ಗಣೇಶನಿಗೆ ಸ್ವಾಗತ-ಬೀಳ್ಗೊಡುಗೆ!
ಬೆಂಗಳೂರು : ಗೌರಿ ಹಬ್ಬದ ಸಡಗರದ ಮಧ್ಯೆಯೇ ಗಣೇಶನ ಸ್ವಾಗತಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹಬ್ಬದ ಹಿನ್ನೆಲೆಯಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಪ್ರಯತ್ನಗಳು ಮತ್ತೊಂದೆಡೆ ನಡೆದಿವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಮಹಾನಗರ ಪಾಲಿಕೆ, ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಕೆರೆಗಳನ್ನು ಸಂರಕ್ಷಿಸಲು ಮತ್ತು ಗಣೇಶನ ಸುಸೂತ್ರ ವಿಸರ್ಜನೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ನಿಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದಲೂ ಪ್ರಚಾರಾಂದೋಲನ ಬಿರುಸುಕೊಂಡಿದೆ.
ಈ ಹಿನ್ನೆಲೆಯಲ್ಲಿ ದಟ್ಸ್‌ಕನ್ನಡದೊಂದಿಗೆ ಮಾತನಾಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಸೈಯದ್ ಖಾಜಾ, ಈ ವರ್ಷ ರಾಜಧಾನಿಯಲ್ಲಿ ಗಣೇಶ ವಿಸರ್ಜನೆಗೆ ಮಂಡಳಿ ಸಂಚಾರಿ ಟ್ಯಾಂಕರ್‌ಗಳ ಅನುಕೂಲ ಕಲ್ಪಿಸಿದೆ ಎಂದರು.
ಈ ವರ್ಷ ಒಂದು ಸಾವಿರ ಗಣೇಶ ವಿಗ್ರಹಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಇದರ ಲಾಭ ಪಡೆಯ ಬೇಕೆಂದು ಮನವಿ ಮಾಡಿದ ಅವರು, ಮಂಡಳಿಯ ನಾಲ್ಕು ಸಂಚಾರಿ ವಿಸರ್ಜನಾ ಘಟಕಗಳು ಈ ಬಾರಿ ರಸ್ತೆಗಿಳಿಯಲಿವೆ. ಬುಧವಾರ ಮಧ್ಯಾಹ್ನ 3ರಿಂದ ರಾತ್ರಿ 10ಗಂಟೆಯವರೆಗೆ ವಾಹನಗಳು ಮನೆಮನೆಗೆ ತೆರಳಿ ಗಣೇಶ ವಿಸರ್ಜನೆ ಕಾರ್ಯಕ್ಕೆ ಅನುಕೂಲ ಕಲ್ಪಿಸಲಿವೆ ಎಂದು ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ವಾಹನಗಳ ಕಾರ್ಯವ್ಯಾಪ್ತಿ ಹೀಗಿದೆ :
ವಾಹನ-1 : ಮಧ್ಯಾಹ್ನ 3ರಿಂದ 7ರವರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸಂಜೆ 7ರಿಂದ 10ರ ತನಕ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊದಲ ವಾಹನ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದೆ.
ವಾಹನ -2 : ಮಲ್ಲೇಶ್ವರ ಪೋಲೀಸ್‌ಠಾಣೆ ವ್ಯಾಪ್ತಿಯಲ್ಲಿ 3ರಿಂದ 7, ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ 7ರಿಂದ 10ಗಂಟೆಯ ತನಕ ಈ ಸೇವೆ ಲಭ್ಯ.
ವಾಹನ -3 : ಹನುಮಂತನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ 3ರಿಂದ 7, ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ಸಂಜೆ 7ರಿಂದ 10ರ ತನಕ ಸೇವೆ ಲಭ್ಯ.
ವಾಹನ -4 : ರಾಜರಾಜೇಶ್ವರಿ ಕಾಂಪ್ಲೆಕ್ಸ್ ವ್ಯಾಪ್ತಿಯಲ್ಲಿ 3ರಿಂದ 7 ಮತ್ತು ರಾಜರಾಜೇಶ್ವರಿ ದೇವಸ್ಥಾನದ ವ್ಯಾಪ್ತಿಯಲ್ಲಿ ಸಂಜೆ 7ರಿಂದ 10ರ ತನಕ ಗಣೇಶ ವಿಸರ್ಜನೆ ಮಾಡಬಹುದು.
ಗಣೇಶನ ಹಬ್ಬದ ಸಂದರ್ಭದಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರಪತ್ರ, ಪತ್ರಿಕೆ ಹಾಗೂ ಟಿವಿಯಲ್ಲಿ ನಟ ಶಿವರಾಜ್‌ಕುಮಾರ್ , ರಮೇಶ್ ಮತ್ತಿತರ ಚಲನಚಿತ್ರ ನಟರು ಮತ್ತು ಗಣ್ಯರನ್ನು ಬಳಸಿಕೊಂಡು ವ್ಯಾಪಕ ಪ್ರಚಾರವನ್ನು ಕೈಗೊಂಡಿದೆ.
ಗಣೇಶನಿಗಾಗಿ ಪ್ರತ್ಯೇಕ ಕಟ್ಟೆ : ನಗರದ ಕೆರೆಗಳಲ್ಲಿ ಪ್ರತಿವರ್ಷ ಅರ್ಧ ಲಕ್ಷಕ್ಕೂ ಅಧಿಕ ಗಣೇಶ ವಿಗ್ರಹಗಳು ಮುಳುಗುತ್ತಿವೆ. ಗಣೇಶ ವಿಗ್ರಹದ ರಾಸಾಯನಿಕ ಬಣ್ಣದೊಂದಿಗೆ ಸೀಸದ ಅಂಶವೂ ನೀರಿಗೆ ಸೇರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ಮಹಾನಗರ ಪಾಲಿಕೆ ನಗರದ ವೆಂಗಯ್ಯನ ಕೆರೆ, ಯಡಿಯೂರು ಕೆರೆ, ಸ್ಯಾಂಕಿ, ಲಾಲ್‌ಬಾಗ್ ಕೆರೆ ಮತ್ತು ಹಲಸೂರು ಕೆರೆಗಳಲ್ಲಿ ಗಣೇಶ ವಿಸರ್ಜನೆಗಾಗಿಯೇ ಪ್ರತ್ಯೇಕ ಕಲ್ಯಾಣಿ(ಕಟ್ಟೆ)ಗಳನ್ನು ಈ ವರ್ಷ ನಿರ್ಮಾಣ ಮಾಡಿದೆ.
ಈ ಕಲ್ಯಾಣಿಗಳಲ್ಲಿ ಸೆ.7ರಿಂದ 16ರ ತನಕ ಗಣೇಶನನ್ನು ವಿಸರ್ಜಿಸಬಹುದು. ಈ ಭಾಗದಲ್ಲಿ ವ್ಯಾಪಕ ಬಂದೋಬಸ್ತನ್ನು ಸಹಾ ಕಲ್ಪಿಸಲಾಗಿದೆ.
ನಿಮ್ಮ ಗಮನಕ್ಕೆ :
ಗಣೇಶನಿಗೆ ಪೆಂಡಾಲ್ ಹಾಕಲು ಬೆಂ.ಮಹಾನಗರ ಪಾಲಿಕೆ, ಟ್ರಾಫಿಕ್‌ಪೋಲೀಸ್, ಬೆಸ್ಕಾ ಮತ್ತು ಅಗ್ನಿ ಶಾಮಕ ದಳದ ಪರವಾನಗಿ ಅತ್ಯಗತ್ಯ.
ಸಂಘ ಸಂಸ್ಥೆಗಳಿಗೆ ಸಾರ್ವಜನಿಕರಿಂದ ಚಂದಾ ಎತ್ತದಂತೆ ಕಟ್ಟು ನಿಟ್ಟಿನ ಆದೇಶ.
ಗಣೇಶನ ಪೆಂಡಾಲ್‌ನಲ್ಲಿ ಹಾಡು-ಕುಣಿತದ ಮನರಂಜನಾ ಕಾರ್ಯಕ್ರಮಗಳಿಗೆ ಸಂಜೆ 6ರಿಂದ 10ರೊಳಗೆ ಅವಕಾಶ. ಶಬ್ಧವೂ ಸಹಾ ನಿಗದಿತ ಪ್ರಮಾಣದಲ್ಲಿಯೇ ಇರಬೇಕು.
ಮನೆಯ ಬಕೆಟ್‌ಗಳಲ್ಲಿಯೇ ಗಣೇಶನನ್ನು ಮುಳುಗಿಸಿ, ಹೀಗಾಗಿ ಪುಟ್ಟ ಪುಟ್ಟ ಗಣೇಶ ವಿಗ್ರಹಗಳನ್ನು ಬಳಸಿ.
ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿ ಗಣೇಶನ ವಿಸರ್ಜನೆಗಾಗಿಯೇ ವಿಶೇಷ ಟ್ಯಾಂಕರ್ ನಿರ್ಮಾಣ ಮಾಡಲಾಗಿದೆ, ಬಳಸಿಕೊಳ್ಳಿ.












Click it and Unblock the Notifications