• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಗೊರವನಹಳ್ಳಿ' ಕರ್ನಾಟಕದ ಕೊಲ್ಹಾಪುರ

By Staff
|

ತುಮಕೂರು ಜಿಲ್ಲೆಯಲ್ಲಿ ಎದ್ದು ಕಾಣುವ ಪುಣ್ಯಕ್ಷೇತ್ರಗಳು ಕಡಿಮೆ. ಶಿವಗಂಗೆ, ಸಿದ್ಧಗಂಗೆ, ಸಿದ್ಧರಬೆಟ್ಟ, ದೇವರಾಯನದುರ್ಗ ಮುಂತಾಗಿ ಕೆಲವು ಕ್ಷೇತ್ರಗಳ ಹೆಸರಿಸಬಹುದಾದರೂ ಧರ್ಮಸ್ಥಳ, ಉಡುಪಿ, ಚಾಮುಂಡಿ ಬೆಟ್ಟ ಮುಂತಾದ ಕ್ಷೇತ್ರಗಳ ಎದುರು ಇವುಗಳೆಲ್ಲಾ ಸಪ್ಪೆಯೇ. ಪ್ರತಿದಿನ ಸಾವಿರಾರು ಜನ ಭೇಟಿಕೊಡುವ ಈ ಕ್ಷೇತ್ರಗಳೆದುರು ತುಮಕೂರಿನ ಕ್ಷೇತ್ರಗಳು ಪಿಚ್ಚೆನಿಸುತ್ತವೆ. ಈ ಕೊರತೆಯ ತುಂಬಲಿಕ್ಕೆ ಎನ್ನುವಂತೆ ಈಚಿನ ದಿನಗಳಲ್ಲಿ ಪ್ರತಿದಿನ ಸಾವಿರಾರು ಜನರನ್ನು ತನ್ನತ್ತ ಸೆಳೆಯುವ ಕ್ಷೇತ್ರವೊಂದು ರೂಪುಗೊಂಡಿದೆ. ಅದು ಗೊರವನಹಳ್ಳಿ.

ಗೊರವನಹಳ್ಳಿಯ ಲಕ್ಷ್ಮಿದೇವಿ ರಾಜ್ಯದ ಮೂಲೆಮೂಲೆಗಳ ಭಕ್ತರನ್ನು ಆಕರ್ಷಿಸುತ್ತಿದ್ದಾಳೆ. ದಿನವೂ ಅಲ್ಲಿ ಜನಜಾತ್ರೆ. ಸಾಮಾನ್ಯ ದಿನಗಳಲ್ಲಿ ಏಳೆಂಟು ಸಾವಿರ ಭಕ್ತರು ಲಕ್ಷ್ಮಿಯ ದರ್ಶನಕ್ಕೆ ಗೊರವನಹಳ್ಳಿಯ ದಾರಿ ಹಿಡಿಯುತ್ತಾರೆ. ಶುಕ್ರವಾರಗಳಲ್ಲಿ ಈ ಸಂಖ್ಯೆ ಇಮ್ಮಡಿಸುತ್ತದೆ. ನೆರೆಯ ರಾಜ್ಯಗಳಿಂದಲೂ ಭಕ್ತರನ್ನು ಸೆಳೆಯುತ್ತಿರುವ ಲಕ್ಷ್ಮೀ ಕ್ಷೇತ್ರ ಈಚಿನ ದಿನಗಳಲ್ಲಿ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲೊಂದಾಗಿ ರೂಪುಗೊಳ್ಳುತ್ತಿದೆ. ಮಂಚಾಲೆ ನಾಗಪ್ಪ ಹಾಗೂ ಓಣಿ ನಾಗರಾಜ ಇಲ್ಲಿನ ಇನ್ನೆರಡು ದೈವಗಳು.

ಕರ್ನಾಟಕದ ಕೊಲ್ಹಾಪುರಿ: ಮನೆ ದೈವ, ಮನದೈವ ಎಂದು ಪ್ರತಿಯಾಬ್ಬರಿಗೂ ಬೇರೆ ಬೇರೆ ದೇವರುಗಳು ಇರಬಹುದಾದರೂ, ಎಲ್ಲರೂ ತಂತಮ್ಮ ಮನೆಗಳಿಗೆ ಬಿಜಯಂಗೈಯ್ಯುವಂತೆ ಲಕ್ಷ್ಮಿಯನ್ನು ತಪ್ಪದೆ ಆಹ್ವಾನಿಸುತ್ತಾರೆ. ಭಾಗ್ಯದ ಲಕ್ಷ್ಮೀ ಬಾರಮ್ಮ- ನಮ್ಮಮ್ಮಾ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮಾ (ತಮ್ಮ ಮನೆಗೆ ಮಾತ್ರ) ಎಂದು ತಂತಮ್ಮ ಭಾಷೆಗಳಲ್ಲಿ ಎಲ್ಲರೂ ಹಾಡುವವರೇ. ಆದರೂ ಲಕ್ಷ್ಮಿಗೆಂದೇ ಪ್ರತ್ಯೇಕ ದೇವಸ್ಥಾನಗಳು ಇರುವುದು ಅಪರೂಪ. ನಾರಾಯಣನ ಪದತಲದಲ್ಲೋ, ಬಾಲಾಜಿಯ ವಾಮಭಾಗದಲ್ಲೋ ಇರುವ ಲಕ್ಷ್ಮಿಗಳೇ ಹೆಚ್ಚು . ಇಲ್ಲೆಲ್ಲಾ ಲಕ್ಷ್ಮಿಗೆ ಎರಡನೆ ಸ್ಥಾನವೇ. ಕೊಲ್ಹಾಪುರ ಲಕ್ಷ್ಮಿ ಮಾತ್ರ ಇದಕ್ಕೆ ಅಪವಾದ. ಲಕ್ಷ್ಮಿ ಎಂದ ಕೂಡಲೇ ನೆನಪಿಗೆ ಬರುವುದು ದೇಶದಲ್ಲೆಲ್ಲಾ ಪ್ರಸಿದ್ಧವಾಗಿರುವ ಕೊಲ್ಹಾಪುರ ನಿವಾಸಿನಿಯೇ. ಆದರೆ, ಕರ್ನಾಟಕದ ಮಂದಿ ಪರ್ಯಾಯವ ಕಂಡುಕೊಂಡಿದ್ದಾರೆ. ಗೊರವನಹಳ್ಳಿ ಕರ್ನಾಟಕದ ಕೊಲ್ಹಾಪುರವಾಗಿ ಬೆಳೆಯುತ್ತಿದೆ. ಲಕ್ಷ್ಮಿಗೇ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರವೆನ್ನುವ ಹಿರಿಮೆ ಗೊರವನಹಳ್ಳಿಯದು.

ನೀವು ಗೊರವನಹಳ್ಳಿಗೆ ಹೋಗಬೇಕೆ ? : ಗೊರವನಹಳ್ಳಿ ಇರುವುದು ಕೊರಟಗೆರೆ ತಾಲ್ಲೂಕಿನಲ್ಲಿ . ಕೊರಟಗೆರೆಯಿಂದ ಗೊರವನಹಳ್ಳಿಗೆ 10 ಕಿಮೀ. ಬೆಂಗಳೂರಿನಿಂದ ನೇರವಾಗಿ ಗೊರವನಹಳ್ಳಿಗೆ ಬಸ್ಸಿದೆ. ತುಮಕೂರಿಗೆ ಹೋಗಿ(ಬೆಂಗಳೂರಿನಿಂದ ತುಮಕೂರಿಗೆ 67 ಕಿಮೀ) ಅಲ್ಲಿಂದ ಕೊರಟಗೆರೆ ಮೂಲಕವೂ ತೆರಳಬಹುದು. ತುಮಕೂರು ಹಾಗೂ ಕೊರಟಗೆರೆ ನಡುವೆ 25 ಕಿಮೀ ದೂರವಿದೆ. ರಾತ್ರಿಯನ್ನು ಗೊರವನಹಳ್ಳಿಯ ವಸತಿಗೃಹಗಳಲ್ಲೇ ಕಳೆಯಬಹುದು. ಸ್ವಲ್ಪ ಚೆಂದದ ವಸತಿ ಗೃಹ ಬೇಕೆಂದರೆ ಕೊರಟಗೆರೆ, ತುಮಕೂರುಗಳಲ್ಲಿ ನೀವು ತಂಗಬಹುದು.

ಗೊರವನಹಳ್ಳಿಗೆ ಬಂದಾಗ ನಿಮ್ಮಲ್ಲಿ ಒಂದೆರಡು ದಿನಗಳಿರಲಿ. ಪಕ್ಕದಲ್ಲಿಯೇ ಕಣ್ತುಂಬಲಿಕ್ಕೆ ತೀತಾ ಜಲಾಶಯವಿದೆ. ಜಯಮಂಗಲಿ ನದಿಯಿದೆ. ದೇವರಾಯನದುರ್ಗ (ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ), ವೀರಾಪುರ (ಶ್ರೀನಿವಾಸ) ಗಳಿವೆ. ಸಮೀಪದಲ್ಲಿ ಸಿದ್ಧಗಂಗೆಯಿದೆ. ಶಾಂತಲೆಯನ್ನು ನೆನಪಿಸುವ ಶಿವಗಂಗೆಯಿದೆ. ಸಿದ್ಧರು ಬದುಕಿದ ಸಿದ್ಧರ ಬೆಟ್ಟವಿದೆ.

ಗೋ- ರವ ವಾಯಿತು ಗೊರವನಹಳ್ಳಿ : ಒಂದಾನೊಂದು ಕಾಲ. ಗೋಪಾಲರು ವಾಸಿಸುತ್ತಿದ್ದ ಬೃಂದಾವನವೇ ಇದೆನ್ನುವಂತಿದ್ದ ಕಾಲ. ಊರ ತುಂಬೆಲ್ಲಾ ಗೋಪಾಲಕರು, ಅವರ ಗೋವುಗಳದೇ ಸದ್ದು . ಗೋಪಾಲಕರ- ಗೋವುಗಳ ರವವೇ, ಗೋ ರವವೇ ನಾಲಗೆಗಳಲ್ಲಿ ಉರುಳುರುಳಿ ಗೊರವನಹಳ್ಳಿ ಆಗಿರಬಹುದೇ. ಸಾಧ್ಯತೆಗಳು ಹೆಚ್ಚೆನ್ನುತ್ತಾರೆ ಊರ ಇತಿಹಾಸ ಕೆದಕಿರುವ ವಿದ್ವಾಂಸರು.

ಲಕ್ಷ್ಮಿಗೆ ಜೀವ ನೀಡಿದ ಕಮಲಮ್ಮ : ಗೊರವನಹಳ್ಳಿಯ ಈ ಹೊತ್ತಿನ ಪ್ರಸಿದ್ಧಿಯ ಹಿಂದಿರುವ ವ್ಯಕ್ತಿ ಕಮಲಮ್ಮ . ಊರ ಹೊರಭಾಗದಲ್ಲಿ ಪಾಳು ಬಿದ್ದಿದ್ದ ದೇಗುಲವನ್ನು ಕಂಡು ಮರುಗಿ, ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬ ದುಕನ್ನೇ ಮುಡಿಪಾಗಿಟ್ಟ ಕಮಲಮ್ಮನವರು ಪಾಳು ದೇಗುಲವನ್ನು ಶುಚಿಯಾಗಿಸಿ ಜನತೆಯ ಗಮನವನ್ನು ದೇಗುಲದತ್ತ ಸೆಳೆದರು . ಕ್ಷೇತ್ರಕ್ಕೆ ಹೋದವರಾರೂ ಈಕೆಯನ್ನು ನೋಡದೆ ವಾಪಸ್ಸಾಗುವುದಿಲ್ಲ . ಇಳಿವಯಸ್ಸಿನಲ್ಲೂ ಕಮಲಮ್ಮ ಭೇಟಿ ಮಾಡಿದವರ ಕ್ಷೇಮಸಮಾಚಾರ ವಿಚಾರಿಸುತ್ತಾರೆ. ಮುತ್ತೆೈದೆಯರಿಗೆ ಅರಿಷಿಣ ಕುಂಕುಮ ನೀಡಿ ಆಶೀರ್ವದಿಸುತ್ತಾರೆ.

ಕಮಲಮ್ಮನವರ ಊರು ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ. ಶ್ಯಾನುಭೋಗ ಸುಬ್ಬರಾಯರ ಪತ್ನಿಯಾಗಿ 1925 ರಲ್ಲಿ ಗೊರವನಹಳ್ಳಿಗೆ ಕಾಲಿಟ್ಟ ಕಮಲಮ್ಮ ಈವತ್ತು ಊರಿನ ಲಕ್ಷ್ಮಿಯೆನಿಸಿದ್ದಾರೆ. ದೇವಸ್ಥಾನಕ್ಕೆ ಬಂದವರಿಗೆ ಕಮಲಮ್ಮನವರೇ ಪೂಜೆ ಮಾಡಿಕೊಟ್ಟು , ಬಂದವರನ್ನು ಪ್ರೀತಿಯಿಂದ ಆದರಿಸಿದ್ದರ ಫಲವೇ ನಾಡಿನ ಗಮನವನ್ನು ದೇಗುಲ ಸೆಳೆದಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯ ಶುರುವಾದದ್ದು 1968 ರಲ್ಲಿ . ಶಿಥಿಲವಾಗಿದ್ದ ಕಲ್ಲುಮಂಟಪದ ಸ್ಥಳದಲ್ಲಿ ಪ್ರಸ್ತುತ ಇರುವ ದೇವಸ್ಥಾನ, ಪ್ರತ್ಯೇಕ ಗರ್ಭಗೃಹ, ನವರಂಗ ಹಾಗೂ ಮುಖಮಂಟಪಗಳು ನಂತರದಲ್ಲಿ ನಿರ್ಮಾಣವಾದವು.

ಗೊರವನಹಳ್ಳಿ ಪುಟ್ಟ ಊರು. ದೇವಸ್ಥಾನವೂ ಚಿಕ್ಕದೇ. ಆದರೆ, ಭಕ್ತ ವೃಂದ- ಅವರ ನಂಬಿಕೆಗಳು ದೊಡ್ಡದು. ಪ್ರತಿದಿನ ಇಲ್ಲಿ ಅನ್ನದಾನ ಉಂಟು. ಸಾವಿರಾರು ಮಂದಿ ಲಕ್ಷ್ಮೀದೇವಿಯ ದರ್ಶನದಿಂದ ಮನಸ್ಸನ್ನೂ, ಪ್ರಸಾದದಿಂದ ಹೊಟ್ಟೆ ಯನ್ನೂ ತುಂಬಿಸಿಕೊಂಡು ಹೋಗುತ್ತಾರೆ. ಈ ನಿಟ್ಟಿನಲ್ಲಿ ಗೊರವನಹಳ್ಳಿಗೆ ಬಯಲು ಸೀಮೆಯ ಧರ್ಮಸ್ಥಳ ಎನ್ನುವ ವಿಶೇಷಣ ಅರ್ಥಪೂರ್ಣ ಎನಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more