗಳನ್ನು ಕತ್ತರಿಸಿ ಸಂಗ್ರಹಿಸಿ, ತಮ್ಮ ಮನೆಯ ಮುಂದೂ ರಂಗೋಲಿ ಬಿಡುವವರ ಸಂಖ್ಯೆ ಇಂದೂ ಹೇರಳವಾಗಿದೆ. ರಂಗೋಲಿ ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿರುವುದಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವೇ ಕಾರಣ. ಇಂದು ಮನೆಯ ಮುಂದೆ ಬಿಡುವ ರಂಗೋಲಿ ಹೊಸ ವರ್ಷದ ಶುಭಾಶಯ, ಯುಗಾದಿಯ ಶುಭಾಶಯ, ಗಣರಾಜ್ಯ, ಸ್ವಾತಂತ್ರ್ಯದಿನದ ಶುಭಾಶಯಗಳನ್ನೂ ಒಳಗೊಂಡಿರುತ್ತದೆ.

ಮನೆಯ ಮುಂದೆ ರಂಗೋಲಿ ಹಾಕಲು ಅಕ್ಕ - ತಂಗಿಯರು ಇಂದೂ ಪೈಪೋಟಿಗೆ ನಿಲ್ಲುತ್ತಾರೆ. ವೆಲ್‌ಕಮ್‌, ಸುಸ್ವಾಗತ ಎಂಬ ಅಕ್ಷರಗಳನ್ನೂ ಮೂಡಿಸಿ ತಮ್ಮ ಸುಂದರ ಬರವಣಿಗೆಯನ್ನು ನಾಲ್ಕಾರು ಜನರೆದುರು ಪ್ರದರ್ಶಿಸುತ್ತಾರೆ. ಜನಪದ, ಧಾರ್ಮಿಕ ಹಾಗೂ ಪರಂಪರಾಗತ ಕಲೆಯಾದ ರಂಗೋಲಿ ನಿಮ್ಮ ಮನೆಯಂಗಳದಲ್ಲೂ ನಗಲಿ, ನಿಮ್ಮನ್ನೂ ನಿಮ್ಮ ಮನೆಗೆ ಬರುವವರನ್ನೂ ರಂಜಿಸಲು, ಶುಭ ಹಾರೈಸಲು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X