ಗಣೇಶ ಪಂಚರತ್ನ
ಸಂಸ್ಕೃತ-ಕನ್ನಡ ಉಭಯಭಾಷಾ ಕೋವಿದರಾದ ಬೀರೂರು ಚಿದಂಬರ ಜೋಯಿಸರು ವನಸುಮದಂತೆ ಬಾಳಿ-ಬದುಕಿದವರು. ಕಾಶೀಪಂಡಿತಸಭಾದಿಂದ ''ಸಂಸ್ಕೃತಕವಿಕಂಠೀರವ"" ಎಂಬ ಬಿರುದನ್ನೂ, ಕರ್ನಾಟಕ ಸರ್ಕಾರ-ಗಾಂಧೀ ಸ್ಮಾರಕ ನಿಧಿಯ ವತಿಯಿಂದ ಸುವರ್ಣ ಪದಕವನ್ನೂ ಗಳಿಸಿದ್ದ ಅವರ ಲೇಖನಿಯಿಂದ ಹಲವಾರು ಅತ್ಯುತ್ತಮ ಕೀರ್ತನೆ, ಭಜನೆ, ಕಾವ್ಯಗಳು ಹೊರಹೊಮ್ಮಿವೆ. ಇವರ ಆಯ್ದ ಭಜನೆ-ಕೀರ್ತನೆಗಳ ಸಂಕಲನವಾದ 'ಭಜನಮಣಿಮಾಲಾ" ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಇದರಿಂದ ಆಯ್ದ ಗಣಪತಿಯನ್ನು ಸ್ತುತಿಸುವ ಕೀರ್ತನೆ '"ವನ್ನು ಗಣಪತಿ ಹಬ್ಬದ ಶುಭಸಂದರ್ಭದಲ್ಲಿ ಬೀರೂರು ಚಿದಂಬರ ಜೋಯಿಸರ ಮೊಮ್ಮಗ ಶ್ಯಾಂ ಕಿಶೋರ್ ಅವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಸಂಪೂರ್ಣ 'ಗಣೇಶ ಅಥರ್ವಶೀರ್ಷ"ದ ಸಾರವನ್ನು ನಾವು ಈ ಭಜನೆಯ ಐದು ಚರಣಗಳಲ್ಲಿ ಕಾಣಬಹುದಾಗಿದೆ.
(ರಾಗ - ಸಿಂಧು ಭೈರವಿ)
ಏಕದಂತ ವಕ್ರತುಂಡ ವಿಘ್ನರಾಜನೇ।
ಮೊದಲು ನಿನ್ನ ಭಜಿಸಿದವಗೆ ಕಾರ್ಯಸಾಧನೆ।। ।।ಪ।।
ಶ್ರುತಿಯು "ತತ್ವಮಸಿ"ಯು ನೀನೆ ನೀನೆ ಕರ್ತೃವೂ।
ನೀನೆ ಲೋಕಸಂರಕ್ಷಕ ನೀನೆ ಸಂಹಾರಕ।।
ನೀನು ನಿತ್ಯನಾತ್ಮ ನೀನು ನೀನೆ ಬ್ರಹ್ಮವೂ।
ಜ್ಞಾನಮಯನು ನೀನೆ ದೇವ ನೀನೆ ಚಿನ್ಮಯ ।।1।।
ಭೂಮಿ ನೀನು ಜಲವು ನೀನು ನೀನೆ ಅಗ್ನಿ ವಾಯುವೂ।
ಅಂತರಿಕ್ಷವೆಲ್ಲ ನೀನೆ ವೇದರೂಪನೂ।।
ಮೂರುಗುಣವ ಮೀರಿದವನು ಮೂರುದೇಹವಿಲ್ಲದವನು।
ಕಾಲಮೂರ ದಾಟಿದವನು ಶಕ್ತಿರೂಪನೂ ।।2।।
ಬ್ರಹ್ಮ ನೀನು ವಿಷ್ಣು ನೀನು ನೀನೆ ರುದ್ರನೂ।
ಇಂದ್ರನಗ್ನಿವಾಯು ನೀನೆ ಚಂದ್ರ ಸೂರ್ಯರೂ।।
ಪಾಶಾಂಕುಶಧಾರಿದೇವ ವರದಾಭಯ ಹಸ್ತನೇ।
ಇಲಿಯನೇರಿ ಮೆರೆವ ದೊರೆಯೆ ಮೂಷಕಧ್ವಜ ।।3।।
ಲಂಬೋದರ ರಕ್ತವಸನ ಶೂರ್ಪಕರ್ಣನೇ।
ರಕ್ತಗಂಧಲಿಪ್ತದೇಹ ರಕ್ತಕುಸುಮ ಪೂಜಿತ।।
ವ್ರಾತಪತಿಯೆ ಪ್ರಮಥಪತಿಯೆ ನಮಿಪೆ ಗಣಪತಿ।
ನುತಿಪೆ ಶಿವನ ಸುತನೆ ನಿನ್ನ ವರದಮೂರ್ತಿಯೇ ।।4।।
ನಿನ್ನ ನಾಮ ಪಠಿಸಲವಗೆ ವಿಘ್ನವಿಲ್ಲವೋ।
ನಿನ್ನ ಹಾಸ್ಯಗೈದ ಶಶಿಗೆ ಕ್ಷಯವು ಬಂದುದೂ।।
ನಮಿಸೆ ನಿನ್ನ ಸಿದ್ಧಿ ಬುದ್ಧಿ ತಾನೆ ದೊರೆವುದೂ।
ಅದುವೆ ನೀ ಚಿದಂಬರೇಶ ಮನದೊಳಿರುವುದೂ ।।5।।












Click it and Unblock the Notifications