ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಗಳ ಹಬ್ಬದ ಹಿನ್ನೆಲೆ ಏನು?; ಹಣತೆ ಬೆಳಗಿ ದೀಪಾವಳಿ ಆಚರಿಸೋಣ...

|
Google Oneindia Kannada News

ಮತ್ತೆ ಬಂದ ದೀಪಾವಳಿ ಕೊರೊನಾ ತಂದೊಡ್ಡಿದ ಸಂಕಷ್ಟವೆಲ್ಲ ಮಾಯವಾಗಿ ನೆಮ್ಮದಿ ಸಂತಸದ ಹಣತೆ ಎಲ್ಲರ ಮನೆಗಳಲ್ಲಿ ಬೆಳಗಲಿ ಎಂಬ ಆಶಾಭಾವನೆಯೊಂದಿಗೆ ಹಬ್ಬದ ಆಚರಣೆಗಳು ನಡೆಯುತ್ತಿವೆ. ಕೊರೊನಾ ಆರಂಭವಾದಲ್ಲಿಂದ ಇಲ್ಲಿಯವರೆಗೆ ಹಬ್ಬಗಳನ್ನು ಸಂಭ್ರಮವೇ ಇಲ್ಲದೆ ಆಚರಣೆ ಮಾಡಿಕೊಂಡು ಬಂದಿದ್ದಾರೆ.

ಕೊರೊನಾ ಕಾಣಿಸಿಕೊಳ್ಳುವ ಮುನ್ನ ದೀಪಾವಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಪಟಾಕಿಯ ಅಬ್ಬರ ಕಿವಿಗೆ, ಗಂಧಕ ವಾಸನೆ ಮೂಗಿಗೆ ಬಡಿಯುತ್ತಿತ್ತು. ಇದರ ನಡುವೆ ಪಟಾಕಿ ತರುತ್ತಿದ್ದ ಅನಾಹುತಗಳು ಒಂದೆರಡಲ್ಲ. ಆದರೆ ಪಟಾಕಿಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನತೆಗೆ ತಿಳಿಸುವುದರೊಂದಿಗೆ ಪಟಾಕಿ ಬಳಕೆಯನ್ನು ಕಡಿಮೆ ಮಾಡಿ ಇತ್ತೀಚೆಗೆ ಹಸಿರು ಪಟಾಕಿಯತ್ತ ಜನ ಒಲವು ತೋರುವಂತೆ ಮಾಡಿರುವುದು ಹೊಸ ಬೆಳವಣಿಗೆಯಾಗಿದೆ. ಇದು ದೀಪಾವಳಿ ಹಬ್ಬದ ಸುತ್ತ ನಡೆಯುತ್ತಿರುವ ಪ್ರಕ್ರಿಯೆಗಳಾಗಿದ್ದರೆ, ಇನ್ನು ಆಚರಣೆ ಮತ್ತು ಇತಿಹಾಸಗಳೆಲ್ಲವೂ ಇತರೆ ಹಬ್ಬಗಳಿಗಿಂತ ವಿಭಿನ್ನವಾಗಿರುವುದು ಗೋಚರಿಸುತ್ತದೆ.

 ಎಣ್ಣೆ ಸ್ನಾನದ ಮಹತ್ವ ಗೊತ್ತಾ?

ಎಣ್ಣೆ ಸ್ನಾನದ ಮಹತ್ವ ಗೊತ್ತಾ?

ದೀಪಾವಳಿ ಹಬ್ಬ ಮೂರು ದಿನಗಳ ಆಚರಣೆಯಾಗಿದ್ದು, ಮೂರು ದಿನವೂ ಮನೆ ಮತ್ತು ಮನದಲ್ಲಿ ಸಂಭ್ರಮ ಸಂತಸದೊಂದಿಗೆ ಒಂದಷ್ಟು ಸಂಪ್ರದಾಯದ ಆಚರಣೆ ಹಬ್ಬದಲ್ಲಿ ಎದ್ದು ಕಾಣಿಸುತ್ತದೆ. ಜತೆಗೆ ರಾಮಾಯಣ, ಮಹಾಭಾರತದಂತಹ ಪುರಾಣದ ಹಿನ್ನಲೆಯೂ ಇರುವುದರಿಂದಾಗಿ ನಾವು ಆಚರಣೆ ಮಾಡುವ ಎಲ್ಲ ಹಬ್ಬಗಳಿಗಿಂತ ಈ ಹಬ್ಬದಲ್ಲಿ ವಿಭಿನ್ನತೆ ಮತ್ತು ವೈಶಿಷ್ಟ್ಯತೆ ಇರುವುದು ಎದ್ದು ಕಾಣಿಸುತ್ತದೆ.

ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದು ಹೇಗೆ ಬಂತು ಎಂಬುದನ್ನು ನೋಡುವುದಾದರೆ ಸಮುದ್ರ ಮಂಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ್ದು, ಹೀಗಾಗಿ ಈ ದಿನ ಸ್ನಾನ ಮಾಡುವ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ ಜನರಲ್ಲಿದ್ದು, ಎಣ್ಣೆ ಸ್ನಾನ ಮಾಡುವುದರಿಂದ ಆಯುರಾರೋಗ್ಯ, ಆಯಸ್ಸು ವೃದ್ಧಿಸಿ ಸಕಲ ಪಾಪ ನಿವಾರಣೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ. ಪೌರಾಣಿಕ ಇತಿಹಾಸವನ್ನು ಗಮನಿಸಿದರೆ ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನಂತೆ. ಇದೆಲ್ಲವನ್ನು ಗಮನಿಸಿದರೆ ಹಬ್ಬದಾಚರಣೆ ಹಿಂದಿನ ಮಹತ್ವ ನಮಗೆ ಅರಿವಾಗುತ್ತದೆ.

 ನರಕಾಸುರನ ವಧಿಸಿದ ಕೃಷ್ಣ

ನರಕಾಸುರನ ವಧಿಸಿದ ಕೃಷ್ಣ

ಹಬ್ಬದ ಮೂರು ದಿನಗಳ ಆಚರಣೆಯಲ್ಲಿನ ಮೊದಲ ದಿನ ನರಕ ಚತುದರ್ಶಿಯಾಗಿದೆ. ಇದು ಹೇಗೆ ಆಯಿತು ಎಂಬುದನ್ನು ನೋಡುವುದಾದರೆ ಲೋಕಕಂಠಕನಾದ ನರಕಾಸುರ ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನು ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆ ಹೋಗುತ್ತಾನೆ. ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವೀಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿಯಾಗಿದೆ.

ಸಾಮಾನ್ಯವಾಗಿ ದೀಪಾವಳಿಯಂದು ಪಟಾಕಿ ಸಿಡಿಸುವುದೇಕೆ ಎಂಬುದಕ್ಕೆ ಇಲ್ಲಿ ಒಂದಿಷ್ಟು ಮಾಹಿತಿ ಸಿಗುತ್ತದೆ. ಅದು ಏನೆಂದರೆ ದುಷ್ಟ ಸಂಹಾರದ ಸಂಕೇತವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆಯಂತೆ. ಇದೊಂದು ವಿಜಯದ ಸಂಕೇತಾಗಿದ್ದು, ಆ ದಿನ ಕೃಷ್ಣ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಂಧಮುಕ್ತಗೊಳಿಸಿದ್ದನಂತೆ. ಅದರಂತೆ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವೂ ಇದೆ.

 ಮಹಾಲಕ್ಷ್ಮಿ ಪೂಜಿಸಿ ಧನಲಕ್ಷ್ಮಿ ಆರಾಧನೆ

ಮಹಾಲಕ್ಷ್ಮಿ ಪೂಜಿಸಿ ಧನಲಕ್ಷ್ಮಿ ಆರಾಧನೆ

ಹಬ್ಬದ ಎರಡನೇ ದಿನ (ನರಕ ಚತುರ್ದಶಿಯ ಮಾರನೆಯ ದಿನ) ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಪೂಜಿಸಿ ಧನಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ವ್ಯಾಪಾರಿಗಳು ದೀಪ ಬೆಳಗಿ ಧನಲಕ್ಷ್ಮೀಯನ್ನು ಆರಾಧಿಸುವ ದಿನವಾಗಿದೆ.

ಹಬ್ಬದಲ್ಲಿ ಮೂರನೆಯ ದಿನ ಬಲಿಪಾಡ್ಯಮಿಯಾಗಿದ್ದು, ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ-ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಸಲಾಗುತ್ತದೆ.

Recommended Video

Rahul Dravid ಬಂದ ಮೇಲೆ ತಂಡ ಬದಲಾಗಲಿದೆಯೇ | Oneindia Kannada
 ಪಟಾಕಿಯ ಅನಾಹುತ ತಪ್ಪಿಸೋಣ

ಪಟಾಕಿಯ ಅನಾಹುತ ತಪ್ಪಿಸೋಣ

ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಪ್ರತಿ ಮನೆಯಲ್ಲೂ ಮಕ್ಕಳಿಂದ ವೃದ್ಧರಾದಿಯಾಗಿ ಎಲ್ಲರಲ್ಲೂ ಸಂಭ್ರಮವನ್ನು ತುಂಬುವ ಹಬ್ಬವಾಗಿರುವುದಂತು ಸತ್ಯ. ಹಿಂದಿನಿಂದಲೂ ದೀಪಾವಳಿ ಎಂದರೆ ಪಟಾಕಿ ಹಚ್ಚುವ ಹಬ್ಬ ಎಂಬಂತೆ ಬಿಂಬಿತವಾಗಿರುವುದರಿಂದ ಪ್ರತಿಯೊಬ್ಬರೂ ಹಬ್ಬದ ಆಚರಣೆಗೆ ಒತ್ತು ನೀಡುವುದರೊಂದಿಗೆ ಪಟಾಕಿಯಿಂದ ಸ್ವಲ್ಪ ದೂರ ಸರಿದರೆ ಮನೆಯಲ್ಲಿ ಮಕ್ಕಳಿಗೆ ಪಟಾಕಿಯಿಂದ ಆಗುವ ಅನಾಹುತವನ್ನು ತಪ್ಪಿಸುವುದರೊಂದಿಗೆ ಒಂದೊಳ್ಳೆಯ ಪರಿಸರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಏನಂತೀರ?

English summary
The Deepavali festival is different and unique than all other festivals and is celebrated traditionally by the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X