ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಟ ನಾಗರಕ್ಕೂ ಇಲ್ಲಿ ಹಾಲೆರೆವರಯ್ಯ

By Staff
|
Google Oneindia Kannada News

*ಎಚ್‌.ಎಸ್‌. ಮಧ್ವರಾಯ

ಇಚಲ ಕರಂಜಿ : ಕಲ್ಲ ನಾಗರ ಕಂಡರೆ ಹಾಲೆರೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನ ಸರ್ವ ಕಾಲಿಕ ಸತ್ಯವಾದರೂ, ಇದಕ್ಕೂ ಅಪವಾದ ಇದೆ. ಕರ್ನಾಟಕ - ಮಹಾರಾಷ್ಟ್ರ ಗಡಿ ಭಾಗದ ಸಾಂಗಲಿ ಜಿಲ್ಲೆಯ ಬತ್ತೀಸ ಶಿರಾಳದಲ್ಲಿ ನಾಗರ ಪಂಚಮಿಯ ದಿನ ನಡೆಯುವ ಉತ್ಸವದಲ್ಲಿ ನಿಜ ನಾಗರಕ್ಕೆ ಹಾಲೆರೆಯುತ್ತಾರೆ. ಪೂಜಿಸುತ್ತಾರೆ.

ಇತಿಹಾಸ : ಸುಮಾರು ಸಾವಿರ ವರುಷಗಳ ಇತಿಹಾಸವುಳ್ಳ ಈ ಗ್ರಾಮದಲ್ಲಿ ಮೊದಲು ಕೊತ್‌ವಾಲ್‌ ವಂಶಸ್ಥರು ಮಾತ್ರ ನಾಗರಹಾವುಗಳನ್ನು ಹಿಡಿಯುತ್ತಿದ್ದರಂತೆ. ನಾಗರ ಪಂಚಮಿಯ ದಿನ ಮೊದಲು ಮಣ್ಣಿನಿಂದ ಮಾಡಿದ ನಾಗರಹಾವಿಗೆ ಪೂಜೆ ಸಲ್ಲಿಸಿ, ನೇವೇಧ್ಯ ಅರ್ಪಿಸಿದ ತರುವಾಯ ಮಹಾಜನ್‌ ಎಂಬುವವರು ಕೊತ್ವಾಲರು ಹಿಡಿದ ಹಾವುಗಳಿಗೆ ಪೂಜಿಸಿ ಮೆರವಣಿಗೆ ಮೂಲಕ ಗ್ರಾಮದೇವತೆ ಅಂಬಾಬಾಯಿ ಮಂದಿರಕ್ಕೆ ತಂದು ಅಲ್ಲಿಯೂ ಪೂಜೆ ಮಾಡುತ್ತಿದ್ದರು.

ಗ್ರಾಮದೇವತೆಯ ದೇಗುಲದ ಬಳ ನೃತ್ಯ, ಪೂಜೆ, ಸಂಗೀತ ಕಾರ್ಯಕ್ರಮವೂ ನಡೆಯುತ್ತಿತ್ತು. ಆನಂತರ ಮತ್ತೆ ಮೆರವಣಿಗೆ ಪ್ರಾರಂಭವಾಗುತ್ತಿತ್ತು. ನಾಗರ ಪಂಚಮಿಯ ದಿನ ಈ ಊರಿನ ಜನ ಒಲೆಯನ್ನೇ ಹಚ್ಚುವುದಿಲ್ಲ. ಪರಂಪರಾಗತವಾಗಿ ನಾಗರ ಪಂಚಮಿಯ ಹಿಂದಿನ ದಿನ ರಾತ್ರಿ 12 ಗಂಟೆಗೆ ಮೊದಲೇ ಅಡಿಗೆ ಮಾಡಿಟ್ಟುಕೊಳ್ಳುತ್ತಾರೆ. ಲಾರಿ, ಗಾಡಿ, ಟ್ರಾಕ್ಟರ್‌, ಜೀಪು, ವ್ಯಾನುಗಳಲ್ಲಿ ವೇದಿಕೆ ನಿರ್ಮಿಸಿ ಅದರ ಮೇಲೆ ನಾಗ, ಮಿಡಿನಾಗ, ಫರಡು, ಧಾಮಿನಿ, ಚುಕ್ಕಿ ಧಾಮೀನಿ ಹೀಗೆ ವಿವಿಧ ರೀತಿಯ ಹಾವುಗಳನ್ನು ಇಟ್ಟು ಸರ್ಪಗಳ ಮೆರವಣಿಗೆ ಮಾಡುತ್ತಾರೆ.

ಬ್ಯಾಂಡು, ನಾದಸ್ವರ, ಡೋಲು, ಡೊಳ್ಳು, ಶಹನಾಯಿ ಮೊದಲಾದ ವಾದ್ಯಗಳ ಮೇಳದ ನಡುವೆ ಮೆರವಣಿಗೆ ಸಾಗುತ್ತದೆ. ಮಂದಿರಕ್ಕೆ ಬಂದ ನಂತರ ಮೆರವಣಿಗೆ ಅಂತ್ಯ. ಆದರೆ, ಇದಕ್ಕೂ ಮುನ್ನ ಮೆರವಣಿಗೆಗಾಗಿಯೇ ನೂರಾರು ಹಾವುಗಳನ್ನು ಹಿಡಿಯುವುದು ರೂಢಿ. ಈ ಗ್ರಾಮದಲ್ಲಿ ಹಾವು ಹಿಡಿಯುವ ಸುಮಾರು 60-65 ಕುಟುಂಬಗಳಿವೆ. ನಾಗರ ಪಂಚಮಿಗೆ ಒಂದು ತಿಂಗಳು ಮೊದಲೇ ವಿಷಪೂರಿತ ಹಾಗೂ ವಿಷರಹಿತ 400-500 ಹಾವುಗಳನ್ನು ಹಿಡಿಯುವ ಕಾಯಕದಲ್ಲಿ ಇವರು ತೊಡಗುತ್ತಾರೆ.

ಹಾವುಗಳನ್ನು ಹುತ್ತದಿಂದ ಮೇಲೆಳೆದು ಮಣ್ಣಿನ ಮಡಕೆಗಳಲ್ಲಿ ಬಂಧಿಸಿ, ಬಾಯಿ ಹೊಲೆದು ಇಡುತ್ತಾರೆ. ಸೋದರ- ಸೋದರಿಯರ ಹಬ್ಬವಾದ ನಾಗರ ಪಂಚಮಿಯಂದು ಪೂಜಿಸುವ ಹಾವುಗಳಿಗೆ ಈ ಗ್ರಾಮದ ಜನತೆ ಸೋದರ ವಾತ್ಸಲ್ಯವನ್ನೇ ತೋರುತ್ತಾರೆ. ಹೀಗಾಗೇ ಈ ಊರಿಗೆ ನಾಗಭೂಮಿ ಎಂಬ ಹೆಸರೂ ಬಂದಿದೆ.

ಸ್ಪರ್ಧೆ : ಇಲ್ಲಿ ಕೇವಲ ನಾಗಪೂಜೆಯಷ್ಟೇ ಅಲ್ಲ. ನಾಗರ ಪ್ರದರ್ಶನ, ಸ್ಪರ್ಧೆಯೂ ನಡೆಯುತ್ತದೆ. ಅತಿ ಉದ್ದದ, ದಪ್ಪವಾದ ಸರ್ಪ ಪ್ರದರ್ಶಿಸಿದ ನಾಗಮಂಡಲದವರಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಪಂಚಮಿಯ ದಿನ ಇಲ್ಲಿನ ಎಲ್ಲ ಮನೆಗಳ ಗೃಹಿಣಿಯರೂ ನಾಗರಗಳನ್ನು ಪೂಜಿಸುತ್ತಾರೆ. ಹಾಲು ನೀಡುತ್ತಾರೆ. ಅರಿಶಿನ -ಕುಂಕುಮ ಹೂವಿನಿಂದ ಪೂಜಿಸುತ್ತಾರೆ.

ಈ ನಾಗರ ಸ್ಪರ್ಧೆ, ಪ್ರದರ್ಶನ, ಜೀವಂತ ಹಾವುಗಳ ಪೂಜೆಯನ್ನು ಕಾಣಲೆಂದೇ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇಲ್ಲಿ ನಾಗರ ಪಂಚಮಿಯಂದು ಜಾತ್ರೆಯೇ ನಡೆಯುತ್ತದೆ. ಪ್ರವಾಸಿಗರಿಗೆ ಸಕಲ ಅನುಕೂಲತೆಗಳನ್ನೂ ಕಲ್ಪಿಸಿಕೊಡಲಾಗುತ್ತದೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಕೂಡ ಇರುತ್ತದೆ. ಇಚಲಕರಂಜಿಯಿಂದ ಬತ್ತೀಸ ಶಿರಾಳಕ್ಕೆ ವಿಶೇಷ ಬಸ್‌ಗಳೂ ಸಂಚರಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X