ಒಲವಿನ ಬಣ್ಣ ಚೆಲ್ಲುವ ಹೋಳಿ ಹಬ್ಬ

ಉತ್ತರ ಕರ್ನಾಟಕದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸೋಂದೆಯಲ್ಲಿ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಒಂಬತ್ತು ತಿಂಗಳ ಮಗುವಿನಿಂದ ತೊಂಬತ್ತು ವರ್ಷದ ವೃದ್ಧರವರೆಗಿನ ಪುರುಷರು ಓಕುಳಿ ಎರಚಿ ಸಂತಸ ಪಡುತ್ತಾರೆ. ಗುಲಾಲ್, ವಾರ್ನಿಸ್, ಕೆಂಪು, ಹಳದಿ, ನೇರಳೆ, ಹಸಿರು ಬಣ್ಣಗಳು ಎಲ್ಲೆಡೆ ಚೆಲ್ಲಾಡುತ್ತಲೇ ಖುಷಿಯನ್ನು ಹಂಚುತ್ತವೆ.
ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬದ ಬೆಳಗಿನ ಜಾವ ಕುಳ್ಳು ಕಟ್ಟಿಗೆಗಳಿಂದ ಕಾಮಣ್ಣನ ಪ್ರತಿಕೃತಿಯನ್ನು ಸುಡುತ್ತಾರೆ. ಇದು ನಮ್ಮಲ್ಲಿಯ ಕಾಮವನ್ನು ಕೂಡ ದಹಿಸುತ್ತದೆ ಎಂಬ ನಂಬಿಕೆಯಿದೆ. ಬೆಳಗಾಗುತ್ತಿದ್ದಂತೆ ಪಿಚಕಾರಿಯಲ್ಲಿ ತುಂಬಿದ ಬಣ್ಣ ಒಲವನ್ನು ಸ್ನೇಹಿತರ, ಸಂಬಂಧಿಗಳ ಮೈಮೇಲೆ ಚೆಲ್ಲಾಡುತ್ತದೆ, ಸಂತಸದ ಹೊಳೆಯನ್ನು ಹರಿಸುತ್ತದೆ.
ಚಿಣ್ಣರಿಗಂತೂ ಬಣ್ಣದಾಟವಾಡುವುದು ಇಡೀ ಜಗತ್ತನ್ನೇ ಮರೆಯುವಂತೆ ಮಾಡುತ್ತದೆ. ರಂಗುರಂಗಾದ ಮೊಗ ಇನ್ನೊಬ್ಬರ ಗುರುತಿಗೆ ಕೂಡ ಸಿಕ್ಕುವುದಿಲ್ಲ. ಹುಬ್ಬಳ್ಳಿಯಲ್ಲಿ ರಂಗಿನಾಟವನ್ನು ಐದು ದಿನ ಆಚರಿಸಲಾಗುತ್ತದೆ. ಅದಕ್ಕೇ ರಂಗಪಂಚಮಿ ಅಂತಲೂ ಕರೆಯುತ್ತಾರೆ. ಬಣ್ಣ ಆಡದವರನ್ನು ಹೇಡಿ ಅಂತಲೂ ಅಲ್ಲಿ ಬಣ್ಣಿಸುತ್ತಾರೆ. ತಾಯಂದಿರುವ ರುಚಿಕಟ್ಟಾದ ಹೋಳಿಗೆ ಮಾಡಿ ಮನೆಮಂದಿಗೆಲ್ಲ ಬಡಿಸುತ್ತಾಳೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದೆಯಲ್ಲಿ ಹೋಳಿ ಹುಣ್ಣಿಮೆಯ ರಾತ್ರಿಯಂದು ಭೂತರಾಜನಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಕರ್ನಾಟಕದ ಎಲ್ಲೆಡೆಯಿಂದ ಬಂದ ಭಕ್ತಾದಿಗಳು ಮೂರು ದಿನ ಈ ಸಂಭ್ರಮದಲ್ಲಿ ಮಿಂದೇಳುತ್ತಾರೆ.
ಕೋಮುಸೌಹಾರ್ದತೆಯ ಸಂಕೇತ : ಈ ಹಬ್ಬದಲ್ಲಿ ಹಿಂದೂಗಳು ಮಾತ್ರವಲ್ಲ ಮುಸ್ಲಿಂರು ಕೂಡ ಅತ್ಯಂತ ಸಂತಸದಿಂದ ಆಚರಣೆಯಲ್ಲಿ ಸಹಾಯಹಸ್ತ ಚಾಚುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ನಗರಗಳತ್ತ ಮುಖಮಾಡಿರುವುದರಿಂದ ಈ ಆಚರಣೆಯ ಸಂಭ್ರಮ ಕಡಿಮೆಯಾಗುತ್ತಿದೆ. ನಗರಗಳಲ್ಲಂತೂ ಕಾಟಾಚಾರಕ್ಕೆ ಮಾತ್ರ ಬಣ್ಣದಾಟವಾಡಲಾಗುತ್ತಿದೆ. ಬೆಂಗಳೂರಿನಂಥ ನಗರಗಳಲ್ಲಿ ಇದರ ಆಚರಣೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.
ಬೆಳಗಾವಿಯಲ್ಲಿ ಕೋಮು ಘರ್ಷಣೆ : ಈ ಬಾರಿ ಹೋಳಿ ಹಬ್ಬ ಮತ್ತು ಮುಸ್ಲಿಂರ ಹಬ್ಬ ಈದ್ ಮಿಲಾದ್ ಒಂದೇ ದಿನ ಬಂದಿರುವುದರಿಂದ ಬೆಳಗಾವಿಯಲ್ಲಿ ಕೋಮು ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ. ನಗರದ ಟಿಳಕವಾಡಿಯಲ್ಲಿ ಎರಡೂ ಕೋಮುಗಳ ನಡುವೆ ಕಲ್ಲು ತೂರಾಟ ನಡೆದಿದ್ದರಿಂದ 12 ಜನರಿಗೆ ಗಾಯಗಳಾಗಿವೆ. ಹಲವಾರು ವಾಹನಗಳು ಜಖಂ ಆಗಿವೆ. ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications