ಲಕ್ಷ್ಮಿ ಊರು, ಕತೆಗಳು ನೂರು

ಗೊರವನಹಳ್ಳಿಯಲ್ಲಿನ ಪ್ರತಿಯಾಂದು ದೈವಕ್ಕೂ ಒಂದೊಂದು ಕತೆಯಿದೆ. ಊರಿನ ಮುಖ್ಯ ಆಕರ್ಷಣೆಯಾದ ಲಕ್ಷ್ಮಿದೇವಿ, ಮಂಚಾಲ ನಾಗಪ್ಪ , ಓಣಿ ನಾಗರಾಜ ಪ್ರತಿಯಾಂದರ ಹಿನ್ನೆಲೆಯಲ್ಲೂ ತಲೆಮಾರುಗಳ ನಾಲಗೆಗಳಿವೆ.

ಮಹಾಲಕ್ಷ್ಮಿ ಗೊರವನಹಳ್ಳಿಗೆ ಬಂದದ್ದೇ ಒಂದು ರೋಚಕ ಕತೆ. ದೇವರು ಒಲಿಯಲಿಕ್ಕೆ ಭಕ್ತರು ಬೇಡುವುದು ಕಾಡುವುದು ಮಾಮೂಲು. ಇಲ್ಲಿನ ಕತೆ ಪೂರಾ ಬದಲು. ಲಕ್ಷ್ಮಿದೇವಿ ಊರಿಗೆ ಬರಲಿಕ್ಕೆ ನಾನಾ ಪಾಡು ಪಡಬೇಕಾಯಿತು. ಲಕ್ಷ್ಮಿ ದೇವಿ ಕೆರೆಯಿಂದ ಊರಿಗೆ ಬಂದದ್ದು ಒಂದರ್ಥದಲ್ಲಿ ಭಗೀರಥ ಪ್ರಯತ್ನವೇ.

ಅಬ್ಬಯ್ಯ, ದನ ಕಾಯುವ ಸಿದ್ಧಣ್ಣನ ಮಗ. ಮನೆಯ ದನಗಳನ್ನು ಮೇಯಿಸುವುದು ಅವನ ನಿತ್ಯದ ಕೆಲಸ. ಒಂದಿನಾ, ಆಷಾಢ ಮಾಸ ಶುಕ್ರವಾರದ ಸಂಜೆ. ಗೋವುಗಳ ಸಗಣಿಯನ್ನ ತಿಪ್ಪೆಗೆ ಹಾಕಿ ಕೈ ತೊಳೆಯಲೆಂದು ಕೆರೆಗಿಳಿದಾಗ, ಬುಳಬುಳ ಸದ್ದಾಯಿತು. ಜೊತೆಗೆ ಮಗೂ, ನಾನು ನಿನ್ನ ಮನೆಗೆ ಬರ್ತೀನಿ. ಕರಕೊಂಡು ಹೋಗ್ತೀಯಾ? ಎನ್ನುವ ಹೆಣ್ಣಿನ ದನಿ ಅಬ್ಬಯ್ಯನಿಗೆ ಕೇಳಿಸಿತು. ಇದೆಲ್ಲೋ ಭ್ರಮೆ ಅಂತಾ ಅಬ್ಬಯ್ಯ ಮನೆಗೆ ವಾಪಸ್ಸಾದ. ಆದರೆ, ಪ್ರತಿ ಸಂಜೆಯೂ ಅಬ್ಬಯ್ಯನಿಗೆ ಇವೇ ಮಾತುಗಳು ಕೇಳುತ್ತಿದ್ದವು. ಕೊನೆಗೆ, ವಿಷಯವನ್ನು ಅಮ್ಮನಿಗೆ ತಿಳಿಸಿದ. ದೇವತೆಯಾಗಿ ಬರೋದಾದರೆ ಬರಲಿಕ್ಕೆ ಹೇಳು ಅಂತಾ ಅಮ್ಮ ಹೇಳಿದಳು.

ಕೆರೆಯಿಂದ ಮನೆಗೆ : ದೇವತೆ ಅಬ್ಬಯ್ಯನ ಮಾತಿಗೆ ಒಪ್ಪಿದಳು. ಮಗೂ, ನಾನು ನಿಮ್ಮ ಮನೆಗೆ ಲಕ್ಷ್ಮಿಯಾಗಿ ಬರ್ತೀನಿ. ಭಯ ಬೇಡ ಎಂದಳು. ಕ್ಷಣದಲ್ಲೇ ಅಬ್ಬಯ್ಯ ಹಾಸಿದ ಚೌಕದಲ್ಲಿ ಶಂಖ, ಚಕ್ರ, ಪದ್ಮಗಳಿಂದ ಶೋಭಿಸುವ ಶಿಲೆಯ ರೂಪದ ಲಕ್ಷ್ಮೀದೇವಿ ! ಅಬ್ಬಯ್ಯನಿಗೆ ಅಯೋಮಯ. ತನಗೆ ತಿಳಿದಂತೆ ಹಾಡಿದ. ಮೂರ್ತಿಯನ್ನು ಹೊತ್ತು ಮನೆಯತ್ತ ನಡೆದ. ಅಬ್ಬಯ್ಯನ ತಾಯಿ ಮಂಗಳ ದ್ರವ್ಯಗಳಿಂದ ಪೂಜಿಸಿ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡಳು. ಅಂದಿನಿಂದ ಅಬ್ಬಯ್ಯನ ಮನೆ ಲಕ್ಷ್ಮೀ ನಿವಾಸವಾಯಿತು. ಅಬ್ಬಯ್ಯನ ನಂತರ ಮನೆವಾರ್ತೆಯನ್ನು ನೋಡಿಕೊಳ್ಳುತ್ತಿದ್ದ ತೋಟದಪ್ಪ ತನಗಾದ ಕನಸಿನಂತೆ ದೇವಿಗೆ ಪ್ರತ್ಯೇಕ ಗುಡಿಯನ್ನು ಕಟ್ಟಿಸಿದ. ಅಂದಿನಿಂದ ದೇವಿ ದಿನೇದಿನೇ ಪ್ರವರ್ಧಮಾನಕ್ಕೆ ಬಂದಳು.

ಮಂಚಾಲ ನಾಗಪ್ಪ ಮತ್ತು ಓಣಿ ನಾಗರಾಜ : ಅಬ್ಬಯ್ಯ ಸೋದರರ ನಂತರ ಸ್ವಲ್ಪ ಕಾಲ ಯಾರೂ ಕೇಳುವವರಿಲ್ಲದೆ ಲಕ್ಷ್ಮೀದೇವಿ ಪೂಜೆಯಿಲ್ಲದೆ ನಿಂತಳು. ಆಗ, ದೇವಿಯ ಪೂಜೆಗೆ ಮುಂದಾದವನು ನೇಯ್ಗೆಯ ಚೌಡಯ್ಯ. ಲೇವಾದೇವಿ ಅವನ ಕಸುಬು. ಲೇವಾದೇವಿಯಿಂದ ಸಂಪಾದಿಸಿದ ಹಣವನ್ನೆಲ್ಲಾ ಕೊಡದಲ್ಲಿ ಹಾಕಿ, ಲಕ್ಷ್ಮೀದೇವಿಯ ಪಕ್ಕದಲ್ಲಿ ಹೂತಿಟ್ಟನಂತೆ. ಈ ನಡುವೆ ಚೌಡಯ್ಯ ಇರಿಸುತ್ತಿದ್ದ ಹಾಲನ್ನು ದೇವರಾಯನದುರ್ಗದಿಂದ ಬರುತ್ತಿದ್ದ ಹಾವೊಂದು ಕುಡಿಯುತ್ತಿತ್ತಂತೆ. ಒಮ್ಮೆ, ಹೂತಿಟ್ಟ ಹಣದ ಕೊಡವನ್ನು ಚೌಡಯ್ಯ ತೆಗೆಯಲು ಹೋದಾಗ ಘಟ ಸರ್ಪ ಕೊಡಕ್ಕೆ ಸುತ್ತಿಹಾಕಿಕೊಂಡಿದ್ದನ್ನು ಕಂಡ. ಅಲ್ಲಿಗೇ ಚೌಡಯ್ಯನ ಅತಿಯಾಸೆ ಕೊನೆಯಾಯಿತು. ಮುಂದಿನ ದಿನಗಳಲ್ಲಿ ಲೇವಾದೇವಿ ಕೈಬಿಟ್ಟು , ಲಕ್ಷ್ಮೀಪೂಜೆಯಲ್ಲಿಯೇ ಕಾಲಕಳೆಯತೊಡಗಿದ.

ನಂತರದ ದಿನಗಳಲ್ಲಿ ಚೌಡಯ್ಯ ಹಣದ ಕೊಡ ಹೂತ ಜಾಗದಲ್ಲಿ ಹುತ್ತ ಬೆಳೆಯಿತು. ಲಕ್ಷ್ಮೀನಾರಾಯಣರ ಹಾಸಿಗೆಯಾದ ಆದಿಶೇಷನೇ ಇಲ್ಲಿದ್ದಾನೆಂದು ಜನ ನಂಬಿದ್ದಾರೆ. ಮಂಚಾಲ ನಾಗಪ್ಪ ಹೆಸರಿನಿಂದ ನಾಗರಾಜನಿಗಿಲ್ಲಿ ಪೂಜೆ ನಡೆಯುತ್ತದೆ. ಆಗಾಗ, ಹುತ್ತದಿಂದ ಪರಿಮಳ ಹೊರಹೊಮ್ಮುತ್ತದೆಂದು ಜನ ಹೇಳುತ್ತಾರೆ. ಆದಿಶೇಷ ಸ್ವೀಕರಿಸುತ್ತಾನೆಂದು ನೈವೇದ್ಯವನ್ನೂ ಇಡಲಾಗುತ್ತದೆ.

ದೇವರಾಯನದುರ್ಗದಿಂದ ಗೊರವನಹಳ್ಳಿಗೆ ಬರುತ್ತಿದ್ದ ನಾಗರಾಜ ಒಂದು ದಿನ ಸ್ವಲ್ಪ ತಡವಾಗಿ ಬಂದನಂತೆ. ಲಕ್ಷ್ಮೀದೇವಿ ಸಿಟ್ಟಾದಳು. ಊರೊಳಗೆ ಬರಬೇಡ, ಊರ ಹೊರಗೇ ಕಲ್ಲಾಗು ಎಂದು ಶಪಿಸಿದಳು. ದೇವಿಯ ಶಾಪದಂತೆ ದೇವಸ್ಥಾನದ ದಕ್ಷಿಣ ದಿಕ್ಕಿನಲ್ಲಿ ನಾಗರಾಜ ಕಲ್ಲಾದ. ನಾಗನಿಗೆ ಇವತ್ತೂ ಪೂಜೆ ನಡೆಯುತ್ತಿದೆ. ಓಣಿ ನಾಗರಾಜ ಅಂತಾ ಅವನ ಹೆಸರು.

ಪೂಜೆ ಮಾಡುವುದು ಹೀಗೆ : ಪೂಜೆ 48 ದಿನಗಳದು. ಪೂಜಾ ವಿಧಾನ ತುಂಬಾ ಸರಳ. ದೇವಿ ವಿಗ್ರಹಕ್ಕೆ ಹೂವು ಹಣ್ಣಿಟ್ಟು, ಶುದ್ಧ ಮನಸ್ಸಿನಿಂದ ಪೂಜಿಸಿದರೆ ಆಯಿತು. ಬಂದರೆ, ಸಮಯವಿದ್ದರೆ ಲಕ್ಷ್ಮಿ ಅಷ್ಟೋತ್ತರ ಪಠಿಸಬಹುದು. ಪ್ರತಿದಿನ ಅಡುಗೆ ಮಾಡುವಾಗಲೂ ಒಂದು ಮುಷ್ಠಿ ಅಕ್ಕಿಯನ್ನು ದೇವಿಗೆಂದು ತೆಗೆದಿರಿಸುವುದು ರೂಢಿ. ಜೊತೆಗೆ ಒಂದು ರುಪಾಯಿ ಕಾಣಿಕೆ. 48 ದಿನಗಳ ನಂತರ ಕೂಡಿಟ್ಟ ಅಕ್ಕಿ ಮತ್ತು ದುಡ್ಡನ್ನು ದೇವಿ ಸನ್ನಿಧಿಗೆ ಒಪ್ಪಿಸುತ್ತಾರೆ. ಲಕ್ಷ್ಮೀದೇವಿಗೆ ನಡೆದುಕೊಳ್ಳುವವರು ಪ್ರತಿದಿನವೂ ಅಕ್ಕಿ, ಕಾಸು ತೆಗೆದಿರಿಸಿ ಸನ್ನಿಧಿಗೆ ಹೋದಾಗ ಅರ್ಪಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+