• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣ ಎಂದರೆ ಒಂದು ದೊಡ್ಡ ಸಮುದ್ರವಿದ್ದಂತೆ

By Staff
|

ಕೃಷ್ಣ - ದೇವರುಗಳ ನಡುವಿನ ಮನುಷ್ಯಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿ, ಗಡಿಯಾರದ ಮುಳ್ಳಿನಂತೆದುಡಿದ ಶ್ರಮಿಕನ ಅಷ್ಟಮಿ ಸ್ಮರಣೆ .

*ಕೆ.ರಾಜಲಕ್ಷ್ಮಿ ರಾವ್‌

ಕೃಷ್ಣ ಎಂದರೆ ಒಂದು ದೊಡ್ಡ ಸಮುದ್ರ ಅಂತ ಒಮ್ಮೆ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದರು. ಆ ಸಮುದ್ರದಿಂದ ನೀವು ನಿಮ್ಮ ಪಾತ್ರೆಯ ತುಂಬಾ ನೀರು ಹೊತ್ತು ತರಬಹುದು. ಕೃಷ್ಣನದು ಅಗೆದಷ್ಟು ಆಳ, ಕಣ್ಣಳತೆಯ ಮೀರಿ ನಿಲ್ಲುವ ವಿಸ್ತಾರ . ನೀವು ಆರಾಧಿಸುತ್ತೀರಾದರೆ ಅವನು ಗೀತಾಚಾರ್ಯ. ಬೈಯುತ್ತೀರಾದರೆ ಅವನು ಕುಟಿಲ ತಂತ್ರಜ್ಞ, ಕಳ್ಳ ಕೃಷ್ಣ . ಪೂಜಿಸುತ್ತೀರಾದರೆ ಅಕ್ಷಯಾಂಬರದಾನಿ. ಪ್ರೀತಿಸುತ್ತೀರಾದರೆ ಮೋಹನ. ಗುಮಾನಿಯಿಂದ ನೋಡುತ್ತೀರಾದರೆ ಆತನೊಬ್ಬ ಚಾಣಾಕ್ಷ ರಾಜಕಾರಣಿ.

ಬಹುಶಃ ಇತಿಹಾಸದಲ್ಲಿ ರಾಜಕಾರಣಿಯಾಗಿ ಕೃಷ್ಣನಿಗೂ ಚಾಣಕ್ಯನಿಗೂ ಬೌದ್ಧಿಕ ಸಾಮ್ಯತೆ ಇದೆ. ಸಾಮ್ರಾಜ್ಯ ಕಟ್ಟುವ ಏಕ ಮಾತ್ರ ಗುರಿಯಲ್ಲಿ ಒಬ್ಬ ಉತ್ತಮ ರಾಜಕಾರಣಿಯಾಗಿ ಕೃಷ್ಣ ಹೇಗೆ ಕೆಲಸ ನಿರ್ವಹಿಸಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಬಿಲ್ಲ ಹಬ್ಬದಿಂದ ಆರಂಭವಾಗುತ್ತದೆ ಕೃಷ್ಣನ ರಾಜಕೀಯ ಜೀವನ. ಕಂಸ ವಧೆಯಿಂದ ಆತನ ಕರ್ಮ ಸಿದ್ಧಾಂತ ಬೋಧನೆ ಆರಂಭ. ಬದುಕುವುದೊಂದನ್ನೇ ಜೀವನದ ಮುಖ್ಯ ಗುರಿಯಾಗಿರಿಸಿಕೊಂಡು ಕರ್ತವ್ಯ ಮರೆತು ಮೂಢನಾಗಿದ್ದ ಕಂಸನ ವಧೆಯ ನಂತರ ಕೃಷ್ಣ ಆರಾಮವಾಗಿ ಪರಿಚಾರಿಕೆಯರ ಚಾಮರಗಾಳಿಗೆ ಮೈಯಾಡ್ಡಿ ಸಿಂಹಾಸನದಲ್ಲಿ ಮೆರೆಯಬಹುದಿತ್ತು. ಹದಿನಾರು ಸಾವಿರ ಹೆಂಡಿರ ನಡುವಲ್ಲಿ ಜಗತ್ತನ್ನೇ ಮರೆಯಬಹುದಿತ್ತು . ಆದರೆ, ಕೃಷ್ಣನ ಕರ್ಮ ಸಿದ್ಧಾಂತದ ಬದುಕು ಎಂದೂ ಬೆಳ್ಗೊಡೆಯಡಿಯಲ್ಲಿ ವಿಶ್ರಮಿಸಲಿಲ್ಲ.

ಆವೇಶದಲ್ಲಿ, ಪ್ರತಿದಿನ ಯುದ್ಧವನ್ನು ಗೆದ್ದು ಬರುವ ಜೋಶ್‌ನಲ್ಲಿ ಅರ್ಜುನ ಮಾಡುವ ಪ್ರತಿಜ್ಞೆಗಳ ಹಿಂದೆ ಊರುಗೋಲಾಗಿ ನಿಂತು ಕೃಷ್ಣ ಧರ್ಮ ಸಾಮ್ರಾಜ್ಯವನ್ನು ಕೆತ್ತುತ್ತಾನೆ. ತನ್ನ ಮಗ ಅಭಿಮನ್ಯು ಸತ್ತು ಹೋಗಿರುವ ದುಃಖದಲ್ಲಿ ಅರ್ಜುನ, ಜಯದ್ರಥನನ್ನು ಮರುದಿನ ಸೂರ್ಯಾಸ್ತದೊಳಗೆ ಕೊಲ್ಲುವ ಪ್ರತಿಜ್ಞೆ ಮಾಡುತ್ತಾನೆ. ಆದರೆ ಸೈನ್ಯಬಲ ಕೌರವರ ಕಡೆಗಿರುವುದರಿಂದ ಅದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಕೃಷ್ಣ ಸೂರ್ಯಾಸ್ತಕ್ಕೆ ಮುಂಚೆ ತನ್ನ ಚಕ್ರದಿಂದ ಸೂರ್ಯನನ್ನು ಮರೆ ಮಾಡಿ ಜಯದ್ರಥನ ಕೊಲ್ಲಲು ಅರ್ಜುನನಿಗೆ ಅನುವು ಮಾಡಿಕೊಡುತ್ತಾನೆ. ಅವನು ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿ, ಗಡಿಯಾರದ ಮುಳ್ಳಿನಂತೆ ದುಡಿದ ಶ್ರಮಿಕ ಶಿಲ್ಪಿ.

ಬಾಳುವೆಯ ಹಾದಿಯಲ್ಲಿ ಮನುಷ್ಯರಂತೆಯೇ ಬದುಕಿದವನು

ಕೃಷ್ಣ ಸಾಮಾನ್ಯ ಮನುಷ್ಯರಿಗೆ ಹತ್ತಿರವಾಗುವುದು, ಇಷ್ಟವಾಗುವುದು ಮತ್ತೊಮ್ಮೆ ತನ್ನ ಲೌಕಿ-ಕ ನಿಲು-ವು ಹಾಗೂ ಜೀವನ ಶೈಲಿಯಿಂದಲೇ. ಮನುಷ್ಯನ ಸಬ್‌ ಕಾನ್ಷಿಯಸ್‌ ಯಾವತ್ತೂ ರಾಮನಿಗಿಂತ ಕೃಷ್ಣನನ್ನು ಹೆಚ್ಚು ಪ್ರೀತಿಸುತ್ತದೆ. ಯಾಕೆಂದರೆ ಅವನು ಮನುಷ್ಯರಂತೆಯೇ ಕಳ್ಳ ಕೃಷ್ಣನಾಗಿದ್ದ. ರಾಜಕುಮಾರನ ಕತೆಯಲ್ಲಿ ಬರುವ ಸರ್ವವಿದ್ಯಾ ಪಾರಂಗತನಾಗಿ ಅ-ವ-ನು ಕತೆ ಕೇಳುವಾತನಿಂದ ಬಲು ದೂರ ನಿಲ್ಲಲಿಲ್ಲ. ರಾಧೆ ರುಕ್ಮಿಣಿಯಿಂದ ಹಿಡಿದು ಗೋಪಿಕಾ ಸ್ತ್ರೀಯರ ನಡುವೆ ನಿಂತು ಬಾಳುವೆಯ ಹಾದಿಯಲ್ಲಿ ಮನುಷ್ಯರಂತೆಯೇ ಬದುಕಿದವನು. ಹಾಗೆ ಬದುಕುತ್ತಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ದೇವರಾದವನು. ಇನ್ನೂ ಹೇಳ ಬೇಕೆಂದರೆ, ಧರ್ಮ ಸ್ಥಾಪನೆಗಾಗಿ ಕುಟಿಲತೆ ಮತ್ತು ಚಾಣಾಕ್ಷತನವನ್ನು ಒಪ್ಪಿಕೊಂಡವನು. ರಾಮನ ಸಾತ್ವಿಕತೆ, ಕಠಿಣ ಆದರ್ಶಗಳು ದಿನನಿತ್ಯ ದುಡಿದು ಉಂಡು ಸೂರಿನ ತೂತುಗಳೆಡೆಯಲ್ಲಿ ಚುಕ್ಕಿಯೆಣಿಸುತ್ತಾ ಮಲಗುವವರಿಗೆ ನಿಲುಕುವುದಲ್ಲ. ಆದರೆ ಕೃಷ್ಣ ಮಾತ್ರ ದನಗಾಹಿ ಬಾಲಕರಿಂದ ಹಿಡಿದು ರಾಷ್ಟ್ರಪಥ ಚಾಲಕರವರೆಗೆ ವ್ಯಾಪಿಸಿಕೊಳ್ಳುತ್ತಾನೆ. ಅಕ್ಕರ ಗೊತ್ತಿಲ್ಲದ ಕುರಿಕಾಯುವಾತನಿಗೂ ಕೃಷ್ಣ ಉದಾಹರಣೆಯಾಗಬಲ್ಲ. ಕೃಷ್ಣನ ಸಾವೂ ಅಷ್ಟೇ. ಅ-ವ-ನು ಅಸಾಮಾನ್ಯ ರೀತಿಯಲ್ಲಿ ಎಲ್ಲೂ ಐಕ್ಯನಾಗುವುದಿಲ್ಲ . ಸಾಮಾನ್ಯ ಬೇಡನೊಬ್ಬ ಕೃಷ್ಣನನ್ನು ಕೊಂದು ಹಾಕುತ್ತಾನೆ.

ಧರ್ಮ ಉಳಿಸುವುದಕ್ಕಾಗಿ ನಡೆಸುತ್ತಿದ್ದ ಹೋರಾಟದಲ್ಲಿ ಅವನು ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಸ್ವಾಮಿ ನಿಷ್ಠನಾಗಿದ್ದ ಕರ್ಣನ ಸಾವು ಸಂಸ್ಥಾನ ಕಟ್ಟುವ ನಿಟ್ಟಿನಲ್ಲಿ ಅನಿವಾರ್ಯವಾಗಿತ್ತು. ಯಾಕೆಂದರೆ ಕರ್ಣನ ಸ್ವಾಮಿ ನಿಷ್ಠೆ, ಭಕ್ತಿ ಅಪಾತ್ರವಾಗಿದ್ದವು. ಕೌರವರ ಪಕ್ಷ ಸೇರಿ ಯುದ್ಧ ಮಾಡ ಹೊರಟಿದ್ದ ಅಣ್ಣ ಬಲರಾಮನನ್ನು ಉಪಾಯದಿಂದ ಭೂಪ್ರದಕ್ಷಿಣೆಗಾಗಿ ಕಳುಹಿಸುತ್ತಾನೆ. ಯೋಗನಿದ್ರೆಯಲ್ಲಿದ್ದಾಗ ದ್ರೋಣನನ್ನು ತೊಡೆದು ಹಾಕುತ್ತಾನೆ. ಇಂತಹ ಅನೇಕ ತಂತ್ರಗಳು ಮಹಾಭಾರತದಲ್ಲಿ ವಿವಾದಕ್ಕೆ, ಚರ್ಚೆಗೆ ತುತ್ತು ಕೊಟ್ಟಿವೆ. ಮಹಾಭಾರತದಲ್ಲಿ ಪಾಂಡವರು ಅನುಸರಿಸುವ ಎಲ್ಲ ಯುದ್ಧ ಕೌಶಲ್ಯ, ಯುಕ್ತಿಗಳ ಹಿಂದೆ ಕೃಷ್ಣ ಇ-ದ್ದಾನೆ. ಇ-ದ-ರಿಂ-ದಾ-ಗಿ-ಯೇ ಐದು ಮಂದಿಯ ನೇತೃತ್ವದ ಹನ್ನೊಂದು ಅಕ್ಷೋಹಿಣಿ ಸೈನ್ಯ, ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು- ಸೈನ್ಯದೊಡೆಯನನ್ನು ಚಚ್ಚಿ ಹಾಕುತ್ತದೆ.

ನೂರ ಒಂದು ಮಂದಿ ಕೌರವರು, ಅವರ ಆಸ್ಥಾನದಲ್ಲಿದ್ದ ಅತಿರಥ ಮಹಾರಥರು, ಭೂಮಂಡಲ ಗೆದ್ದು ಬರಬಲ್ಲ ಬಲಶಾಲಿ ಪಾಂಡವರು ....ಹೀಗೆ ರಾಜ್ಯವಾಳುವ ಹಕ್ಕು ಹೊತ್ತಿದ್ದ ಎಲ್ಲ ಕ್ಷತ್ರಿಯರು ಗೊಲ್ಲನೊಬ್ಬನ ಮುಂದೆ ತೂ-ಕ ಕಳೆ-ದು-ಕೊ-ಳ್ಳುತ್ತಾರೆ. ಸೂರ್ಯವಂಶದ ಪಾಂಡವರ ಶಕ್ತಿಯ ಜೀನು ಹಿಡಿದುಕೊಂಡ ಕೃಷ್ಣ , ಕೆಟ್ಟು ಹೋದ ರಾಜ್ಯವನ್ನು ಬೆಳಕಿನೆಡೆಗೆ ನಡೆಸುತ್ತಾನೆ. ಅಥವಾ ದುರಾಡಳಿತದಿಂದ ಕುಸಿಯುತ್ತಿದ್ದ ರಾಜ್ಯದಲ್ಲಿ ಐದು ಕಂಬಗಳನ್ನು ನೆಟ್ಟು ಎಲೆಮರೆಯಲ್ಲಿರುವ ಸುಧಾರಣೆಯ ಹರಿಕಾರನೆನಿಸಿಕೊಳ್ಳುತ್ತಾನೆ. ಕರ್ತವ್ಯ ಮರೆತು ರಾಜ್ಯದಾಸೆಯಿಂದಾಗಿ ಕುರುಡನಾಗಿರುವ ದುರ್ಯೋಧನನಿಗೂ ಕೃಷ್ಣ ಕಂಸನ ನ್ಯಾಯವನ್ನೇ ಸಲ್ಲಿಸುತ್ತಾನೆ.

ಇಷ್ಟೆಲ್ಲಾ ತಂತ್ರಗಾರಿಕೆಗಳ ರೂವಾರಿ ಕೃಷ್ಣ ನಮ್ಮ ರಾಜಕಾರಣಿಗಳಂತೆ ಎಂದೂ ಕುರ್ಚಿಗೆ ಆಸೆ ಪಡಲಿಲ್ಲ. ಸೇವೆ ಸಲ್ಲಿಸಲಿಕ್ಕೆ ಅಧಿಕಾರ ಅಗತ್ಯವೆಂದು ಅವನಿಗೆ ಎಂದೂ ಅನ್ನಿಸಲಿಲ್ಲ . ಸಿಂಹಾಸನದಿಂದ ದೂರವಿದ್ದುಕೊಂಡೇ ಜನ ಮನದ ಸಿಂಹಾಸನದಲ್ಲಿ ಪರಮಾತ್ಮನಾದ. ಅವನ ಸುದಾಮ ಪ್ರೀತಿ, ರಾಧಾ ಪ್ರೇಮ, ಅರ್ಜುನ ಸಖ್ಯ, ದ್ರೌಪ-ದಿ ಜೊತೆಯ ಭ್ರಾತೃತ್ವ.. ಕೃಷ್ಣನೊಬ್ಬ ಬಿಟ್ಟರೆ ಕೃಷ್ಣ ನಿಗೊಂದು ಹೋಲಿಕೆಯಿಲ್ಲ.

ಇಷ್ಟಾದರೂ, ರಾಮ- ಕೃಷ್ಣರನ್ನು ಸದಾ ಒಟ್ಟಿಗೇ ನೋಡುವ ನಾವು ಹೆಚ್ಚು ಭಕ್ತಿಯಿಂದ ಪೂಜಿಸುವುದು ರಾಮನನ್ನೇ. ಎದೆಯ ಮೆಚ್ಚು ಮಾತ್ರ ಕೃಷ್ಣನಿಗೆ. ಏಕೆಂದರೆ ರಾಮ ಆದರ್ಶ, ಕೃಷ್ಣ ವಾಸ್ತವ.

ಕಲಿಯುಗಕ್ಕೆ ದ್ವಾಪರದ ತಾಲೀಮು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more