ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಕಂಡ ಶ್ರಾವಣ

By Staff
|
Google Oneindia Kannada News

ಬೇಂದ್ರೆಯವರಷ್ಟು ಶ್ರಾವಣವನ್ನು ಕಂಡರಸಿದ ಕವಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ . ಆ ಕಾರಣದಿಂದಲೇ, ಅಡಿಗರು ಬೇಂದ್ರೆಯನ್ನು ಶ್ರಾವಣ ಪ್ರತಿಭೆ ಎಂದದ್ದು. ಬೇಂದ್ರೆಯ ಪಾಲಿಗೆ ಶ್ರಾವಣ ಬರಿ ಮಾಸವಲ್ಲ . ಅದೊಂದು ಋತುವಿಲಾಸ. ಹುಟ್ಟಿನ ಗುಟ್ಟು ಕಂಡುಕೊಂಡ ಅನುಭವ. ಸೋಜಿಗ ಮತ್ತು ಸೌಂದರ್ಯ.

ಶ್ರಾವಣ ಬೇಂದ್ರೆಯವರಿಗೆ ಮೆಚ್ಚಾದ ಬಗೆಗೆ ಅವರ ಮಾತುಗಳಲ್ಲೇ ಹೇಳುವುದಾದರೆ, 'ನನ್ನ ಬಾಳುವೆಯದೊಂದು ಶ್ರಾವಣದ ಹೆಗಲು. ಶ್ರಾವಣ ನನಗೆ ಹೊಸತನವನ್ನು ತರುತ್ತದೆ". ಈ ಹೊಸತನ- ಶ್ರಾವಣದ ವೈಭವ, ಶ್ರಾವಣ, ಮತ್ತೆ ಶ್ರಾವಣ, ಮತ್ತೆ ಶ್ರಾವಣಾ ಬಂದ, ಶ್ರಾವಣದ ಹಗಲು, ನಾದಲೀಲೆಯ ಶ್ರಾವಣ, ಹಾಡುಪಾಡಿನ ಶ್ರಾವಣ, ಬಂದಿಕಾರ ಶ್ರಾವಣ, ಪ್ರತಿವರ್ಷದಂತೆ ಬಂತು ಶ್ರಾವಣ ಕವಿತೆಗಳಲ್ಲೂ ಇದೆ.

ನವನವೋನ್ಮೇಷಶಾಲಿನಿಯಾದ ಶ್ರಾವಣ ಬೇಂದ್ರೆಯವರನ್ನು ಸೆಳೆದದ್ದರಲ್ಲಿ ಅಚ್ಚರಿಯೇನೂ ಇಲ್ಲ . ಕವನವೊಂದರಲ್ಲಿ , ಪ್ರಕೃತಿ ಶ್ರಾವಣದಲ್ಲಿ ಪಡೆದುಕೊಳ್ಳುವ ಹೊಸ ಹುಟ್ಟಿಗೆ ಕವಿ ವಿಸ್ಮಿತರಾಗುವ ಬಗೆಯಿದು,

ಹುಲ್ಲು ಕಸವು ಕೂಡ ಬಣ್ಣ ಒಡೆದು ಹೂವು ನಿಂತಿದೆ
ನೆಲದ ಹಸಿರ ರತ್ನರಾಶಿ ಬಣ್ಣದ ಜಾತ್ರೆಗಾಗಿ ತನ್ನ ಪಯಣ ಬೆಳೆಸಿದೆ
ಮಣ್ಣು ಹುಡಿಯ ಕಣಕಣವೂ ಕಣ್ಣು ಪಡೆದ ಹಾಗಿದೆ

ಅರವಿಂದರ ಮಾಸ ಮತ್ತು ಬೇಂದ್ರೆ : ಶ್ರಾವಣದಷ್ಟೇ ಅಥವಾ ಅದಕ್ಕೂ ಮಿಗಿಲಾಗಿ ವಸಂತವೂ ಹೊಸತನಕ್ಕೆ, ಹೊಸ ಹುಟ್ಟಿಗೆ ಹೆಸರಾಗಿದೆ. ಇದರಿಂದಾಗಿ ಕೇವಲ ಶ್ರಾವಣದ ಬೆಡಗು, ಅದು ಪ್ರಕೃತಿಯ ಹೊಸಹುಟ್ಟಿಗೆ ಕಾರಣವಾಗುವ ಬೆರಗು ಬೇಂದ್ರೆಯವರನ್ನು ಮೋಡಿ ಮಾಡಿತೆಂದು ಹೇಳುವುದು ಕಷ್ಟ. ಇದಕ್ಕೂ ಹೆಚ್ಚಾಗಿ ಮಹರ್ಷಿ ಅರವಿಂದರ ಮಾಸ - ಶ್ರಾವಣ ಎನ್ನುವ ವಿಷಯ ಬೇಂದ್ರೆಯವರ ಶ್ರಾವಣ ಪ್ರೀತಿಗೆ ಕಾರಣವಾಗಿದೆ.

ಅರವಿಂದರ ವ್ಯಕ್ತಿತ್ವ ಹಾಗೂ ಆದರ್ಶಗಳಿಗೆ ಕವಿ ಮಾರುಹೋದ ಪುರಾವೆಗಳು ಅವರ ಕಾವ್ಯ ಯಾತ್ರೆಯುದ್ದ ಕ್ಕೂ ಇವೆ. ಅರವಿಂದರು ಹುಟ್ಟಿದ್ದು ಶ್ರಾವಣದಲ್ಲಿ , ಶ್ರವಣ ನಕ್ಷತ್ರದಲ್ಲಿ . ಅದರಿಂದಲೇ ಶ್ರಾವಣ ಕುರಿತು ಬರೆಯುವಾಗ ಬೇಂದ್ರೆ ಬೆರಗಿನೆಡೆಯಿಂದ ಅಧ್ಯಾತ್ಮದತ್ತ ಸರಿಯುತ್ತಾರೆ. ಶಿವನ ಮನಕ ಶ್ರಾವಣದ ಹಾಡು ಮೆಚ್ಚಾಗುತ್ತದೆ ಎನ್ನುವ ಕವಿಯೇ- ಹೊರಟದ ದಾಳಿ, ಶಿವನ ಗಣಕ, ಹುಟ್ಟ್ಯದ ಜೀವ ಹೆಣಕ ಎನ್ನುತ್ತಾರೆ. ಗುರುಗಳ ಮಾಸವ ಎಷ್ಟು ಬಣ್ಣಿಸಿದರೂ ಕವಿ ಹೃದಯ ತಣಿಯದು. ಶ್ರಾವಣಕ ತಪ್ಪಿತ ಗ್ಯಾನಾ, ಎಲ್ಲಿದೋ ಧ್ಯಾನಾ, ಹುಚ್ಚ ಆಗ್ಯಾನಾ, ಮದೋನ್ಮತ್ತಾ ಅಂಬಿಕಾತನಯದತ್ತಾ - ಶ್ರಾವಣವಶನಾದ ಕವಿಯ ಅವಸ್ಥೆಯಿದು.

ಬೇಂದ್ರೆಯವರ ಪ್ರತಿಭೆ ಶ್ರಾವಣ ವಶವಾದುದಕ್ಕೆ ಮತ್ತೊಂದು ಕಾರಣ, ದೇಶ ಸ್ವಾತಂತ್ರ್ಯ ಗಳಿಸಿದ ಮಾಸವೂ ಶ್ರಾವಣ ಎಂಬುದು. ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಕವಿ ಹೃದಯಕ್ಕೆ ಸ್ವಾತಂತ್ರ್ಯ ಬಂದ ಘಳಿಗೆಯ ಶ್ರಾವಣ ಮೆಚ್ಚಾದುದು ಸಹಜವೇ. ಆ ಮೆಚ್ಚು ಅವರ ಶ್ರಾವಣ ಕವಿತೆಗಳ ಆಶಯಗಳಲ್ಲಿ ಒಂದಾಗಿದೆ. ಜೊತೆಯಲ್ಲಿಯೇ ಸ್ವಾತಂತ್ರ್ಯದ ಬಗೆಗಿನ ಬೇಂದ್ರೆ ಕಲ್ಪನೆಗಳು ಕಾರ್ಯರೂಪಕ್ಕೆ ಬರದಾಗಿನ ನಿರಾಶೆ ಕವಿತೆಯಲ್ಲಿ ವ್ಯಂಗ್ಯವಾಗಿ ಧ್ವನಿಸುತ್ತದೆ.

ಸ್ವಾತಂತ್ರ್ಯವು ಇನ್ನೂ ಇದೆ ಇನ್ನೂ ಇದೆ ಸಾಧನಾ
ಮುಕ್ತರಾದ ಪ್ರಜೆಗಳಿಗೂ ಧರ್ಮದ ಆರಾಧನಾ

ದೇಶ ಗಳಿಸಿದ ರಾಜಕೀಯ ಸ್ವಾತಂತ್ರ್ಯಕ್ಕೂ ಬೇಂದ್ರೆ ಕಾಣುವ ಶೀಲ ರಕ್ಷಣೆಯನ್ನು ಕಟ್ಟಿಕೊಡುವ ಸ್ವಾಂತಂತ್ರ್ಯ ದ ಪರಿಕಲ್ಪನೆಗೂ ಅಜಗಜಾಂತರ. ಶ್ರಾವಣದ ಬೆಡಗಿಗೆ ಬೆರಗುಗೊಳ್ಳುವ ಕವಿ ಬದುಕಿನತ್ತ ಯಾವ ಕ್ಷಣದಲ್ಲೂ ವಿಮುಖರಾಗರು. ಆದ್ದರಿಂದಲೇ ಕವಿಗೆ,

ಭಾರತ ಸ್ವಾತಂತ್ರ್ಯದ ವರ್ಧಂತೀ
ಶ್ರಾವಣ ಮಾಸದ ಮಳೆ- ಬಿಸಿಲು
ಜೀವನ ಚಕ್ರವ ತಿರುಗಿಸುತ್ತಲಿದೆ
ಜೀವನ ತತ್ತ್ವವ ಬಿಂಬಿಸಲು

ಎಂದು ಹಾಡಲು ಸಾಧ್ಯವಾಯಿತು. ಕವಿಗೆ ಪೂರ್ವಜರ ನೆನಪು- ಆನಂದಗಳನ್ನು ಕಟ್ಟಿಕೊಡುವ ಶ್ರಾವಣ, ಬದುಕಿನ ಮಂಗಳಕ್ಕೆ ಕಾರಣವಾಗುವ ಶ್ರಾವಣ, ಚಿಂತೆ- ದುಃಖಗಳನ್ನು ಸ್ಮರಿಸಿಕೊಳ್ಳುವ ವೇದಿಕೆಯೂ ಆಗುವುದನ್ನು ನಾವು ಗಮನಿಸಬೇಕು.

ಶ್ರಾವಣ ಮಾಸದಲ್ಲೇ ಶ್ರೀಕೃಷ್ಣ ಜನಿಸಿದ್ದೆನ್ನುವುದು ಕೂಡ ಬೇಂದ್ರೆಯವರ ಶ್ರಾವಣ ಪ್ರೀತಿಯನ್ನು ಅರ್ಥೈಸಲು ಸಹಾಯಕವಾಗುತ್ತದೆ. ಶ್ರೀಕೃಷ್ಣ ಬೇಂದ್ರೆಯವರ ಇಷ್ಟ ದೈವ.

ಮಣ್ಣು - ಹೂ- ನೀರು : ಬೇಂದ್ರೆಯವರ ಶ್ರಾವಣ ಪ್ರತಿಭೆಯನ್ನು ಕುರಿತು ಬರೆಯುವಾಗ ಅವರ ಪ್ರಕೃತಿ ಗೀತೆಗಳನ್ನು ಪಕ್ಕಕ್ಕಿರುಸುವಂತಿಲ್ಲ . ಇಷ್ಟಕ್ಕೂ ಪ್ರಕೃತಿ ಗೀತೆಗಳ ಒಂದು ಕವಲೇ ಶ್ರಾವಣ ಗೀತೆಗಳು. ಬೇಂದ್ರೆಯವರ ಪ್ರಕೃತಿ ಗೀತೆಗಳಲ್ಲಿ ಶೋಧನೆ ತತ್ವವನ್ನು ವಿಶೇಷವಾಗಿ ಗುರ್ತಿಸಬಹುದು. ನಿಸರ್ಗದಲ್ಲೇ ಒಂದಾಗುವ ಅವಿನಾಭಾವತೆ ಕವಿಯದು. ಕುವೆಂಪು ಅವರ ನಿಸರ್ಗಾರಾಧಕ ನೆಲೆಯ ಕವಿತೆಗಳನ್ನು ಜೊತೆಗಿಟ್ಟು ಕೊಂಡರೆ ಬೇಂದ್ರೆಯವರ ಶೋಧನೆ ತತ್ವ ಅರ್ಥವಾಗುವುದು ಸುಲಭ.

ಬೇಂದ್ರೆಯವರ ಕವಿತೆಗಳಲ್ಲಿ ಪ್ರಕೃತಿಯನ್ನು ಕುರಿತು ವಿಮರ್ಶಕ ಜಿ.ಎಸ್‌. ಆಮೂರ ಅರ್ಥೈಸುವುದು ಹೀಗೆ- ಭೌತಿಕವಾದ ಅವರ ಕಲ್ಪನೆ ನೀರು, ನೆಲಗಳಲ್ಲಿ ಸಾಕಾರಗೊಂಡಿದೆ. ವರ್ಷ ಋತುವಿನಲ್ಲಿ ಬರುವ ಶ್ರಾವಣ, ನೀರಿನ ಪ್ರತೀಕವಾದ ಮಣ್ಣಿನಲ್ಲಿ ಮೂಡಿಬರುವ ಹೂ ನೆಲದ ಪ್ರತೀಕವಾಗುತ್ತದೆ. ಈ ಪ್ರತೀಕಗಳ ಅರ್ಥವಂತಿಕೆ ವಿಸ್ತಾರವಾಗುತ್ತಾ ಹೋದರೂ, ಅವು ತಮ್ಮ ಪ್ರಾಥಮಿಕ ಅರ್ಥವನ್ನು ಕಳಕೊಳ್ಳುವುದಿಲ್ಲ . ನೀರು- ನೆಲ ಒಂದಕ್ಕೊಂದು ಹೊಂದಿಕೊಂಡ ಪ್ರತೀಕಗಳು. ಇವು ಕೂಡಿದಾಗ ಸೃಷ್ಟಿಕ್ರಿಯೆ ಪ್ರಾರಂಭ. ನಿಜ, ಆಮೂರರು ಹೇಳುವ ಈ ಸೃಷ್ಟಿಕ್ರಿಯೆಯೇ ಶ್ರಾವಣ.

ಕನ್ನಡ ಕಾವ್ಯದಲ್ಲಿ ಬೇಂದ್ರೆಯವರ ಶ್ರಾವಣ ಗೀತೆಗಳಿಗೆ ವಿಶೇಷವಾದ ಸ್ಥಾನವಿದೆ, ಮಾಸಗಳಲ್ಲಿ ಶ್ರಾವಣಕ್ಕಿರುವಂತೆ. ಒಟ್ಟಿನಲ್ಲಿ ಬೇಂದ್ರೆ ಇಲ್ಲದೆ- ಕವಿತೆಗಳಿಲ್ಲದೆ ಶ್ರಾವಣ ಪೂರ್ತಿಯಾಗದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X