• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಿಧವಾನವಮೀ ಶ್ರಾದ್ಧ ಯಾರಿಗೆ? ಮಹತ್ವವೇನು?

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|

ಮುತ್ತೈದೆಯಾಗಿಯೇ ಸಾವನ್ನಪ್ಪಿದ ಹೆಂಗಸರಿಗೆ ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಅವಿಧವಾನವಮೀ ಎಂಬ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧದ ಕುರಿತು ಈಚೆಗೆ ಎರಡು ವಿವಾದಗಳಿವೆ. ಎರಡರ ಕುರಿತೂ ಚರ್ಚೆಯನ್ನು ಮಾಡೋಣ.

ಮೊದಲನೆಯದಾಗಿ, ಅವಿಧವಾನವಮಿಯ ಶ್ರಾದ್ಧದಲ್ಲಿ ಘಾತಚತುರ್ದಶಿಯ ಶ್ರಾದ್ಧದಂತೆ ಏಕೋದ್ದಿಷ್ಟ ಶ್ರಾದ್ಧವನ್ನೇ ಮಾಡಬೇಕು, ಪಾರ್ವಣವನ್ನು ಮಾಡಬಾರದು ಎನ್ನುವ ವಿವಾದ. ಎರಡನೆಯದು, ಗಂಡ ಬದುಕಿರುವವರೆಗೆ ಮಾತ್ರ ಅವಿಧವಾನವಮೀ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡಲು ಬರುವದಿಲ್ಲ ಎಂಬ ವಿವಾದ.

ಮೊದಲಿಗೆ ಏಕೋದ್ದಿಷ್ಟ ಎಂದರೇನು, ಪಾರ್ವಣ ಎಂದರೇನು ತಿಳಿಯೋಣ.

ಏಕೋದ್ದಿಷ್ಟ ಎಂದರೆ ಯಾರ ಕುರಿತು ಶ್ರಾದ್ಧವಿರುತ್ತದೆಯೋ ಅವರಿಗೆ ಮಾತ್ರ ಶ್ರಾದ್ದ. ಕೇವಲ ಒಂದೇ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡುವದು. ಅಂದರೆ ಮುತ್ತೈದೆಯಾಗಿ ಯಾರು ಸತ್ತಿದ್ದಾರೆಯೋ ಅವರಿಗೆ ಮಾತ್ರ ಶ್ರಾದ್ಧ.

ಪಾರ್ವಣ ಎಂದರೆ ಸತ್ತಿರುವ ಮುತ್ತೈದೆ, ಅವರ ಅತ್ತೆ, ಅವರ ಅತ್ತೆ (ಅಂದರೆ ಮಗ ತಾಯಿಯ ಶ್ರಾದ್ಧ ಮಾಡುತ್ತಿದ್ದರೆ, ತಾಯಿ, ಅಜ್ಜಿ, ಮುತ್ತಜ್ಜಿ) ಈ ಮೂರೂ ಜನರಿಗೂ ಶ್ರಾದ್ಧವನ್ನು ಮಾಡುವದು. (ಪಾರ್ವಣ ಎನ್ನುವದಕ್ಕೆ ‘ಸದೈವತ'ಶ್ರಾದ್ಧ ಎಂಬ ಅರ್ಥವೂ ಇದೆ, ಅದನ್ನು ಪ್ರತ್ಯೇಕವಾಗಿ ವಿವರಿಸುತ್ತೇನೆ. ಇಲ್ಲಿ ಪ್ರಸಕ್ತವಲ್ಲ.)


ಸರಳವಾಗಿ ಹೇಳಬೇಕೆಂದರೆ ಒಂದು ಪಿಂಡವನ್ನಿಟ್ಟು ಒಬ್ಬರಿಗೆ ಮಾತ್ರ ಶ್ರಾದ್ಧವನ್ನು ಮಾಡುವದು ಏಕೋದ್ದಿಷ್ಟ. ಸತ್ತ ವ್ಯಕ್ತಿಯ ತಂದೆ (ಅತ್ತೆ) ಅವರ ತಂದೆ (ಅತ್ತೆ) ಈ ಮೂರೂ ಜನರಿಗೆ ಮೂರು ಪಿಂಡಗಳನ್ನು ಸಮರ್ಪಿಸಿ ಶ್ರಾದ್ಧ ಮಾಡುವದು ಪಾರ್ವಣ. [ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು]

ಶ್ರೀ ವಾದಿರಾಜರು ಯುಕ್ತಿಮಲ್ಲಿಕೆಯಲ್ಲಿ ಒಂದು ಮಹತ್ತ್ವದ ಮಾತನ್ನು ಹೇಳುತ್ತಾರೆ - ಧರ್ಮಶಾಸ್ತ್ರದ ಆಚರಣೆಗಳನ್ನು ಯುಕ್ತಿಯಿಂದ ನಿರ್ಧರಿಸಬಾರದು ಎಂದು. ಆದರೆ, ಅವಿಧವಾನವಮಿಯ ವಿಷಯದಲ್ಲಿ ಧರ್ಮಸಿಂಧುವಿನಲ್ಲಿಯೂ ಸಹ ಕೇವಲ ಯುಕ್ತಿಯಿಂದಲೇ ಆಚರಣೆಯನ್ನು ಸಾಧಿಸಲಾಗಿದೆ. ಈ ದಿವಸವೂ ಸಹ, ಧರ್ಮಶಾಸ್ತ್ರವನ್ನು ಓದದೆಯೇ ಜನ ಕೇವಲ ಯುಕ್ತಿಯಿಂದ ಇದರ ಕುರಿತು ಮಾತನಾಡುತ್ತಾರೆ.

ಅವರು ಹೇಳುವ ಯುಕ್ತಿ ಹೀಗಿದೆ - ಘಾತಚತುರ್ದಶಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಎಂಬ ವಿಧಿಯಿದೆ. ಯಾರು ದುರ್ಮರಣ ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಶ್ರಾದ್ಧ ಎಂದು. ಹಾಗೆ, ನಮ್ಮ ತಾಯಿ ಮಾತ್ರ ಮುತ್ತೈದೆಯಾಗಿ ಸಾವನ್ನು ಪಡೆದಿರಬಹುದು. ಆದರೆ, ನಮ್ಮ ಅಜ್ಜಿಗೆ ಆ ರೀತಿಯ ಸಾವು ಬಂದಿಲ್ಲದಿರಬಹುದು. ಪಾರ್ವಣವಾದರೆ ಮೂರೂ ಜನರಿಗೂ ಪಿಂಡವನ್ನಿಡಲೇ ಬೇಕು, ಆಗ ಅಜ್ಜಿ ಮುತ್ತಜ್ಜಿಯರು ಮುತ್ತೈದೆಯಾಗಿ ಸಾವನ್ನು ಪಡೆಯದೇ ಇದ್ದರೆ ನಾವು ಮಾಡುವ ಶ್ರಾದ್ಧ ‘ಅವಿಧವಾ'ನವಮೀ ಹೇಗಾಗುತ್ತದೆ ಎಂದು.

ಹಾಗಾದರೆ, ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರು ಮುತ್ತೈದೆ ಸಾವನ್ನು ಪಡೆದಿದ್ದರೆ ಆಗ ಅವಿಧವಾನವಮಿಯನ್ನು ಪಾರ್ವಣದ ರೀತಿಯಲ್ಲಿ ಮಾಡಬಹುದೇ ಎಂದರೆ, ಅದನ್ನೂ ಅವರು ಒಪ್ಪುವದಿಲ್ಲ. ಕಾರಣ, ಅವಿಧವಾನವಮಿ ಗಂಡ ಬದುಕಿರುವವರೆಗೆ ಮಾತ್ರ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡುವ ಹಾಗಿಲ್ಲ ಎಂದು.

ಅಂದರೆ, ತಂದೆ ಬದುಕಿದ್ದಾರೆ, ತಾಯಿ ತೀರಿಕೊಂಡಿದ್ದಾರೆ. ತಾಯಿಯ ಅವಿಧವಾನವಮೀಶ್ರಾದ್ಧವನ್ನು ಮಗ ಮಾಡುತ್ತಿದ್ದಾನೆ. ಮಂದೊಂದು ದಿನ ತಂದೆ ತೀರಿಹೋಗುತ್ತಾರೆ. ಆ ಬಳಿಕ ಮಗ ತಾಯಿಯ ಅವಿಧವಾನವಮಿಯ ಶ್ರಾದ್ಧವನ್ನು ಮಾಡುವ ಹಾಗಿಲ್ಲ ಎನ್ನುವದು ವಿವಾದ. ಇದಕ್ಕಾಗಿ "ಶ್ರಾದ್ಧಂ ನವಮ್ಯಾಂ ಕುರ್ಯಾತ್ ತನ್ಮೃತೇ ಭರ್ತರಿ ಲುಪ್ಯತೇ" ಎಂಬ ಒಂದು ವಚನವನ್ನೂ ಅವರು ಪ್ರಮಾಣವನ್ನಾಗಿ ನೀಡುತ್ತಾರೆ.

ಹೀಗಾಗಿ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನ ಮುತ್ತೈದೆಯ ಸಾವನ್ನೇ ಪಡೆದಿದ್ದರೂ, ಅಜ್ಜ ಮುತ್ತಜರು ಸತ್ತು ಹೋಗಿರುತ್ತಾರೆಯಾದ್ದರಿಂದ ಅವರಿಗೆ ಅವಿಧವಾನವಮಿಯ ಶ್ರಾದ್ಧವನ್ನು ಮಾಡಲು ಬರುವದಿಲ್ಲ, ಅದಕ್ಕಾಗಿ ಏಕೋದ್ದಿಷ್ಟವನ್ನೇ ಮಾಡಬೇಕು ಪಾರ್ವಣವನ್ನಲ್ಲ ಎನ್ನುವದು ವಿವಾದದ ಒಟ್ಟು ಸಾರಾಂಶ.

ವಸ್ತುತಃ, ಅವಿಧವಾನವಮೀ ಎನ್ನುವದು ‘ಪೂರ್ಣ'ವಾಗಿ ಮಹಾಲಯದ ಅಂಗವಲ್ಲ. ಇದನ್ನು ಮೂಲತಃ ಅನ್ವಷ್ಟಕಾಶ್ರಾದ್ಧ ಎನ್ನುತ್ತಾರೆ. ಅಷ್ಟಕಾ ಎಂದರೆ ಅಷ್ಟಮಿಯಂದು ಮಾಡುವ ಶ್ರಾದ್ಧ. ಅನ್ವಷ್ಟಕಾ ಎಂದರೆ ನವಮಿಯಂದು ಮಾಡುವ ಶ್ರಾದ್ಧ. ಮಹಾಲಯದಲ್ಲಿ ಬರುವ ನವಮಿಯಂದು ಮಾಡುವ ಅನ್ವಷ್ಟಕಾಶ್ರಾದ್ಧಕ್ಕೆ ಅವಿಧವಾನವಮೀ ಎಂದು ಹೆಸರು.

ಅಷ್ಟಕಾಶ್ರಾದ್ಧಗಳಲ್ಲಿ ಪಾರ್ವಣದ ರೀತಿಯಲ್ಲಿಯೇ ಶ್ರಾದ್ಧ. ಅನ್ವಷ್ಟಕಾಶ್ರಾದ್ಧದಲ್ಲಿ ಸಹಿತ ಮೂರು ಪಿಂಡಗಳನ್ನಿಟ್ಟೇ ಶ್ರಾದ್ಧ ಮಾಡಬೇಕು. (ಬೇರೆಯ ಅನ್ವಷ್ಟಕಾಶ್ರಾದ್ಧಗಳಲ್ಲಿ ಒಂಭತ್ತು ಪಿಂಡಗಳು. ಮಹಾಲಯದಲ್ಲಿ ಮಾಡುವ ಅವಿಧವಾನವಮಿಯಲ್ಲಿ ಮೂರು ಪಿಂಡಗಳು)

"ಅನ್ವಷ್ಟಕಾಸು ಚ ಸ್ತ್ರೀಣಾಂ ಶ್ರಾದ್ಧಂ ಕಾರ್ಯಂ ತಥೈವ ಚ I
"ಪಿಂಡನಿರ್ವಾಪಣಂ ಕಾರ್ಯಂ ತಸ್ಯಾಮಪಿ ನೃಸತ್ತಮ"

ಎಂಬ ವಚನಗಳಲ್ಲಿ ಸ್ಪಷ್ಟವಾಗಿ ಅಷ್ಟಕಾಶ್ರಾದ್ಧದಲ್ಲಿ ಹೇಗೋ ಹಾಗೆಯೋ ಅನ್ವಷ್ಟಕಾಶ್ರಾದ್ಧದಲ್ಲಿ ಪಿಂಡಪ್ರದಾನವನ್ನು ಮಾಡಬೇಕೆಂದಿದೆ. ಅಷ್ಟಕಾಶ್ರಾದ್ಧದಲ್ಲಿ ಮೂರು ಪಿಂಡಗಳನ್ನಿಟ್ಟು ಶ್ರಾದ್ಧ ಎನ್ನುವದು ನಿಶ್ಚಿತ. ಹೀಗಾಗಿ ಅವಿಧವಾನವಮಿ ಎಂಬ ಅನ್ವಷ್ಟಕಾಶ್ರಾದ್ಧದಲ್ಲಿಯೂ ಸಹ ಮೂರು ಪಿಂಡಗಳ ಶ್ರಾದ್ಧ ಎನ್ನುವದು ನಿರ್ಣೀತವಾಯಿತು.

ಇಷ್ಟೇ ವಿಶೇಷ. ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣಗಳಲ್ಲಿ ತಾಯಿಗೆ ಮುತ್ತೈದೆ ಸಾವು ಬರದಿದ್ದರೂ ಶ್ರಾದ್ಧವನ್ನು ಮಾಡಬೇಕು. ಭಾದ್ರಪದದಲ್ಲಿ ಮಾತ್ರ ತಾಯಿ ಮುತ್ತೈದೆಯಾಗಿ ಸತ್ತಿದ್ದರೆ ಆ ದಿವಸ ಸುವಾಸಿನಿಯರನ್ನು ಕರೆಯಿಸಿ ಭೋಜನವನ್ನು ಮಾಡಿಸಿ, ಸೌಭಾಗ್ಯಪದಾರ್ಥಗಳನ್ನು ದಾನ ಮಾಡಿ ಶ್ರಾದ್ಧ ಮಾಡಬೇಕು. (ಐದೂ ಅನ್ವಷ್ಟಕಾ ಮಾಡುತ್ತಿರುವವರು, ತಾಯಿ ಮುತ್ತೈದೆಯಾಗಿ ಸತ್ತಿಲ್ಲದಿದ್ದರೂ ಸೌಭಾಗ್ಯಪದಾರ್ಥವಿಲ್ಲದೇ ಭಾದ್ರಪದ ಕೃಷ್ಣ ನವಮಿಯಂದು ಶ್ರಾದ್ಧ ಮಾತ್ರ ಮಾಡಬೇಕು. ಆಗ ಅವರು ಅಷ್ಟಮೀ ದಿವಸವೂ ಶ್ರಾದ್ಧವನ್ನು (ಪಕ್ಷವನ್ನಲ್ಲ) ಮಾಡಿರಬೇಕಾಗುತ್ತದೆ.)

ಇನ್ನು, ಮುತ್ತೈದೆ ಸಾವನ್ನು ಪಡೆದವರಿಗೆ ಗಂಡ ಸತ್ತ ಬಳಿಕ ಅವಿಧವಾನವಮೀ ಇಲ್ಲ ಎನ್ನುವ ವಿವಾದ.

ವೀರಮಿತ್ರೋದಯದಲ್ಲಿ ಇದನ್ನು ಚರ್ಚೆ ಮಾಡಿ "ಶ್ರಾದ್ಧಂ ನವಮ್ಯಾಂ ಕುರ್ಯಾತ್ ತನ್ಮೃತೇ ಭರ್ತರಿ ಲುಪ್ಯತೇ" ಎನ್ನುವ ವಾಕ್ಯ ಯಾವ ಮಹಾನಿಬಂಧದಲ್ಲಿಯೂ ದೊರಕುವದಿಲ್ಲ. ಹೀಗಾಗಿ ಗಂಡ ಸತ್ತ ಬಳಿಕ ಅವಿಧವಾನವಮೀ ನಿಲ್ಲಿಸಬೇಕು ಎನ್ನುವದು ತಪ್ಪು ಎಂದು ನಿರ್ಣಯಿಸಲಾಗಿದೆ. (ಶ್ರಾದ್ಧಪ್ರಕಾಶ, ಪುಟ 289)

ಮತ್ತು ಮಧ್ವಸಿದ್ಧಾಂತದ ಪ್ರಕಾರ ಸಹಿತ ‘ಗಂಡ ಸತ್ತ ಬಳಿಕ ಮುತ್ತೈದೆತನ ಹೋಗುತ್ತದೆ' ಎನ್ನುವದನ್ನು ಒಪ್ಪಲು ಬರುವದಿಲ್ಲ. ಇದನ್ನು ವಿಸ್ತಾರವಾಗಿ ಮತ್ತೊಂದು ಲೇಖನದಲ್ಲಿ ಚರ್ಚಿಸುತ್ತೇನೆ, ಇಲ್ಲಿ ಸಂಕ್ಷೇಪವಾಗಿ ವಿವರಿಸುತ್ತೇನೆ.

ನಾವು ಚರ್ಚೆ ಮಾಡುತ್ತಿರುವ ಮುತ್ತೈದೆಸಾವು (ಭರ್ತುರಗ್ರೇ ಮೃತತ್ವ) ಎನ್ನುವದು ಈ ಜನ್ಮದ ಈ ದೇಹಕ್ಕೆ ಮಾತ್ರ ಸಂಬಂಧಿಸಿದ್ದು. ಕಾರಣ, ‘ಜೀವದ ಸಂಬಂಧ'ವನ್ನು ತೆಗೆದುಕೊಂಡರೆ ಜೀವಗಳಿಗೆ ಸಾವೇ ಇಲ್ಲವಾದ್ದರಿಂದ, ಸ್ತ್ರೀಜೀವರಿಗೆ ವೈಧವ್ಯವೇ ಇಲ್ಲವಾದ್ದರಿಂದ, ಆ ಪಕ್ಷದಲ್ಲಿ ಚರ್ಚೆಯೇ ಹುಟ್ಟುವದಿಲ್ಲ. ಹೀಗಾಗಿ, ಈ ದೇಹದ ಮುತ್ತೈದೆಸಾವು ಎನ್ನುವ ಗುಣ ಆ ದೇಹದ ಶಾಶ್ವತ ಗುಣವಾಯಿತು.

ಪ್ರಹ್ಲಾದ ಮುಂದೆ ಎಷ್ಟು ಜನ್ಮ ಎತ್ತಿದರೂ, ಮುಂದೊಂದು ದಿನ ಅವನ ದೇಹ ವಿನಾಶವಾದರೂ ಅವನ ಆ ಜನ್ಮದ ‘ಹಿರಣ್ಯಕಶಿಪುವಿನ ಮಗ' (ಹಿರಣ್ಯಕಶಿಪುಪುತ್ರತ್ವ) ಎಂಬ ಗುಣ (property) ಹೇಗೆ ಹೋಗುವದಿಲ್ಲವೋ ಹಾಗೆ "ಗಂಡನಿಗಿಂತ ಮೊದಲೇ ಸತ್ತದ್ದು" ಎಂಬ ಗುಣವೂ ಹೋಗುವದಿಲ್ಲ. ವೈಧವ್ಯ ಎಂದರೆ ಗಂಡ ಸತ್ತ ಬಳಿಕ ಬದುಕಿರುವದು. ಅದು ಆಕೆಗೆ ಬರುವದೇ ಇಲ್ಲ. ಹೀಗಾಗಿ ಒಮ್ಮೆ ಮುತ್ತೈದೆಯಾಗಿ ಸತ್ತರೆ ಮಗ ತಾನು ಸಾಯುವವರೆಗೆ ಆಕೆಗೆ ಅವಿಧವಾನವಮೀ ಶ್ರಾದ್ಧವನ್ನು ಮಾಡಲೇಬೇಕು.

ಮತ್ತೂ, ಒಂದು ಶ್ರಾದ್ಧ ನಿಲ್ಲುವದು ಅದನ್ನು ಮಾಡುವ ಕರ್ತೃ ಸತ್ತಾಗ ಮಾತ್ರ. ಬೇರೆ ಯಾವ ಸಂದರ್ಭದಲ್ಲಿಯೂ ಸಹ ಶ್ರಾದ್ಧ ನಿಲ್ಲುವದಿಲ್ಲ. ಅದಕ್ಕಾಗಿಯೇ ಗಯಾ-ಬದರೀ ಶ್ರಾದ್ಧಗಳನ್ನು ಮಾಡಿ ಬಂದ ಬಳಿಕ ಶ್ರಾದ್ಧ ಮಾಡಬಾರದು ಎಂದು ವಚನವಿದ್ದರೆ ಅದನ್ನು ಅರ್ಥವಾದ (ಗಯಾ ಬದರೀಗಳ ಮಾಹಾತ್ಮ್ಯವನ್ನು ತಿಳಿಸುವ ಪ್ರಸಂಗ) ಎಂದು ನಾವು ಒಪ್ಪಿದ್ದೇವೆ. ಶ್ರಾದ್ಧಲೋಪವನ್ನು ಒಪ್ಪಿಲ್ಲ. ಬೇರೆ ಯಾವ ರೀತಿಯಲ್ಲಿಯೂ ಶ್ರಾದ್ಧ ಲೋಪವನ್ನು ಒಪ್ಪಿಯೇ ಇಲ್ಲ. ಹಾಗೂ, ಗಂಡನ ಇರುವಿಕೆ, ಇಲ್ಲದಿರುವಿಕೆ ಗಳು ಶ್ರಾದ್ಧಕ್ಕೆ ಸಂಬಂಧಿಸಿದ್ದಲ್ಲ. ಆಕೆಯ ಸಾವಿಗೆ ಸಂಬಂಧಿಸಿದ್ದು. ಗಂಡ ಬದುಕಿರುವಾಗಲೇ ಸತ್ತವಳು ಎಂದು.

ಯುಕ್ತಿಯಿಂದ ವಿಚಾರ ಮಾಡುವವರಿಗೆ ಯುಕ್ತಿಯಿಂದಲೇ ನೀಡಿದ ಉತ್ತರವಿದು.

ಅವಿಧವಾನವಮೀಶ್ರಾದ್ಧವನ್ನು ಏಕೋದ್ದಿಷ್ಟವನ್ನಾಗಿ ಮಾಡಬೇಕು ಎನ್ನುವ ಸ್ಪಷ್ಟ ವಚನವಿಲ್ಲವಾದ್ದರಿಂದ ಮತ್ತು ಮೃತೇ ಭರ್ತರಿ ಲುಪ್ಯತೇ ಎನ್ನುವ ವಚನವೇ ಅನುಪಲಬ್ಧ ಎಂದು ಹಿಂದಿನವರು ಹೇಳಿರುವದರಿಂದ ಮೇಲಿನ ವಿವಾದದಲ್ಲಿ ಹುರುಳಿಲ್ಲ.

ಹೀಗಾಗಿ ಯಾವ ಕಾರಣದಿಂದಲೂ ಗಂಡ ಸತ್ತ ಬಳಿಕ ಅವಿಧವಾನವಮೀಶ್ರಾದ್ಧವನ್ನು ನಿಲ್ಲಿಸಬೇಕು ಎಂದು ಒಪ್ಪಲು ಸಾಧ್ಯವಿಲ್ಲ. ಅದನ್ನು ಮಾಡುವ ಕರ್ತೃ ಇರುವವರೆಗೆ ಆ ಶ್ರಾದ್ಧವನ್ನು ಮಾಡಲೇಬೇಕು. ಮತ್ತು ಅವಿಧವಾನವಮಿ ಅನ್ವಷ್ಟಕಾಶ್ರಾದ್ಧವಾದ್ದರಿಂದ ಆ ಶ್ರಾದ್ಧದ ದಿವಸ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರಿಗೂ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡಬೇಕು. ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಾರದು.

ಅವಿಧವಾನವಮೀ ಶ್ರಾದ್ಧದ ವಿಶೇಷತೆಗಳು.

ಈ ಶ್ರಾದ್ಧದಲ್ಲಿ ಮುತ್ತೈದೆಯರನ್ನು ಭೋಜನಕ್ಕೆ ಆಹ್ವಾನಿಸಬೇಕು. (ಶ್ರಾದ್ಧದ ಊಟದಲ್ಲಿಯೇ ಈ ನಿಯಮ. ಪ್ರತ್ಯಕ್ಷ ಬ್ರಾಹ್ಮಣರನ್ನು ಊಟಕ್ಕೆ ಕೂಡಿಸುವದು ಈ ದಿವಸಗಳಲ್ಲಿ ಸಾಧ್ಯವಿಲ್ಲವಾದ್ದರಿಂದ ಸಮಾರಾಧನೆಯಲ್ಲಿ ಕೂಡಿಸಬೇಕು)

ಭರ್ತುರಗ್ರೇ ಮೃತಾ ನಾರೀ ಸಹದಾಹೇನ ವಾ ಮೃತಾ I
ತಸ್ಯಾಃ ಸ್ಥಾನೇ ನಿಯುಂಜೀತ ವಿಪ್ರೈಃ ಸಹ ಸುವಾಸಿನೀಮ್ II

ಆಮಂತ್ರಿತರಾದ ಮುತ್ತೇದೆಯರಿಗೆ ಅರಿಶಿನ, ಕುಂಕುಮ, ಸೀರೆ ಕುಪ್ಪುಸ ಮುಂತಾದ ಸೌಭಾಗ್ಯಪದಾರ್ಥಗಳನ್ನು, ಬಾಗಿನಗಳನ್ನು ನೀಡಬೇಕು.
ಸ್ತ್ರೀಣಾಂ ಶ್ರಾದ್ಧೇಷು ಸಿಂಧೂರಂ ದದ್ಯುಶ್ಚಂಡಾತಕಾನಿ ಚ I
ನಿಮಂತ್ರಿತಾಭ್ಯಃ ಸ್ತ್ರೀಭ್ಯೋ ಯೇ ತೇ ಸ್ಯುಃ ಸೌಭಾಗ್ಯಸಂಯುತಾಃ II

ಎಂದು ವಿಷ್ಣುಧರ್ಮೋತ್ತರದಲ್ಲಿ ವಚನವಿದೆ.

ಪರಮಾತ್ಮ ಸಂಪತ್ತನ್ನು ನೀಡಿದ್ದರೆ, ಬೆಳ್ಳಿ ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು. ಪರಮಾತ್ಮ ತಾಯಿಗೆ ಆ ಸೌಭಾಗ್ಯವನ್ನು ನೀಡುತ್ತಾನೆ.

ಸ್ತ್ರೀಶ್ರಾದ್ಧೇ ಪುತ್ರ ದೇಯಾಃ ಸ್ಯುರಲಂಕಾರಾಶ್ಚ ಯೋಷಿತೇ I
ಮಂಜರೀ-ಮೇಖಲಾ-ದಾಮ-ಕರ್ಣಿಕಾ-ಕಂಕಣಾದಯಃ II

ಉಳಿದಂತೆ ಎಲ್ಲವೂ ಸಮಾನ. ಪಾರ್ವಣಶ್ರಾದ್ಧಕ್ಕೆ ಏನೆಲ್ಲ ವಿಧಿಗಳಿವೆಯೋ ಆ ಎಲ್ಲ ವಿಧಿಗಳನ್ನೂ ಅನುಸರಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು vishnudasa nagendracharya ಸುದ್ದಿಗಳುView All

English summary
What is Avidhava Navami? How to perform it during Pitru Paksha? Significance about Avidhava Navami Shraddha by Vishnudasa Nagendracharya, Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more