ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮನ ನೋಡಿಹಿರಾ ರಾಗಿ ಗುಡ್ಡದ ಹನುಮನ...

By Staff
|
Google Oneindia Kannada News

Ragigudda prasanna Anjaneyaswamiನೀವು ಯಾವುದೇ ಊರಿಗೆ ಹೋದರೂ ಸಾಮಾನ್ಯವಾಗಿ ಊರ ಮುಂದೊಂದು ಹನುಮನ ಗುಡಿ ನೋಡಬಹುದು. ಯಾವುದೇ ಪೀಡೆ, ಪಿಶಾಚಿಗಳು ಪುರಪ್ರವೇಶ ಮಾಡದಂತೆ ತಡೆಯಪ್ಪ ಎಂದು ಹಿರಿಯರು ಊರ ಹೆಬ್ಬಾಗಿಲ ಬಳಿಯಾಂದು ಹನುಮನ ಗುಡಿ ಕಟ್ಟಿಸುತ್ತಿದ್ದರು.

ಬೆಂಗಳೂರಿನಲ್ಲೂ ಹಲವು ಆಂಜನೇಯನ ದೇವಾಲಯಗಳಿವೆ. ಮೈಸೂರು ರಸ್ತೆಯಿಂದ ಬೆಂಗಳೂರು ನಗರ ಪ್ರವೇಶಿಸುವ ಪುರದ್ವಾರವಾದ ಬ್ಯಾಟರಾಯನಪುರದಲ್ಲಿ ಗಾಳಿ ಆಂಜನೇಯ ಗುಡಿಯಿದ್ದರೆ, ಮಹಾಲಕ್ಷ್ಮೀಪುರದಲ್ಲಿ ಆಳೆತ್ತರದ ಆಂಜನೇಯ ದೇಗುಲ ಹಾಗೂ ಜಯನಗರ 9ನೇ ಬ್ಲಾಕ್‌ನಲ್ಲಿ ರಾಗಿಗುಡ್ಡದ ಪ್ರಸನ್ನ ಆಂಜನೇಯನ ಸುಂದರವಾದ ದೇವಾಲಯವಿದೆ.

ರಾಗಿಗುಡ್ಡ : ಐದೂವರೆ ಎಕರೆ ವಿಶಾಲ ಭೂಭಾಗದಲ್ಲಿರುವ58 ಅಡಿಗಳ ಹೆಬ್ಬಂಡೆಯೇ ರಾಗಿಗುಡ್ಡ. ಇದಕ್ಕೆ 'ರಾಗಿಗುಡ್ಡ" ಎಂಬ ಹೆಸರು ಹೇಗೆ ಬಂತು ಎಂಬ ಪ್ರಶ್ನೆಗೆ ಇಲ್ಲಿನ ಹಿರಿಯರು ಒಂದು ಕಥೆಯನ್ನೇ ಹೇಳುತ್ತಾರೆ. ಹಿಂದೆ ಈ ಪ್ರದೇಶದ ಪಾಳೆಯಗಾರನೊಬ್ಬನ ಆಡಳಿತಕ್ಕೆ ಒಳಪಟ್ಟಿತ್ತು. ಆತನ ಕಾಲದಲ್ಲಿ 'ರಾಘವ ರಾಗಿ" ಯಥೇಚ್ಛವಾಗಿ ಬೆಳೆದು ಬೆಟ್ಟದಷ್ಟು ಎತ್ತರಕ್ಕೆ ಸಂಗ್ರಹವಾಯಿತು.

ಸಂಪ್ರದಾಯದಂತೆ ಪಾಳೆಯಗಾರನ ತ್ಯಾಗಮಯಿ ಸೊಸೆ, ಸಮೃದ್ಧವಾಗಿ ಬೆಳೆದ ರಾಗಿಯನ್ನು ಪುರಜನರಿಗೆ ದಾನ ಮಾಡುತ್ತಿದ್ದಳು. ಆಗ ಮೂವರು ದಾಸರು ಪ್ರತ್ಯಕ್ಷರಾಗಿ ತಮಗೂ ರಾಗಿಯನ್ನು ಭಿಕ್ಷೆ ನೀಡುವಂತೆ ಬೇಡಿದರು. ಸಾಧ್ವಿಯಾದ ಸೊಸೆಯು ಮೂರು ಮೊರದ ತುಂಬಾ ರಾಗಿಯನ್ನು ದಾನ ನೀಡಲು ಮುಂದಾದಳು. ಇದನ್ನು ಕಂಡು ಕುಪಿತಳಾದ ಆಕೆಯ ಅತ್ತೆ , ದಾಸರಿಗೆ ರಾಗಿ ದಾನ ಮಾಡಲು ಅಡ್ಡಿ ಪಡಿಸಿದಳು.

Ragi Gudda Hanuman Temple, situated in Jayanagar 9th Block, Bangaloreಇದರಿಂದ ಬೇಸತ್ತ ಪತಿವ್ರತೆಯಾದ ಸೊಸೆ, ದಾನಕ್ಕೆ ದೊರಕದ ರಾಗಿ ಇದ್ದರೆಷ್ಟು ಹೋದರೆಷ್ಟು ಎಂದು ಗುಡ್ಡದಷ್ಟು ಇರುವ ಈ ರಾಗಿ ಕಲ್ಲಾಗಿ ಹೋಗಲಿ ಎಂದು ಶಪಿಸಿದಳು. ಕೂಡಲೇ ಅದು ರಾಗಿ ಗುಡ್ಡವಾಯಿತು. ದಾನ ಬೇಡಲು ದಾಸರ ರೂಪದಲ್ಲಿ ಬಂದಿದ್ದ ತ್ರಿಮೂರ್ತಿಗಳೂ ಕೂಡ ಹೊಂಬಣ್ಣದ ಮೂರ್ತಿ ರೂಪದ ಶಿಲೆಯಾಗಿ ಹೋದರಂತೆ.

ಇಂದೂ ರಾಗಿಗುಡ್ಡದ ಕೆಳಗೆ ಬಿಡಿಬಿಡಿಯಾದ ದಾಸಯ್ಯನ ಬಂಡೆ ಎಂದೇ ಕರೆಯಲ್ಪಡುವ ಮೂರು ಮಾನವಾಕಾರದ ಶಿಲೆಗಳಿವೆ. ಈಗ ಈ ಶಿಲೆಯನ್ನು ತ್ರಿಮೂರ್ತಿಗಳ ಮೂರ್ತಿಯನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಏಷ್ಯಾ ಖಂಡದಲ್ಲೇ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾದ 32 ಅಡಿ ಎತ್ತರದ ವಿಷ್ಣುಮೂರ್ತಿ ಆಗಲೇ ಸಿದ್ಧವಾಗಿದೆ.

ದೇವಾಲಯ : ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಸೇರಿರುವ ರಾಗಿಗುಡ್ಡದಲ್ಲಿ ತ್ರಿಮೂರ್ತಿಗಳ ವಿಗ್ರಹದ ಕೆತ್ತನೆಕಾರ್ಯ ಪೂರ್ಣಗೊಂಡರೆ, ಅದು ಪವಿತ್ರ ಪುಣ್ಯಕ್ಷೇತ್ರವೇ ಆಗುವುದರಲ್ಲಿ ಸಂದೇಹವಿಲ್ಲ. 1968ರಲ್ಲಿ ಈ ಗುಡ್ಡದ ಮೇಲೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ದೊಡ್ಡ ದೇವಾಲಯದ ನಿರ್ಮಾಣವೂ ಆಯಿತು. ನಿಸರ್ಗ ನಿರ್ಮಿತ ಗುಡ್ಡದ ಕೊರಕಲುಗಳಿಂದ ಕೆಳಗೆ ಧುಮ್ಮಿಕ್ಕುವಂತೆ ಪಾವನಗಂಗಾ ಎಂಬ ಜಲಧಾರೆಯೂ ಇದೆ. ರಾತ್ರಿಯ ವೇಳೆ ಹೊಂಬೆಳಕಿನಲ್ಲಿ ಈ ಜಲಧಾರೆಯ ಸೊಬಗನ್ನು ಕಾಣುವುದೇ ಒಂದು ಸೊಗಸು.

ಆಂಜನೇಯನ ದೇವಾಲಯದಲ್ಲಿ ದಕ್ಷಿಣೇಶ್ವರಸ್ವಾಮಿ ಹಾಗೂ ಶ್ರೀಪ್ರಸನ್ನ ಸೀತಾರಾಮರ ಸನ್ನಿಧಿಯೂ ಇದೆ. ಸುಂದರ ಉದ್ಯಾನದ ಪರಿಸರದಲ್ಲಿ, ಪುರ್ಣಕುಟೀರ, ಸಾಂಸ್ಕೃತಿಕ ಮಂದಿರ, ಬಯಲು ರಂಗಮಂಟಪ ಇದ್ದು, ರಾಮೋತ್ಸವ ಹಾಗೂ ಹನುಮ ಜಯಂತಿಯ ಸಂದರ್ಭದಲ್ಲಿ ಇಲ್ಲಿ ಸಂಗೀತಾರಾಧನೆಯೂ ನಡೆಯುತ್ತದೆ.

ಗುಡ್ಡದ ತಪ್ಪಲಿನಲ್ಲಿ ಶ್ರೀಮಹಾಗಣಪತಿ, ರಾಜರಾಜೇಶ್ವರಿ ಹಾಗೂ ನವಗ್ರಹಗಳ ಸುಂದರ ದೇವಾಲಯಗಳೂ ಇವೆ. ಪುಷ್ಕರಣಿ ಎಂದು ಕರೆಯಲಾಗುವ ಕಲ್ಯಾಣಿ, ಗೋಶಾಲೆಯೂ ಇಲ್ಲದೆ. ರಾಮಭಕ್ತನ ಗುಡಿಗೆ ವಿಷ್ಣುವಾಹನನಾದ ಬೃಹತ್‌ ಗರುಡ ಮೂರ್ತಿ ನಿಮ್ಮನ್ನು ಸ್ವಾಗತಿಸುತ್ತಾನೆ. ಗುಡ್ಡವನ್ನು ಏರಲು ಅಮೃತಶಿಲೆಯ 108 ಸೋಪಾನಗಳನ್ನು ನಿರ್ಮಿಸಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪ್ರಸಾದ ನೀಡಲೆಂದೇ ಪ್ರಸಾದ ವಿಭಾಗವೇ ಇಲ್ಲುಂಟು.

ಸಾಂಸ್ಕೃತಿಕ ಚಟುವಟಿಕೆ : ರಾಗಿಗುಡ್ಡ ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ. ಸಾಮಾಜಿಕ ಕೇಂದ್ರ ಕೂಡ. ಇಲ್ಲಿ ಕೆಳಸ್ತರದ, ಕೆಳ ಮಧ್ಯಮವರ್ಗದ ಮಕ್ಕಳಿಕೆ ಉಚಿತ ಶಿಕ್ಷಣ ನೀಡುವ ವಿದ್ಯಾಕೇಂದ್ರವಿದೆ. ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು ಒದಗಿಸುವ ಬುಕ್‌ ಬ್ಯಾಂಕ್‌ ಇದೆ. ತಾಂತ್ರಿಕ ಶಿಕ್ಷಣ ಪಡೆವ ವಿದ್ಯಾರ್ಥಿಗಳಿಗೆ ಇಲ್ಲಿ ವರ್ಷದ ನಾಲ್ಕು ತಿಂಗಳ ಕಾಲ ಉಚಿತ ಉಪನ್ಯಾಸ ತರಗತಿಗಳೂ ನಡೆಯುತ್ತವೆ.

ಕಂಪ್ಯೂಟರ್‌ ಶಿಕ್ಷಣ, ಸಂಗೀತ ಶಾಲೆ, ಆರೋಗ್ಯ ತಪಾಸಣಾಕೇಂದ್ರ, ಯೋಗ ಕೇಂದ್ರ, ಕಲ್ಯಾಣ ಮಂಟಪ, ಉದ್ಯಾನವನಗಳನ್ನೂ ಒಳಗೊಂಡ ರಾಗಿಗುಡ್ಡದ ದೇವಾಲಯ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X