Get Updates
Get notified of breaking news, exclusive insights, and must-see stories!

ಪಾರ್ವತಿಪುತ್ರ ಗಣೇಶನಿಗೆ ಒಲವಿನ ಓಲೆ

ದೇವಾಧಿದೇವ ಗಣಪತಿ ಸಾರ್ವಭೌಮನಿಗೆ - ಇಪ್ಪತ್ತೊಂದು ನಮಸ್ಕಾರಗಳು. ಬೇಡುವ ಆಶೀರ್ವಾಗಳು.

ಭಗವಂತಾ, ಹೇಳಿ ಕೇಳಿ ನೀನು ದೇವ್ರು. ಅದೂ ಏನು? ಗಣನಾಯಕ. ನಿಂಗೆ ತಿಳೀದೇ ಇರೋದು ಏನಿರುತ್ತೆ ? ಆದ್ರೂ ಹೇಳಿಬಿಡ್ತೀನಿ ಕೇಳು-ಭೂಲೋಕದ ಜನರೆಲ್ಲ ಈಗ ದೊಡ್ಡ ಖುಷೀಲಿದಾರೆ. ಅವರೆಲ್ಲರ ಖುಷಿಗೆ ಕಾರಣ ಆಗಿರೋದು ನೀನು ! ಇವತ್ತಾಗಲೇ ಗುರುವಾರ ತಾನೆ? ಶುಕ್ರವಾರ ಕಳೆದು ಶನಿವಾರ ಬಂದ್ರೆ- ದೇವರೇ, ಅವತ್ತು ನಿನ್ನ ಹುಟ್ಟು ಹಬ್ಬ ! ಹ್ಯಾಪಿ ಬರ್ತ್‌ಡೇ !! ದೈವಭಕ್ತರ ಮಾತಲ್ಲಿ ಹೇಳುವುದಾದರೆ ಅವತ್ತು -ಗಣೇಶ ಚತುರ್ಥಿ. ಈ ಶನಿವಾರ ಅನ್ನೋದು ಅವರ ಪಾಲಿಗೆ- ಭಾದ್ರಪದ ಶುಕ್ಲ ಚೌತಿ ! ಅವತ್ತು ಅವರೆಲ್ಲ ನಿನ್ನನ್ನು ಹೊತ್ತು ತರುವುದೇನು? ಮನೆಯಲ್ಲಿ ಪ್ರತಿಪ್ಠಾಪಿಸುವುದೇನು? ಸಿಂಗರಿಸುವುದೇನು? ಪೂಜೆ ಮಾಡುವ ಸಡಗರವೇನು? ಅದೇ ಜನ ತರಹೇವಾರಿಯ ಕಡುಬು ಮಾಡಿಸಿ ನಿನ್ಮುಂದೆ ಇಡುವಾಗಿನ ಸಡಗರವೇನು ? ಆಹಾ..

A letter to Lord Sri Ganeshaಭಗವಂತಾ, ನಾಡಿದ್ದು ನಿನ್ನ ಹುಟ್ಟುಹಬ್ಬ ಅಂತ ನೆನಪು ಮಾಡಿಕೊಂಡಾಗಲೆಲ್ಲ- ನೀನು ನಮ್ಮ ಫ್ರೆಂಡ್‌ ಆಗಿದ್ದಿದ್ರೆ ಚಂದ ಇರ್ತಿತ್ತು ಅನ್ನಿಸಿಬಿಡ್ತದೆ. ಯಾಕ್‌ ಗೊತ್ತಾ ? ಫ್ರೆಂಡ್‌ ಆಗಿದ್ದಿದ್ರೆ- ಅಕ್ಕರೆಯ ಗಣೇಶ ಮಹಾಪ್ರಭುವಿಗೆ -ನೂರು ಸಾವಿರ ಹಾರೈಕೆಗಳು ಎಂದು ಶುಭಕೋರಬಹುದಿತ್ತು. ನಿಂಗೆ ಫಾರ್ಟಿಪ್ಲಸ್‌ ವಯಸ್ಸಾಗಿದ್ದಿದ್ರೆ- ಹ್ಯಾಪಿ ಬರ್ತ್‌ಡೇ ಟು ಯೂ ಡಿಯರ್‌ ಅಂಕಲ್‌ ಅನ್ನಬಹುದಿತ್ತು. ನನ್ನ ಅಪ್ಪಂದಿರ ತಾತನ ವಯಸ್ಸಿನ ನಿನ್ನ ಚಿತ್ರವೇನಾದ್ರೂ ಇದ್ದಿದ್ದರೆ- ತೀರ್ಥರೂಪ ಗಣೇಶ ಮಹಾಪ್ರಭುಗಳ ಚರಣ ಸನ್ನಿಧಿಗೆ ಅಂತ ಬರೆದು ಆಶೀರ್ವಾದ ಬೇಡಬಹುದಿತ್ತು. ಆದ್ರೆ -ನೀನು ಗೆಳೆಯನಲ್ಲ , ಅಂಕಲ್‌ ಅಲ್ಲ , ಅಪ್ಪನ ವಯಸ್ಸಿನವ ಅಲ್ಲ , ಅಜ್ಜನಲ್ಲ- ನೀನು ದೇವರು. ಸಾಕ್ಷಾತ್‌ ಭಗವವಂತ. ನೀನು ಚಿರಂಜೀವಿ ! ಅದೂ ಏನು? ಸಮಸ್ತ ದೇವತೆಗಳಿಗೂ ಅಧಿನಾಯಕ ! ಅಂಥ ನಿನಗೆ ಹುಟ್ಟುಹಬ್ಬದ ಶುಭಾಶಯ ಕೋರುವುದು ಹೇಗೆ? ಅದು ಚಿಕ್ಕ ಪ್ರಶ್ನೆ . ನಮ್ಮನ್ನ ಸಾವಿರ ಕೋಟಿ ವರ್ಷಗಳಿಂದ ಕಾಪಾಡುತ್ತ(?!) ಬಂದಿರುವ ನಿನಗೆ ಗುಡ್‌ಲಕ್‌ ಹೇಳಿದೆ ಇರೋದಾದ್ರೂ ಹೇಗೆ ? ಇದು ದೊಡ್ಡ ಪ್ರಶ್ನೆ !

ಭಗವಾನ್‌, ಮೊದಲೇ ಹೇಳಿಬಿಡ್ತೀನಿ. ಇದು ತೀರಾ ಆಕಸ್ಮಿಕವಾಗಿ ಸೃಷ್ಟಿಯಾದ ಪತ್ರ. ಇಲ್ಲಿ ಒಂದಿಷ್ಟು ಇತಿಹಾಸ ಕಾಣುತ್ತೆ , ಪ್ಲೀಸ್‌,ಅದನ್ನ ಸೀರಿಯಸ್ಸಾಗಿ ತಗೋಬೇಡ. ಒಂದಿಷ್ಟು ತಮಾಷಿ ಪ್ರಶ್ನೆಗಳೂ ಈ ಪತ್ರದೊಳಗೆ ನುಸುಳಿವೆ. ಅವನ್ನ ಕಂಡು ಸಿಟ್ಟುಮಾಡಿಕೋಬೇಡ. ಪತ್ರದ ಕಡೆ ಕಡೇಗೆ ಪ್ರಶ್ನೆಗಳ ದೊಡ್ಡ ಗೊಂಚಲೇ ಇದೆ. ಅವನ್ನ ಕಂಡು ಮುನಿಸಿಕೊಂಡು ಹೋಗಿಬಿಡಬೇಡ. ಸುಮ್ನೆ ಒಂದ್ಸಲ ಕುತೂಹಲದಿಂದ ಓದಿ ನೋಡು, ಪ್ಲೀಸ್‌..

ಹೌದು ದೇವರೇ, ನಿನ್ನ ಪರಿಚಯ ನಮಗಾದದ್ದು ಬಾಲ್ಯದಲ್ಲಿ . ಅಪ್ಪ ಅಪ್ಪ , ಗಣೇಶನಿಗೆ ಅದ್ಯಾಕಪ್ಪ ಸೊಂಡಿಲಿದೆ? ಗಣೇಶ ಬೆಲ್ಟ್‌ ಥರಾ ಹಾವನ್ನೇ ಕಟ್ಟಿಕೊಂಡಿದಾನಲ್ಲ- ಹೆದರಿಕೆ ಆಗಲ್ವ ಅಪ್ಪ? ಅಂಥ ಗಣಪತಿಗೆ ಇಲಿಮರಿ ಹ್ಯಾಗೆ ವಾಹನ ಆಗ್ತದಪ್ಪ ? ಗಣಪತಿಗೆ ನಮ್ಮ ಥರ ಅದ್ಯಾಕಪ್ಪಾ ಮುಖವಿಲ್ಲ ಅಂತ ಒಂದೇ ಸಮನೆ ಕೇಳಿದಾಗಲ್ಲೆ- ಅಪ್ಪ ಪುರಾಣಕ್ಕೆ ಜಾರುತ್ತಿದ್ದರು. ಪಾರ್ವತಿ ತನ್ನ ಮೈನ ಬೆವರಿನಿಂದ ಒಂದು ಬೊಂಬೆ ಮಾಡಿದ್ಲಂತೆ, ಆ ಬೊಂಬೇಗೆ ಜೀವ ನೀಡಿದಳಂತೆ... ಅಪ್ಪ ಹೀಗೆಲ್ಲ ಹೇಳ್ತಾ ಇದ್ದಾಗ ನಾವೆಲ್ಲ ಬೆರಗಿಂದ ಕಥೆ ಕೇಳಿ ಕಡೆಗೆ ಗಣೇಶನಿಗೆ ಅಯ್ಯಪ್ಪಾ ಅದಂಥಾ ಸೊಂಡಿಲೂ, ಎಷ್ಟೊಂದ್‌ ದಪ್ಪದ ಹೊಟ್ಟೇ.. ಎಂದು ಕಿಸಿಕಿಸಿ ನಗುತ್ತಿದ್ದರೆ- ಅಮ್ಮ ಓಡಿ ಬರುತ್ತಿದ್ದಳು. ಬಂದವಳೇ ಕೆನ್ನೆ ಕೆನ್ನೆ ಬಡಿದುಕೊಂಡು ತಪ್ಪಾಯ್ತು ದೇವರೇ ಎಂದು ಸಾಷ್ಟಾಂಗ ಬಿದ್ದು - ನಮ್ಮೆಲ್ಲರಿಗೂ ಗಜಮುಖನೆ ಗಣಪತಿಯೆ ನಿನಗೆ ವಂದನೆ... ಹೇಳಿಕೊಡುತ್ತಿದ್ದಳು !

ಭಗವಂತಾ, ಇದೆಲ್ಲ ಬಾಲ್ಯದ ಕಥೆ . ಆನಂತರದಲ್ಲಿ ಕಾಲ ಬದಲಾಗಿದೆ. ನಿನ್ನ ಕುರಿತಾದ ಕಥೆಗಿದ್ದ ಸ್ವರೂಪ ಬದಲಾಗಿದೆ. ಅದರ ಇತಿಹಾಸ ಬದಲಾಗಿದೆ. ಆದ್ರೆ ನೀನು- ಇಲ್ಲ , ನೀನು ಬದಲಾಗಲ್ಲ. ನಿನ್ನ ಮಹಿಮೆ, ನಿನ್ನ ಮಹಾತ್ಮೆ , ನಿನ್ನ ರೂಪ ಉಹುಂ, ಯಾವುದೂ ಬದಲಾಗಿಲ್ಲ. ಅದನ್ನೆಲ್ಲ ನೋಡಿ ಒಮ್ಮೆಲೇ ಸಂತೋಷ, ಸಂಕಟ ಎರಡೂ ಆಗಿಬಿಡುತ್ತೆ.

ಯಾಕೆ ಗೊತ್ತಾ? ದೇವರುಗಳ, ನಿಮ್ಮ ದೇವಲೋಕ (?!) ದ ಕಥೆ ಹೇಗೋ ಏನೋ ಗೊತ್ತಿಲ್ಲ. ಆದರೆ ಈ ಭೂಲೋಕದಲ್ಲಂತೂ ಎಲ್ಲರೂ ನಿನ್ನನ್ನ ಅಧಿನಾಯಕ ಅಂತ ಒಪ್ಪಿದ್ದಾರೆ. ಸರ್ವಶಕ್ತ ಅಂತ ನಂಬಿದ್ದಾರೆ. ದೈವಭಕ್ತರ ಮಕ್ಕಳಂತೂ ತಮ್ಮ ನೋಟ್‌ ಬುಕ್ಕಿನ ಮೊದಲ ಪುಟದಲ್ಲಿ ಶ್ರಿ ಗಣೇಶಾಯ ನಮಃ ಎಂದು ಬರೆದು ತಮ್ಮ ಭಕ್ತಿ ಪ್ರದರ್ಶಿಸಿದ್ದಾರೆ. ಆದ್ರೆ ಪ್ರಭೂ , ನಿನ್ನನ್ನ ಸರ್ವಶಕ್ತ ಎಂದು ನಂಬಿರುವ ಈ ಭೂಲೋಕದ ಜನರೇ ನಿನ್ನನ್ನ ಗೇಲಿಯ ವಸ್ತುವನ್ನಾಗಿ ಕೂಡ ಮಾಡಿಕೊಂಡಿದ್ದಾರೆ. ಕಲಾವಿದ ಅನಿಸಿಕೊಂಡ ಭೂಪತಿಗಳು ಯಾರಿಗೂ ಅರ್ಥವಾಗದಂಥ ಐದಾರು ಗೆರೆ ಎಳೆದು ಇವನೇ ಗಣೇಶ, ಇವ ಏಕದಂತ ಎಂದು ನಂಬಿಸುತ್ತಿದ್ದಾರೆ. ವಿಚಾರವಾದಿ ಅನಿಸಿಕೊಂಡವರು- ಅರರೆ, ಏನ್ರೀ ಇದು ಕತೇ? ಗಣೇಶ ಪಾರ್ವತಿಯ ಮೈ ಬೆವರಿನಿಂದ ಸೃಷ್ಟಿಯಾದ ಅಂತಾರಲ್ಲ- ಹಾಗಂದ್ರೆ ಏನಪ್ಪ ಅರ್ಥ ಎಂದು ಕೇಳಿ ಪೋಲ್‌ ಪೋಲಿಯಾಗಿ ನಗ್ತಾರೆ. ಆಗೆಲ್ಲ ಅದೆಷ್ಟು ಕಸಿವಿಸಿ ಆಗ್ತದೆ ಗೊತ್ತಾ?

ಭಗವಂತಾ, ಇನ್ಮುಂದೆ ಕೇಳ್ತೀನಲ್ಲ -ಅವೆಲ್ಲ ಶುದ್ದ ತರ್ಲೆ ಪ್ರಶ್ನೆಗಳೇ. ಈ ಪ್ರಶ್ನೆಗಳ ಹಿಂದೆ ದೊಡ್ಡ ಕುತೂಹಲ ಮಾತ್ರವೇ ಇದೆ. ಹೌದು ತಾನೆ? ನೀನು ವರ್ಷಕ್ಕೆ ಒಂದಲ್ಸ ಬರ್ತೀಯ. ಆಗೆಲ್ಲ ನಿನ್ನ ಹೆಸರಲ್ಲಿ ಭಕ್ತರು ಅನಿಸಿಕೊಂಡ ಪುಣ್ಯಾತ್ಮರು ಭಕ್ತಿಗೀತೆಗಳ ನೆಪದಲ್ಲಿ ಬರೀ ಚಿತ್ರಗೀತೆ ಹಾಡ್ತಾರಲ್ಲ. ಆಗ ಕಿರಿಕಿರಿಯಾಗಲ್ವ ? ನಿನ್ನ ಮೂರ್ತಿ ಪ್ರತಿಪ್ಠಾಪನೆಯ ವಿಷಯದಲ್ಲಿ ದೊಡ್ಡಸ್ತಿಕೆ ತೋರಿಸಲು ಮುಂದಾಗ್ತಾರಲ್ಲ-ಆಗ ಹಿಂಸೆ ಅನಿಸಲ್ವ? ಗಣೇಶನಿಗೆ ಅಂತ ಹೆಸರಿಗಷ್ಟೇ ನೈವೇದ್ಯ ಮಾಡಿ ಎಲ್ಲವನ್ನೂ ತಾವೇ ತಿಂದು ಹಾಕ್ತಾರಲ್ಲ- ಅಂಥವರನ್ನು ಕಂಡಾಗ ಸಿಟ್ಟು ಬರಲ್ವ? ಕಡುಬು ಕಂಡಾಕ್ಷಣ ಬಾಯಲ್ಲಿ ಜೊಲ್ಲು ಬಂದುಬಿಡಲ್ವಾ?

ನಿನ್ನನ್ನ ಭಿನ್ನವಾಗಿ ಚಿತ್ರಿಸುವ ಭರದಲ್ಲಿ ವೀರಪ್ಪನ್‌ ಜತೇಲಿ; ಕ್ರಿಕೆಟ್‌ ಆಟಗಾರರ ಮಧ್ಯದಲ್ಲಿ, ರಾಜಕಾರಣಿಗಳ ಪಕ್ಕದಲ್ಲಿ ನಿಲ್ಲಿಸಿ ಇದೇ ಜನ ಖುಷಿ ಪಡ್ತಾರಲ್ಲ- ಆಗೆಲ್ಲ ಸಂಕಟ ಆಗಲ್ವ ? ಭಯ-ಭಕ್ತಿಯಿಂದ ಪೂಜೆ ಮಾಡಿದ ಜನರೇ ಕೆಲವೇ ಕ್ಷಣಗಳ ನಂತರ- ಅಬಾ ್ಬ, ಗಣಪತಿ ಎಂಥ ವಿಚಿತ್ರ ದೇವರು ಅಲ್ವಾ ಎಂಬ ಒಂದು ಪ್ರಶ್ನೆಯನ್ನು ; ಗಣಪತಿಗೂ ಮದುವೆ ಆಗಿದ್ಯಂತೆ ಮಾರಾಯ್ರೇ, ಆದೂ ಒಂದಲ್ಲ-ಎರಡಂತೆ, ಹೌದಾ? ಎಂಬ ಇನ್ನೊಂದು ಪ್ರಶ್ನೆಯನ್ನೂ ಇಟ್ಟುಗೊಂಡು ಚರ್ಚೆಗೆ ನಿಲ್ತಾರಲ್ಲ- ಆಗೆಲ್ಲ ಇಶ್ಯೀ ಅನ್ನಿಸಲ್ವ? ಆಮೇಲೆ ದೇವರೇ, ನಿನ್ನ ವಿಗ್ರಹವನ್ನು ಭಯ ಭಕ್ತಿಯಿಂದ ಪ್ರತಿಷ್ಠಾಪಿಸಿದ ಇದೇ ಜನ ಮೂರು-ನಾಲ್ಕೇ ದಿನಗಳಲ್ಲಿ ಯಾವುದೋ ಕೆರೆಗೆ ; ಹೊಳೆಗೆ ; ಇಲ್ಲದಿದ್ದರೆ ಮನೆಯ ನೀರಿನ ಟ್ಯಾಂಕಿಗೆ ; ಅದೂ ಸಿಗದಿದ್ದರೆ ದೊಡ್ಡ ಬಕೆಟ್‌ಗೆ ಹಾಕಿ ಪಟಾಕಿ ಹೊಡೀತಾ ಮುಳುಗಿಸಿಬಿಡ್ತಾರಲ್ಲ -ಆಗೆಲ್ಲ ದುಃಖ ಆಗಲ್ವ?

ಭಗವಂತಾ , ಪುರಾಣವೇ ಹೇಳುತ್ತೆ. ನೀನೂ ಬರಹಗಾರ ಅಂತೆ ! ವೇದವ್ಯಾಸರು ಮಹಾಭಾರತದ ಕಥೇನ ರೈಲು ವೇಗದಲ್ಲಿ ಹೇಳಿದ್ರೆ, ನೀನು ವಿಮಾನ ವೇಗದಲ್ಲಿ ಬರ್ದು ಹೂಂ, ಆಮೇಲೆ .. ಎಂದು ಕಣ್ಮು ಮಿಟುಕಿಸಿದ್ಯಂತೆ. ನಾಡಿದ್ದು ಮನೆ ಮನೆಗೂ ಹಬ್ಬಕ್ಕೆ ಬರ್ತೀಯಲ್ಲ -ಆಗ ಇನ್ನಷ್ಟು ಮಾತಾಡೋಣಂತೆ . ನಾನು ಹೇಳ್ತಾ ಇರ್ತೀನಿ. ನೀನು ಕೇಳ್ತಾ ಕೂತ್ಬಿಡು. ಸರೀನಾ? ಈ ಪತ್ರಾನ ಮುಖ ಗಂಟಿಕ್ಕದೆ ಓದಿದ್ದಕ್ಕೆ - ಎರಡು ಕಡುಬು ಜಾಸ್ತಿಕೊಡ್ತೀನಿ. ನಾಡಿದ್ದು ಬರ್ತಿದ್ದೀಯಲ್ಲ-ನಿಂಗೆ ಸ್ವಾಗತ. ಸುಸ್ವಾಗತ..

ಪ್ರೀತಿ ಮತ್ತು ಪ್ರೀತಿಯಿಂದ..

- ಎ.ಆರ್‌.ಮಣಿಕಾಂತ್‌
[email protected]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+