ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ : ಭೀಮಾಶಂಕರ, ರಾಮೇಶ್ವರ ಪೌರಾಣಿಕ ಕಥೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮಹಾರಾಷ್ಟ್ರದ ಪುಣೆ ಪಟ್ಟಣಕ್ಕೆ ಹತ್ತಿರವಿರುವ ಡಾಕಿನಿ ಭೀಮಾಶಂಕರನೆಂದು ಪ್ರಸಿದ್ಧಿ ಹೊಂದಿರುವ ಮತ್ತೊಂದು ಜ್ಯೋತಿರ್ಲಿಂಗ ಆರನೇಯದಾಗಿದೆ. ಈ ಕಥೆಗೆ ಕೂಡ ರಾಮಾಯಣದ ಹಿನ್ನೆಲೆಯಿದೆ. ಶ್ರೀರಾಮಚಂದ್ರನು ಅರಣ್ಯವಾಸಿಯಾಗಿದ್ದಾಗ ಅತೀವ ತೊಂದರೆ ನೀಡುತ್ತಿದ್ದ ವಿರಾಧನೆಂಬ ರಾಕ್ಷಸನನ್ನು ಸಂಹರಿಸಿದ್ದನು. ರಾಕ್ಷಸ ವಿರಾಧನ ಹೆಂಡತಿ ಕರ್ಕಟಿಯು ಗಂಡನನ್ನು ಕಳೆದುಕೊಂಡು ರೋಧಿಸುತ್ತ ಅಸಹಾಯಕಳಾಗಿ ಕಾಡಿನಲ್ಲಿ ಸುತ್ತುತ್ತಿದ್ದಳು.

ಹೀಗಿದ್ದಾಗ, ಒಮ್ಮೆ ರಾವಣನ ಸಹೋದರ ಕುಂಭಕರ್ಣನ ಕಾಮದ ಕಣ್ಣಿಗೆ ಕರ್ಕಟಿಯು ಬಲಿಯಾದಳು. ಇದರಿಂದ ಗರ್ಭಿಣಿಯಾದ ಕರ್ಕಟಿಯು ಗಂಡು ಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ಭೀಮನೆಂದು ನಾಮಕರಣ ಮಾಡಿದಳು. ಭೀಮನು ದೊಡ್ಡವನಾದ ಮೇಲೆ ತಾಯಿಗೆ ತನ್ನ ತಂದೆಯ ಬಗ್ಗೆ ಕೇಳಿದನು. ಆಗ ಕರ್ಕಟಿಯು ಶ್ರೀರಾಮಚಂದ್ರನು ತನ್ನ ಗಂಡನನ್ನು ಕೊಂದಿದ್ದು ಹಾಗೂ ಕುಂಭಕರ್ಣನಿಂದಾದ ಅತ್ಯಾಚಾರದ ಕುರಿತು ಮಗನಿಗೆ ಹೇಳಿದಳು.

ವಿಷಯ ಕೇಳಿದ ಭೀಮನು ಉರಿದುಹೋದ. ತನ್ನ ತಾಯಿಗಾದ ಅನ್ಯಾಯಕ್ಕೆ ನಾನು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ಹರಿ-ಹರ ಇಬ್ಬರನ್ನೂ ಉಳಿಸುವುದಿಲ್ಲ. ಅವರ ಭಕ್ತರನ್ನೂ ಬದುಕಲು ಬಿಡುವುದಿಲ್ಲ ನಾನು ಎಂದು ಸಿಟ್ಟಿನಿಂದ ಬ್ರಹ್ಮನಿಗಾಗಿ ತಪಸ್ಸು ಮಾಡಲಾರಂಭಿಸಿದನು. ಬ್ರಹ್ಮನು ಭೀಮನಿಗೆ ಇಷ್ಟಾರ್ಥ ಸಿದ್ಧಿಯಾಗಲಿ ಎಂದು ವರ ನೀಡಿದನು.

Shivaratri : Bheemashankar and Rameshwaram

ಇದರಿಂದ ಮತ್ತಷ್ಟು ರಾಕ್ಷಸತನವನ್ನು ಮೈಗೂಡಿಸಿಕೊಂಡ ಭೀಮನು ಶಿವಭಕ್ತ ಮತ್ತು ಹರಿಭಕ್ತರಿಗೆ ವಿಪರೀತ ತೊಂದರೆ ಕೊಡಲಾರಂಭಿಸಿದನು. ಸಹ್ಯಾದ್ರಿಯ ಮಹಾರಾಜ ಕಾಮರೂಪೇಶ್ವರನು ಮಹಾನ್ ಶಿವಭಕ್ತನಾಗಿದ್ದನು. ಭೀಮಾಸುರನು ಕಾಮರೂಪೇಶ್ವರ ದಂಪತಿಗಳನ್ನು ಬಂಧಿಸಿ ಸೆರೆಮನೆಗೆ ನೂಕಿದನು. ಕಾಮರೂಪೇಶ್ವರ ದಂಪತಿಗಳು ಕಾರಾಗೃಹದಲ್ಲಿ ಮಣ್ಣಿನ ಶಿವಲಿಂಗ ಮಾಡಿ ಶಿವಪೂಜೆ ಮಾಡುತ್ತಿದ್ದರು.

ಭೀಮಾಸುರನ ಅಟ್ಟಹಾಸದಿಂದ ಕಂಗೆಟ್ಟ ದೇವಾನುದೇವತೆಗಳು ಮಹಾಶಿವನ ಬಳಿ ಬಂದು ಪೀಡೆ ಪರಿಹರಿಸು ಹರನೇ ಎಂದರು. ಆಗ ಶಿವನು ನನ್ನ ಪರಮ ಭಕ್ತನಾದ ಕಾಮರೂಪೇಶ್ವರನಿಗೆ ಭೀಮಾಸುರನು ತೊಂದರೆ ನೀಡಿದರೆ ನಾನು ಅವನನ್ನು ಸಂಹರಿಸುತ್ತೇನೆ ಎಂದನು. ಮಣ್ಣಿನ ಶಿವಲಿಂಗದ ಪೂಜೆಯಲ್ಲಿ ನಿರತನಾದ ಕಾಮರೂಪೇಶ್ವರನ ಶಿವಪೂಜೆಯ ವಿಷಯ ತಿಳಿದ ಭೀಮಾಸುರನು ಮತ್ತಷ್ಟು ಕ್ರೋಧಗೊಂಡನು. ಕಡೆಗೂ ಕೆಟ್ಟ ಭೀಮಾಸುರನ ಅಂತ್ಯಕ್ಕೆ ಕಾಲ ಬಂತೆಂದು ಎಲ್ಲರೂ ಅರಿತುಕೊಂಡರು.

ಭೀಮಾಸುರನು, ಸೆರೆಮನೆಗೆ ಬಂದು ಶಿವಪೂಜೆ ಮಾಡಿ ನನ್ನ ವೈರಿಯನ್ನು ಸಂತೈಸುತ್ತಿದ್ದೀಯಾ ಎಂದನು. ಕಾಮರೂಪೇಶ್ವರ ಮಾಡಿದ ಮಣ್ಣಿನ ಶಿವಲಿಂಗವನ್ನು ಒದ್ದು ಕೆಡವುತ್ತೇನೆ ಎಂದು ಅದನ್ನು ಕೆಡವಲು ಮುಂದಾದನು. ಆಗ ಆ ಶಿವಲಿಂಗದಿಂದ ಮಹಾಶಿವನು ಪ್ರತ್ಯಕ್ಷನಾಗಿ ಭೀಮಾಸುರನನ್ನು ತನ್ನ ತ್ರಿಶೂಲದಿಂದ ಸಂಹರಿಸಿದನು.

ಆ ಅಸುರನ ಇಡೀ ಸೈನ್ಯ ಸಂಕುಲವನ್ನೇ ಸರ್ವನಾಶ ಮಾಡಿದ ಮಹಾಶಿವನು ನಂತರ ಸಮಾಧಾನದಿಂದ ಕಾಮರೂಪೇಶ್ವರನಿಗೆ ಒಳ್ಳೆಯದಾಗಲಿ ಎಂದು ಹರಸಿದನು. ನಿನ್ನ ರಾಜ್ಯವನ್ನು ನೀನು ನೋಡಿಕೋ ಎಂದು ಹೊರಡಲುನುವಾದನು. ಆಗ ರಾಜನು ಮಹಾಶಿವನೇ ನೀನು ಉದ್ಭವಿಸಿದ ಈ ಸ್ಥಳದಲ್ಲಿ ಸದಾಕಾಲ ನೆಲೆಸಿ ಶಿವಭಕ್ತರ ಬೇಡಿಕೆ ಈಡೇರಿಸು ಎಂದನು. ಶಿವನು, ಆಗಲಿ ನನ್ನ ಆರಾಧಕಿ ಡಾಕಿನಿ ಕೂಡ ಇಲ್ಲಿರುವುದರಿಂದ ನಾನೂ ಇಲ್ಲಿಯೇ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತೇನೆ ಎಂದನು. ಆಗಿನಿಂದ ಭೀಮನ ಸಂಹಾರದ ಮಾಡಿದ ಮಹಾಶಿವನನ್ನು ಇಲ್ಲಿನ ಶಿವಲಿಂಗ ಪೂಜಿಸುತ್ತ, ಡಾಕಿನಿ ಭೀಮಾಶಂಕರ ಜ್ಯೋತಿರ್ಲಿಂಗ ಎಂದು ಭಕ್ತರು ಕರೆಯುತ್ತಾರೆ.

ರಾಮೇಶ್ವರ : ರಾವಣಾಸುರನ ವಶದಲ್ಲಿದ್ದ ಮಾತೆ ಸೀತಾದೇವಿಯನ್ನು ಬಿಡಿಸಿಕೊಂಡು ಬರಲು ಶ್ರೀರಾಮಚಂದ್ರನು ಯುದ್ಧಕ್ಕೆ ಸನ್ನದ್ಧನಾಗಿದ್ದನು. ರಾವಣನು ಮಹಾಶಿವನ ಪರಮಭಕ್ತ. ಅಲ್ಲದೇ ಅವನ ಶಕ್ತಿ ಅಪಾರ. ನನ್ನ ಸೈನ್ಯ ಬಲವು ಅವನ ಬಲದ ಮುಂದೆ ಏನೂ ಇಲ್ಲ. ಆದ್ದರಿಂದ ಈಗೇನು ಮಾಡುವುದು ಎಂದು ಗೊಂದಲದಲ್ಲಿ ಸಮುದ್ರ ತೀರಕ್ಕೆ ಬಂದನು. ಸಮುದ್ರ ತೀರದಲ್ಲಿ ಮರಳಿನಲ್ಲಿಯೇ ಶಿವಲಿಂಗವನ್ನು ಮಾಡಿದನು.

ಆ ಮರಳಿನ ಶಿವಲಿಂಗವನ್ನು ಪೂಜಿಸಲಾರಂಭಿಸಿದನು. ಏಕೆಂದರೆ ಜಗತ್ತಿನೊಡೆಯ ಮಹಾಶಿವನ ಅಭಯಹಸ್ತವೇ ರಾವಣನಿಗಿದೆ. ಇಂಥದರಲ್ಲಿ ಮೃತ್ಯುಂಜಯನ ವರ ಪಡೆದುಕೊಂಡವರು ಚಿರಂಜೀವಿಯೆ ಆಗಿರುತ್ತಾರೆ. ರಾವಣನಿಗೆ ಅಂತ್ಯ ಕಾಣಿಸುವುದೆಂಗೆ ಎಂದು ಪರಮೇಶ್ವರನಲ್ಲಿ ಅರಿಕೆ ಮಾಡಿಕೊಂಡನು.

ರಾವಣಾಸುರನು ಸೀತಾಪಹರಣ ಮಾಡಿದ ವಿಷಯ ದೇವಾನುದೇವತೆಗಳಿಂದ ತಿಳಿದ ಮಹಾಶಿವನು ಕೂಡಲೇ ಶ್ರೀರಾಮಚಂದ್ರನು ಮಾಡಿದ ಮರಳಿನ ಶಿವಲಿಂಗದಲ್ಲಿ ಪ್ರತ್ಯಕ್ಷನಾದನು. ಅಧರ್ಮದ ಹಾದಿಯಲ್ಲಿ ನಡೆಯುತ್ತ ನನ್ನ ಭಕ್ತಿಯ ವರವನ್ನು ದುರುಪಯೋಗ ಮಾಡುತ್ತಿರುವ ರಾವಣನ ಅಂತ್ಯ ನಿನ್ನಿಂದಲೇ ಆಗಲಿ ಶ್ರೀರಾಮ ಎಂದನು. ಅಲ್ಲದೇ ರಾವಣನನ್ನು ಸಂಹರಿಸುವ ರಹಸ್ಯವನ್ನು ಶ್ರೀರಾಮಚಂದ್ರನಿಗೆ ಮಹಾಶಿವನು ತಿಳಿಸಿದನು.

ಶಿವನಿಂದ ರಾವಣನ ಸಂಹಾರದ ಬಗ್ಗೆ ತಿಳಿದುಕೊಂಡ ಶ್ರೀರಾಮನು, ನೀನು ಪ್ರತ್ಯಕ್ಷವಾದ ಈ ಸ್ಥಳದಲ್ಲಿಯೇ ವಾಸಿಸು ಮಹಾದೇವ ಎಂದನು. ರಾಮನಿಚ್ಛೆಯಂತೆ ಮಹಾಶಿವನು ಲಿಂಗರೂಪದಲ್ಲಿ ನೆಲೆಸಿದ್ದಾನೆ. ಶ್ರೀರಾಮನು ಭಕ್ತಿಯಿಂದ ಮಹಾಶಿವನನ್ನು ಪೂಜಿಸಿದ ಈ ಸ್ಥಳವು ರಾಮ+ಈಶ್ವರ ಸಮ್ಮಿಳದಂತೆ ರಾಮೇಶ್ವರ ಜ್ಯೋತಿರ್ಲಿಂಗವೆಂದು ಪ್ರಸಿದ್ಧಿಯಾಗಿದೆ.

"ದಾರುಕಾವನ ನಾಗೇಶ್ವರ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಅಂದು ಅಭಿಷೇಕ ನಡೆಯವ ದೇವಸ್ಥಾನದಲ್ಲಿ ಶಿವದರ್ಶನ ಮಾಡಬೇಕು.

ಶಿವಕೃಪೆಗೆ : ಮಹಾಶಿವನನ್ನು ಪ್ರತಿದಿನ ಆರಾಧಿಸುವುದರಿಂದ ದುರ್ಘಟನೆಗಳಿಗೆ ಈಡಾಗುವುದಿಲ್ಲ.

English summary
Mahashivaratri will be celebrated all over Karnataka and India by devotees of Lord Shiva. Shivaratri is considered as Shiva's birthday. Astrologer S.S. Naganurmath writes about Bheemashankar and Rameshwaram. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X