ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು'

By * ಮಲೆನಾಡಿಗ
|
Google Oneindia Kannada News

Significance of Guru Shishya Parampare
'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು' ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಕಾಳಜಿ ಕಡಿಮೆಯಾಗಿರುವುದು ಕಂಡು ಬರುತ್ತದೆ.

ಕೇವಲ ಪದವಿ ಸಂಪಾದನೆಗಾಗಿ ಓದುವ ವಿದ್ಯಾರ್ಥಿಗಳು, ಹಣದ ಮೋಹಕ್ಕೋ ಅಥವಾ ಒಣಪ್ರತಿಷ್ಠೆಗಾಗಿಯೊ ಪಾಠ ಮಾಡುವ ಶಿಕ್ಷಕರು ಹೆಚ್ಚಾಗಿದ್ದಾರೆ. ಇವೆಲ್ಲದರ ನಡುವೆ ಬದಲಾವಣೆಯೇ ಕಾಣದ ಪಠ್ಯಕ್ರಮ. ಒಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಅಧೋಗತಿ ಕಾಣುತ್ತಿರುವುದಂತೂ ಸತ್ಯ.

ಹಳಸಿದ ಗುರು-ಶಿಷ್ಯರ ಸಂಬಂಧ: ದಿನ ಬೆಳಗಾದರೆ ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧರಣಿ. ಶಿಕ್ಷಕರಿಂದಲೂ ನಾನಾ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ಕಾಣುತ್ತಿರುತ್ತೇವೆ. ಶಿಕ್ಷಣವು ಇಂದು ವ್ಯಾಪರೀಕರಣವಾಗಿ ಮಾರ್ಪಟ್ಟಿದೆ. ಹಣವಂತರಿಗೆ ಸುಲಭವಾಗಿ ಸಿಗುವ ಸೀಟುಗಳು, ಓದಿನಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗೆ ಸಿಗದಂತಾಗಿದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಮೀಸಲಾತಿಯನ್ನು ಸೃಷ್ಟಿಸುವ ಸರ್ಕಾರ. ಭಾರತದ ಇತಿಹಾಸವನ್ನೇ ಅಳಿಸಿ, ಹೊಸ ರೀತಿಯ ಇತಿಹಾಸ ರಚಿಸಿ ಅದನ್ನೇ ಸತ್ಯವೆಂದು ಪಠ್ಯಕ್ರಮದಲ್ಲಿ ಅಳವಡಿಸುವ ಇಲಾಖೆ ಇವರೆಲ್ಲರ ನಡುವೆ ಕತ್ತರಿಯ ನಡುವೆ ಸಿಕ್ಕ ಅಡಿಕೆಯಂತಾಗಿದೆ ವಿದ್ಯೆ.

ಪರಿಸ್ಥಿತಿ ಹೀಗಿರುವಾಗ ಗುರು-ಶಿಷ್ಯರ ಸಂಬಂಧ ಹೇಗೆ ವೃದ್ಧಿಸುತ್ತದೆ ಹೇಳಿ. ಹಿಂದೆಲ್ಲಾ ಹೀಗಿರಲಿಲ್ಲ ಗುರುಶಿಷ್ಯರ ಸಂಬಂಧ. ವಿಶ್ವದಲ್ಲೇ ಭಾರತದ ಶಿಕ್ಷಣ ವ್ಯವಸ್ಥೆ ಶ್ರೇಷ್ಠಮಟ್ಟದಲ್ಲಿತ್ತು. ಬಂಗಾಳ, ನಲಂದಾ, ಕಂಚಿಯಲ್ಲಿ ಅಷ್ಟೇ ಏಕೆ ಧಾರವಾಡ, ಬಿಜಾಪುರ ಹಾಗೂ ಅರಸೀಕೆರೆಯೂ ಕೂಡ ಪ್ರಮುಖ ವಿದ್ಯಾಕೇಂದ್ರವಾಗಿತ್ತೆಂದರೆ ನಿಮಗೆ ಆಶ್ಚರ್ಯವಾಗಬಹುದು.

ಗುರುಕುಲ ಪದ್ಧತಿ ಪುನರುತ್ಥಾನ:ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಬಲ್ಲ ಶ್ರೇಷ್ಠ ವಿದ್ವಾಂಸರು ನಮ್ಮಲ್ಲಿದ್ದರು. ಅವರೆಲ್ಲರ ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನ ಇರುವುದನ್ನು ಕಾಣಬಹುದು. ಆದರೆ ಅವರ ಸಂಶೋಧನೆಗಳು ಬರೀ ಕಡತದಲ್ಲಿ ಕೊಳೆಯುವಂತಾಗಿದ್ದು ವಿಪರ್ಯಾಸ. ಎಲ್ಲಾ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದ ಭಾರತೀಯರಿಗೆ ಕಡೆಗೆ ವಿಶ್ವಮಟ್ಟದಲ್ಲಿ ಸಿಗಿದ್ದು 'ಸೊನ್ನೆ'ಯೇ.

ಹಿಂದೆ ಗುರುಕುಲ ಪದ್ಧತಿಯಲ್ಲಿ ಗುರುಶಿಷ್ಯರು ಒಂದೆಡೆ ನೆಲೆಸಿ, ಒಂದೇ ಬಗೆಯ ಆಹಾರ ಸೇವಿಸಿ, ಸಮವಸ್ತ್ರ ಧರಿಸಿಕೊಳ್ಳುತ್ತಿದ್ದರು. ಮುಂಜಾನೆಯಿಂದ ಮುಸ್ಸಂಜೆಯವರೆಗೂ ಕಟ್ಟುನಿಟ್ಟಿನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ವಿದ್ಯೆಯನ್ನು ಕಲಿಯುವ ಅವಕಾಶವಿತ್ತು.

ಜಾತಿ ಭೇದವಿಲ್ಲದ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸದ್ವಿದ್ಯೆಯನ್ನು ಪಡೆಯಬಹುದಾಗಿತ್ತು. ಈಗ ಈ ರೀತಿಯ ವಾತಾವರಣ ನವೋದಯ ಶಾಲೆಯಲ್ಲಿ, ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಶಾಲೆಯಲ್ಲಿ, ಕೆಲವು ಮಿಲಿಟರಿ ಶಾಲೆಗಳಲ್ಲಿ ಹಾಗೂ ನಗರದ ಕೆಲ ವಸತಿ ಶಾಲೆಯಲ್ಲಿ ಮಾತ್ರ ನೋಡಬಹುದಾಗಿದೆ. ಶಿಕ್ಷಕರ ಮೇಲಿನ ಅಕ್ಕರೆಗಿಂತ ಶಿಕ್ಷಕರ ಶಿಕ್ಷೆಗೆ ಹೆದರಿ ಅವರಿಗೆ ಗೌರವ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

'ಶ್ರದ್ಧಾವಾನ್ ಲಭತೇ ಜ್ಞಾನಂ' ಎಂಬ ಮಾತಿದೆ. ಶ್ರದ್ಧೆಯಿಂದ ಕಲಿಯುವವರಿಗೆ ಯಾವ ವಿದ್ಯೇನೂ ಕಷ್ಟ ಅನಿಸದು. ಏಕಲವ್ಯನಂತಹ ಕೆಲವರು ಮಾತ್ರ ಗುರುವನ್ನು ಕಲ್ಪಿಸಿಕೊಂಡು ಶ್ರದ್ಧಾಪೂರ್ವಕವಾಗಿ ವಿದ್ಯೆಯನ್ನು ಗಳಿಸಬಲ್ಲರು. ಸತ್ಯಕಾಮ ಜಾಬಲನಂತಹ ಶ್ರದ್ಧೆವುಳ್ಳವರಿಗೆ ಪ್ರಕೃತಿಯೇ ಗುರುವಾಗಬಲ್ಲದು. ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆಯ ಜೊತೆಗೆ ಸ್ವಂತ ಪರಿಶ್ರಮದ ಅಗತ್ಯವಿರುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೆ ನಮ:
-ಜ್ಞಾನವೆಂಬ ಸಲಾಕೆಯಿಂದ, ಶಿಷ್ಯರ ಅಜ್ಞಾನವೆಂಬ ಅಹಂಕಾರವನ್ನೂ ತೊಡೆದು
ಜ್ಞಾನಚಕ್ಷುವನ್ನು ತೆರೆಸಿ ಕಾಪಾಡುವ ಗುರುವಿಗೆ ನಮಸ್ಕಾರ ನಮ್ಮಲ್ಲಿಡಗಿರಬಹುದಾದ ಜ್ಞಾನವೆಂಬ ಬೆಳಕನ್ನು ಹೊರಜಗತ್ತಿಗೆ ತೋರುವ ಕೆಲಸವಾಗಬೇಕಾಗಿದೆ. ನಮ್ಮಲ್ಲಿರುವ ಶಕ್ತಿಯನ್ನು ನಮಗರಿವಾಗುವಂತೆ ಮಾಡುವುದೇ ಗುರುವಿನ ಕಾಯಕ.

ದಾಸರು ಹೇಳಿದ ಹಾಗೆ 'ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ' ಗುರುವಿನ ಸಾಮೀಪ್ಯದಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಅವತಾರ ಪುರುಷರಾದ ಶ್ರೀಕೃಷ್ಣ, ಶ್ರೀರಾಮಚಂದ್ರರೇ ಗುರುವಿನ ಮೊರೆ ಹೊಕ್ಕರು. ಸಾಂದೀಪನಿ ಮುನಿಗಳ ಹತ್ತಿರ ನೆಲೆಸಿ ಕೃಷ್ಣ ವಿದ್ಯೆಯನ್ನು ಕಲಿತರೆ. ರಾಮ ವಸಿಷ್ಟರ ಪ್ರಿಯ ಶಿಷ್ಯನಾಗಿದ್ದ.

ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು


'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಶಂಕರಾಚಾರ್ಯರಿಗೆ ಒಮ್ಮೆ ಚಂಡಾಲನೋರ್ವನಿಂದ ಉಪದೇಶವಾಯಿತಂತೆ (ಚಂಡಾಲ ರೂಪದಲ್ಲಿ ಶಿವನೇ ಬಂದಿದ್ದ ಅನ್ನೋದು ಇರಲಿ) ಚಂಡಾಲನು ಮಾತುಗಳನ್ನು ನಾನೇಕೆ ಕೇಳಬೇಕು ಎಂದು ಶಂಕರರು ನಿರ್ಧರಿಸಬಹುದಾಗಿತ್ತು. ಆದರೆ ಚಂಡಾಲನ ಮಾತುಗಳನ್ನು ಆಲಿಸುವ ವ್ಯವಧಾನ ಹಾಗೂ ಪರರ ಬಗ್ಗೆ ಗೌರವ ನೀಡುವ ಸಂಸ್ಕಾರವಿತ್ತು ಅವರಲ್ಲಿ.

ಹೌದು, ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ಇದೇ. ಗುರುಗಳ ಮಾತನ್ನು ಆಲಿಸದ ವಿದ್ಯಾರ್ಥಿವೃಂದ. ತಾನು ಹೇಳಿದ್ದೇ ಸರಿಯೆಂಬ ಗರ್ವದಿ ಮೆರೆವ ಕೆಲ ಶಿಕ್ಷಕರು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಗೌರವ ಕಡಿಮೆಯಾಗಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲವೆನ್ನಿಸುತ್ತದೆ. ಶಿಷ್ಯಂದಿರು ಗುರು ಹೇಳಿಕೊಟ್ಟದ್ದನ್ನು ಸರಿಯಾಗಿ ಆಲಿಸಿ, ನಂತರ ಅದನ್ನು ಮನನ ಮಾಡಿ ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ್ಯವಾದ ಗುರುವನ್ನು ಆರಿಸುವ ಹಕ್ಕು ಶಿಷ್ಯನಿಗೆ ಇರುತ್ತದೆಯಾದರೂ ಗುರುಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭೇದ ಸಲ್ಲದು.

ಗುರುಗಳ ಮಹತ್ವ ಕಡಿಮೆ?: ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ.

ಉಗ್ರರು, ನಕ್ಸಲೀಯರ ಹಿಂದೆ ಪ್ರಜ್ಞಾವಂತರಾದ ಎಷ್ಟೊ ವಿದ್ಯಾರ್ಥಿಗಳು ಇದ್ದಾರೆಂಬುದು ವಿಷಾದದ ಸಂಗತಿ. ಈ ರೀತಿಯ ದಾರಿ ತಪ್ಪಿದ ಮಕ್ಕಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದೆ ಇರುವುದೇ ಕಾರಣವೆನಿಸುತ್ತದೆ. ಇನ್ನೊಂದೆಡೆ ಶಿಕ್ಷಕರ ಕೊರತೆಯಿಂದ ಕೂಡಿದ ಗ್ರಾಮೀಣ ಶಾಲೆಗಳು, ಮೂಲಭೂತ ಸೌಲಭ್ಯವನ್ನು ಕಾಣದ ಅನೇಕ ಶಾಲೆಗಳು ಇವೆ. ಆದರೆ ಎಲ್ಲೂ ಶಿಕ್ಷಕರು ಅಧಿಕ ಸಂಖ್ಯೆಯಿಂದ ಕೂಡಿದ ಶಾಲೆಗಳನ್ನು ಕಾಣೆ.

ವಿದ್ಯೆ ನೀಡಿದ ಗುರುವಿಗೆ ಪ್ರತಿಯಾಗಿ ಗುರುದಕ್ಷಿಣೆ ನೀಡುವ ಕಾಯಕ ಹಿಂದಿನಿಂದ ಬಂದಿದೆ. ಆದರೆ ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯಕವನ್ನು ಇಟ್ಟುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ.

ಸಾವಿರಾರು ಶಿಷ್ಯರಿದ್ದರೂ ಗುರು ಮಾತ್ರ ಒಬ್ಬನೇ. ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ. ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು. ಈಗಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ರವರು ಕೂಡ ತಮ್ಮ ಗುರುವಾದ ಶಿವಶಂಕರ್ ಅಯ್ಯರ್ ಅವರನ್ನು ನೆನಪಿಕೊಳ್ಳದ ವೇದಿಕೆ ಇಲ್ಲವೆನ್ನಬಹುದು. ತಾವು ಹೋದೆಡೆಯೆಲ್ಲ ಮಕ್ಕಳಿಗೆ ವಿದ್ಯೆಯ ಮಹತ್ವ, ಗುರುವಿನ ಅಗತ್ಯತೆಯ ಬಗ್ಗೆ ತಿಳಿಹೇಳುತ್ತಿರುತ್ತಾರೆ.

ಶಾಲಾಕಾಲೇಜಿನ ದಿನಗಳು ಮುಗಿದ ಮೇಲೆ ವಿದ್ಯಾರ್ಥಿ/ನಿಯರು ಶಿಕ್ಷಕರನ್ನು ಮರೆಯುವುದು ಸಹಜ. ಇಂದು ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.

ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.


'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ. 'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂದುರಿಗಿ ನೋಡಿದಾಗಲೇ ತೃಪ್ತಿ ದೊರೆಯುವುದು.'

ನೀವು ನಿಮ್ಮ ಕಾಲೇಜಿನ ಅಥವಾ ಶಾಲೆಯ ಅದರಲ್ಲೂ ಪ್ರಾಥಮಿಕ ಶಾಲೆಯ ಗುರುಗಳನ್ನು ಭೇಟಿ ಮಾಡಿ ಮಾತನಾಡಿಸಿ. ಅವರಿಗೆ ನಿಮ್ಮ ನೋಡಿದಾಗ ಆಗುವ ಸಂತೋಷದ ಪರಿಯನ್ನು ನೋಡಿ ವಿಸ್ಮಿತರಾಗಿರಿ.... ಪ್ರಯತ್ನಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X