• search

ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ

By ಮೇರಿ ಶೈಲಾ ಡಯಾಸ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಶಿಕ್ಷಕ ಪಾಠವನ್ನಷ್ಟೇ ಮಾಡುವುದಿಲ್ಲ ಗುರುವಾಗಿ ಮುಂದೆ ನಡೆಸುತ್ತಾರೆ. ಮನುಷ್ಯನ ಬದುಕಿನಲ್ಲಿ ಅರಿವಿನ ಮೊದಲ ಕಿಡಿಯನ್ನು ಹಚ್ಚಿ ಮುನ್ನಡೆಸುವ ಮಹಾನುಭಾವರೇ ಶಿಕ್ಷಕರು. ನಾವು ಯಾವತ್ತೂ ಶಿಕ್ಷಕ ಅನ್ನುವ ಪದಕ್ಕೆ ಶಿಕ್ಷಣ ನೀಡುವವರು ಅಥವಾ ಪಾಠ ಕಲಿಸುವವರು ಎಂಬರ್ಥದಲ್ಲಿ ಮಾತ್ರವೇ ನೋಡಬಾರದು.

  ಶಿಕ್ಷಕ ಅನ್ನುವುದಕ್ಕೆ ತತ್ಸಮಾನ ಪದ ಎಂದರೆ ಗುರು. ಮೂಲತ: ಮನುಷ್ಯ ಒಂದು ಕಪ್ಪು ಹಲಗೆ. ನಾವು ಬಾಲ್ಯದಲ್ಲಿ ಶಾಲೆಗೆ ಹೋದಾಗ ಕಪ್ಪು ಹಲಗೆಯನ್ನು ನೋಡುತ್ತೇವೆ. ಆದರೆ ವಾಸ್ತವದಲ್ಲಿ ನಾವೇ ಕಪ್ಪು ಹಲಗೆಗಳಾಗಿರುತ್ತೇವೆ. ಆ ಕಪ್ಪು ಹಲಗೆಯ ಮೇಲೆ ಅರಿವು ಎಂಬ ಬಿಳಿ ಅಕ್ಷರವನ್ನು ಮೂಡಿಸುತ್ತಾರೆ ಶಿಕ್ಷಕರು. ಹೀಗೆ ಅರಿವಿನ ಮೊದಲ ಕಿಡಿ ಹತ್ತಿಸುವ ಶಿಕ್ಷಕರನ್ನು ವಿಶಾಲಾರ್ಥದಲ್ಲಿ ಗ್ರಹಿಸಿದರೆ ಗುರುವಾಗಿ ಕಾಣತೊಡಗುತ್ತಾರೆ.

  ಶಿಕ್ಷಕರ ದಿನ: ಗುರುನಮನ ಸಲ್ಲಿಸಿದ ಟ್ವಿಟ್ಟಿಗರು

  ಹಾಗಂತ ಕಪ್ಪು ಹಲಗೆಯ ಮೇಲೆ ಕೇವಲ ಬಿಳಿಯ ಅಕ್ಷರಗಳನ್ನು ಮೂಡಿಸಿದರೆ ಗ್ರಹಿಸಲಾಗದು. ಆದರೆ ಗುರುವಾದವರು ಬಿಳಿಯ ಅಕ್ಷರಗಳ ರೂಪದಲ್ಲಿ ಅರಿವಿನ ಸಂಕೇತವನ್ನು ಮೂಡಿಸಿದಾಗ ಗ್ರಹಿಕೆ ಮೂಡತೊಡಗುತ್ತದೆ. ಆದ್ದರಿಂದ ವಿದ್ಯಾರ್ಥಿ ಕಪ್ಪು ಹಲಗೆಯಂತಿದ್ದು, ಬಿಳಿ ಅಕ್ಷರಗಳೆಂಬ ಅರಿವಿನ ಬೆಳಕನ್ನು ಪಡೆಯುತ್ತಾನೆ. ಆ ಬೆಳಕು ಮೂಡಿಸುವವರೇ ಶಿಕ್ಷಕರು. ಹೀಗಾಗಿ ನಾವು ಶಿಕ್ಷಕರನ್ನು ಗುರು ಎಂಬ ವಿಸ್ತಾರ ಅರ್ಥದಲ್ಲಿ ನೋಡಬೇಕಾಗುತ್ತದೆ. ಹಾಗೆ ನೋಡಿದಾಗ ಮಾತ್ರ ಶಿಕ್ಷಕರಿಗೆ ಮಹತ್ವ ದೊರೆಯುತ್ತದೆ.

  Teachers Day : Students are like black board

  ಶಿಕ್ಷಣ ಕೇವಲ ಪಾಠಕ್ಕೆ ಸಂಬಂಧಿಸಿದ್ದಲ್ಲ. ನಮ್ಮ ಬದುಕಿನ ದಾರಿಯನ್ನು ತಿಳಿಸುವ ಮೊದಲ ಮಾರ್ಗದರ್ಶಕರೇ ಶಿಕ್ಷಕರು. ಯಾಕೆಂದರೆ ಬದುಕು ಅಂದರೆ ಏನು ಅನ್ನುವುದನ್ನು ಗ್ರಹಿಸಲು ಪೂರಕವಾಗಿ ಅವರು ನಮ್ಮ ಕೈ ಹಿಡಿದು ನಡೆಸುವ ಕೆಲಸ ಮಾಡುತ್ತಿರುತ್ತಾರೆ. ಎರಡು ಪ್ಲಸ್ ಎರಡು ಇಸಿಕ್ವಲ್ಪು ನಾಲ್ಕು ಅಂತ ಮಾತ್ರ ಅವರು ಹೇಳಿಕೊಡುವುದಿಲ್ಲ. ಮುಂದೆ ನಾವು ಗಣಿತಜ್ಞರಾಗಲೋ, ವಿವಿಧ ರಂಗಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಲು ಬೇಕಾದ ಸೂತ್ರವನ್ನು ಹೇಳಿಕೊಟ್ಟಿರುತ್ತಾರೆ. ಅವರು ಯಾವುದೇ ವಿಷಯಗಳನ್ನು ತೆಗೆದುಕೊಂಡರೂ ಮೊದಲು ಕಲಿಕೆಯ ಮೂಲ ಮಂತ್ರಗಳನ್ನು ಕಲಿಸುತ್ತಿರುತ್ತಾರೆ.

  ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು

  ಹೀಗೆ ಮನುಷ್ಯ ಎಂಬ ಕಪ್ಪು ಹಲಗೆಯ ಮೇಲೆ ಅರಿವು ಎಂಬ ಅಕ್ಷರಗಳನ್ನು ಮೂಡಿಸುತ್ತಾ ಮುನ್ನಡೆಯಲು ಪ್ರೇರಣೆ ನೀಡುವವರೇ ಶಿಕ್ಷಕರು. ಇದು ಅರ್ಥವಾದರೆ ನಾವು ಶಿಕ್ಷಕರನ್ನು ನಿಜವಾದ ಅರ್ಥದಲ್ಲಿ ಗೌರವಿಸಲು ಸಾಧ್ಯ. ಹಾಗೆ ಗೌರವಿಸುವುದೇ ನಮ್ಮ ನಿಜವಾದ ಕರ್ತವ್ಯ. ಪಾಠ ಮಾಡಿರುತ್ತಾರೆ ಎಂಬ ನೆಲೆಯಲ್ಲಿ ಮಾತ್ರ ಗ್ರಹಿಸದೆ ಅರಿವಿನ ಕಿಡಿಯನ್ನು ಹೊತ್ತಿಸಿ ಮುನ್ನಡೆಯಲು ಪ್ರೇರೇಪಿಸಿದ ಗುರು ಎಂಬ ಅಂಶ ಸ್ಪಷ್ಟವಾದಾಗ ನಾವು ಹೀಗೆ ಶಿಕ್ಷಕರನ್ನು ಗೌರವಿಸಲು ಸಾಧ್ಯವಾಗುತ್ತದೆ.

  ಶಾಲೆ ಎಂಬ ಕೊಠಡಿಯಲ್ಲಿ ನಮ್ಮನ್ನು ಕೂರಿಸಿ, ಐದು ವರ್ಷಗಳ ಅಭೋಧಪ್ರಾಯದಲ್ಲಿ ಅವರು ನಮ್ಮಲ್ಲಿ ಅರಿವಿನ ಕಿಡಿ ಹೊತ್ತಿಸಿರುತ್ತಾರೆ. ಬಾಲ್ಯದಲ್ಲಿ ಮಕ್ಕಳಿಗೆ ಹಸಿವು ಹೆಚ್ಚು. ಹೀಗಾಗಿ ಹಸಿವು ದೇವರಿದ್ದಂತೆ. ಅದನ್ನು ನೀಗಿಸಬೇಕು ಎಂಬ ಮಾತಿದೆ. ಅರಿವು ಕೂಡಾ ಒಂದು ರೀತಿಯ ಹಸಿವು. ಈ ಹಸಿವು ನೀಗಿಸಲು ಶಿಕ್ಷಕರು ಅರಿವಿನ ಮೊದಲ ತುತ್ತನ್ನು ತಿನ್ನಿಸಿರುತ್ತಾರೆ.
  ಇದು ನಮ್ಮ ಜ್ಞಾನದ ಅರಿವನ್ನು ನೀಗಿಸುವ ಮೊದಲ ಕ್ರಿಯೆ. ಹಾಗೆಯೇ ಹಸಿವು ಎಂಬ ದೇವರು ಹೆಚ್ಚೆಚ್ಚಾಗಿ ನಮ್ಮಲ್ಲಿ ಉಪಸ್ಥಿತರಾಗುತ್ತಾ ಹೋಗುವ ಬಗೆ. ಮುಂದೆ ನಾವು ಜ್ಞಾನದ ಈ ಹಸಿವನ್ನು ನೀಗಿಸಿಕೊಳ್ಳುತ್ತಾ ಹೋಗಲು ಹಲವು ದಾರಿಗಳಿರುತ್ತವಾದರೂ ಮುಖ್ಯ ದಾರಿಗೆ ಮೊದಲು ನಮ್ಮನ್ನು ಕೈ ಹಿಡಿದು ಕರೆತಂದು ಬಿಡುವವರೇ ಶಿಕ್ಷಕರು.

  ನಮ್ಮಲ್ಲಿ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಪದ್ಧತಿ ಇದೆ. ಪೂರ್ಣಿಮೆಯನ್ನು ಗುರುವಿನ ಹೆಸರಿನಲ್ಲಿ ಆಚರಿಸುವುದಕ್ಕೆ ಒಂದು ವಿಶಿಷ್ಟ ಕಾರಣವಿದೆ. ಮೇಲ್ನೋಟಕ್ಕೆ ಇದು ಗುರುವನ್ನು ಗೌರವಿಸುವ ಒಂದು ಸಾಂಕೇತಿಕ ದಿನವಾದರೂ ಆಳದ ಅರ್ಥ ನಿಜಕ್ಕೂ ವಿಶೇಷವಾಗಿದೆ. ಗುರು ಪೂರ್ಣಿಮೆಯ ಸಂಕೇತ. ಆದರೆ ಪೂರ್ಣಿಮೆಯ ಸಂಕೇತವಾಗುವ ಮುನ್ನ ಗುರು ಅಮಾವಾಸ್ಯೆಯ ಕತ್ತಲಲ್ಲೂ ದಾರಿ ಹುಡುಕಿ, ತಡಕಿ ಹೊರಬಂದಿರುತ್ತಾರೆ. ಹೀಗಾಗಿ ಗುರುವಾದವರು ಶಿಷ್ಯರನ್ನು ಅಮಾವಾಸ್ಯೆಯ ಕತ್ತಲಿಗೂ ಹೆದರದಂತೆ, ನಡೆಯಲು ತಡಕಾಡದಂತೆ ಮಾಡಲು ಸಮರ್ಥರು. ಶಿಷ್ಯರನ್ನು ಅಮಾವಾಸ್ಯೆಯ ಕತ್ತಲಲ್ಲೂ ನಿರ್ಭಿಡೆಯಾಗಿ ನಡೆಸಿಕೊಂಡು ಬರಲು ಅವರು ಶಕ್ತರು.

  'ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ'

  ನಾವು ನಮ್ಮಲ್ಲಿ ಜ್ಞಾನದ ಕಿಡಿಯನ್ನು ಹೊತ್ತಿಸುವ, ಜ್ಞಾನದ ದಾರಿಯಲ್ಲಿ ನಡೆಯುವಂತೆ ಮಾಡುವ ಶಿಕ್ಷಕರನ್ನು ವಿಶಾಲಾರ್ಥದಲ್ಲಿ ಗುರುವೆಂದು ಗ್ರಹಿಸಬೇಕಾಗುತ್ತದೆ. ಆದರೆ ನಮ್ಮಲ್ಲಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳು ಮಾತ್ರವಲ್ಲ, ಬಹುತೇಕ ಶಿಕ್ಷಕರು ಅದರ ಮಹತ್ವ ಅರಿಯಬೇಕಾಗುತ್ತದೆ. ಹಾಗೆ ಅರಿತಾಗ ಶಿಕ್ಷಕರು ಎಂದರೆ ನಾವು ಬರೀ ಪಾಠ ಮಾಡುವವರು ಎಂಬ ಸೀಮಿತ ಮನೋಭಾವದಿಂದ ಹೊರಬಂದು ತಮಗಿರುವ ಗುರುವಿನ ವಿಶಾಲ ಸ್ಥಾನಮಾನವನ್ನು ಅರಿಯಲು ಸಾಧ್ಯವಾಗುತ್ತದೆ. ಹೀಗಾಗಿ ಶಿಷ್ಯರು ಮಾತ್ರವಲ್ಲದೆ, ಒಬ್ಬ ಶಿಕ್ಷಕ ಈ ಪರಿಕಲ್ಪನೆಯಲ್ಲಿ ನಡೆಸಬೇಕು ಎಂದು ತನ್ನಲ್ಲಿ ತಾನು ಮನನ ಮಾಡಿಕೊಳ್ಳುವುದು ಕೂಡಾ ಈ ದಿನದ ವಿಶೇಷ. ಈ ದಿನವನ್ನು ಒಬ್ಬ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿ ಕೂಡಾ ವಿಶೇಷವಾಗಿ ಕಾಣಬೇಕಾದುದು ಮುಖ್ಯ.

  Teachers Day : Students are like black board

  ಇಲ್ಲಿ ನಾವು ಕಾಣಬೇಕಾದುದು ಯೇಸು ಕ್ರಿಸ್ತರು ಕೂಡಾ ಜಗತ್ತು ಕಂಡ ಅತ್ಯುತ್ತಮ ಶಿಕ್ಷಕ, ಗುರು. ಯಾಕೆಂದರೆ ಒಬ್ಬ ಕುರಿಗಾಹಿ ತನ್ನ ಕುರಿಗಳನ್ನು ಸನ್ಮಾರ್ಗದೆಡೆಗೆ ನಡೆಸುವವನೇ ಶಿಕ್ಷಕ. ಯೇಸು ಕ್ರಿಸ್ತರು ಕೂಡಾ ಈ ಜಗತ್ತಿಗೆ ಮಹತ್ತರವಾದ ಅರಿವನ್ನು ಮೂಡಿಸಿದ, ಸನ್ಮಾರ್ಗದ ದಾರಿ ತೋಡಿದ ಮೇಷ ಪಾಲಕ. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲ ಮಹಾನುಭಾವರನ್ನೂ ಇದೇ ನೆಲೆಯಲ್ಲಿ ಗ್ರಹಿಸಬೇಕು.

  ಮೋದಿ ಪಾಠಶಾಲೆ: ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ

  ಶಿಕ್ಷಕ ಎಂದ ಮಾತ್ರಕ್ಕೆ ಬಿಎಡ್, ಎಂ.ಎಡ್ ಮಾಡಿದ ಮಾತ್ರಕ್ಕೆ ಅದನ್ನು ಸೀಮಿತಗೊಳಿಸುವ ಕೆಲಸವಾಗುತ್ತದೆ. ಆದರೆ ಜೀವನದಲ್ಲಿ ಪ್ರತಿಯೊಬ್ಬರಿಂದಲೂ ಅರಿವನ್ನು ಮೂಡಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ. ಹೀಗಾಗಿ ಶಿಕ್ಷಕ ಎಂದು ಒಂದು ದಿನವನ್ನು ಮೀಸಲಿಡಲು ಸಾಧ್ಯವಿಲ್ಲ. ಅರಿವನ್ನು ಮೂಡಿಸುವ ಪ್ರತಿಯೊಬ್ಬರೂ ಶಿಕ್ಷಕರೇ. ಹಾಗಂತ ನಮಗೆ ಅರ್ಥವಾದರೆ ಶಿಕ್ಷಕರ ದಿನಾಚರಣೆಗೆ ಇನ್ನಷ್ಟು ಮೆರುಗು ಬರುತ್ತದೆ.

  ಶಿಕ್ಷಕ ಎಂದರೆ ಬಹುವ್ಯಾಪಿ. ಇದನ್ನು ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸದೆ ಚೌಕಟ್ಟನ್ನು ಮೀರಿ ಚಿಂತಿಸಬೇಕಾಗುತ್ತದೆ. ಯಾಕೆಂದರೆ ಎಲ್ಲರೂ ಅರಿವಿನ ದಾರಿಯಲ್ಲಿ ನಡೆಯಲು ಬಯಸುವುದರಿಂದ ನಾವು ಒಂದಲ್ಲ, ಒಂದು ರೀತಿಯಲ್ಲಿ ಗುರುವಿನ ಹುಡುಕಾಟದಲ್ಲಿರುತ್ತೇವೆ. ಹಾಗೆಯೇ ನಮಗರಿವಿಲ್ಲದಂತೆಯೇ ಮತ್ತೊಬ್ಬರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿರುತ್ತೇವೆ.
  ಹೀಗಾಗಿಯೇ ಶಾಲೆಯಲ್ಲಿ ಓದಿದವರಿಗೆ ಮಾತ್ರವಲ್ಲ, ಓದದವರಿಗೂ ಶಿಕ್ಷಕರು ಸಿಗುತ್ತಾರೆ. ಅಂತಹ ಶಿಕ್ಷಕರನ್ನು ಪ್ರಕೃತಿಯೇ ಒದಗಿಸುತ್ತದೆ. ಇಡೀ ಬದುಕಿನಲ್ಲಿ ಕಲಿತಿದ್ದನ್ನು, ಗ್ರಹಿಸಿದ್ದನ್ನು ಇನ್ನೊಬ್ಬರಿಗೆ ಹೇಳಿಕೊಡುವುದರ ಮೂಲಕ, ಅಥವಾ ಅದರ ಕುರುಹನ್ನು ನೀಡುವ ಮೂಲಕ ಮನುಷ್ಯನ ಬದುಕು ಅರಿವಿನ ದಾರಿಯಲ್ಲಿ ಕೊಂಡೊಯ್ಯುತ್ತಾರೆ ಎಂಬ ಪರಿಕಲ್ಪನೆಯೇ ವಿಶಿಷ್ಟ.

  Teachers Day : Students are like black board

  ದೇಶದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಎಂದು ಆಚರಿಸುವುದು ನಮ್ಮ ರೂಢಿ. ಇದು ಸಾಂಪ್ರದಾಯಿಕವಾಗಿ ಸರಿ. ಏಕೆಂದರೆ ನಾವು ಯಾವುದೇ ಒಂದು ದಿನವನ್ನು ನಿಗದಿ ಪಡಿಸಿ ಇಂತಹ ವಿಚಾರವನ್ನು ವಿಸ್ತ್ರತ ನೆಲೆಗಟ್ಟಿನಲ್ಲಿ ಚಿಂತಿಸಬೇಕಾಗುತ್ತದೆ. ಆದರೆ ಅರಿವು ಎಂಬುದು ಒಂದು ದಿನದ ಪ್ರಕ್ರಿಯೆಯಲ್ಲ. ಅದು ಅನುದಿನದ, ಅನುಕ್ಷಣದ ಸ್ಪೋಟ. ಹೀಗೆ ಬದುಕಿನುದ್ದ ಪಡೆಯುವ ಅರಿವಿನ ಕುರಿತು ಆಚರಿಸುವ ಶಿಕ್ಷಕರ ದಿನಾಚರಣೆ ಒಂದು ಸಂಕೇತ. ಈ ಸಂಕೇತವನ್ನು ನಿಜವಾದ ಅರ್ಥದಲ್ಲಿ ಗ್ರಹಿಸಿದಾಗ, ಆಚರಿಸಿದಾಗ ಅದಕ್ಕೆ ನಿಜವಾದ ಮೌಲ್ಯ ಅನ್ನುವುದನ್ನು ನಾವೇ ಮತ್ತೆ ಮನನ ಮಾಡಿಕೊಳ್ಳಬೇಕು. ಇದೇ ಇಂದಿನ ತುರ್ತು ಅಗತ್ಯ.

  ಯಾಕೆಂದರೆ ಜಾಗತೀಕರಣದ ಈ ಯುಗದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಾ ಸಾಗಿದೆ. ಹೀಗಾಗಿ ಮತ್ತೆ ಅದನ್ನು ಬಲಪಡಿಸುವ ಮೂಲಕ ನಾವು ಸ್ವಸ್ಥ ಸಮಾಜವನ್ನು ರೂಪಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ ಅನ್ನುವುದನ್ನು ಮರೆಯಬಾರದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Teachers Day : Students are like black board, teacher writes on it to sow seed of knowledge in students. A special article on the occasion of birthday of Sarvepalli Radhakrishnan, the former vice-president of India.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more