ಅಮೆರಿಕ ಮಿತ್ರ ದೇಶಗಳ ನೆರವು ಕೇಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ | Donald Trump
ಅಮೆರಿಕ ಎಂಬ ದೊಡ್ಡ ದೇಶಕ್ಕೆ ಒಂದಾದ ನಂತರ ಒಂದು ದೊಡ್ಡ ಹಿನ್ನಡೆ ಎದುರಾಗುತ್ತಿದ್ದು, ಈ ಪೈಕಿ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಮಟ್ಟಿಗೆ ಸೇನಾ ಕಾರ್ಯಾಚರಣೆ ಶುರು ಮಾಡಿದ್ದ ಅಮೆರಿಕ ಈಗ ನರಳುವಂತೆ ಆಗಿದೆ. ಹೇಗಾದರೂ ಮಾಡಿ ಇರಾನ್ ಎಂಬ ದೇಶವನ್ನ ಸೋಲಿಸಿ, ಮಧ್ಯಪ್ರಾಚ್ಯ ಭಾಗದ ತಮ್ಮ ಶತ್ರುಗಳ ಹುಟ್ಟಡಗಿಸಿ ಪವರ್ ತಮ್ಮ ಕೈಗೆ ತೆಗೆದುಕೊಳ್ಳಬೇಕು ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ಲಾನ್ ಉಲ್ಟಾ ಹೊಡೆದಿದೆ. ಅಮೆರಿಕ ಹಾಗೂ ಇಸ್ರೇಲ್ ಸೇರಿಕೊಂಡು ಇರಾನ್ ಮೇಲೆ ದಾಳಿ ಮಾಡಿದರೆ ಕೆಲವೇ ದಿನಗಳಲ್ಲಿ ಇರಾನ್ ಸೋಲು ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ಇಂತಹ ಸಮಯದಲ್ಲೇ ಅಮೆರಿಕ ಮಿತ್ರ ದೇಶಗಳ ನೆರವು ಕೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ ಎದುರಾಗಿದೆ.
17 ದಿನಗಳ ಹಿಂದೆ ದಿಢೀರ್ ಅಂತಾ ಇರಾನ್ ವಿರುದ್ಧ ಯುದ್ಧ ಆರಂಭ ಮಾಡಿದ್ದ ಇಸ್ರೇಲ್ ಹಾಗೂ ಅಮೆರಿಕ ಈಗಾಗಲೇ ಇರಾನ್ ದೇಶದ ದೊಡ್ಡ ದೊಡ್ಡ ನಾಯಕರ ತಲೆ ಉರುಳಿಸಿದೆ. ಅದರಲ್ಲೂ ಈ ಪೈಕಿ ಖುದ್ದಾಗಿ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಕಥೆ ಕೂಡ ಮುಗಿದು ಹೋಗಿದೆ. ಇನ್ನೇನು ಇಡೀ ಇರಾನ್ ದೇಶ ಸೈಲೆಂಟ್ ಆಗಲಿದ್ದು, ಅಮೆರಿಕ ಕೈವಶ ಆಗಲಿದೆ ಹಾಗೂ ಇಸ್ರೇಲ್ ದೇಶವನ್ನು ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನುಮುಂದೆ ಯಾರೂ ಎದುರು ಹಾಕಿಕೊಳ್ಳಲ್ಲ ಎಂಬ ಲೆಕ್ಕಾಚಾರ ಕೂಡ ಉಲ್ಟಾ ಹೊಡೆದಿದೆ. ಇರಾನ್ ಸೋಲಿಸಲು ಯುದ್ಧ ನೌಕೆ ಕಳುಹಿಸಲು ಟ್ರಂಪ್ ಅವರು ಮಾಡಿರುವ ಮನವಿಗೆ, ಇಲ್ಲ ಎಂಬ ಉತ್ತರ ಕೊಟ್ಟಿದ್ದಾರೆ ಮಿತ್ರ ರಾಷ್ಟ್ರಗಳ ನಾಯಕರು.

ಟ್ರಂಪ್ ಅವರ ಮಾತು ಕೇಳದ ಮಿತ್ರರು
ಅಷ್ಟಕ್ಕೂ ಇರಾನ್ ಸರ್ವಾಧಿಕಾರಿ ಖಮೇನಿ ಸಾವಿನ ನಂತರ ಇರಾನ್ ಪೂರ್ತಿ ಶರಣಾಗುವ ನಿರೀಕ್ಷೆಯಲ್ಲಿ ಅಮೆರಿಕ ಇತ್ತು. ಆದರೆ ಈವರೆಗೆ ಇರಾನ್ ಶರಣಾಗುವುದು ಬಿಡಿ, ಶಾಂತಿ ಮಾತುಕತೆ ನಡೆಸಲು ಕೂಡ ಸಿದ್ಧವಿಲ್ಲ ಎಂಬ ಸಂದೇಶ ಕಳುಹಿಸಿದೆ. ಇದೇ ಸಮಯದಲ್ಲಿ ಅಮೆರಿಕ ದೇಶದ ಮಿತ್ರ ರಾಷ್ಟ್ರಗಳು ಕೂಡ ಈಗ ದಿಢೀರ್ ಕೈಕೊಟ್ಟಿವೆ. ಅಲ್ಲದೆ ಹಾರ್ಮುಜ್ ಜಲಸಂಧಿ ರಕ್ಷಣೆಗಾಗಿ ನೀವು ನಿಮ್ಮ ನಿಮ್ಮ ಯುದ್ಧ ನೌಕೆ ಕಳುಹಿಸಿ ಎಂದು ಅಮೆರಿಕ ಮಿತ್ರ ದೇಶಗಳು ಹಾಗೂ ನ್ಯಾಟೋ ಪಡೆಗಳಿಗೆ ಟ್ರಂಪ್ ಮನವಿಯನ್ನ ಮಾಡಿಕೊಂಡಿದ್ದರು. ಯುರೋಪ್ ಒಕ್ಕೂಟ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಈ ವಿಚಾರದಲ್ಲಿ ಟ್ರಂಪ್ ಅವರು ಮನವಿ ಮಾಡಿದ್ದರು. ಆದರೆ ಅಮೆರಿಕ ಅಧ್ಯಕ್ಷರ ಮನವಿಗೆ ಈಗ ಎಲ್ಲಾ ದೇಶಗಳು ತಿರಸ್ಕಾರದ ಉತ್ತರ ನೀಡಿವೆ.












Click it and Unblock the Notifications