Get Updates
Get notified of breaking news, exclusive insights, and must-see stories!

ಮಾವಳ್ಳಿ ಗಣೇಶ ಮಹಿಮೆ

ಬೆಂಗಳೂರಿನ ಅತಿ ಪುರಾತನ ಮತ್ತು ಜನನಿಬಿಡ ಪ್ರದೇಶ ಮಾವಳ್ಳಿ. ಈ ತಲೆಮಾರಿಗೆ ಮಾವಳ್ಳಿ ಅಂದರೆ ಎಂ.ಟಿ.ಆರ್‌, ಲಾಲ್‌ಬಾಗ್‌ ಮತ್ತು ಊರ್ವಶಿ ಟಾಕೀಸುಗಳು ಮಾತ್ರ ಪರಿಚಯ. ಆದರೆ ಬಹಳ ಹಿಂದಿನಿಂದ ಇವೆಲ್ಲಕ್ಕೂ ಮಿಗಿಲಾಗಿ ಹೆಚ್ಚಾಗಿ ಅನೇಕರ ಗಮನಕ್ಕೆ ಬಾರದೆ ಸುದ್ದಿಯಲ್ಲಿರುವುದು ಇಲ್ಲಿನ ಗಣೇಶನ ಮೂರ್ತಿಗಳು.

ಮಾವಳ್ಳಿ ರಂಗೇರುವುದು ಶ್ರಾವಣದ ನಂತರ. ಆಷಾಢ ಕಳೆದು ಶ್ರಾವಣ ಪ್ರಾರಂಭವಾದ ನಂತರ ಇಲ್ಲಿನ ಫುಟ್‌ಪಾತ್‌ಗಳು ಗಣೇಶ ಮೂರ್ತಿಗಳಿಂದ ಭರ್ತಿಯಾಗುತ್ತವೆ. ಗಣಪತಿಗೆ ಮಾವಳ್ಳಿಯೇ ಉಗಮಸ್ಥಾನ. ಮೊದಲು ಮಾವಳ್ಳಿಗೆ ಬಂದೇ ನಂತರ ಬೆಂಗಳೂರಿನ ರಸ್ತೆ, ಮನೆಮನೆಗೆ ಗಣಪತಿ ದಾಳಿಯಿಡುವುದು. ಮಾವಳ್ಳಿಯಲ್ಲಿ ಹೆಜ್ಜೆಗೊಂದರಂತೆ ಸಗಟು ಮತ್ತು ರಿಯಾಯಿತಿ ಗಣಪತಿ ಮಾರುವವರು ಸಿಗುತ್ತಾರೆ.

ಹಿಂದೆ ಮಾವಳ್ಳಿಯಲ್ಲಿ ದಸರಾ ಗೊಂಬೆಗಳಿಗೆ ಅಗ್ರಸ್ಥಾನ. ತಿಲಕರು ನೀಡಿದ ಕರೆಗೆ ಭಾರತದಾದ್ಯಂತ ಸಾರ್ವಜನಿಕ ಗಣೇಶೋತ್ಸವಗಳು ಹೆಚ್ಚಾದಂತೆ ಕರ್ನಾಟಕದಲ್ಲಿ , ಅದರಲ್ಲೂ ಮಾವಳ್ಳಿ ಗಣಪತಿ ತಯಾರಕರಿಗೆ ಶುಕ್ರದೆಸೆ ಪ್ರಾರಂಭವಾಯಿತು. ನಂತರ ಗಣೇಶೋತ್ಸವದ ಅನೇಕ ಸಂಘ ಸಂಸ್ಥೆಗಳು ಪ್ರಾರಂಭವಾಗಿ, ಇದೊಂದು ದಂಧೆಯಾಗಿ ಬದಲಾದ ನಂತರ ಇಲ್ಲಿನ ಗಣಪತಿಗೆ ಇನ್ನೂ ಡಿಮ್ಯಾಂಡಪ್ಪೋ ಡಿಮ್ಯಾಂಡು.

ಇಲ್ಲಿಯ ಗಣಪತಿಗಳು ಬಹಳ ಫೇಮಸ್ಸು ಸ್ವಾಮಿ. ಪ್ರತಿವರ್ಷ ಇಲ್ಲಿಂದ ಲಕ್ಷಾಂತರ ಗಣಪತಿಗಳು ಅನೇಕರ ಮನೆ, ಗಣೇಶೋತ್ಸವದ ಪೆಂಡಾಲು ಸೇರುತ್ತವೆ. ಇನ್ನು ಕರ್ನಾಟಕದ ಮಾತು ಬಿಡಿ, ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೂ ಇಲ್ಲಿನ ಗಣಪತಿಗಳು ರಫ್ತಾಗುತ್ತದೆ. ಇಲ್ಲಿ 3 ಇಂಚ್‌ನಿಂದ ಪ್ರಾರಂಭವಾಗಿ 21 ಅಡಿಯಷ್ಟು ಎತ್ತರದ ಗಣಪನ ಮೂರ್ತಿಗಳು ಸಿಗುತ್ತವೆ. ಈ ಗಣಪತಿಗಳ ತಯಾರಿಕೆಯೂ ಈಗ ಹೆಚ್ಚು ಶ್ರಮದ ಕೆಲಸ ಅಲ್ಲ. ಅಚ್ಚಿಗೆ ಹಾಕಿ ಒಣಗಿಸಿದರೆ ಗಣೇಶ ಮೂರ್ತಿ ತಯಾರು.

ಗಣೇಶ ಕೊಳ್ಳುವವರೇನೋ ಬಹಳ ಮಂದಿ ಇದ್ದಾರೆ. ಆದರೆ ಅವರ ಕಿರಿಕಿರಿ ಮಾತ್ರ ತಡೆಯಲಿಕ್ಕಾಗದು ಎಂಬುದು ಇಲ್ಲಿನ ವರ್ತಕರ ಅಳಲು. 3 ರೂಪಾಯಿಯಿಂದ 17 ಸಾವಿರ ರೂಪಾಯಿಗಳ ವಿವಿಧ ಭಂಗಿಗಳ ಗಣೇಶ ಸಿಕ್ಕರೂ ಗ್ರಾಹಕರಿಗೆ ತೃಪ್ತಿ ಇಲ್ಲ. ಪ್ರತಿ ವರ್ಷ ಹೊಸ ಹೊಸ ಭಂಗಿಗಳೇ ಬೇಕು. ಗಣಪತಿಯದು ಪುರಾಣಗಳಲ್ಲಿ ಹಲವಾರು ಅವತಾರಗಳಾದರೆ, ಕಲಿಯುಗದಲ್ಲಿ ನಾನಾವತಾರ. ಪ್ರಸಕ್ತ ವಿದ್ಯಮಾನಗಳಿಗೆ ತಕ್ಕಂತೆ ಹೊಸ ಹೊಸ ಭಂಗಿಯ ಗಣಪತಿಗಳು ಸೃಷ್ಟಿಯಾಗುತ್ತಲೇ ಇರಬೇಕು. ಕಾರ್ಗಿಲ್‌ ಗಣಪತಿ, ಇನ್ಫೋಸಿಸ್‌ ನಾರಾಯಣ ಮೂರ್ತಿಗೆ ಆಶೀರ್ವಾದ ಮಾಡುವ ಗಣಪತಿ, ವಿವೇಕಾನಂದ ಗಣಪತಿ, ಗಾಂಧಿ ಗಣಪತಿ, ಶ್ರೀನಿವಾಸ ಗಣಪತಿ... ಹೀಗೆ 'ಕಾಂಟೆಪರರಿ ಗಣಪತಿ ಮೂರ್ತಿ"ಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಪಾಕಿಸ್ತಾನದಿಂದ ಬಂದು ಭಾರತೀಯರ ಹೃದಯ ಗೆದ್ದ ಪೋರಿ ನೂರ್‌ ಫಾತಿಮ ಮತ್ತು ಆಕೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಡಾ. ದೇವಿ ಶೆಟ್ಟಿ ಗೆ ಆಶೀರ್ವಾದ ಮಾಡುತ್ತಿರುವ ಗಣೇಶ ಈ ಸಲದ ವಿಶೇಷ. ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಬಹುದು. ಆದರೆ ಕೆಲವರು ಲ್ಯಾಡನ್‌ ಗಣಪತಿ, ಮುಷರ್ರಫ್‌ ಗಣಪತಿ, ವೀರಪ್ಪನ್‌ ಗಣಪತಿಗಳು ಬೇಕು ಅಂತ ಕೇಳಿಕೊಂಡು ಬಂದಿದ್ದರಂತೆ.

ಇಂತಹ ಸಮಾಜ ಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡದಿರುವ ಸಲುವಾಗಿ ಆ ಪರಿಯ ಮೂರ್ತಿಗಳ ತಯಾರಿಗೆ ಮಾವಳ್ಳಿ ಮಂದಿ ಒಪ್ಪಿಕೊಂಡಿಲ್ಲ. ಎಲ್ಲಾ ರೀತಿಯ ಗ್ರಾಹಕರನ್ನು ತೃಪ್ತಿ ಪಡಿಸುವುದು ಅಸಾಧ್ಯ. ಹೀಗಾಗಿ ಎಷ್ಟೋ ಬಾರಿ ಮೂರ್ತಿಗಳು ಮಾರಾಟವಾಗದೆ ಉಳಿದು ಬಿಡುತ್ತವೆ. ಇನ್ನು ಕೆಲವರು ಒಂದು ಮಾದರಿ ಹೇಳಿ ಮುಂಗಡ ನೀಡಿ ಹೋದರೂ, ಆಮೇಲೆ ಹಾಗೆ ಬೇಡ ಹೀಗೆ ಮಾಡಿ ಅಂತ ಕಿರಿಕ್‌ ಮಾಡುತ್ತಾರೆ. ಗಣಪತಿ ಮೂರ್ತಿ ಸ್ವರೂಪದ ಬದಲಾವಣೆಯಲ್ಲೂ ವಶೀಲಿಬಾಜಿ ನಡೆಯುತ್ತಿದೆ.

ಬೆಂಗಳೂರಲ್ಲಿ ಮಾವಳ್ಳಿ ಬಿಟ್ಟರೆ ಟ್ಯಾನರಿ ರಸ್ತೆಯಲ್ಲೂ ಇಂತಹ ಗಣಪತಿ ಮಾರುವವರಿದ್ದಾರೆ. ವರ್ತಕರಿಗೆ ಗಣಪನಿಂದ ಎಷ್ಟೆಲ್ಲಾ ತೊಂದರೆ ಅನುಭವಿಸಬೇಕಾಗಿದೆಯೆಂದರೆ, ಇಲ್ಲಿ ಮಾರಲಿಕ್ಕೆ ಬೇರೆ ಜಾಗವಿಲ್ಲ . ಬದಲಾಗಿ ಗಣಪ ಫುಟ್‌ಪಾತ್‌ ಸೇರುತ್ತಾನೆ. ಇದರಿಂದ ಓಡಾಡುವವರಿಗೆ ತೊಂದರೆ. ಅದಲ್ಲದೆ ಮಳೆಯ ಕಣ್ಣಾ ಮುಚ್ಚಾಲೆ ಬೇರೆ. ಹಬ್ಬವೆಲ್ಲಾ ಮುಗಿದು ಗಣಪತಿ ವಿಸರ್ಜನೆಗೆ ಬಂದರೆ ಅಲ್ಲೂ ಮಹಾನಗರ ಪಾಲಿಕೆಯವರಿಂದ ಕೆರೆಗಳು ಹಾಳಾಗುತ್ತಿವೆಯೆಂಬ ದೂರು.

ಗಣಪತಿ ಮೂರ್ತಿ ಮಾರುವ ವರ್ತಕರ ಯಾವುದೇ ಸಂಘವಿಲ್ಲ. ಇವರ ಸಮಸ್ಯೆ ಬಗ್ಗೆ ಯಾರಿಗೆ ಯಾರೂ ದೂರು ನೀಡಿಲ್ಲ. ಆದರೆ ಇಂತಹ ಸಮಯದಲ್ಲಿ ಸರ್ಕಾರ 2 ತಿಂಗಳು ಬಾಡಿಗೆಗೆ 2 ಎಕರೆ ಜಾಗ ನೀಡಿದರೆ, ಗಣಪತಿಗೊಂದು ಸೂರಾಗುತ್ತದೆ ಮತ್ತು ಇದರಿಂದ ಹಲವರಿಗೆ ವೃತ್ತಿಯಾಗುತ್ತದೆ ಎಂಬುದು ಇಲ್ಲಿನ ವರ್ತಕರ ಮನವಿ.

ಗಣಪತಿ ತಯಾರಿಕೆಯಲ್ಲೂ ಬದಲಾವಣೆಯಾಗಿದೆ. ಮೊದಲೆಲ್ಲಾ ಜೇಡಿ ಮಣಿನಲ್ಲೇ ತಯಾರಾಗುತ್ತಿದ್ದ ಗಣಪತಿ ಬಹಳ ಭಾರ ಎನ್ನುವ ಕಾರಣಕ್ಕೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮತ್ತು ಆಯಿಲ್‌ ಪೇಂಟ್‌ ಬಳಸಲಾಗುತ್ತಿದೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣಪತಿ ನೋಡಲು ಸುಂದರವಾಗಿದ್ದರೂ, ನೀರಿನಲ್ಲಿ ಬೇಗ ಕರುಗುವುದಿಲ್ಲ ಮತ್ತು ಆಯಿಲ್‌ ಪೇಂಟ್‌ ಬಳಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಪರಿಸರವಾದಿಗಳ ಕೊರಗು.

ಇತ್ತೀಚಿಗೆ ಬೆಂಗಳೂರಿನಲ್ಲಿ ಬಹಳ ಫೇಮಸ್ಸಾಗಿರುವುದು ಬಾಂಬೆ ಗಣಪತಿ. ಆದರೆ ಬಾಂಬೆ ಗಣಪತಿಗಳನ್ನು ಮಹಾರಾಷ್ಟ್ರದಿಂದಲೇ ತರಿಸಬೇಕಾಗುತ್ತದೆ. ಇಲ್ಲಿನವರಿಗೆ ಅದನ್ನು ಮಾಡುವುದಕ್ಕೆ ಬರುವುದಿಲ್ಲ. ಒಟ್ಟಿನಲ್ಲಿ ಈ ತರಹದ ಗಣಪತಿಗಳಿಂದ ಸಾಂಪ್ರದಾಯಿಕವಾಗಿ ಕೈಯಿಂದ ಮೂರ್ತಿ ತಯಾರಿಸುವ ಸ್ಥಳೀಯರಿಗೆ ದೊಡ್ಡ ಹೊಡೆತ ಬಿದ್ದಿದೆ. ಅವರನ್ನು ಗಣೇಶ ಕಾಪಾಡಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+