ಗಣೇಶನಿಗೆ ಮೋದದಿಂದ !

ಶಾಹಿ ಕಡುಬು

ಕಡುಬಿನ ಮೇಲ್‌ ಹೊದ್ದಿಗೆಗೆ ಬೇಕಾಗುವ ಸಾಮಗ್ರಿ : ಮೈದಾಹಿಟ್ಟು 300 ಗ್ರಾಂ, ಡಾಲ್ಡ 75 ಗ್ರಾಂ, ಚಿಟಿಕೆ ಕೇಸರಿಬಣ್ಣ, ಚಿಟಿಕೆ ಅಡುಗೆ ಸೋಡಾ, ಚಿಟಿಕೆ ಉಪ್ಪಿನ ಪುಡಿ.

ಹೂರಣಕ್ಕೆ ಬೇಕಾಗುವ ಸಾಮಗ್ರಿ : ಖೋವಾ 100 ಗ್ರಾಂ, ಬಾದಾಮಿ 25 ಗ್ರಾಂ, ಪಿಸ್ತಬೀಜ 25 ಗ್ರಾಂ, ಏಲಕ್ಕಿ ಪುಡಿ ಕಾಲು ಚಮಚ, ಸಕ್ಕರೆ ಪುಡಿ 50 ಗ್ರಾಂ.

ಸಕ್ಕರೆ ಪಾಕಕ್ಕೆ ಬೇಕಾಗುವ ಸಾಮಗ್ರಿ : ಸಕ್ಕರೆ 1 ಕೆ.ಜಿ., ನಿಂಬೆಹಣ್ಣಿನ ರಸ ಅರ್ಧ ಹೋಳು, ಏಲಕ್ಕಿ ಪುಡಿ ಕಾಲು ಚಮಚ, ಸಾಸಿವೆ ಕಾಳಿನಷ್ಟು ಪಚ್ಚ ಕರ್ಪೂರ, ಸಕ್ಕರೆ ಮುಳುಗುವಷ್ಟು ನೀರು.

ವಿಧಾನ : ಹಿಟ್ಟನ್ನು ಜರಡಿ ಮಾಡಿಕೊಂಡು ಬಣ್ಣ ಮತ್ತು ಉಪ್ಪಿನ ಪುಡಿ, ಸೋಡಾಪುಡಿ ಸೇರಿಸಿ ಪಕ್ಕದಲ್ಲಿ ಇರಿಸಿಕೊಳ್ಳಿ. ನೀರನ್ನು ಬಿಸಿ ಮಾಡಿ ಡಾಲ್ಡ ಸೇರಿಸಿ. ಕರಗುವವರೆಗೂ ಕಲೆಸಿರಿ. ತಣ್ಣಗಾದ ಮೇಲೆ ಹಿಟ್ಟನ್ನು ಸೇರಿಸಿ ಕಲೆಸಿ. ಕಲೆಸಿದ ಹಿಟ್ಟನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಅರ್ಧಗಂಟೆ ನಂತರ ಹಿಟ್ಟನ್ನು ಸಣ್ಣ ನಿಂಬೆಗಾತ್ರದ ಉಂಡೆಗಳಾಗಿ ಮಾಡಿ, ಉಂಡೆಗಳನ್ನು ಮಂದವಾದ ಪೂರಿಗಳನ್ನಾಗಿ ಲಟ್ಟಿಸಿ ಒದ್ದೆಬಟ್ಟೆಯನ್ನು ಮುಚ್ಚಿ ಇರಿಸಿಕೊಳ್ಳಿ.

ಬಾದಾಮಿಕಾಯಿಯ ಬೀಜ ಮತ್ತು ಪಿಸ್ತಾ ಬೀಜ ಕುಟ್ಟಿ ದಪ್ಪನೆ ಪುಡಿಯನ್ನು ಮಾಡಿಕೊಳ್ಳಿ. ಖೋವಾ, ಏಲಕ್ಕಿಪುಡಿ, ಸಕ್ಕರೆ ಪುಡಿ ಮತ್ತು ಒಣಹಣ್ಣಿನ ಪುಡಿಗಳನ್ನು ಒಟ್ಟಿಗೆ ಬೆರೆಸಿ ಹೂರಣವನ್ನು ತಯಾರು ಮಾಡಿ ಲಟ್ಟಿಸಿದ ಪೂರಿಗಳಲ್ಲಿ ಹೂರಣ ತುಂಬಿಸಿ. ಅಂಚುಗಳನ್ನು ಅರ್ಧ ಪೂರಿಯ ಆಕಾರಕ್ಕೆ ಮಡಿಚಿ. ಕಡುಬಿನ ಆಕಾರಕ್ಕೆ ಬಂದ ಮೇಲೆ ಕಡುಬಿನ ಅಂಚನ್ನು ಅಲಂಕಾರವಾಗಿ ಸುತ್ತಿ. ತಟ್ಟೆಯಲ್ಲಿ ಇರಿಸಿ ಪಕ್ಕದಲ್ಲಿ ಇರಿಸಿರಿ. ಸಕ್ಕರೆ ಪಾಕ ಮಾಡಲು ಒಂದು ಮಂದವಾದ ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಬೆರೆಸಿ. ಸಣ್ಣ ಉರಿಯಲ್ಲಿ ಪಾಕ ಕುದಿಯಲು ಒಲೆಯ ಮೇಲೆ ಇರಿಸಿ.

ಕುದಿಯುವ ಪಾಕಕ್ಕೆ ನಿಂಬೆರಸವನ್ನು ಸೇರಿಸಿ. ಪಾಕವು ಬೆಂದು ಕನ್ನಡಿಯಂತೆ ಹೊಳೆದಾಗ ಪಾಕವನ್ನು ತಣ್ಣಗಾಗಲು ಬಿಡಿ.

ಒಂದು ಕೆ.ಜಿ.ಯಷ್ಟು ಎಣ್ಣೆ (ರೀಫೈಂಡ್‌) ಮಂದವಾದ ಬಾಣಲೆಯಲ್ಲಿ ಬಿಸಿ ಮಾಡಿ. ಸಣ್ಣನೆಯ ಉರಿಯಲ್ಲಿ ಇರಿಸಿ. ತುಂಬಿಸಿ ತಯಾರು ಮಾಡಿದ ಕಡುಬುಗಳನ್ನು ಬಣ್ಣ ಬದಲಾಗದ ರೀತಿಯಲ್ಲಿ ನಿಧಾನವಾಗಿ ಕರಿಯಿರಿ. ಎಣ್ಣೆಯಿಂದ ತೆಗೆದು ಆರಲು ಬಿಡಿ. ತಣ್ಣಗಾದ ಪಾಕದಲ್ಲಿ ಕಡುಬುಗಳನ್ನು 2 ನಿಮಿಷ ಕಾಲ ನೆನೆಸಿ ತೆಗೆಯಿರಿ. ಹೀಗೆ ತೆಗೆದ ಕಡುಬುಗಳನ್ನು ಒಣಗಲು ಬಿಡಿ. ಕಡುಬಿನ ಮೇಲೆ ಅಂಟಿಕೊಂಡಿರುವ ಪಾಕವು ಗಟ್ಟಿಯಾದ ಮೇಲೆ ಬಳಸಿರಿ. ಸಕ್ಕರೆ ಕಡುಬನ್ನು 2 ಅಥವಾ 3 ದಿನ ಹಬ್ಬಕ್ಕೆ ಮುಂಚಿತವಾಗಿ ತಯಾರು ಮಾಡಿ ಇಟ್ಟುಕೊಳ್ಳಬಹುದು. ಈ ಕಡುಬು ಹಳೆಯದಾದಷ್ಟ ತಿನ್ನಲು ರುಚಿಕರವಾಗಿರುತ್ತದೆ.

*

ಕಡಲೇ ಬೇಳೆಯ ಹೋಳಿಗೆ

ಬೇಕಾಗುವ ಸಾಮಗ್ರಿ : ಕಡಲೇ ಬೇಳೆ ಅರ್ಧ ಕೆ.ಜಿ., ಬೆಲ್ಲ ಅರ್ಧ ಕೆ.ಜಿ., 4 ಏಲಕ್ಕಿ, ಅರಿಶಿನದ ಪುಡಿ 1 ಸಣ್ಣ ಚಮಚ, ಒಣ ಕೊಬ್ಬರಿ ತುರಿ 1 ಗಿಟಕು, ಮೈದಾಹಿಟ್ಟು ಮುಕ್ಕಾಲು ಕೆ.ಜಿ., ರಿಫೈಂಡ್‌ ಎಣ್ಣೆ 1 ಕಪ್ಪು, ನೀರು ಎರಡೂವರೆ ಕಪ್ಪಿನಿಂದ ಮೂರು ಕಪ್‌ ಹಾಗೂ ಎಣ್ಣೆ.

ವಿಧಾನ : ಕಡಲೇ ಬೇಳೆಯನ್ನು ಅರ್ಧ ಗಂಟೆಕಾಲ ನೆನೆಸಿ. ಮುಕ್ಕಾಲು ಲೀಟರ್‌ ನೀರಿನಲ್ಲಿ ಬೇಳೆಯು ಒಡೆದು ಹೋಗುವಂತೆ ಬೇಯಿಸಿ. ಬೆಂದ ಬೇಳೆಗೆ ಬೆಲ್ಲ, ಏಲಕ್ಕಿ ಪುಡಿ, ಅರಿಶಿನ ಸೇರಿಸಿ ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಒಲೆಯ ಮೇಲೆ ಬಾಡಿಸಿಕೊಳ್ಳಿ. ಬಿಸಿ ಇರುವಾಗಲೇ ಬೇಳೆಯನ್ನು ನಯವಾಗಿ ರುಬ್ಬಿಕೊಳ್ಳಿ. ರುಬ್ಬಿದ ಹೂರಣವನ್ನು ಅರ್ಧ ಗಂಟೆಕಾಲ ಪಕ್ಕದಲ್ಲಿ ಇರಿಸಿರಿ. ಮೈದಾಹಿಟ್ಟನ್ನು ಜರಡಿ ಮಾಡಿಕೊಂಡು ಅರಿಶಿನದ ಪುಡಿ ಮತ್ತು ನೀರನ್ನು ಸೇರಿಸಿ ಕಲೆಸಿದ ಹಿಟ್ಟನ್ನು ತಯಾರಿಸಿ. ಕಲೆಸಿದ ಹಿಟ್ಟಿಗೆ ಎಣ್ಣೆಯನ್ನು ಸೇರಿಸುತ್ತ ಒರಳಿನಲ್ಲಿ ಸ್ವಲ್ಪ ರುಬ್ಬಿಕೊಳ್ಳಿ.

ಹೂರಣದ ಹದ ಮತ್ತು ಹಿಟ್ಟಿನ ಹದ ಎರಡೂ ಒಂದೇ ಸಮನಾಗಿರಬೇಕು. ದೊಡ್ಡ ನಿಂಬೆಗಾತ್ರದ ಹೂರಣವನ್ನು ದೊಡ್ಡ ನಿಂಬೆಗಾತ್ರದ ಕಲೆಸಿದ ಹಿಟ್ಟಿನಲ್ಲಿ ತುಂಬಿಸಿ ಎಣ್ಣೆ ಸವರಿದ ಎರಡು ಪ್ಲಾಸ್ಟಿಕ್‌ ಹಾಳೆಗಳ ಮಧ್ಯದಲ್ಲಿ ಇರಿಸಿ ತೆಳುವಾಗಿ ಲಟ್ಟಿಸಿ. ಕಾವಲಿಯನ್ನು ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಒಬ್ಬಟ್ಟನ್ನು ಸುಡಬೇಕು. ಸುಡುವಾಗ ಸಾಕಷ್ಟು ಎಣ್ಣೆಯನ್ನು ತೆಂಗಿನ ಜುಟ್ಟಿನ ಸಹಾಯದಿಂದ ಹಚ್ಚಿರಿ. ಹದವಾಗಿ ಬೇಯಿಸಿ ಹೋಳಿಗೆಯು ಮೆತ್ತಗಿರುವಾಗಲೇ ಒಲೆಯಿಂದ ತೆಗೆದು ಬೆವರದಂತೆ ಇರಿಸಿ. ಹೋಳಿಗೆಯನ್ನು ಗಾಳಿಯಾಡಲು ಬಿಡಬೇಡಿ. ಗಾಳಿಯಾಡಿದಲ್ಲಿ ಹೋಳಿಗೆಯು ಗಟ್ಟಿಯಾಗುತ್ತದೆಯಾದ್ದರಿಂದ ಆದಷ್ಟೂ ಮುಚ್ಚಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+