ಮುಳ್ಳ ಮೇಲೆ ಕುಂತು ಹೂಕಟ್ಟಿದ ಮಹಾತಾಯಿ
ಕಳೆದ ಇಪ್ಪತ್ತಾರು ವರ್ಷಗಳಿಂದ ಈಕೆ ಕಟ್ಟುತ್ತಿರುವುದು ಹೂವನ್ನಷ್ಟೆ ಅಲ್ಲ, ಹೆತ್ತ ಮಗನ ಬಾಳನ್ನು.
ಆಗ ಈಕೆಗೆ ಹತ್ತೊಂಬತ್ತೇ ವರ್ಷ. ಕುಡುಕ ಗಂಡ ರಸ್ತೆಗಂಟಿ ಶವವಾಗಿದ್ದ . ಅದೆಷ್ಟು ವಾಹನಗಳು ಅವನ ಮೇಲೆ ಹರಿದಿದ್ದವೋ. ಆದರೆ, ವಾಸ್ತವವಾಗಿ ತನ್ನ ಗಂಡನ ದೇಹಕ್ಕಿಂತ ನುಜ್ಜುಗುಜ್ಜಾದದ್ದು ಆಕೆಯ ಮನಸ್ಸು. ಬದುಕಿದ್ದಾಗಲೇ ಹೊಡೆತ, ನೋವು, ಹೊಯ್ದಾಟ, ಕಿರುಚಾಟಗಳಿಂದ ಜೀವ ತಿಂದಿದ್ದ ಗಂಡ ಹೋದದ್ದು ಹೋದ, ಕೈಗೊಂದು ಕೂಸಿತ್ತಿದ್ದ. ಬಂಜರು ನೆಲವಾಗಿದ್ದ ಈಕೆಯ ಮನಸ್ಸಲ್ಲಿ ಜೀವನದಿ ಹರಿಸಿದ್ದು, ಮು ಗ್ಧ ಕಂಗಳ ಆ ಮಗುವೇ.
ಹತ್ತೊಂಬತ್ತರ ಆ ರಾಜಮ್ಮನನ್ನು ನಲವತ್ತೆೈದರ ಇವತ್ತಿನ ರಾಜಮ್ಮ ಬಣ್ಣಿಸುವಾಗ ಕಣ್ಣು ತೋಯುತ್ತದೆ. ಈಕೆಯ ಬಾಳಲ್ಲಿ ಬೆಳದಿಂಗಳು ತಂದ ಮುಗ್ಧ ಕಂಗಳ ರಾಜಕುಮಾರ ಈಗ ಅಮೆರಿಕ ಸೋಮನಾಗಿರೋದು, ಕಣ್ಣಿನ ತೇವದಲ್ಲಿ ಓಡಾಡುವ ಆನಂದದ ಹನಿಗಳೇ ಬಿಂಬಿಸುತ್ತವೆ. ಸೋಮನಿಗೆ ನಿತ್ಯ ತಿಂಗಳ ಬೆಳಕಾಗಿ, ಬಾಳಬೇಕಾದ ತನ್ನ ವಯಸ್ಸನ್ನೆಲ್ಲಾ ಮಗನಿಗಾಗೇ ಗಂಧದಂತೆ ತೇದ ಮಹಾಮಾಯಿ ಈ ಅವ್ವ.
ಹೂವು ಮತ್ತು ಸೋಮು : ಮೊನ್ನೆ ತಾನೆ ಮಗ ಅಮೆರಿಕಕ್ಕೆ ಹಾರಿದ್ದಾನೆ. 'ನನ್ನ ಮಗ ಇಂಜಿನೀರು" ಅಂತ ಹೇಳುವಾಗ ರಾಜಮ್ಮನ ಹೃದಯ ತುಂಬಿಬರುತ್ತದೆ. ಆದರೂ ಕೈಗಳು ಹೂ ಕಟ್ಟುವುದನ್ನು ಮಾತ್ರ ಬಿಡೋದಿಲ್ಲ. ಅಲ್ಲಮ್ಮ, ಮಗ ದುಡ್ಡು ಕಳಿಸೋದಿಲ್ವಾ, ಈಗಲೂ ಯಾಕೆ ಹೂ ಮಾರಬೇಕು ಎಂಬ ಪ್ರಶ್ನೆಗೆ, 'ಅಯ್ಯೋ, ಅದೆಂಗಾತದೆ. ನಮ್ಮ ಸೋಮ ಇಮಾನ ಅತ್ತಕ್ಕೆ ಕಾರಣಾನೇ ಈ ಹೂವ. ಇದು ನನ್ನ ದ್ಯಾವರು. ಅವ್ನು ದುಡ್ಡು ಕಳಿಸ್ತಾನೆ. ಅದನ್ನ ಅವ್ನಿಗಾಗೇ ಕೂಡಿಕ್ತೀನಿ. ನಾನು ಏನು ರಾಜೈಭೋಗ ಮಾಡಕಾಯ್ತದಾ ಈಗ". ಹೂ ಕಟ್ಟೋದು ಮಾತಿನೊಟ್ಟಿಗೇ ಮುಂದುವರೆಯುತ್ತದೆ...
'ಈಗ ಬೋ ಕುಸ್ಯಾತದೆ. ಅಳೇದೆಲ್ಲ ನೆಪ್ ಮಾಡ್ಕಂಡ್ರೇನೇ ಒಂದೊಂದ್ ಕಿತ ಬಯಾಯ್ತದೆ. ನಮ್ಮ ಸೋಮಂಗೆ ಪುಸ್ಕ ಒಂಚಾಕೆ ಅವ್ರಿವ್ರ್ ತಾವ ಅಂಗಲಾಚಿವ್ನಿ. ಅಷ್ಟು ಮಾಡಿದ್ರೂ ಏಳನೇ ಕಳಾಸಾಗೇ ಪೇಲಾಬುಟ್ಟ. ಮೇಷ್ಟ್ರತಾಕೋಗಿ, ಕಾಲಿಡ್ದು ಬೇಡ್ಕಂಡೆ. ಪಾಸ್ಮಾಡಿದ್ರು. ಅವತ್ತು ಅವ್ನಿಗೆ ಇದೇ ಕೈಯಿಂದ ದನ ಬಡ್ದಂಗೆ ಬಡ್ದೆ. ಪಾಪಿ ಮುಂಡೇದು. ನನ್ನೊಟ್ಟೇಲಿ ಉಟ್ಬಿಡ್ತು. ..."
ರಾಜಮ್ಮ ಮುಗ್ದೆ. ಜೊತೆಗೆ ಯಾರ ಬಳಿಯಾದರೂ ಎಲ್ಲವನ್ನೂ ಹೇಳಿಕೊಳ್ಳುವ ಬಯಕೆ ಆಕೆಯದು. ಅಮ್ಮ- ಮಗ ಇಬ್ಬರೂ ಖಾಲಿ ಹೊಟ್ಟೆಯಲ್ಲಿ ಮಲಗಿದ ದಿನಗಳೆಷ್ಟೋ. ಊರಿನ ಪುಂಡ ಪೋಕರಿಗಳ ಕೆಂಗಣ್ಣಿಂದ ಪಾರಾಗಲು ಈಕೆ ಬದಲಿಸಿದ ಹಳ್ಳಿಗಳೆಷ್ಟೋ. ಆದರೆ ಮಾಗಡಿ ತಾಲ್ಲೂಕು ಬಿಟ್ಟು ಈಕೆ ಬೇರೆಲ್ಲೂ ಕದಲಲಿಲ್ಲ. ಅದಕ್ಕೊಂದೇ ಕಾರಣ ಮಗನ ಓದು.
ಚಂದ್ರಪ್ಪನೆಂಬ ಮಹಾತ್ಮ : ಸ್ಕೂಲಿನ ಮುಖವನ್ನೇ ಕಂಡಿರದಿದ್ದ ಈಕೆ ಹೇಳುವಂತೆ, ಮಗ ಮೊದಮೊದಲು ಅಪ್ಪನ ತದ್ರೂಪು ಅನಿಸಿತ್ತಂತೆ. ಅದೇ ಬೇಜವಾಬ್ದಾರಿತನ, ಮೊಂಡು, ಓದಿ ಯಾರು ಉದ್ಧಾರ ಆಗಿದಾರೆ ಅನ್ನೋ ಧೋರಣೆ, ಕೆಟ್ಟ ಸಹವಾಸ- ಚಿಕ್ಕಂದಿನಲ್ಲೇ ಮಗ ಈ ಹಾದಿ ತುಳಿಯುತ್ತಿದ್ದನ್ನು ಗಮನಿಸಿದ ರಾಜಮ್ಮ ಅಂದು ತನಗೆ ತಾನೇ ಹೇಳಿಕೊಂಡದ್ದು- ಇವನ್ನ ಬಡಿದು-ಚಚ್ಚಿಯಾದರೂ ಒಳ್ಳೆಯವನನ್ನಾಗಿ ಮಾಡಬೇಕು. ಈಕೆಯ ತುಡಿತಕ್ಕೆ ಪ್ರಾಥಮಿಕ ಶಾಲೆಯ ಮೇಷ್ಟ್ರೊಬ್ಬರು ಸ್ಪಂದಿಸಿದರು. ಈಕೆಯ ಪಾಲಿನ ಆ ಮಹಾತ್ಮನ ಹೆಸರು ಚಂದ್ರಪ್ಪ.
ಒದೆ ಜ್ಞಾಪಿಸಿದ್ದು ಮೇಷ್ಟ್ರನ್ನ : ಸೋಮು ಮನಸ್ಸ ಹೊಕ್ಕಿ, ಓದಿನ ಕನಸ ಬಿತ್ತಿದವರು ಚಂದ್ರಪ್ಪ . ಕಿತ್ತು ತಿನ್ನುವ ಸೋಮುವಿನ ಬಡತನ ಅರಿತಿದ್ದ ಆತ, ಪುಸ್ತಕ- ಪೆನ್ನು ಅಂತ ಸಾಕಷ್ಟು ಸಹಾಯ ಮಾಡಿದರು. ಆದರೂ ಸೋಮು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತಿದ್ದ. ಅವ ಆರನೇ ಇಯತ್ತೆಗೆ ಕಾಲಿಡೋ ಹೊತ್ತಿಗೆ ಚಂದ್ರಪ್ಪ ಮೇಷ್ಟ್ರು ಟ್ರಾನ್ಸ್‌ವರ್ ಆಗಿ ಬೇರೆಲ್ಲಿಗೋ ಹೋದರು. ಏಳನೇ ಕ್ಲಾಸಲ್ಲಿ ಸೋಮು ಫೇಲಾದದ್ದು ಇದೇ ಕಾರಣಕ್ಕೆ. ಆದರೆ ಆವತ್ತು ತನ್ನಮ್ಮ ಕೊಟ್ಟ ಲಾತ, ಚಂದ್ರಪ್ಪ ಮೇಷ್ಟ್ರನ್ನ ನೆನಪಿಸಿತಂತೆ. ಅಲ್ಲಿಂದ ಸೋಮು- ಓದು ಒಬ್ಬರನ್ನೊಬ್ಬರು ಬಿಡಲಿಲ್ಲ.
ಎಂಟನೇ ಕಳಾಸಿಗೆ ಬಂದ್ಮೇಲೆ ಎಲ್ಲಾ ತಲೆನೋವೂ ಕಳೀತು. ಅವ್ರು ಇವ್ರ ಕಾಲಿಡಿದು ಸೋಮುಗೆ ಕಾಲಕ್ಷೇಪ (ಸ್ಕಾಲರ್‌ಷಿಪ್) ಕೊಡಿಸಿದೆ. ಅದ್ರಾಗೇ ಓದಿ ಮುಂದೆ ಬಂದ. ಅಬ್ಬ- ಅರಿದಿನ ಬಂದಾಗ ಬ್ಯಾರೆ ಮಕ್ಕಳು ವಸಾ ಅಂಗಿ ತೊಟ್ಕಂಡು ಓಡಾಡ್ತಾ ಇದ್ರೆ ನಾನು- ಅವ್ನು ಗುಡಿಸ್ಲಾಗೆ ಕುಂತ್ಕಂಡು ಗೋಳೋ ಅಂತಿದ್ವು... ರಾಜವ್ವ ಗದ್ಗದಿತರಾಗುತ್ತಾರೆ.
ಇವ ಬರೀ ಸೋಮು ಅಲ್ಲ, ಅಭಿನವ ವಿಶ್ವೇಶ್ವರಯ್ಯ
ಎನ್ನಲಡ್ಡಿಯಿಲ್ಲ. ಎಸ್ಸೆಸ್ಸೆಲ್ಸಿವರೆಗೆ ಸೋಮು ಓದಿದ್ದು ಬುಡ್ಡಿ ದೀಪದಲ್ಲೇ. ಆಮೇಲೆ ಪಕ್ಕದ ಮನೆಯೋರ ಕೃಪೆಯಿಂದ ಅವರ ಮನೆ ಕರೆಂಟು ಇವರ ಜೋಪಡಿಗೆ ಹರಿದು ಬಂತು. ಎಸ್ಸೆಸ್ಸೆಲ್ಸಿಯಲ್ಲಿ 75 ಪ್ರತಿಶತ ಅಂಕ ಪಡೆದ ಸೋಮು, ಅಯ್ಯೋ ಗಣಿತದಲ್ಲಿ ಬರೀ 70 ನಂಬ್ರು ಬಂದಿದೆ ಅಂತ 2 ದಿನ ಊಟ- ತಿಂಡಿ ಬಿಟ್ಟು ಅತ್ತಿದ್ದ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ನಾಲ್ಕನೇ ಸೆಮಿಸ್ಟರಲ್ಲಿ ಅಂದುಕೊಂಡದ್ದಕ್ಕಿಂತ ಕಡಿಮೆ ಅಂಕ ಸಿಕ್ಕಿತು ಅಂತ ದೇವಸ್ಥಾನದ ಗೋಡೆಗೆ ತಲೆ ಚಚ್ಚಿಕೊಂಡಿದ್ದ.
ರಾಜಮ್ಮನಂತೆ ಸೋಮು ಹಾದಿಯಲ್ಲೂ ಇದ್ದದ್ದು ಬರೀ ಮುಳ್ಳು. ಎಂಜಿನಿಯರಿಂಗ್ ಮುಗಿಸಿದೊಡನೆ ಯಾರೂ ಕರೆದು ಕೆಲಸ ಕೊಡಲಿಲ್ಲ. ಒಂದೂವರೆ ಸಾವಿರ ರುಪಾಯಿ ಕೆಲಸಕ್ಕೆ ಸೇರಿದ. ಆ ದುಡ್ಡಲ್ಲೇ ಕಂಪ್ಯೂಟರ್ ಅಧ್ಯಯನ ಮಾಡಿದ. 3 ವರ್ಷಗಳ ಕಾಲ ಪಟ್ಟ ಕಷ್ಟ ಈಗ ಫಲಿಸಿದೆ. 3 ತಿಂಗಳ ಹಿಂದಷ್ಟೇ ಆತ ಅಮೆರಿಕೆಗೆ ಹಾರಿದ್ದಾನೆ.
ಅಳುತ್ತಾ ನಗುತಾಳೆ ಅವ್ವ : ಅಯ್ಯೋ, ಅಮೆರಿಕಾದಲ್ಲಿ ಕೆಲ್ಸದಿಂದ ತೆಗೀತಾ ಅವ್ರಂತೆ. ಅದಿನೈದು ದಿನ ಆತು. ಅವನಿಂದ ಒಂದು ಕಾಜಗಾನೂ ಇಲ್ಲ. ಎಂಗವ್ನೋ ಏನೋ ....ಅಂತ ರಾಜಮ್ಮ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿರಲಿಲ್ಲ. ಮಗ ಒಳ್ಳೆ ಕಂಪನಿಗೇ ಸೇರಿದ್ದಾನೆ ಅಂತ ಅರ್ಥ. ಯೋಚನೆ ಮಾಡಬೇಡಮ್ಮಾ . ಅವನದು ಇ- ಮೇಲು ಅಡ್ರಸ್ಸು ಅಂತ ಇರ್ತದೆ. ಅದೇನಾದ್ರೂ ಇದ್ದರೆ ಕೊಡ್ತೀರಾ ? ನಾನು ಮಾತಾಡಿ ವಿಚಾರಿಸ್ತೀನಿ ಅಂದರೆ, ಅದ್ಯಾವುದೂ ಆಕೆಗೆ ಗೊತ್ತಿಲ್ಲ. ಆದರೆ ಸೋಮು ಪತ್ರ ಮಾತ್ರ ಬರೀತಿದಾನೆ. ಗೊತ್ತಿರೋ ಹುಡುಗರು ಅದನ್ನು ಓದಿ ಹೇಳ್ತಾರೆ. ರಾಜವ್ವ ಅಳುತ್ತಾ ನಗುತ್ತಾರೆ.
ಇವೆಲ್ಲಾ ಬರೀಬೇಡಿ. ನಾ ಪಟ್ಟ ಕಷ್ಟ ಎಷ್ಟಂತ ಜಗತ್ತಿಗೆ ಏಳೋದು ಅವ್ನಿಗೆ ಇಷ್ಟ ಇಲ್ಲ. ಒಂದ್ಸಾರಿ ಮಾರ್ಕೆಟ್ನಾಗೆ ಹೂ ತರಕ್ಕೆ ಓಗಿದ್ದಾಗ ಪೊಲೀಸಪ್ಪ ದೊಣ್ಣೆ ಮಾಡಿದ ಅಂತ, ಮಾರನೆ ದಿಸ ಓಗಿ ಅವ್ನಿಗೆ ಕಲ್ಲೆಸಿದಿದ್ದ ನಮ್ಮ ಸೋಮು, ಆಗಿನ್ನೂ ಅವ್ನು ಒಂಬತ್ತನೇ ಕಳಾಸು. ಅವ್ನು ಸಂದಾಕಿರ್ಲಿ...
ರಾಜಮ್ಮನ ಮಾತು ಮುಗಿಯೋದಿಲ್ಲ. ಹೇಳ್ಕೊಳೋಕೆ ಯಾರೂ ಇಲ್ಲದ ಒಂಟಿ ಜೀವದಲ್ಲಿ ಇವತ್ತೂ ಜೀವಸೆಲೆ ಇದೆ. ಇಪ್ಪತ್ತಾರು ವರ್ಷಗಳಿಂದ ಮಗನಿಗೋಸ್ಕರ ಬದುಕುತ್ತಿರುವ ಬದುಕಿನ ಮೇಲೆ ದಿನೇದಿನೇ ಪ್ರೀತಿ ಹೆಚ್ಚಾಗುತ್ತಿದೆ. ಮಗ ಎಂದು ಬಂದಾನು, ಸೊಸೆಯ ಎಂದು ಕಂಡೇನು, ಅವನ ಬಾಳು ಹಸನಾಗಲಿ... ಇಂಥಾ ಹಂಬಲಗಳ ನಿಸ್ವಾರ್ಥ ಮಾಯಿಯ ಪ್ರತಿ ಬಾರಿ ಕಂಡಾಗಲೂ ಕೈ ಎತ್ತಿ ಮುಗಿಯೋಣ ಅನಿಸುತ್ತದೆ, ಕಣ್ಣು ತಂತಾನೇ ಜಿನುಗುತ್ತದೆ.
(ರಾಜಮ್ಮ , ಸೋಮು- ಇವು ಬದಲಿಸಿದ ಹೆಸರು. ಆದರೆ ಜೀವನ ಕವನ ಬದಲಿಸಲಾಗದು)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications