ಬೆಂಗಳೂರಲ್ಲಿ ಸೈಟ್ ಕೊಳ್ಳುವ ಆಸೆಗೆ ಎಳ್ಳುನೀರು
(ಮುಂದುವರಿದಿದೆ...) "ಮುನ್ನೂರು ಚದರಡಿಗೆ ಇಪ್ಪತ್ತೈದು ಲಕ್ಷವಾ?" ಹೌಹಾರಿದೆ ನಾನು. "ಕಳೆದ ವಾರ ಇಪ್ಪತ್ತಕ್ಕೆ ಕೇಳಿದ್ರು ಸಾರ್ ನಮ್ ಪಾರ್ಟಿ. ಕೊಡಲಿಲ್ಲ ಅವರು. ಇಪ್ಪತ್ತನಾಲ್ಕಕ್ಕೆ ಒಪ್ಪಬಹುದು" ಅನ್ನುತ್ತ ಕಾರಲ್ಲಿ ಕುಳಿತ ರಾಜ. ಇಪ್ಪತ್ತೈದು ಲಕ್ಷದ ಮುನ್ನೂರು ಚದರಡಿ ಜಾಗವನ್ನು ಕಣ್ಣಲ್ಲಿ ತುಂಬಿಸಿಕೊಳ್ಳುತ್ತ ನಾವೂ ಕಾರು ಏರಿದೆವು. ಸ್ವಲ್ಪ ಹೊತ್ತು ಕಳೆದು "ಯಾವುದು ಓಕೆ ಸಾರ್?" ಕೇಳಿದ ರಾಜ. "ರೇಟ್ ತುಂಬ ಜಾಸ್ತಿಯಾಯಿತಲ್ಲಪ್ಪ" ಅಂದೆ ನಾನು.
"ಎಲ್ಲಾ ಕಡೆ ಹೀಗೇ ರೇಟು ಸಾರ್.. ಇವತ್ತು ಬೆಂಗಳೂರಲ್ಲಿ ಇಪ್ಪತ್ತು ಮೂವತ್ತು ಲಕ್ಷಕ್ಕೆಲ್ಲ ಏನೂ ಸಿಗಲ್ಲ ಸಾರ್. ಮಿಡಲ್ ಇನ್ಕಮಿನೋರನ್ನ ಕೇಳೋರಿಲ್ಲ ಸಾರ್" ಅನ್ನುತ್ತ ರಾಜ ಅವರ ಆಫೀಸಿನ ಬಳಿ ಕಾರು ತಂದು ನಿಲ್ಲಿಸಿದ. ಕೆಳಗಿಳಿದೆವು ನಾವು. ಚಿಕ್ಕಪ್ಪನಲ್ಲಿ "ನನಗಿನ್ನೂ ರಿಟೈರ್ ಆಗಲಿಕ್ಕೆ ಏಳೆಂಟು ವರ್ಷ ಇದೆ. ಅರ್ಜೆಂಟೇನೂ ಇಲ್ಲ, ಬರುವ ವರ್ಷ ನೋಡುವಾ" ಅಂದೆ ನಾನು. ಅದನ್ನು ಕೇಳಿಸಿಕೊಂಡ ರಾಜ "ಇದೇ ಕೊನೆಗೆ ನೋಡಿದೆವಲ್ಲ, ಆ ಸೈಟಿಗೆ ಬರುವ ವರ್ಷ ಕೇಳಿದ್ರೆ... ಐವತ್ತು ಸಾರ್. ನಾನು ನೋಡ್ತಾ ಇದ್ದೇನೆ. ವರ್ಷ ವರ್ಷ ಹೋದ ಹಾಗೆ ರೇಟು ಜಾಸ್ತಿಯಾಗುತ್ತೆ, ಸೈಟು ಸಣ್ಣದಾಗುತ್ತೆ. ಮುಂದು ಮುಂದಕ್ಕೆ ನಿಮಗೆ ಸಿಟಿ ಒಳಗಡೆ ನೂರು ಚದರಡಿ ಸೈಟೂ ಸಿಗೋಲ್ಲ ನೋಡಿ ಬೇಕಿದ್ರೆ" ದೃಢವಾಗಿ ನುಡಿದ ರಾಜ.
ನನಗೂ ಚಿಕ್ಕಪ್ಪನಿಗೂ ಬೆಂಗಳೂರಿನ ದುಬಾರಿ ರೇಟು ಕೇಳಿ ಎಲ್ಲೋ ಕಳೆದು ಹೋದ ಅನುಭವ. ನಮ್ಮ ಜೀವಿತದಲ್ಲಿ ಸೈಟು ಸಾಧ್ಯವಾಗಲಾರದೇನೋ ಅನ್ನುವ ಹತಾಶ ಭಾವ. ಇವನ ಪೊಟ್ಟು ಭವಿಷ್ಯ ಬೇರೆ.. ಮುಂದಿನ ದಾರಿಯೇನು ಅಂತ ಶಾಮಣ್ಣನಲ್ಲಿ ಆಲೋಚಿಸಲು ಅಲ್ಲೇ ನಿಂತಿದ್ದೆವು. ರಾಜ ಹೋಗಿ ವರದಿ ಒಪ್ಪಿಸಿರಬೇಕು, ಶಾಮಣ್ಣನಿಗೂ ಗಿರಾಕಿ ಫಾಯಿದೆಯಿಲ್ಲದ್ದು ಅನ್ನಿಸಿರಬೇಕು. "ಮುವತ್ತು ಲಕ್ಷಕ್ಕೆ ವಿಧಾನಸೌಧ ಬಳಿ ಡಬಲ್ ಸೈಟ್ ಸಿಗುತ್ತೆ ಅಂತ ಅನ್ಕೊಂಡಿದ್ರಾ ಸಾರ್" ಎಂದ ಶಾಮಣ್ಣ ಗಹಗಹಿಸಿ ನಕ್ಕು ನಮ್ಮ ಇರವನ್ನೇ ಕಡೆಗಣಿಸಿ ಮೊಬೈಲಿನಲ್ಲಿ ಯಾರಲ್ಲೋ ಮಾತು ಹಚ್ಚಿದ.
ಉಪಾಯವಿಲ್ಲದೆ ಅಲ್ಲಿಂದ ಹೊರಟೆವು. ರಸ್ತೆ ಬಳಿ ರಾಜ ನಿಂತಿದ್ದ. "ಇಲ್ಲೊಂದು ಹದಿನೈದು ಬೈ ಹತ್ತು ಸೈಟಿದೆ. ಬೇರೆ ಬ್ರೋಕರಿದ್ದು. ನನ್ನ ಕಮಿಶನ್ ಐದು ಸಾವಿರ. ನೋಡ್ತೀರಾ ಸಾರ್?" ಕೇಳಿದ ಆತ. "ಹದಿನೈದು ಬೈ ಹತ್ತಾ?" ಅಂದೆ ನಾನು. "ಕೆಳಗೆ ಕಿಚನ್, ಬಾತ್ ರೂಮು ಮೇಲೆ ಬೆಡ್ ರೂಮು, ಮೂರು ಕಡೆ ಗೋಡೆ ಕಟ್ಟಿದ್ರೆ ಸಾಕು ಸಾರ್..ಒಂದು ಸೈಡಲ್ಲಿ ಗೋಡೆ ಈಗಾಗಲೇ ಇದೆ." ಅನ್ನುತ್ತ ನಮ್ಮ ಹಿಂದೆಯೇ ಬರುತ್ತಿದ್ದ ರಾಜ. ಆತನನ್ನು ಅಷ್ಟಾಗಿ ಹಚ್ಚಿಕೊಳ್ಳದೆ ನಾವು ಮುಂದೆ ನಡೆಯುತ್ತಿದ್ದೆವು. ನಮ್ಮನ್ನು ಹಿಂಬಾಲಿಸುವುದನ್ನು ನಿಲ್ಲಿಸಿ ರಾಜ ಕೂಗಿ ಹೇಳಿದ "ಈ ಸಾರಿನೇ ಎಲ್ಲಾದ್ರು ಕೊಂಡ್ಕೊಳ್ಳಿ ಸಾರ್... ಇಲ್ಲಾಂದ್ರೆ ಈ ಊರಲ್ಲಿ ಮುಂದೆ ನಿಮ್ಮ ಬಜೆಟ್ಟಿಗೆ ಕೊನೆಗೆ ಆರಡಿ ಬೈ ಮೂರಡಿ ಜಾಗನೂ ಸಿಗೋಲ್ಲಾ."
ಪುಣ್ಯಕ್ಕೆ ನನ್ನಾಕೆ ನಮ್ಮೊಂದಿಗಿರಲಿಲ್ಲ. ಇದ್ದರೆ ಅವಳ ಬತ್ತಳಿಕೆಗೆ ಇದೊಂದು ಬ್ರಹ್ಮಾಸ್ತ್ರ ಕೂಡ ಸೇರಿಕೊಳ್ಳುತ್ತಿತ್ತು! [ಏನ್ ಸಾರ್ ದೀಪಾವಳಿ ಹಬ್ಬ ಜೋರಾ?]












Click it and Unblock the Notifications