ಇದು ಬೆಚ್ಚಗಿನ ಹರಕೆಯ ಬಂಧನ
*ಲಕ್ಷ್ಮಿ, ಮಂಗಳೂರು
ರಕ್ಷಾಬಂಧನ ಹಬ್ಬಕ್ಕೆ ಇನ್ನೆರಡು ದಿನ ಇದೆಯೆನ್ನುವಾಗ ಫೋನ್ ಬಂತು. ಆ ಕಡೆಯಿಂದ ಕಿರಿಕ್ ಪಾರ್ಟಿ ಹುಡುಗ ಮಾತಾಡುತ್ತಿದ್ದ. ಎಷ್ಟು ಸಾರಿ ಹೇಳುವುದು ಈ ಹುಡುಗನಿಗೆ ಮದುವೆಯಾಗುವುದಿಲ್ಲ ಅಂತ . ಮತ್ತೆ ಮತ್ತೆ ಪೀಡಿಸುತ್ತಾನೆ. ಯಾಕೆ ಮದುವೆಯಾಗುವುದಿಲ್ಲ...ಎಂಬ ಅವನ ಪ್ರಶ್ನೆಗೆ ಯಾವ ಉತ್ತರವೂ ಸಮಾಧಾನ ಕೊಡುವುದಿಲ್ಲ. ನನ್ನಲ್ಲೇನು ಕೊರತೆ ಎನ್ನುವುದು ಅವನ ಪ್ರಶ್ನೆ. 'ನೋಡಿ ನಾಡಿದ್ದು ರಾಕಿ ಡೇ. ನೀವು ನಂಗೆ ರಾಕಿ ಕಟ್ಟಿಬಿಡಿ, ನಾನು ನಿಮ್ಮ ತಂಟೆಗೆ ಬರುವುದಿಲ್ಲ..."
ಇದಕ್ಕೆ ಏನು ಹೇಳುವುದು ?
ರಾಕಿ ಕಟ್ಟಿದರೆ ಅವನು ಅಣ್ಣನಾಗಿ ಬಿಡುತ್ತಾನಾ ? ಅಥವಾ ರಾಕಿ ದಾರ ಕೈ ಸುತ್ತಿಕೊಂಡರೆ ಅವನ ಮನಸ್ಸಿನಲ್ಲಿರುವ ಮದುವೆಯ ಭೂತ ಹಾರಿ ಹೋಗುತ್ತದಾ ? ಅವನು ಅಣ್ಣನಾಗಬಲ್ಲ ಎಂಬ ಭಾವನೆ ಹುಡುಗಿಯ ಬಳಿ ಇರಬೇಕು ತಾನೇ...ಅಣ್ಣನಾಗಲಾರ ಎಂದ ಮಾತ್ರಕ್ಕೆ ಪ್ರಿಯಕರನಾಗುತ್ತಾನೆ ಎಂದು ಅರ್ಥ ಮಾಡಿಕೊಳ್ಳುವ ಮೂರ್ಖತನಕ್ಕೆ ಏನನ್ನೋಣ ? ಅಸಲು ಈ ಭಾವನೆಗಳು ಎಲ್ಲಿ ಹುಟ್ಟಿಕೊಳ್ಳುತ್ತವೋ ಗೊತ್ತಿಲ್ಲ . ಪ್ರತಿಯಾಂದು ಕೆಲಸದ ಹಿಂದೆ ಅವು ನಿಂತಿರುತ್ತವಲ್ಲ ! ಅದು ರಾಕಿಯನ್ನೂ ಬಿಟ್ಟಿಲ್ಲ.
'ಇವನು ನನ್ನ ರಾಕಿ ಬ್ರದರ್..."
ಕಾಲೇಜುಗಳಲ್ಲಿ ಲೆಕ್ಕವಿಲ್ಲದಷ್ಟು ಡೇಗಳು ನಡೆಯುತ್ತವೆ. ರಾಕಿ ಡೇ ಅದಕ್ಕೇನೂ ಹೊರತಲ್ಲ. ಹಿಂದೂ ಜಾಗರಣ ವೇದಿಕೆಯವರು ಸಂಜೆ ಹೊತ್ತು ಊರಿನ ಮುಖ್ಯಪ್ರಾಣ ಗುಡಿಯಲ್ಲಿಯೋ, ಗಣೇಶ ಕಟ್ಟೆಯಲ್ಲೋ ಕೇಸರಿ ರಾಕಿ ರಾಶಿಯ ಪೂಜೆ ಮಾಡಿ ಎಲ್ಲರಿಗೂ ಕಟ್ಟುವುದುಂಟು. ಕಾಲೇಜಿನಲ್ಲಿಯೂ ವೇದಿಕೆ ವತಿಯಿಂದ ಸಾಮೂಹಿಕ ಕೇಸರಿ ರಾಕಿ ಬಂಧನ ಸಮಾರಂಭಗಳು ನಡೆಯುತ್ತವೆ. ವಿದ್ಯಾರ್ಥಿಗಳೇ ರಾಕಿ ಹಬ್ಬವನ್ನು ಮಾಡಿಕೊಳ್ಳುವುದುಂಟು. ಗಾಂಧಿಜಯಂತಿ, ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವಗಳು ಬಂದು ಹೋದ ಹಾಗೆ, ರಕ್ಷಾಬಂಧನವೂ ಮಳೆಯ ಗುಂಗಿನೊಂದಿಗೇ ಬಂದು ಹೋಗುತ್ತದೆ.
'ಇವನು ನನ್ನ ರಾಕಿ ಬ್ರದರ್..." ಎಂದು ಪರಿಚಯಿಸಿಕೊಳ್ಳುವ ಸಂಭ್ರಮ, ರಾಕಿ ಕಟ್ಟಿದ ತಂಗಿಗೆ ಉಡುಗೊರೆ ಕೊಡುವ ಖುಷಿ, ಶ್ರಾವಣ ಪೂರ್ಣಿಮೆಯಿಯಂದು ಹನಿಯುವ ತುಂತುರು ಮಳೆಯ ಹಾಗೆ ಎದೆಯಲ್ಲೊಂದು ತೇವ ಭಾವನೆ ಹುಟ್ಟಿಸುವ ಪುಟ್ಟ ಹಬ್ಬ.
ಆದರೆ ಈ ಎಲ್ಲ ಖುಷಿಯ ನಡುವಿನ ಮಾತು:
'ರಾಕಿ ಡೇಯಂದು ನಾನು ಕಾಲೇಜಿಗೆ ಬರಲ್ಲ... ಅವಳೇನಾದರೂ ರಾಕಿ ಕಟ್ಟಿದರೆ ನನ್ನ ಕೈಯಲ್ಲಿ ತಡಕೊಳ್ಳೋದಕ್ಕೆ ಆಗೋದಿಲ್ಲ ಕಣೋ..!"
ಸಂಬಂಧಗಳು ಹುಟ್ಟಿಕೊಳ್ಳುವುದು, ಸ್ವರೂಪ ಪಡೆಯುವುದು ನಮ್ಮ ಬುದ್ಧಿಯ ಮಿತಿಯಲ್ಲಿಯೇ ಇರುತ್ತದೆ ಎನ್ನುವುದು ಎಲ್ಲ ಕಾಲದಲ್ಲಿಯೂ ಸತ್ಯವಾಗುವುದಿಲ್ಲ. ಎಲ್ಲಿಂದಲೋ ಬಂದವನು ಅರಿವಿಗೇ ಬಾರದ ಹಾಗೆ, ಬದುಕಿಲ್ಲಿ ಭಾತೃತ್ವದ ಹಸಿ ಭಾವನೆ ಬಿತ್ತುವುದುಂಟು. ಅಂತಹ ಸಂದರ್ಭದಲ್ಲಿ ಆತನ ಪೋಷಣೆಗೆ ಅಣ್ಣನ ಅಕ್ಕರೆ, ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ ಅಂತೆಲ್ಲ ಅರ್ಥ ಕೊಡುವ ಗೋಳು ಹುಟ್ಟಿಕೊಳ್ಳುವುದಿಲ್ಲ. ಅಂತಹ ಅವ್ಯಾಜ ಸಂಬಂಧ ಅದು. ರಕ್ಷಾಬಂಧನದಂದು ರಾಕಿ ಕಟ್ಟುವುದೂ ಕೂಡ ಅಂತಹ ಸಂಬಂಧವನ್ನು under estimate ಮಾಡಿದ ಹಾಗಾದೀತು; ಯಾವುದೋ ಅನುಮಾನಕ್ಕೆ ಪರಿಹಾರ ಕಂಡುಕೊಂಡ ಹಾಗಾದೀತು !
ರಕ್ಷಾಬಂಧನದ ಹಿನ್ನೆಲೆಯ ಕಥೆಗಳನ್ನು ಮಾತಾಡಿಸಿದರೆ...
ರಕ್ಷಾಬಂಧನ ಹಬ್ಬದ ಹಿಂದೆ ಗಟ್ಟಿ ಬೆನ್ನೆಲುಬಿನಂತಹ ಒಂದೇ ಕಥೆಯಿಲ್ಲ. ಹತ್ತು ಹಲವು ದಂತ ಕಥೆಗಳು ಈ ಆಚರಣೆಯನ್ನು ಚಾಲನೆಯಲ್ಲಿಟ್ಟಿವೆ. ದೇವತೆಗಳು ಮತ್ತು ದಾನವರ ನಡುವೆ ನಡೆದ ಯುದ್ಧದಲ್ಲಿ ಇನ್ನೇನು ದಾನವರೇ ಗೆಲ್ಲುತ್ತಾರೆ ಎಂಬ ಪರಿಸ್ಥಿತಿ. ಇಂದ್ರ ತಲೆ ಮೇಲೆ ಕೈ ಹೊತ್ತು ಕುಳಿತ. ಬ್ರಹಸ್ಪತಿಯೂ ಮುಂದಿನ ದಾರಿಯೇನು ಅಂತ ಯೋಚಿಸುತ್ತಿರಬೇಕಿದ್ದರೆ, ಜಾಣೆ ಶಚೀ ದೇವಿಗೆ ದಾರಿ ಹೊಳೆಯಿತು. ಮರುದಿನ ಶ್ರಾವಣ ಪೂರ್ಣಿಮಾ. ಶಚೀ, ಗಂಡನ ಕೈಗೆ ಪೂಜಿಸಿದ ತಾಯಿತವನ್ನು ಕಟ್ಟಿ ಯುದ್ಧಕ್ಕೆ ಬೀಳ್ಕೊಟ್ಟಳು. ಇಂದ್ರ ಗೆದ್ದು ಬಂದ. 'ರಾಕಿ" ಎಂದರೆ ರಕ್ಷಣೆಯ, ಆಯುರಾರೋಗ್ಯ ಯಶಸ್ಸು ಸಿಗಲಿ ಎಂಬ ಹಾರೈಕೆಯ ಸಾಂಕೇತವಾಗಿ ಪುರಾಣದಲ್ಲಿ ಕಂಡು ಬರುತ್ತದೆ.
ನಂತರ ದೇಶಭಕ್ತ ರಜಪೂತ ಮನೆಗಳಲ್ಲಿ ರಕ್ಷಾ ಬಂಧನ ಪ್ರಾಮುಖ್ಯ ಪಡೆದಿತ್ತು. ರಾಣಿ ಕರ್ಮವತಿ ಹುಮಾಯೂನ್ ರಾಜನಿಗೆ ರಾಕಿ ಕಟ್ಟಿದ ಕತೆ, ತನ್ನ ಮಾಂಗಲ್ಯ ಉಳಿಸಿಕೊಳ್ಳಲು ಪುರೂರವನ ಹೆಂಡತಿಯು ಅಲೆಕ್ಸಾಂಡರ್‌ಗೆ ರಕ್ಷೆ ಕಟ್ಟಿದ ಉಲ್ಲೇಖ.. ಹೀಗೆ ಯುದ್ಧದ ಹಿನ್ನೆಲೆಯಾಂದಿಗೆ ಆರಂಭವಾದ ರಕ್ಷಾಬಂಧನ ಕಾಲಾಂತರದಲ್ಲಿ ಅಣ್ಣ-ತಂಗಿ ಸಂಬಂಧದತ್ತ ಕೈ ಚಾಚಿತು.
ಸಂಬಂಧ ಏನೇ ಇರಲಿ...
ಕತೆಗಳನ್ನು ಗಮನಿಸಿದಾಗ ಹೊಳೆಯುವ ವಿಷಯವೆಂದರೆ, ರಕ್ಷಾಬಂಧನಕ್ಕೆ , ಇಬ್ಬರ ನಡುವಿನ ಸಂಬಂಧ ಯಾವ ರೀತಿಯದು ಎಂಬ ಬಗ್ಗೆ ಅಂತಹ ಕಾಳಜಿ ಇಲ್ಲ. ದೂರ ಪ್ರಯಾಣ ಹೊರಡುವಾಗ ಅಮ್ಮ , ತುಂಬು ಹೃದಯದ ಹಾರೈಕೆಯಾಂದಿಗೆ- ಆಶೀರ್ವಾದದೊಂದಿಗೆ ಕೈಗಿಡುವ ಭದ್ರಕಾಳೀ ಪ್ರಸಾದದ ಹಾಗೆ, ಅಪ್ಪ ಹೇಳುವ ಜಾಗ್ರತೆಯ ಮಾತಿನ ಹಾಗೆ, ಮನೆಯವರೆಲ್ಲರ ಯಶಸ್ಸಿನ ಹಾರೈಕೆಯ ಹಾಗೆ ರಾಕಿ ಎಂದರೆ ರಕ್ಷಣೆಯ ಸಂಕೇತ. ನನ್ನ ಹಾರೈಕೆ ಎಂದೆಂದೂ ನಿನ್ನ ಕಾಯುತ್ತಿರಲಿ ಎಂಬುದರ ಗುರುತು. ಹರಕೆಯ ಬಂಧನ.
ಯುದ್ಧ ಭೂಮಿಯಲ್ಲಿ ಸಾವು- ಬದುಕಿನ ಗಡಿಯಲ್ಲಿ ನಿಂತುಕೊಂಡು ಹೋರಾಡುವ ಗಂಡನ ಕೈಗೆ ಹೆಂಡತಿ ಕಟ್ಟಿದ ರಾಕಿ, ಹಿಂದೂ -ಮುಸ್ಲಿಂ ಎಂಬ ಭೇದದ ಗಡಿಯನ್ನೂ ದಾಟಿ ಬಂದು ಮಹಾರಾಣಿ ಕರ್ಮವತಿಯ ರಾಜ್ಯವನ್ನು ರಕ್ಷಿಸಲು ಹುಮಾಯುನ್‌ನನ್ನು ಪ್ರೇರೇಪಿಸಿದ ರಕ್ಷೆ ಇವತ್ತಿನ ಯುವಜನತೆ ಅಂದುಕೊಂಡಷ್ಟು ಕ್ಷುಲ್ಲಕವಂತೂ ಅಲ್ಲವೇ ಅಲ್ಲ.
ಅದು ಹರಕೆ. ದೂರದಲ್ಲಿರುವ ಅಣ್ಣನಿಗೆ ಒಳ್ಳೆದಾಗಲಿ ಅಂತ ತಂಗಿ ನಾಗನ ಕಲ್ಲಿಗೆ ಹೂವಿಡುವುದಿಲ್ಲವೇ; ಅಂತಹುದೇ ಭದ್ರವಾದ, ಬೆಚ್ಚಗಿನ ಹರಕೆಯ ಸಂಕೇತ ರಾಕಿ, ರಕ್ಷೆ !
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications