ಕೃಷ್ಣ : ಎಚ್ಚರಕಾರಿ ಇವನು ದಶಾವತಾರಿ...
ಶ್ರಾವಣ ಬಹುಳ ಅಷ್ಟಮಿ ಶ್ರೀಕೃಷ್ಣ ಹುಟ್ಟಿದ ದಿನ. ಅಂದು ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಎಂಬ ಹೆಸರಿನಲ್ಲಿ ದ್ವಾಪರದ ಶ್ರೀಕೃಷ್ಣನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಹೀಗಾಗೇ ಈ ಹಬ್ಬಕ್ಕೆ ಕೃಷ್ಣ ಜಯಂತಿ ಎಂಬ ಹೆಸರೂ ಇದೆ.
ಚಾಂದ್ರಮಾನ ತಿಥಿಯ ರೀತ್ಯ ಶ್ರೀಕೃಷ್ಣ ಹುಟ್ಟಿದ ಅಷ್ಟಮಿಯ ದಿನ ಜನಾಷ್ಟಮಿಯ ಆಚರಣೆ ರೂಢಿಗೆ ಬಂದಿದೆ. ಆದರೆ, ಸೌರಮಾನ ಪಂಚಾಂಗವನ್ನು ಅನುಸರಿಸುವವರು, ಶ್ರೀಕೃಷ್ಣನ ಜನ್ಮ ನಕ್ಷತ್ರವಾದ ರೋಹಿಣಿ ನಕ್ಷತ್ರ ಇರುವ ದಿನ ಶ್ರೀ ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ.
ಆ ನಕ್ಷತ್ರದ ವ್ಯಾಪ್ತಿಯನ್ನಾಧರಿಸಿ ಸಂಪ್ರದಾಯಗಳೂ ಬದಲಾಗುತ್ತವೆ. ಜನ್ಮಾಷ್ಟಮಿ ಹಾಗೂ ಜನ್ಮ ಜಯಂತಿಯ ಎರಡೂ ಆಚರಣೆ - ವ್ರತಗಳಲ್ಲಿ ಉಪವಾಸ ಅತಿ ಪ್ರಮುಖವಾಗಿದೆ. ಬೆಳಗ್ಗಿನಿಂದ ಉಪವಾಸ ಇದ್ದು, ವ್ರತದ ಕೊನೆಯಲ್ಲಿ ಅರ್ಘ್ಯ ನೀಡಿ, ಫಲಹಾರ ಸೇವಿಸುವುದು ಇಲ್ಲವೇ ನಿಟ್ಟುಪವಾಸವಿದ್ದು, ಮಾರನೆ ದಿನ ಪಾರಣೆ ಮಾಡುವ ಪದ್ಧತಿ ರೂಢಿಯಲ್ಲಿದೆ.
ಕೆಲವರು, ಶ್ರೀಕೃಷ್ಣನಿಗೆ ಇಷ್ಟವಾದ ಬೆಣ್ಣೆಯಿಂದ ತಯಾರಿಸಿದ ತುಪ್ಪದಲ್ಲಿ ಕರಿದ ಚಕ್ಕುಲಿ, ತೇಂಗೊಳಲು, ಕೋಡುಬಳೆ ಮುಂತಾದುವನ್ನು ನೇವೇಧ್ಯ ಮಾಡಿ ಸೇವಿಸುತ್ತಾರೆ. ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯಲ್ಲಿ ಮಾಡಿದ ಗೊಜ್ಜವಲಕ್ಕಿಯನ್ನು ಫಲಹಾರ ರೂಪದಲ್ಲಿಯೂ ಕೆಲವರು ಸೇವಿಸುತ್ತಾರೆ.
ಸೌರಮಾನ ಪದ್ಧತಿಯ ಕೆಲವರು ಹಾಗೂ ಉತ್ತರ ಭಾರತದವರು, ಶ್ರೀಕೃಷ್ಣ ಹುಟ್ಟಿದ್ದು ಚಂದ್ರೋದಯಾನಂತರವಾದ್ದರಿಂದ. ಚಂದ್ರೋದಯ ಕಾಲದಲ್ಲಿ ಯಾವ ದಿನ ಅಷ್ಟಮಿ ತಿಥಿ ಇರುತ್ತದೋ ಆ ದಿನ ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ. ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನ ಪೂಜಿಸಿ, ಅರ್ಘ್ಯ ನೀಡುತ್ತಾರೆ.
ದಶಾವತಾರದ ಬಗ್ಗೆ :
ಸೃಷ್ಟಿ - ಸ್ಥಿತಿ - ಲಯ ಕರ್ತರಾದ ತ್ರಿಮೂರ್ತಿಗಳಲ್ಲಿ , ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕತ್ವದ ಹೊಣೆ ಹೊತ್ತವ. ಇನ್ನು ಶಿವ ಲಯ ಕರ್ತ ಎನ್ನುತ್ತವೆ ಪುರಾಣಗಳು.
ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿರುವಂತೆ ದುಷ್ಟ ಶಿಕ್ಷಣೆ ಹಾಗೂ ಶಿಷ್ಠ ರಕ್ಷಣೆಗಾಗಿ ಮತ್ತೆ ಮತ್ತೆ ಹುಟ್ಟುತ್ತಾನೆ .. ಸಂಭವಾಮಿ ಯುಗೇ ಯುಗೇ.. ಹೀಗಾಗೆ ಇಡೀ ಬ್ರಹ್ಮಾಂಡವನ್ನೇ ಆವರಿಸಿದ ವಿಷ್ಣುವಿನ 10 ಅವತಾರಗಳ ಕಥೆ ಇದೆ.
ಶಾಪಗ್ರಸ್ಥರಾದ ವೈಕುಂಠದ ದ್ವಾರಪಾಲಕರಾದ ಜಯ- ವಿಜಯರು, ದಶಾವತಾರಕ್ಕೆ ಪ್ರಮುಖ ಕಾರಣರಾಗುತ್ತಾರೆ ಎಂಬ ಉಲ್ಲೇಖವೂ ಇದೆ. ಶ್ರೀಕೃಷ್ಣ ಜನಾಷ್ಟಮಿಯ ಸಂದರ್ಭದಲ್ಲಿ ನಾವೂ ದಶಾವತಾರ ಸ್ಮರಿಸೋಣ.
ಮತ್ಸ್ಯಾವತಾರ : ಪ್ರಳಯ ಕಾಲದಲ್ಲಿ ಮುಂದಿನ ಯುಗಕ್ಕೆ ಪರಬ್ರಹ್ಮ ಸೃಷ್ಟಿಯಾದ ಅಪೌರುಷೇಯಗಳನ್ನು ಅರ್ಥಾತ್ ವೇದಗಳನ್ನು ಉಳಿಸಲು ವಿಷ್ಣು ಎತ್ತಿದ ಅವರತಾರವೇ ಮತ್ಸ್ಯಾವತಾರ.
ಕೂರ್ಮಾವತಾರ : ಸಮುದ್ರ ಮಂಥನ ಕಾಲದಲ್ಲಿ ಕಡಗೋಲಾಗಿದ್ದ ವಿಂಧ್ಯ ಪರ್ವತ ಮುಳುಗುತ್ತಿದ್ದಾಗ, ಅದು ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಅವತಾರವಿದು.
ವರಹಾವತಾರ : ಹಿರಣ್ಯ ಕಶಿಪುವಿನ ಸೋದರ ಹಿರಣ್ಯಾಕ್ಷನು ಭೂಮಿಯನ್ನೇ ಹೊತ್ತು ಸಮುದ್ರದಲ್ಲಿ ಹೋಗಿ ಅಡಗಿ ಕುಳಿತಾಗ, ಭೂ ದೇವಿಯ ರಕ್ಷಣೆಗೆ ಹಾಗೂ ಹಿರಣ್ಯಾಕ್ಷನ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರವೇ ವರಹಾವತಾರ.
ನರಸಿಂಹಾವತಾರ : ಹಿರಣ್ಯಾಕ್ಷನ ಸಾವಿನಿಂದ ರೊಚ್ಚಿಗೆದ್ದ ಹಿರಣ್ಯ ಕಶಿಪು ಲೋಕ ಕಂಟಕನಾದಾಗ, ಆತನ ಪುತ್ರ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಕಂಬದಿಂದೊಡೆದು ಬಂದ ವಿಷ್ಣು ಎತ್ತಿದ ಅವತಾರ ನರಸಿಂಹಾವತಾರ.
ವಾಮನಾವತಾರ : ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯು ತ್ರಿಲೋಕವನ್ನೂ ಜಯಿಸಿ, ಇಂದ್ರನನ್ನೇ ಪದಚ್ಯುತ ಗೊಳಿಸುವ ಯತ್ನದಲ್ಲಿದ್ದಾಗ, ಲೋಕ ಕಲ್ಯಾಣಕ್ಕಾಗಿ ಬಲಿಯಿಂದಲೇ ಮೂರಡಿ ಜಾಗವನ್ನು ದಾನವಾಗಿ ಪಡೆದು, ಎರಡಡಿಯಲ್ಲಿ ಆಕಾಶ ಭೂಮಿಗಳ ಅಳೆದು, ಮತ್ತೊಂದು ಅಡಿಯಲ್ಲಿ ಬಲಿಯನ್ನು ಪಾತಾಳಕ್ಕೆ ತುಳಿಯಲು ವಿಷ್ಣು ಎತ್ತಿದ್ದು ವಾಮನಾವತಾರ.
ಪರಶುರಾಮಾವತಾರ : ಕಾರ್ತವೀರ್ಯ ಎಂಬ ಉತ್ತರಾಧೀಶನು, ಋಷಿ ಮುನಿಗಳನ್ನು ಪೀಡಿಸುತ್ತಾ, ದುರಹಂಕಾರದಿಂದ ಮೆರೆಯುತ್ತಿದ್ದಾಗ ಆತನ ಸಂಹಾರಕ್ಕಾಗಿ ಜಮದಗ್ನಿ ಮತ್ತು ರೇಣುಕೆಯರ ಕುವರನಾಗಿ ಹುಟ್ಟಿದ ಪರಶುರಾಮ, ಪ್ರಜಾ ಪೀಡಕರಾದ ಕ್ಷತ್ರಿಯರನ್ನು ಶಿಕ್ಷಿಸಲು ಎತ್ತಿದ ಅವತಾರ.
ಶ್ರೀರಾಮಾವತಾರ : ಶ್ರೀರಾಮ ಮರ್ಯಾದಾ ಪುರುಷೋತ್ತಮ, ಸೀತಾಪಹರಣ ಮಾಡಿ, ಲೋಕ ಕಂಟಕನಾಗಿದ್ದ ರಾವಣನ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ಶ್ರೀರಾಮಾವತಾರ.
ಕೃಷ್ಣಾವತಾರ : ಸಾಮಾಜಿಕ ಪರಿವರ್ತನೆಯಿಂದ ಜನರಲ್ಲಿ ಭಕ್ತಿ ಕಡಿಮೆಯಾಗಿ ಕುಟಿಲತೆ ಹೆಚ್ಚುತ್ತಿದ್ದ ಕಾಲದಲ್ಲಿ, ತಂತ್ರಗಾರಿಕೆ, ರಾಜಕೀಯ ಚಾಣಾಕ್ಷತನದಿಂದ ಮನುಷ್ಯರೊಳಗಿನ ಮನುಷ್ಯನಾಗಿ ನೀತಿ ಪಾಠ ಹೇಳಿ ಕಂಸಾದಿ ರಕ್ಕಸರನ್ನು ಹಾಗೂ ಧುರ್ಯೋಧನಾದಿ ದುಷ್ಟರನ್ನು ಶಿಕ್ಷಿಸಲು ವಿಷ್ಣು ಎತ್ತಿದ ಅವತಾರ ಕೃಷ್ಣಾವತಾರ.
ಬೌದ್ಧಾವತಾರ : ಧಾರ್ಮಿಕ ನಂಬಿಕೆಗಳಿಗೆ, ಧರ್ಮಾರ್ಥಕ್ಕೆ ಹೊಸ ಆಯಾಮ ನೀಡಿ, ಜನರಿಗೆ ಬದುಕಿನ ಸೂಕ್ಷ್ಮಾತಿ ಸೂಕ್ಷ್ಮ ಸತ್ಯಗಳನ್ನು ತಿಳಿಯಪಡಿಸಿ, ನಿಜ ಮಾರ್ಗದಲ್ಲಿ ಸಾಗುವಂತೆ ಮಾಡಲು ವಿಷ್ಣು ಎತ್ತಿದ ಅವತಾರ ಬೌದ್ಧಾವತಾರ.
ಕಲ್ಕಿ ಅವತಾರ : ಕಲ್ಕಿ ಅವತಾರ ವಿಷ್ಣುವಿನ ದಶಾವತಾರಗಳಲ್ಲಿ ಕೊನೆಯದು. ಈಗ ನಡೆಯುತ್ತಿರುವುದು ಕಲಿಗಾಲ. ಆದರೆ, ಪಂಡಿತರ ರೀತ್ಯ ಇನ್ನೂ ಕಲ್ಕಿಯ ಅವತಾರವೇ ಆಗಿಲ್ಲ. ಭೂಮಿಯಲ್ಲಿ ಪಾಪದ ಕೊಡ ತುಂಬಿದಾಗ, ದುಷ್ಟ ರಕ್ಷಣೆಗೆ ಬಿಳಿ ಕುದುರೆಯೇರಿ, ಹಿರಿದ ಖಡ್ಗ ಹಿಡಿದು ಕಲ್ಕಿ ಅವತರಿಸುತ್ತಾನೆ.












Click it and Unblock the Notifications