ಅನಂತ ಚತುರ್ದಶಿ 2022: ವ್ರತಾಚರಣೆ ಮಹತ್ವ, ಪಾಂಡವರ ಕಥೆ, ಶ್ರೀಕೃಷ್ಣ ಹೇಳಿದ ಕಥೆ
ಸೆಪ್ಟೆಂಬರ್ 9, ಇಂದು ಅನಂತ ಚತುರ್ದಶಿ. ಪ್ರತೀ ವರ್ಷ ಭಾದ್ರಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಅನಂತ ಚತುರ್ದಶಿ ಆಚರಿಸಲಾಗುತ್ತದೆ. ಈ ವರ್ಷ ಇಂಗ್ಲೀಷ್ ಕ್ಯಾಲೆಂಡರ್‌ನಲ್ಲಿ ಸೆ. 9ರಂದು ಇದೆ.
ಗಣಪತಿ ಮತ್ತು ವಿಷ್ಣುವಿನ ಭಕ್ತರಿಗೆ ವಿಶೇಷ ದಿನ. ಗಣೇಶನ ಹಬ್ಬವಾಗಿ ಗಣಪತಿಯನ್ನು ತಂದಿಟ್ಟುಕೊಂಡವರು ಇಂದು ವಿಸರ್ಜನೆ ಮಾಡಲು ಕೊನೆಯ ದಿನ. ಗಣೇಶ ವಿಸರ್ಜನೆಯ ದಿನ ಇದು.
ಈ ದಿನದಂದು ಭಕ್ತರು ಗಣಪತಿ ವಿಸರ್ಜನೆಗೆ ಮುನ್ನ ದೇವರಿಗೆ ದೀಪ ಬೆಳಕಿ ಊದುಬತ್ತಿ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಗಣಪನ ಮೂರ್ತಿಗೆ ಹೂವು, ಮೋದಕ, ಅರಿಶಿನ ಕುಂಕುಮ ಇತ್ಯಾದಿಯನ್ನು ಇಟ್ಟು ವಿಸರ್ಜನೆಗೆ ಕೊಂಡೊಯ್ಯುತ್ತಾರೆ. ಉತ್ತರ ಭಾರತದಲ್ಲಿ, ಅದರಲ್ಲೂ ಮಹಾರಾಷ್ಟ್ರದಲ್ಲಿ ಗಣಪತಿ ವಿಸರ್ಜನೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ನಮ್ಮ ಉತ್ತರ ಕರ್ನಾಟಕದಲ್ಲೂ ಹಲವೆಡೆ ಗಣಪತಿ ಮೆರವಣಿಗೆ ಅದ್ಭುತವಾಗಿರುತ್ತದೆ. ಗಣಪತಿ ಭಜನೆ, ನೃತ್ಯ, ಹಾಡು, ದೊಳ್ಳು ಎಲ್ಲವೂ ಅಡಕವಾಗಿರುತ್ತದೆ.

ಅನಂತ ಚತುರ್ದಶಿ ವ್ರತ
ಅನಂತ ಚತುರ್ದಶಿ ದಿನದಂದು ಉಪವಾಸ ವ್ರತ ಮಾಡುವುದು ಶ್ರೇಯಸ್ಸು ಎಂದು ನಂಬಲಾಗುತ್ತದೆ. ವಿಷ್ಣುವಿನ ಅನಂತ ಸ್ವರೂಪವನ್ನು ಇಂದು ಪೂಜಿಸಲಾಗುತ್ತದೆ. ಇದರ ಫಲವಾಗಿ ಭಕ್ತರಿಗೆ ಕೇಳಿದ ವರ ಪ್ರಾಪ್ತಿಯಾಗುತ್ತದೆ. 14 ವರ್ಷ ನಿರಂತರವಾಗಿ ಅನಂತ ಚತುರ್ದಶಿಯಂದು ಉಪವಾಸ ವ್ರತ ಮಾಡಿದವರಿಗೆ ವಿಷ್ಣು ಲೋಕ ಪ್ರಾಪ್ತಿಯಾಗುತ್ತದೆ.
ಪಾಂಡವರ ಕಥೆ
ಪಗಡೆಯಾಟದಲ್ಲಿ ಪಾಂಡವರು ತಮ್ಮ ರಾಜ್ಯವನ್ನು ಕಳೆದುಕೊಂಡು ಅರಣ್ಯದಲ್ಲಿ ಅಲೆಯುತ್ತಿದ್ದಾಗ ಅವರಿಗೆ ಅನಂತ ಚತುರ್ದಶಿಯಂದು ಉಪವಾಸ ಇರುವಂತೆ ಶ್ರೀಕೃಷ್ಣ ಸಲಹೆ ನೀಡುತ್ತಾನೆ. ಪಾಂಡವರು ತಾವು ಅಜ್ಞಾತವಾಸದಲ್ಲಿದ್ದ ಅಷ್ಟೂ ವರ್ಷವೂ ಅನಂತ ಚತುರ್ದಶಿಯಂತ ಉಪವಾಸ ವ್ರತ ಆಚರಿಸಿದ್ದರು. 14 ವರ್ಷಗಳ ನಂತರ ಪಾಂಡವರು ಯುದ್ಧದಲ್ಲಿ ಗೆಲುವು ಸಾಧಿಸುತ್ತಾರೆ.
ಅದಕ್ಕೂ ಹಿಂದೆ ರಾಜ ಸತ್ಯ ಹರಿಶ್ಚಚಂದ್ರ ಕೂಡ ಅನಂತ ಚತುರ್ದಶಿಯಂದು ಉಪವಾಸ ವ್ರತ ಆಚರಿಸಿದ ಬಳಿಕವೇ ಸಾಮ್ರಾಜ್ಯವನ್ನು ಮರಳಿ ದಕ್ಕಿಸಿಕೊಳ್ಳಲು ಸಾಧ್ಯವಾಗಿದ್ದು ಎಂದು ಪುರಾಣ ಕಥೆ ಹೇಳುತ್ತದೆ.

ಶ್ರೀಕೃಷ್ಣ ಹೇಳಿದ ಕಥೆ
ಪಾಂಡವರಿಗೆ ಅನಂತ ಚತುರ್ದಶಿ ವ್ರತದ ಮಹತ್ವದ ಬಗ್ಗೆ ವಿವರಿಸಲು ಶ್ರೀಕೃಷ್ಣ ಒಂದು ಕಥೆ ಹೇಳುತ್ತಾನೆ:
ಪುರಾಣ ಕಾಲದಲ್ಲಿ ಸುಮಂತ ಎಂಬ ಬ್ರಾಹ್ಮಣ ಮತ್ತು ಅವನ ಪತ್ನಿ ದೀಕ್ಷಾ ಇರುತ್ತಾರೆ. ಇಬ್ಬರಿಗೂ ಬಹಳ ಸುಂದರವಾದ ಸುಶೀಲಾ ಎಂಬ ಹೆಣ್ಮಗಳಿರುತ್ತಾಳೆ. ಸುಶೀಲಾ ಬೆಳೆದು ನಿಂತ ನಂತರ ತಾಯಿ ಸಾವನ್ನಪ್ಪುತ್ತಾಳೆ. ಪತ್ನಿ ನಿಧನದ ನಂತರ ಸುಮಂತನು ಕರ್ಕಶಾ ಎಂಬಾಕೆಯನ್ನು ವಿವಾಹವಾಗುತ್ತಾನೆ. ತನ್ನ ಮಗಳು ಸುಶೀಲಾಳನ್ನು ಕೌಂಡಿನ್ಯ ಋಷಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ.
ಮದುವೆ ಬಳಿಕ ಸುಶೀಲಾಳನ್ನು ಗಂಡನ ಮನೆಗೆ ಕಳುಹಿಸುವಾಗ ಅತ್ತೆ ಕರ್ಕಶಾ ತನ್ನ ಅಳಿಯ ಕೌಂಡಿನ್ಯ ಮುನಿಗಳ ಕೈಗೆ ಕೆಲ ಕಲ್ಲು ಮಣ್ಣುಗಳನ್ನು ಕಟ್ಟಿ ಕಳುಹಿಸುತ್ತಾಳೆ. ಮನೆ ತಲುಪಿದ ಬಳಿಕ ನದಿಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ. ಈ ವೇಳೆ ನದಿಯ ದಡದಲ್ಲಿ ಹಲವು ಸ್ತ್ರೀಯರು ಯಾವುದೋ ದೇವತೆಗಳಿಗೆ ಪೂಜೆ ಮಾಡುತ್ತಿರುವುದು ಸುಶೀಲಾಳ ಕಣ್ಣಿಗೆ ಬೀಳುತ್ತದೆ. ಅದೇನೆಂದು ಕೇಳಿದಾಗ ಅನಂತ ದೇವರ ಪೂಜೆ ಮಾಡುತ್ತಿರುವುದು ಗೊತ್ತಾಗುತ್ತದೆ. ಆ ಇಡೀ ದಿನ ಉಪವಾಸ ವ್ರತ ಮಾಡಿ ಅನಂತನ ಪೂಜೆ ಮಾಡಿದರೆ ಸರ್ವಸಿದ್ಧಿ ಸಿಗುತ್ತದೆ ಎಂಬ ವಿಚಾರ ತಿಳಿದು ಸುಶೀಲಾಳೂ ಆಚರಿಸುತ್ತಾಳೆ. ನಂತರ ಕೈಗೆ 14 ದಾರಗಳನ್ನು ಕಟ್ಟುಕೊಂಡು ಕೌಂಡಿನ್ಯ ಮುನಿ ಬಳಿ ಬರುತ್ತಾಳೆ.
ಸುಶೀಲಾ ಕೈಗೆ ಕಟ್ಟಿರುವ ದಾರದ ಬಗ್ಗೆ ಕೌಂಡಿನ್ಯ ಕೇಳಿದಾಗ ಎಲ್ಲವನ್ನೂ ಹೇಳುತ್ತಾಳೆ. ಆದರೆ, ಇದನ್ನು ನಂಬದ ಕೌಂಡಿನ್ಯ ತನ್ನ ಹೆಂಡತಿ ಕೈಯಲ್ಲಿದ್ದ ದಾರಗಳನ್ನು ಕಿತ್ತು ಬೆಂಕಿಗೆ ಹಾಕುತ್ತಾರೆ. ಈ ಘಟನೆಯ ಬಳಿಕ ಕೌಂಡಿನ್ಯ ಋಷಿಯ ಎಲ್ಲಾ ಆಸ್ತಿಯೂ ನಾಶವಾಗಿ ಅವರ ಜೀವನದಲ್ಲಿ ಅಸಂತುಷ್ಟಿ ಮನೆಮಾಡಿತು.
ದಿಕ್ಕು ತೋಚದ ಕೌಂಡಿನ್ಯ ತನ್ನ ಹೆಂಡತಿ ಬಳಿ ಕಾರಣ ಏನಿರಬಹುದು ಎಂದು ಕೇಳುತ್ತಾರೆ. ಕೈಗೆ ಕಟ್ಟಿದ ದಾರವನ್ನು ಸುಟ್ಟು ಹಾಕಿದ್ದರ ಫಲ ಇರಬಹುದು ಎಂದು ಸುಶೀಲಾ ಅನುಮಾನಿಸುತ್ತಾಳೆ. ಇದು ನಿಜವೆನಿಸಿ ಕೌಂಡಿನ್ಯ ಮುನಿ ಕಾಡಿಗೆ ಹೋಗಿ ಅನಂತನ ಪ್ರಾಪ್ತಿಗಾಗಿ ಹಲವಾರು ದಿನ ಅಲೆದಾಡಿ ಅಲೆದಾಡಿ ಕೊನೆಗೆ ಒಂದು ದಿನ ಸುಸ್ತಾಗಿ ಕುಸಿದು ಬೀಳುತ್ತಾರೆ.
ಆಗ ಅನಂತ ದೇವರು ಪ್ರತ್ಯಕ್ಷನಾಗಿ, "ಓ ಕೌಂಡಿನ್ಯ, ನೀನು ನನ್ನನ್ನು ತಿರಸ್ಕರಿಸಿದ ಫಲವಾಗಿ ಇಷ್ಟು ಕಷ್ಟ ಅನುಭವಿಸಿದೆ. ಈಗ ನಿನಗೆ ಪಶ್ಚಾತಾಪವಾಗಿದೆ. ನನಗೆ ಸಮಾಧಾನವಾಗಿದೆ. ಈಗ ನೀನು ಮನೆಗೆ ಹೋಗಿ ಶಾಸ್ತ್ರ ಪ್ರಕಾರವಾಗಿ ಉಪವಾಸ ವ್ರತ ಆಚರಿಸು. 14 ವರ್ಷ ನೀನು ಈ ರೀತಿ ವ್ರತ ಆಚರಿಸಿದರೆ ನಿನ್ನ ಕಷ್ಟಗಳು ಬಗೆಹರಿಯುತ್ತವೆ. ಸಂಪತ್ತು ಸಮೃದ್ಧಿ ತುಂಬುತ್ತದೆ" ಎಂದು ಹೇಳುತ್ತಾನೆ. ಅದರ ಪ್ರಕಾರವಾಗಿ ಕೌಂಡಿನ್ಯ ಮುನಿಗಳು ಉಪವಾಸ ವ್ರತ ಆಚರಿಸಿ ಎಲ್ಲಾ ಫಲಗಳನ್ನೂ ಗಳಿಸುತ್ತಾರೆ.
ಶ್ರೀಕೃಷ್ಣ ಈ ಕಥೆ ಹೇಳಿದ ಬಳಿಕ ಪಾಂಡವರ ಹಿರಿಯ ಯುಧಿಷ್ಠಿರ 14 ವರ್ಷ ಕಾಲ ಅನಂತನಿಗಾಗಿ ಉಪವಾಸ ವ್ರತ ಆಚರಿಸುತ್ತಾರೆ. ಮಹಾಭಾರತ ಯುದ್ಧದಲ್ಲಿ ಪಾಂಡವರು ಕೌರವರ ವಿರುದ್ಧ ಗೆದ್ದು ಮರಳಿ ಸಾಮ್ರಾಜ್ಯ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇದಾದ ಬಳಿಕ ಅನಂತ ಚತುರ್ದಶಿಯಂದು ಉಪವಾಸ ವ್ರತ ಆಚರಿಸುವ ಸಂಪ್ರದಾಯ ಬೆಳೆದುಬಂದಿದೆ ಎಂದು ಹೇಳಲಾಗುತ್ತದೆ.












Click it and Unblock the Notifications