ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕದಲ್ಲಿ ಮಹಾಶಿವರಾತ್ರಿ !

By Staff
|
Google Oneindia Kannada News

* ಫಕೀರ್‌ ಹಸನ್‌

ಜೋಹಾನ್ಸ್‌ಬರ್ಗ್‌ : ಮೊನ್ನೆ, ಫೆಬ್ರವರಿ 18ರ ಭಾನುವಾರ ಲೆನೇಷಿಯಾ ಪ್ರಾಂತದ ಬೀದಿಬೀದಿಗಳಲ್ಲಿ ಓಂ ನಮಃ ಶಿವಾಯ, ಭಂಭಂ ಭೋಲೇನಾಥ್‌, ಲಿಂಗಾಷ್ಟಕ, ಶಿವಸ್ತುತಿಗಳ ಹೊನಲು. ದೇಶ ಬಿಟ್ಟು ಬಂದಿದ್ದರೂ ಸಂಸ್ಕೃತಿ, ಭಕ್ತಿರಸದ ಬೆಸುಗೆ ಕಳಚಿಕೊಳ್ಳದ ಭಾರತೀಯ ಹಿಂದೂ ಸಮುದಾಯ ಮಹಾ ಶಿವರಾತ್ರಿಗೆ ವಾರ ಮುನ್ನವೇ ಅದರ ಗಂಧವನ್ನು ಊರ ತುಂಬಾ ಹರಡಿದರು. ದೇವಾಲಯಗಳು ಗಿಜಿಗಿಜಿ ಗುಟ್ಟಿದವು. ಒಕ್ಕೊರಲಿನ ಶಿವಸ್ತುತಿಯ ಅಮಲು ಇನ್ನೂ ಅಳಿಸಿಲ್ಲ.

ಪ್ರತಿವರ್ಷದಂತೆ ನಡೆದ ಈ ಮಹಾಶಿವರಾತ್ರಿ ಯಾತ್ರೆ ಸತತ 10ನೇ ವರ್ಷದ್ದು. ಈ ವರ್ಷ ಹೃದಯದಲ್ಲಿ ಒಂದು ದುಃಖ ತುಂಬಿಕೊಂಡಿದ್ದ ಭಕ್ತರು ತಮ್ಮ ಸಂಪ್ರದಾಯ ಬಿಡದೆ, ಭಕ್ತಿ ಮೆರೆದರು. ದಕ್ಷಿಣ ಲೆನೇಷಿಯಾದಲ್ಲಿನ ಶ್ರೀ ಆದಿ ಶಂಕರ ಆಶ್ರಮದ ಸ್ವಾಮಿ ಶಂಕರಾನಂದ ಮಹಾರಾಜ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಣ್ಮುಚ್ಚಿದರು. ಈ ಯಾತ್ರೆ ಶುರುಮಾಡಿದ ಧಾರ್ಮಿಕ ದಿಗ್ಗಜರಲ್ಲಿ ಸ್ವಾಮಿ ಶಂಕರಾನಂದ ಕೂಡ ಒಬ್ಬರು. ಈ ದುಃಖವನ್ನು ಹೊತ್ತ ಭಕ್ತರ ಹಿಂಡಿನಲ್ಲಿ ಕಳೆದ ವರ್ಷದ ಯಾತ್ರೆಯ ಸಡಗರ- ಸಂಭ್ರಮ ಇರಲಿಲ್ಲ.

ಸುಮಾರು 5 ಸಾವಿರ ಭಕ್ತರು ಪ್ರಾಂತದ ಆಯ್ದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು, ಬಹುತೇಕ ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟು, ಶಿವದರ್ಶನ ಮಾಡಿದರು. ಎಲ್ಲಾ ದೇವಾಲಯಗಳಲ್ಲೂ ಚೇತನ ಸಂಚಾರ. ಪ್ರಾರ್ಥನೆಯ ಭರಾಟೆ. ಮಕ್ಕಳ ಕಿಲಕಿಲ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಗುಜರಾತಿ ಭಾಷಿಕ ಹಿಂದೂಗಳ ಸಮ್ಮಿಳನ. ಭಕ್ತಿ ಸಮ್ಮೇಳನ.

ಈ ಉತ್ಸವ ಪ್ರಾರಂಭಿಸಿದಾಗ ಭಕ್ತರ ತಲೆಗಳನ್ನು ನಿಮಿಷದಲ್ಲೇ ಎಣಿಸಿಬಿಡಬಹುದಿತ್ತು. ಈಗ ಹಾಗಲ್ಲ. ಈ ವರ್ಷ 5 ಸಾವಿರಕ್ಕೂ ಹೆಚ್ಚು ಭಕ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು. 8 ಕಿಲೋ ಮೀಟರಿನಷ್ಟು ನಡುಗೆಗೆ ಯಾವ ಜೀವವೂ ಆಯಾಸಗೊಳ್ಳಲಿಲ್ಲ. ಅದೇ ಶಿವಶಕ್ತಿಯ ಮಹಿಮೆ. ನಾವು ಕಳೆದ ವರ್ಷ ಯಾತ್ರೆ ಮಾಡಿದ ಬೀದಿಗಳಲ್ಲೇ ಈ ವರ್ಷವೂ ಯಾತ್ರೆ ಮಾಡಲಿಲ್ಲ. ಪ್ರಾಂತ ದೊಡ್ಡದಾದ್ದರಿಂದ ಸರದಿ ಪ್ರಕಾರ ಇಂಥ ವರ್ಷ ಇಂಥ ಬೀದಿಗಳನ್ನು, ಇಂಥ ದೇವಾಲಯಗಳನ್ನು ಭೇಟಿ ಕೊಡಬೇಕೆಂಬುದನ್ನು ನಮ್ಮ ಸಮಿತಿ ನಿರ್ಧರಿಸುತ್ತದೆ ಎನ್ನುತ್ತಾರೆ ಹಿಂದೂ ಸಮನ್ವಯ ಸಂಯೋಜನಾ ಸಮಿತಿಯ ಅಧ್ಯಕ್ಷ ಕೊಕ್ಕೀ ಸಿಂಗ್‌.

ಈ ಯಾತ್ರೆ ಲೆನೇಷಿಯಾ ಪ್ರಾಂತದ ಮಂದಿಗೆ ಒಂದು ಹಬ್ಬದಂತೆ. ಯಾತ್ರೆಯ ನಡುನಡುವೆ ತಂಗುದಾಣ, ಅರವಂಟಿಗೆಗಳೂ ಇದ್ದುವು. ಲಾಡಿಮಿನ್‌ನಲ್ಲೂ ಅದೇ ದಿನ ಮಹಾ ಶಿವರಾತ್ರಿ ಯಾತ್ರೆ ಜರುಗಿತು. ಲೆನೇಷಿಯಾದಷ್ಟು ಭಕ್ತರಿರದಿದ್ದರೂ ಅಲ್ಲೂ ಭಕ್ತರಿಗೇನೂ ಕೊರತೆಯಿರಲಿಲ್ಲ. ಬಿಗಿ ಪೊಲೀಸ್‌ ಪಹರೆಯ ನಡುವೆ ಯಾತ್ರೆ ಮುಗಿಸಿದ ಭಕ್ತರ ಮನೆಮನೆಗಳಲ್ಲಿ ತಂತಮ್ಮ ನೆಲದಲ್ಲಿ ಮಾಡುವ ತಿನಿಸುಗಳು ಘಮಘಮಿಸುತ್ತಿದ್ದವು.

ದಕ್ಷಿಣ ಆಫ್ರಿಕದಲ್ಲಿ ಶಿವರಾತ್ರಿಯ ದಿನ ಉಪವಾಸ ವ್ರತವನ್ನು ಕೈಗೊಳ್ಳುವ ಮಂದಿಯೂ ಇದ್ದಾರೆ. ದೇವಸ್ಥಾನಗಳಲ್ಲಿ ಅಂದೂ ವಿಶೇಷ ಪೂಜೆಗಳು ನಡೆಯಲಿದ್ದು, ಪಾನಕ- ಪನಿವಾರ ಸಮಾರಾಧನೆಗಳು ನಡೆಯಲಿವೆ. ಆದರೂ ಅಲ್ಲಿ ಕಳೆದ ಭಾನುವಾರವೇ ಶಿವರಾತ್ರಿ ಮುಗಿದಿದೆ ಅನ್ನೋದೇ ಸರಿ.

(ಐಎಎನ್‌ಎಸ್‌)

ಮುಖಪುಟ / ಮಹಾ ಶಿವರಾತ್ರಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X