ನಿಜಕ್ಕೂ ನಾನು ನಮ್ಮಮ್ಮನ ಪಡಿಯಚ್ಚು
ನಿಜಕ್ಕೂ ನಾನು ನಮ್ಮಮ್ಮನ ಪಡಿಯಚ್ಚು ಅಂದರೆ ಅತಿಶಯೋಕ್ತಿಯಲ್ಲ. ನನ್ನ ಜೀವನ ರೂಪುಗೊಳ್ಳುವಲ್ಲಿ ನಮ್ಮಮ್ಮನ ಪಾತ್ರ ಬಹಳ ಮುಖ್ಯವಾದದ್ದು. ಎಲ್ಲರ ಜೀವನದಲ್ಲೂ ತಾಯಿಯ ಪಾತ್ರ ಬಹಳ ಮುಖ್ಯವಾದದ್ದು ನಿಜ. ಆದರೆ, ನನ್ನ ಜೀವನದಲ್ಲಿ ಅದು ಒಂದು ಕೈ ಹೆಚ್ಚೆ, ಅದಕ್ಕೆ ಏನೇ ಕಾರಣಗಳಿರಬಹುದು. ನಮ್ಮಮ್ಮನಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ಇಂದಿಗೂ ನಾನು ನನ್ನ ಸ್ನೇಹಿತರೊಂದಿಗೆ ಹೇಳುತ್ತಿರುತ್ತೇನೆ My mother is my greatest inspiration ಅಂತ.
ಬಹಳಷ್ಟು ಜನ ತಮ್ಮ ಸುಖ ದುಃಖಗಳನ್ನು ನಮ್ಮಮ್ಮನೊಡನೆ ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತರು ಕೂಡ ತಮ್ಮ ನೋವು ನಲಿವುಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಾರೆ. ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ನಮ್ಮಮ್ಮನಷ್ಟೇ ಆಸಕ್ತಿ ನನಗೂ ಇದೆ. ಅಂದ ಹಾಗೆ, ನಮ್ಮಮ್ಮನಷ್ಟೇ ಚೆನ್ನಾಗಿ ನಾನೂ ಅಡಿಗೆ ಮಾಡುತ್ತೇನೆ. ಬೇಕಾದರೆ ಅಮ್ಮನನ್ನೇ ಕೇಳಿ. ನಮ್ಮಮ್ಮನಷ್ಟು ಚೆನ್ನಾಗಿ ಹಾಡಕ್ಕೆ ಬರಲ್ಲ ಅಷ್ಟೇ. ನಾನು ಎಲ್ಲೇ ಹೋದರೂ ಎಚ್.ಆರ್. ಲೀಲಾವತಿಯವರ ಮಗ ಎಂದು ತಿಳಿದ ತಕ್ಷಣ ಜನ 'ಓ ಹಾಗಾದರೆ ನೀವೂ ತುಂಬ ಚೆನ್ನಾಗಿ ಹಾಡ್ತೀರ ಅನ್ನಿಸತ್ತೆ" ಅಂತಾರೆ. 'ಹಾಡ್ತೀನಿ ನಿಜ ಆದರೆ ತುಂಬಾ ಚೆನ್ನಾಗೇನಲ್ಲ " ಅಂತ ಅವರುಗಳ ಮುಖಕ್ಕೆ ಹೇಳಲು ಮನಸ್ಸು ಒಪ್ಪಲ್ಲ. ಬಹುಶಃ ನಮ್ಮ ಸಮಾಜವೇ ಹಾಗೆ. ಯಾವುದೋ ಒಂದು ವಿದ್ಯೆಯಲ್ಲಿ ತಂದೆ ತಾಯಿ ಬಹಳ ಪ್ರಖ್ಯಾತರಾಗಿದ್ದರೆ, ಅವರ ಮಕ್ಕಳೂ ಅದೇ ವಿದ್ಯೆಯಲ್ಲಿ ಉನ್ನತರಾಗಿರುತ್ತಾರೆ ಎನ್ನುವುದು ಜನರ ನಂಬಿಕೆ. ಆದರೆ, ನೂರಕ್ಕೆ ತೊಂಬತ್ತೊಂಬತ್ತು ಬಾರಿ ಹಾಗಿರುವುದಿಲ್ಲ. ಹಾಗಾದಲ್ಲಿ ಮಗು ಹುಟ್ಟಿದ ತಕ್ಷಣ ಅದರ ತಾಯಿ ತಂದೆಯರನ್ನು ನೋಡಿ ಇದು ಪ್ರಖ್ಯಾತರ ಗುಂಪೋ ಸಾಮಾನ್ಯರ ಗುಂಪೋ ಎಂದು ಸುಲಭವಾಗಿ ಹೇಳಿಬಿಡಬಹುದು. ಹಾಗಾಗಲು ಸಾಧ್ಯವೇ ಇಲ್ಲ, ಅದು ನ್ಯಾಯವೂ ಅಲ್ಲ.
ಪಕ್ವವಾಗಿದೆ ಮನಸ್ಸು : ನಾನು ಚಿಕ್ಕಂದಿನಿಂದ ನಮ್ಮಮ್ಮನ ನೂರಾರು ಸಂಗೀತ ಕಾರ್ಯಕ್ರಮಗಳನ್ನು, ಸನ್ಮಾನಗಳನ್ನು, ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ನೋಡಿದ್ದೇನೆ. ಸಣ್ಣ ವಯಸ್ಸಿನಲ್ಲಿ ಮುಂದೆ ನನಗೂ ಇಂತಹ ಸನ್ಮಾನಗಳಾಗುತ್ತವೆ, ಜನರು ನನ್ನಲ್ಲೂ ಹಸ್ತಾಕ್ಷರಗಳನ್ನು ಕೇಳುತ್ತಾರೆ ಎಂದು ನಾನು ನಂಬಿದ್ದೆ. ಅದು ಸಹಜ ಕೂಡ. ಆದರೀಗ ಮನಸ್ಸು ಪಕ್ವವಾಗಿದೆ. ನಮ್ಮಮ್ಮನ ಹೆಜ್ಜೆಗಳನ್ನು ನಾನು ನೂರಕ್ಕೆ ನೂರರಷ್ಟು ತುಳಿಯಲು ಸಾಧ್ಯವಿಲ್ಲ ಎನ್ನುವ ಅರಿವಿದೆ. ನನ್ನದೇ ಆದರ್ಶಗಳು, ಆಸೆ ಆಕಾಂಕ್ಷೆಗಳಿವೆ. ಅದನ್ನು ಪೂರ್ಣಗೊಳಿಸಲು ನನ್ನ ತಂದೆ ತಾಯಿಯ ಬೆಂಬಲ ಸದಾ ನನ್ನೊಡನೆ ಇರುತ್ತದೆ ಎಂದು ಚೆನ್ನಾಗಿ ತಿಳಿದಿದೆ. ಈ ಸಂದರ್ಭದಲ್ಲಿ ಕವಿ ಬಿ. ಆರ್. ಲಕ್ಷ್ಮಣರಾವ್ ಅವರ ಕವನದ ಕೆಲವು ಸಾಲುಗಳು ನೆನಪಿಗೆ ಬರುತ್ತದೆ.
'ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ"
ಅಪ್ಪ ನ ಸ್ನೇಹಿತರೊಬ್ಬರು ಯಾವಾಗಲೂ The only true relationship in this world is between a mother and her child ಎನ್ನುತ್ತಿರುತ್ತಾರೆ. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ನನ್ನ ಹಾಗೂ ನಮ್ಮಮ್ಮನ ಸಂಬಂಧ ಅತ್ಯಂತ ಅಪರೂಪವಾದದ್ದು. ನನ್ನ ಪ್ರತಿಯಾಂದು ಗೆಲುವಿನಲ್ಲೂ ನಮ್ಮಮ್ಮನ ಛಾಪಿದೆ.
ನಮ್ಮಮ್ಮನ ಜೀವನದಲ್ಲಿ ನೋವು ನಲಿವುಗಳು ಸಮನಾಗಿ ಹಂಚಿ ಹೋಗಿವೆ. ನನಗಿಂತ ಹೆಚ್ಚಾಗಿ ನಿಮ್ಮಲ್ಲೇ ಎಷ್ಟೋ ಮಂದಿಗೆ ನಮ್ಮಮನ ಕಷ್ಟ ಕಾಲದ ಅರಿವಿರಬಹುದು. ಅಮ್ಮನ ಛಲ ಹಾಗೂ ಸ್ವಾಭಿಮಾನವೇ ಇಂದು ಅಮ್ಮನನ್ನು ಇಂತಹ ಉನ್ನತ ಸ್ಥಾನದಲ್ಲಿ ನಿಲ್ಲಿಸಿರುವುದು. ನನಗೆ ಪ್ರಪಂಚದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳು ನನ್ನ ತಾಯಿ ಹಾಗೂ ತಂದೆ. ನಾನು ದೇವರಲ್ಲಿ ಎಂದೆಂದೂ ಬೇಡುವುದಿಷ್ಟೇ, ದೇವರೇ, ಯಾವ ಜನ್ಮದಲ್ಲೂ ಇವರೇ ನನ್ನ ಅಮ್ಮ, ಅಪ್ಪ ಆಗಿರಲಿ ಎಂದು.
ನಿಮ್ಮವ
ಸೋಮಿ
(ಸುಕುಮಾರ್ ಎಸ್. ರಘುರಾಮ್)












Click it and Unblock the Notifications