Get Updates
Get notified of breaking news, exclusive insights, and must-see stories!

ಗಣಪನ ಕತೆಗಳು

ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌

ಅಗಜಾನನ ಪದ್ಮಾರ್ಕಂ ಗಜಾನನ ಮಹನಿರ್ಶಂ।
ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ।।

ಯಾವುದೇ ಶುಭಕಾರ್ಯವಾದರೂ ಮೊದಲು ವಂದನೆ ಈ ಗಣಪನಿಗೆ, ಮಾಡುವ ಕೆಲಸಗಳು ನಿರ್ವಿಘ್ನವಾಗಿ ಸಾಗಲಿ ಎಂದು. ಆದಿ ಶಂಕರರಿಂದ ಪೂಜಿಸಲ್ಪಟ್ಟ ಐದು ದೇವತೆಗಳಲ್ಲಿ ಒಬ್ಬನಾದವನು ಗಣೇಶ. ಶಂಕರರ 'ಪಂಚಾಯತನ ಪೂಜೆ"ಯಲ್ಲಿ ಬರುವ ಇತರ ದೇವತೆಗಳು ವಿಷ್ಣು, ಈಶ್ವರ, ಶಕ್ತಿ ಹಾಗೂ ಸೂರ್ಯ.

ಜಗತ್ತಿನ ಪ್ರತಿ ಚರಾಚರ ವಸ್ತುಗಳನ್ನು ಯಾವುದಾದರೂ ಒಂದು ಗುಂಪು ಅಥವ ಗಣವಾಗಿ ವಿಂಗಡಿಸಬಹುದು. ಮನುಷ್ಯ ಗಣ, ಪ್ರಾಣಿ ಗಣ, ಪಕ್ಷಿ ಗಣ ಹೀಗೆ. ಇವೆಲ್ಲಕ್ಕೂ ಈ ಶಿವಸುತ ಅಧಿಪತಿಯಾದ್ದರಿಂದ ಅವನನ್ನು ಗಣಾಧಿಪತಿ ಅಥವ ಗಣಪತಿ ಎಂದು ಕರೆಯುತ್ತಾರೆ.

ಗಣೇಶನ ಆನೆಯ ತಲೆ ಮಾನವ ದೇಹ ಹಿಂದಿರುವ ಅರ್ಥವನ್ನು 'ಮುದ್ಗಲ ಪುರಾಣ"ದಲ್ಲಿ ವಿವರಿಸಿದೆ. ಮಾನವ ದೇಹವು 'ತ್ವಂ" ಎಂದು ಸೂಚಿಸಿದರೆ ಆನೆಯ ತಲೆ 'ತತ್‌" ಎಂದು ಸೂಚಿಸುತ್ತದೆ. 'ತ್ವಂ" ಹಾಗೂ 'ತತ್‌" ಎರಡೂ ಒಂದಾಗಿ ಮೂಡಿ ಆತ್ಮ-ಪರಮಾತ್ಮ ಎರಡೂ ಒಂದೇ ಎನ್ನುವ ಅರ್ಥವನ್ನು ಬಿಂಬಿಸಿದೆ. ಗಣೇಶನ ದೇಹವು 'ತತ್‌ ತ್ವಂ ಅಸಿ" ಎಂಬುದರ ಸಂಕೇತ.

ಗಣೇಶನ ಕಿವಿಯು ಮೊರದ ಹಾಗೆ ಅಗಲವಿದ್ದು ಅದಕ್ಕೂ ಅರ್ಥವಿದೆ. ಹೇಗೆ ಮೊರವು ಧಾನ್ಯವನ್ನು ಧೂಳಿನಿಂದ ಬೇರ್ಪಡಿಸುತ್ತದೆಯೋ ಹಾಗೆ ವಿವೇಕವನ್ನು ಉಪಯೋಗಿಸಿಕೊಂಡು ಸತ್ಯ-ಮಿಥ್ಯಗಳ ವ್ಯತ್ಯಾಸವನ್ನು ಅರಿಯಬೇಕು, ಆ ವ್ಯತ್ಯಾಸವನ್ನು ಅರಿಯಲು ಶ್ರವಣ (ಕಿವಿ) ಶುದ್ಧವಾಗಿರಬೇಕು ಎಂದು ಸೂಚಿಸುತ್ತದೆ. ಧಾನ್ಯವನ್ನು ಸತ್ಯಕ್ಕೆ (ಪರಮಾತ್ಮ) ಹೋಲಿಸಿ, ಧೂಳನ್ನು ಮಿಥ್ಯೆಗೆ (ಮಾಯೆ) ಹೋಲಿಸಲಾಗಿದೆ. ಗುರುಗಳ ಉಪದೇಶ ಶ್ರವಣ ಮಾಡಿದಲ್ಲಿ ಸತ್ಯ-ಮಿಥ್ಯಗಳ ಅರಿವ ಶಕ್ತಿ ಹೊಂದಬಹುದು ಎಂದು ಪುರಾಣದಲ್ಲಿ ಹೇಳಲಾಗಿದೆ.

ಗಜಾನನ :

ಹುಟ್ಟಿನಿಂದಲೇ ಗಣಪನ ಮುಖ ಆನೆಯದ್ದಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ಸ್ನಾನಕ್ಕೆ ಹೊರಟ ಪಾರ್ವತಿ ತನ್ನ ಮೈಯ ಬೆವರಿನಿಂದ ಒಬ್ಬ ಬಾಲಕನನ್ನು ಸೃಷ್ಟಿ ಮಾಡಿ ಸ್ನಾನ ಗೃಹದ ಕಾವಲು ಕಾಯಲು ಹೇಳಿ ಒಳಗೆ ಹೊರಟಳು. ಬಾಲಕನು ಕಾವಲು ಕಾಯುತ್ತಿರಲು ಹೊರಗಿನಿಂದ ಬಂದ ಪರಶಿವನನ್ನು ಬಾಲಕನು, ತಾಯಿಯ ಆಜ್ಞೆಯಂತೆ ಅಡ್ಡಗಟ್ಟಿದನು. ತನ್ನ ಮನೆಯಲ್ಲಿ ತನ್ನನ್ನೇ ಅಡ್ಡಗಟ್ಟಿದ ರೋಷಕ್ಕೆ ತ್ರಿಶೂಲದಿಂದ ಬಾಲಕನ ತಲೆಯನ್ನೇ ತೆಗೆದ ಪರಶಿವ. ನಂತರ ವಿಷಯ ತಿಳಿದು ತನ್ನ ಗಣರಿಗೆ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾರದೇ ತಲೆಯನ್ನು ತನ್ನಿರೆಂದು ಹೇಳಲು, ಅವರುಗಳು ಆನೆಯ ತಲೆಯನ್ನು ತಂದುಕೊಟ್ಟರು. ರುಂಡವಿಲ್ಲದ ಮುಂಡಕ್ಕೆ ಆನೆಯ ತಲೆಯ ಜೋಡಿಸಿ, ಪ್ರಾಣ ತುಂಬಲು ಗಣೇಶ ಜನ್ಮ ತಳೆದ.

ಹೆಚ್ಚು ಪ್ರಚಾರವಿಲ್ಲ ಇನ್ನೊಂದು ಕಥೆಯನ್ನು 'ಬ್ರಹ್ಮ ವೈವರ್ತ ಪುರಾಣ"ದಲ್ಲಿ" ಹೇಳಲಾಗಿದೆ. ಶಿವನ ಅಣತಿಯಂತೆ ಪಾರ್ವತಿಯು ಒಂದು ವರ್ಷ 'ಪುಣ್ಯಕ ವ್ರತ" ಮಾಡಿದ್ದರಿಂದ ಶ್ರೀ ಕೃಷ್ಣನು ಪ್ರತಿ ಕಲ್ಪವೂ ಅವರ ಮಗನಾಗಿ ಜನಿಸುವುದಾಗಿ ಮಾತು ಕೊಟ್ಟ. ಕೃಷ್ಣನನ್ನು ಮಗನಾಗಿ ಪಡೆದ ಪಾರ್ವತಿ ಬಹಳ ಉತ್ಸಾಹದಿಂದ ಸಕಲ ದೇವಾನು ದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಿದಳು. ಶನಿ ಮಹಾರಾಜ ಬಂದರೂ ಮಗುವನ್ನು ನೋಡದೆ ನೆಲವನ್ನು ನೋಡುತ್ತಾ ನಿಂತನಂತೆ. ಹಾಗೇಕೆಂದು ಪಾರ್ವತಿ ಕೇಳಲು 'ತಾನು ಮಗುವನ್ನು ನೇರವಾಗಿ ನೋಡಿದಲ್ಲಿ ಅದು ಮಗುವಿಗೆ ಹಾನಿಯಾಗುವುದು ಎಂದು ಹೇಳಿದ. ಆದರೆ ಪಾರ್ವತಿ ಅದನ್ನು ಲೆಕ್ಕಿಸದೆ ತನ್ನ ಮಗನನ್ನು ನೋಡಲು ಹೇಳಿದಳು.

ಶನಿಯ ದೃಷ್ಟಿ ಮಗುವಿನ ಮೇಲೆ ಬಿದ್ದದ್ದೇ ತಡ ಮಗುವಿನ ತಲೆ ಎಗರಿ ಹೋಯಿತಂತೆ. ತಲೆ ಇಲ್ಲದ ಮಗುವನ್ನು ನೋಡಿ ಆಘಾತಗೊಂಡ ಶಿವ-ಪಾರ್ವತಿಯರನ್ನು ಕಂಡು, ಮಹಾವಿಷ್ಣು ಗರುಡವನ್ನೇರಿ ಪುಷ್ಪ-ಭದ್ರ ನದಿಯ ದಂಡೆಗೆ ಹೋಗಿ ಅಲ್ಲಿಂದ ಒಂದು ಆನೆಯ ತಲೆಯನ್ನು ತಂದು. ಮಗುವಿನ ದೇಹಕ್ಕೆ ಜೋಡಿಸಿ ಜೀವ ಕೊಟ್ಟು, ಅಗ್ರ ಪೂಜೆ ಅವನಿಗೇ ಸಲ್ಲಲಿ ಹಾಗೂ ಯೋಗಿಗಳಲ್ಲಿ ಪ್ರಥಮನಾಗಲಿ ಎಂದು ವರವಿತ್ತನಂತೆ. ಈಶ್ವರನು ಗಣೇಶನನ್ನು ಸಕಲಗಣಗಳಿಗೆ ಅಧಿಕಾರಿಯನ್ನಾಗಿ ಮಾಡಿ, ಅವನ ನಾಮ ಜಪದಿಂದ ಸಕಲ ವಿಘ್ನಗಳೂ ನಿವಾರಣೆಯಾಗಲಿ ಎಂದು ವರವಿತ್ತನು. ಇದು ಗಣೇಶನ ಜನ್ಮವೃತ್ತಾಂತದ ಆದರೆ ಹೆಚ್ಚು ಪ್ರಚಲಿತವಾಗದ ಇನ್ನೊಂದು ಕಥೆ.

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ।
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದ।।

ಗಣೇಶನನ್ನು ವಕ್ರತುಂಡ ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನಮಗೆಲ್ಲ ತಿಳಿದ ಒಂದು ಕಥೆ ಇದೆ. ಒಮ್ಮೆ ಹೀಗೆ ಹೊಟ್ಟೆತುಂಬ ಉಂಡು ಮೂಷಿಕವನ್ನೇರಿ ಗಣೇಶನು ಬರುತ್ತಿದ್ದಾಗ, ದಾರಿಯಲ್ಲಿ ಒಂದು ಹಾವನ್ನು ಕಂಡು ಭಯಗೊಂಡ ಇಲಿ ಗಣೇಶನನ್ನು ಬೀಳಿಸಿ ಓಡಿತಂತೆ. ಕೆಳಕ್ಕೆ ಬಿದ್ದ ಗಣಪ ಹೊಟ್ಟೆ ಒಡೆದು, ತಿಂದ ಕಡುಬೆಲ್ಲ ನೆಲಕ್ಕೆ ಬೀಳಲು, ಅವನು ಅದನ್ನೆಲ್ಲಾ ತನ್ನ ಹೊಟ್ಟೆಗೆ ತುಂಬಿಸಿ, ಸರಿದು ಹೋಗುತ್ತಿದ್ದ ಹಾವನ್ನೇ ತನ್ನ ಹೊಟ್ಟೆಗೆ ಕಟ್ಟಿಕೊಂಡನಂತೆ. ಇವೆಲ್ಲವನ್ನೂ ಮೇಲಿನಿಂದ ನೋಡುತ್ತಿದ್ದ ಚಂದ್ರ ಜೋರಾಗಿ ನಗಲು 'ನೀನು ಕ್ಷೀಣಿಸಿ ಹೋಗು" ಎಂದು ಶಾಪವನ್ನು ಇತ್ತು, ದಂತವನ್ನು ಮುರಿದು ಅವನನ್ನು ಹೊಡೆದನಂತೆ. ಶಾಪವನ್ನೂ, ಏಟನ್ನೂ ತಿಂದ ಚಂದ್ರನು ಗಣೇಶನನ್ನು ಕ್ಷಮಾಪಣೆ ಕೇಳಲು, 'ಶುಕ್ಲ ಪಕ್ಷದಲ್ಲಿ ವೃದ್ದಿಸು ಕೃಷ್ಣಪಕ್ಷದಲ್ಲಿ ಕ್ಷೀಣಿಸು" ಎಂದು ಶಾಪವನ್ನು ಭಾಗಶ: ಕಡಿಮೆ ಮಾಡಿದ. ಹೀಗಾಗಿ ಗಣೇಶನನ್ನು 'ವಕ್ರತುಂಡ" ಎಂದೂ ಕರೆಯುತ್ತಾರೆ.

ಏಕದಂತ :

ಗಣೇಶನು ವಕ್ರತುಂಡನಾಗಿದ್ದಕ್ಕೆ ಇನ್ನೊಂದು ಕಥೆಯೂ ಇದೆ. ವೇದವ್ಯಾಸರು ಮಹಾಭಾರತವನ್ನು ಬರೆಯುವಾಗ ತಾವು ಹೇಳುವ ಶ್ಲೋಕಗಳನ್ನು ಬರೆಯಲು ಗಣೇಶನೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವನನ್ನು ಕೇಳಲು, ಗಣೇಶನು ವ್ಯಾಸರು ಸ್ವಲ್ಪವೂ ನಿಲ್ಲಿಸಿದೆ ಶ್ಲೋಕಗಳನ್ನು ಹೇಳಿದಲ್ಲಿ ಮಾತ್ರ ತಾನು ಬರೆಯುವುದಾಗಿ ತಿಳಿಸಿದನಂತೆ. ಅದಕ್ಕೆ ಪ್ರತಿಯಾಗಿ ವ್ಯಾಸರು ತಾವು ಹೇಳುವ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿಕೊಂಡು ಬರೆಯಬೇಕೆಂದು ಶರತ್ತು ವಿಧಿಸಿದರಂತೆ. ಬರವಣಿಗೆ ಸಾಗುತ್ತಿರಲು ಲೇಖನಿಯಾದ ನವಿಲುಗರಿ ಮುರಿಯಿತು. ಕೂಡಲೆ ಗಣೇಶನು ತನ್ನ ದಂತವನ್ನು ಮುರಿದುಕೊಂಡು ಬರವಣಿಗೆಯನ್ನು ಮುಂದುವರೆಸಿದನು. ಹೀಗಾಗಿ ಅವನ ದಂತವು ತುಂಡಾಯಿತು ಎಂದೂ ಕಥೆಯಿದೆ.

ಶಮಂತಕೋಪಾಖ್ಯಾನ :

ಗಣೇಶ ಚತುರ್ಥಿಯ ದಿನ ಚಂದ್ರದರ್ಶನ ಮಾಡಿದವರು ಚೋರನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರೆ ಎಂಬುದಕ್ಕೆ 'ಶಮಂತಕೋಪಾಖ್ಯಾನ"ದ ಕಥೆ ಇದೆ. ಸತ್ರಾಜಿತನು ಸೂರ್ಯನ್ನು ಪ್ರೀತಗೊಳಿಸಿ ದಿನಕ್ಕೆ ಹತ್ತು ತೊಲ ಬಂಗಾರ ಕೊಡುವ ಶಮಂತಕ ಮಣಿಯನ್ನು ವರವಾಗಿ ಪಡೆಯುತ್ತಾನೆ. ನಿನ್ನ ಬಳಿ ಇರುವುದು ಕ್ಷೇಮವಲ್ಲ ತನಗೆ ಕೊಡೆಂದು ಶ್ರೀ ಕೃಷ್ಣ ಕೇಳಲು ಇಲ್ಲವೆಂದು ಹೇಳುತ್ತಾನೆ. ಸತ್ರಾಜಿತನ ತಮ್ಮನಾದ ಪ್ರಸೇನಜಿತು ಆ ಮಣಿಯನ್ನು ಧರಿಸಿ ಕಾಡಿಗೆ ಬೇಟೆಗೆ ಹೋಗಲು ಅಲ್ಲಿ ಅವನನ್ನು ಒಂದು ಸಿಂಹವು ಕೊಂದಿತು. ಪ್ರಜ್ವಲಿಸುತ್ತಿದ್ದ ಮಣಿಯನ್ನು ಕಚ್ಚಿಕೊಂಡು ಹೋಗುವ ಸಿಂಹವನ್ನು ಜಾಂಬವಂತನು ಅಡ್ಡಗಟ್ಟಿ ಅದನ್ನು ಕೊಂದು ಮಣಿಯನ್ನು ತನ್ನ ಮಗನ ತೊಟ್ಟಿಲಿಗೆ ಕಟ್ಟಿದನು. ಇತ್ತ ಮಹಾರಾಜನು ಪ್ರಸೇನಜಿತು ವಾಪಸ್ಸು ಬಾರದಿರಲು ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಅಪಪ್ರಚಾರ ಮಾಡಿದನು.

ಅಪವಾದ ಹೊತ್ತ ಕೃಷ್ಣ ಕಾಡಿಗೆ ಹೋಗಿ ಹೆಜ್ಜೆ ಗುರುತುಗಳನ್ನು ಅನುಸರಿಸಿ ಜಾಂಬವಂತನು ಗುಹೆಗೆ ಹೋಗಿ ಮಣಿಯನ್ನು ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಹೊರಗೆ ಹೋಗಿದ್ದ ಜಾಂಬವಂತನು ಬರಲು ಅವರಿಬ್ಬರಿಗೂ ಯುದ್ದ ನೆಡೆಯಿತು. ಇಪ್ಪತ್ತೆಂಟು ದಿನಗಳ ಯುದ್ದದಲ್ಲಿ ತಾನು ಯುದ್ದ ಮಾಡುತ್ತಿರುವುದು ರಾಮನ ಜೊತೆಗೆ ಎಂಬ ಅರಿವಾಗಿ, ಯುದ್ದ ನಿಲ್ಲಿಸಿ ತಪ್ಪಯಿತೆಂದು ಕ್ಷಮೆ ಯಾಚಿಸಿ ಮಣಿಯನ್ನೂ, ತನ್ನ ಮಗಳು ಜಾಂಬವತಿಯನ್ನೂ ಅವನಿಗೆ ಕೊಟ್ಟನು. ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು ಜನರು 'ಶಮಂತಕ" ಕಥೆ ಕೇಳಿ ಈ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳುತ್ತಾರೆ:

ಸಿಂಹ: ಪ್ರಸೇನಮಮಧೇ: ಸಿಂಹೋ ಜಾಂಬವತಾಹತ:।
ಸುಕುಮಾರ ಕ ಮಾರೋಧಿ ತವಹ್ಯೇಷ: ಶ್ಯಮಂತಕ:

ಓಂ ಕಾರ ರೂಪಿ :

ಗಣೇಶನೇ 'ಓಂ"ಕಾರ ಎಂದೂ ಹೇಳುತ್ತಾರೆ. ಶಿವ-ಶಕ್ತಿಯರ ಮಿಲನದಿಂದ ಉಂಟಾದದ್ದು ಬೆಳಕು (ಸ್ಕಂದ) ಹಾಗೂ ಶಬ್ದ (ಗಣೇಶ). ಓಂ ಕಾರ ಶಬ್ದವೇ ಎಲ್ಲ ಶ್ಲೋಕಗಳ ಮೂಲ ಶಬ್ದ. ಓಂ ಕಾರದ ಶಬ್ದದಿಂದಲೇ ಎಲ್ಲ ಮಂತ್ರಗಳೂ ಉಗಮಿಸಿರುವುದು ಎಂದು ಹೇಳುತ್ತಾರೆ. ಗಣೇಶನ ಚಿತ್ರವನ್ನು ಪಾರ್ಶ್ವದಿಂದ ನೋಡಿದಲ್ಲಿ ಓಂ ಕಾರವನ್ನು ಹೋಲುತ್ತದೆ. ಗಣೇಶನ ಚಿತ್ರಗಳಲ್ಲಿ ಸಾಮಾನ್ಯವಾಗಿ ನಾಲ್ಕು ಕೈಗಳನ್ನು ಹೊಂದಿರುವಂತೆಯೇ ನೋಡುತ್ತೇವೆ. ಆ ಕೈಗಳಲ್ಲಿ ಪಾಶ, ಅಂಕುಶ, ಪದ್ಮ ಹಾಗೂ ಅಭಯ ಕಾಣುತ್ತೇವೆ. ಡೊಳ್ಳುಹೊಟ್ಟೆ ಭವದ ದು:ಖಗಳನ್ನು ನುಂಗಿ ಜಗತ್ತಿನ ರಕ್ಷಣೆಯ ಮಾಡುವ ಸೂಚಕ.

ಸಿದ್ಧಿ ವಿನಾಯಕ :

ಗಣೇಶನ ಸೊಂಡಿಲು ಸಾಮಾನ್ಯವಾಗಿ ಎಡಗಡೆ ತಿರುಗಿರುತ್ತದೆ. ಅದನ್ನು ಚಂದ್ರನೆಂದೂ ಅದಕ್ಕೆ ಶಾಂತವೆಂದು ಹೇಳುತ್ತಾರೆ. ಬಲಗಡೆ ತಿರುಗಿರುವ ಸೊಂಡಿಲುಳ್ಳ ಗಣೇಶನನ್ನು 'ಸಿದ್ದಿ ವಿನಾಯಕ" ಎಂದು ಕರೆಯುತ್ತಾರೆ ಹಾಗೂ ಅದಕ್ಕೆ ವಿಶೇಷ ಪೂಜೆ. ಬಲಕ್ಕೆ ತಿರುಗಿರುವ ಸೊಂಡಿಲನ್ನು ಸೂರ್ಯನೆಂದು, ಪೂಜಾವಿಧಿ ಬಹಳ ಶ್ರದ್ದೆಯಿಂದ ನೆಡೆಯಬೇಕು, ಇಲ್ಲದಿದ್ದಲ್ಲಿ ಅದು ಬೆಂಕಿಯ ಸಮಾನ ಎಂದು ಹೇಳುತ್ತಾರೆ.

ಗಣೇಶನ ವಾಹನ ಇಲಿ. ಅದಕ್ಕೆ ವಿಶೇಷ ಅರ್ಥವಿದೆ. ಯಜುರ್ವೇದದಲ್ಲಿ ಹೇಳುವಂತೆ, ಈಶ್ವರನಿಗೆ ಹೆದರಿ ಅಗ್ನಿದೇವ ಇಲಿಯಾಗಿ ಭೂಮಿಯ ಒಳಗೆ ಸೇರಿದನಂತೆ. ಅಂತಹ ಇಲಿ ಗಣೇಶನ ವಾಹನ. ಅಗ್ನಿಯನ್ನು ಸರಿಯಾಗಿ ಉಪಯೋಗಿಸಿದಲ್ಲಿ ಜ್ಯೋತಿಯಾಗುತ್ತದೆ, ಕೆಡುಕಾಗಿ ಬಳಸಲು ಜ್ವಾಲೆಯಾಗುತ್ತದೆ.

ಗಣೇಶನ ಬಗ್ಗೆ ಸಾಕಷ್ಟು ವಿಷಯಗಳು, ಸಂಶೋಧನೆಗಳು, ಕಥೆಗಳು ಇವೆ. ಬಹುಶ: ಭಾರತದ ದೇವರುಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದವನು ಈ ಗಣೇಶ. ಅಮೆರಿಕದಲ್ಲಿ ಓಡಾಡುವ ಕಾರುಗಳನ್ನು ಗಮನಿಸಿದಲ್ಲಿ ಡ್ಯಾಶ್‌ ಬೋರ್ಡ್‌ ಮೇಲೆ ಗಣಪ ಇದ್ದಲ್ಲಿ ಅದರ ಒಡೆಯ ಭಾರತೀಯ ! ಜೈ ಗಣೇಶ!!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+