ಲೆಫ್ಟ್ ರೈಟ್ ಅಲ್ಲಿದೆ ನೋಡಿ ಫೀಲ್ಡಲ್ಲಿ ಸೈಟು!

(ಮುಂದುವರಿದಿದೆ...) ಅವರ ಹೊಸಾ ಹೋಂಡ ಸಿಟಿ ಕಾರಿನಲ್ಲಿ ಕುಳಿತು ಹೊರಟೆವು. ಇಲ್ಲಿ ಲೆಫ್ಟ್, ಇಲ್ಲಿ ರೈಟ್ ಅಂತ ಆತ ನಮಗೂ ಕೇಳಿಸುವ ಹಾಗೆ ಹೇಳುತ್ತ ಕಾರು ಚಲಾಯಿಸುತ್ತಿದ್ದ. ನಡುವೆ ಫೋನಲ್ಲಿ ಯಾರಿಗೋ ಯದ್ವಾ ತದ್ವಾ ಬೈದು ಮುಗಿಸಿದ. "ಸಾರಿ ಸಾರ್.. ಮೂರುದಿನದಿಂದ ಪೋನ್ ಎತ್ತಾನೇ ಇರ್ಲಿಲ್ಲ ನನ್ಮಗ... ಹಾಗೆ ಅವನನ್ನು ಪೂರ್ತಿ ಆರು ರುಪಾಯಿಗೆ ಬೈದದ್ದು." ಅಂದ. "ಬೈಗಳ ಟಾಕ್ ಟೈಮ್ ಲೆಕ್ಕ ಕೇಳಿದೆಯಾ?" ಅಂದೆ ಚಿಕ್ಕಪ್ಪನಲ್ಲಿ. ಏನೋ ನೆನಪಾದಂತೆ ಚಿಕ್ಕಪ್ಪನೂ ಪೋನೆತ್ತಿ ಬೆಳ್ತಂಗಡಿಯ ಯಾರನ್ನೋ ಐದು ರುಪಾಯಿಗೂ ಮಿಕ್ಕಿ ಬೈದ! ಅಗ್ಗದ ಸ್ಪೆಕ್ಟ್ರಂ ಕೊಟ್ಟ ರಾಜರ ಈ ನಾಡಿನಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಮನಸ್ವೀ ಬೈದೇ ತೃಪ್ತಿ ಹೊಂದುತ್ತಿದ್ದಾರೆ!

ಬೈದು ಸಾಕಾಗಿದ್ದ ರಾಜ ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ನನ್ನಲ್ಲಿ "ನಿಮ್ಮ ಬಜೆಟ್ ಎಷ್ಟು ಸಾರ್?" ಕೇಳಿದ. "ಸೈಟು ತೋರಿಸಿ. ನೋಡದೆ ಹೇಗೆ ಹೇಳೋದು?" ಅಂದ ಚಿಕ್ಕಪ್ಪ. ಅರ್ಧ ಕಿ.ಮೀ. ಕಾರು ಚಲಾಯಿಸಿ ರಾಜ ಎಡಕ್ಕೆ ತಿರುಗಿ ಒಂದು ಹಳೇ ಮನೆಯೆದುರು ನಿಲ್ಲಿಸಿದ.

"ಇಳೀಬೇಡಿ, ಕಾರಲ್ಲೇ ಇರಿ, ಓ ಅದು.. ಎದುರು ಕಾಣುತ್ತಿದೆಯಲ್ಲ ಹಳೇ ಮನೆ.. ಆ ಮನೆ ಒಡೀಬೇಕು" ಅಂದ. "ಮನೆ ಒಕ್ಕಲೆಬ್ಬಿಸಿ ಒಡೀಯೋ ರೌಡಿಗಳಲ್ಲಪ್ಪ ನಾವು.. ಶಾಮಣ್ಣ ಏನು ಹೇಳಿದ?" ಗಡಬಡಿಸಿ ನುಡಿದ ಚಿಕ್ಕಪ್ಪ. ರಾಜ ನಕ್ಕ. "ಸಾರ್.. ಹಾಗಲ್ಲ ಸಾರ್. ಅದೇ ಸೈಟು.. ಮನೆ ಖಾಲಿ ಮಾಡಿಸಿ, ಹಳೇಮನೆ ಒಡೀಬೇಕು. ಅವರೇ ಮಾಡಿಕೊಡುತ್ತಾರೆ. ಎರಡು ಕೋಟಿ ಹೇಳ್ತಾರೆ".

"ಎರಡು... ಕೋಟಿಯಾ?" ಬೆಚ್ಚಿ ಕೇಳಿದೆ ನಾನು. "ಆ ಬಾಡಿಗೆಯವರು ಏಳ್ತಾ ಇಲ್ಲ. ಓನರ್ ಮಾರೋ ಐಡಿಯಾದಲ್ಲಿದ್ದಾರೆ. ನೀವೇ ಬಾಡಿಗೆ ಎಬ್ಬಿಸೋದಾದ್ರೆ, ನೀವೇ ಮನೆ ಒಡೆದು ತೆಗೆಯೋದಾದ್ರೆ ಒಂದೂವರೆಗೆ ಸಿಗಬಹುದು" ವಿವರಿಸಿದ ರಾಜ. "ಅಷ್ಟು ರೇಟಿದ್ದೆಲ್ಲ, ಅಂಥ ಸಮಸ್ಯೆ ಇದ್ದದ್ದೆಲ್ಲ ಬೇಡಪ್ಪ" ಅಂದೆ ನಾನು. "ಒಂದು ಕೋಟಿಯದ್ದು ತೋರಿಸ್ಲಾ ಸಾರ್" ಕೇಳಿದ ಆತ.

"ಅಷ್ಟೆಲ್ಲ ಬೇಡಪ್ಪ... ರೇಟು ಜಾಸ್ತಿಯಾಯಿತು" ಅಂದೆ ನಾನು. "ಎಂಭತ್ತು.. ಎಪ್ಪತ್ತು.. ಅರುವತ್ತು ಲಕ್ಷದ್ದು ತೋರಿಸ್ಲಾ ಸಾರ್?" ಆತ ಸ್ವಲ್ಪ ಸ್ವಲ್ಪವೇ ಇಳಿಸುತ್ತಿದ್ದ. ನಾನು "ಅದೂ ಜಾಸ್ತಿ" ಎನ್ನಲು ಹೊರಟಿದ್ದೆ. ಅಷ್ಟರೊಳಗೆ "ಅರವತ್ತರದ್ದು ನೋಡೋಣ" ಎಂದ ಚಿಕ್ಕಪ್ಪ. ಎಲ್ಲೆಲ್ಲೋ ಅರ್ಧ ಗಂಟೆ ಸುತ್ತಾಡಿ ಕೊನೆಗೆ ಡಾಂಬರು ರಸ್ತೆ ಬಿಟ್ಟು ಸ್ವಲ್ಪ ಮಣ್ಣಿನ ರಸ್ತೆಯಲ್ಲಿ ಕಾರು ಚಲಾಯಿಸಿ ಒಂದು ಬಯಲಿನಲ್ಲಿ ಕಾರು ತಂದು ನಿಲ್ಲಿಸಿದ ರಾಜ.

"ಇಲ್ಲಿ ಮೂರು ಸೈಟಿದೆ ಸಾರ್... ಮೂವರೂ ಅರುವತ್ತು ಲಕ್ಷ ಹೇಳ್ತಾರೆ" ಅಂದ. ಕೆಳಗಿಳಿದು ನೋಡಿದರೆ ಅದೊಂದು ಸಣ್ಣ ಬಯಲು. ಹತ್ತಾರು ದನಗಳು ಮೇಯುತ್ತಿದ್ದವು.. "ಸೈಟೆಲ್ಲಿದೆ?" ಎಂದೆ ನಾನು. "ಇಲ್ಲೇ ಸಾರ್. ಮಾರ್ಕಿಂಗ್ ಎಲ್ಲ ಬಿದ್ದೋಗಿದೆ... ಇಲ್ಬನ್ನಿ... ಹೀಗೆ ರಸ್ತೆ ಬರುತ್ತೆ... ಅನ್ನುತ್ತ ತನ್ನ ಎರಡೂ ಕೈಗಳನ್ನು ಮೇಲಕ್ಕೂ ಕೆಳಕ್ಕೂ ಉದ್ದಕ್ಕೂ ತೋರಿಸಿದ. ಓ ಅಲ್ಲಿಂದ ಮೈನ್ ರೋಡಿಗೆ ಕನೆಕ್ಷನ್ನು.. ಅಲ್ಲೇ ಪಾರ್ಕ್ ಬರುತ್ತೆ. ಈಚೆಗೆ ಸ್ಕೂಲಿಗೆ ಪ್ರೊವಿಶನ್ ಇಟ್ಟಿದ್ದಾರೆ... ಅನ್ನುತ್ತ ತುರಿಸುವ ಬಾಲ ಕಚ್ಚುವ ನಾಯಿಯಂತೆ ಸುತ್ತು ಸುತ್ತು ತಿರುಗಿ ವಿವರಿಸಿದ.

"ಇದು ಬರೇ ಬಯಲು.. ಹತ್ತಿರ ಎಲ್ಲೂ ಮನೇನೆ ಇಲ್ಲ" ಅಂದೆ ನಾನು. "ಈಗ ಹಾಗೆ ಸಾರ್. ಮೂರ್ನಾಲ್ಕು ವರ್ಷ ಬಿಟ್ಟು ಬಂದರೆ ಭವ್ಯ ಬಂಗಲೆಗಳಿರುತ್ತವೆ. ಹೊಸ ಬಡಾವಣೆ ಇದು" ಅಂದ ರಾಜ. "ಇಲ್ಲಿ ಅರುವತ್ತು ಲಕ್ಷಾನ?" ಮೈಲುದ್ದಕ್ಕೂ ಮನೆಯೇ ಕಾಣಿಸದಿದ್ದ ಹಾಳು ಮೂಲೆಯಲ್ಲಿ ಇಷ್ಟು ರೇಟಾ ಅನ್ನಿಸಿತ್ತು ನನಗೆ. "ಐಟಿ ಬೀಟಿಯವರು ಎಲ್ಲ ಹಾಳು ಮಾಡಿದ್ರು ಸಾರ್. ಸಿಟಿಯೊಳಗೆ ಜಾಗನೇ ಇಲ್ಲ. ಆಚೀಚೆ ನಾಲ್ಕು ಮನೆ ಬಂದು, ಕಾವೇರಿ ನೀರು ಬಂದು, ಮಿನಿಸ್ಟರ್ ಶೋಭಕ್ಕ ಕರೆಂಟು ಕೊಟ್ಟು ಬಿಟ್ರೆ ಇಲ್ಲೂ ಒಂದುಕೋಟಿ ಅಂತಾರೆ" ಅನ್ನುತ್ತ ನಕ್ಕ ರಾಜ.

ಹಿಂತಿರುಗಿ ಕಾರಲ್ಲಿ ಕುಳಿತೆವು. "ಇಪ್ಪತ್ತೈದು ಮೂವತ್ತು ಲಕ್ಷದ್ದು ತೋರಿಸಿ" ಅಂದೆ ನಾನು. ಅವನ ಉಮೇದು ಪೂರ್ತಿ ಇಳಿದು ಹೋಯಿತು. "ಆ ರೇಟಿಗೆಲ್ಲ ಸಿಟಿ ಹೊರಗಡೆ ಹೋಗ್ಬೇಕು ಸಾರ್" ಅಂದ ಒಂಥರಾ ಅಸಡ್ದೆ ತೋರಿಸಿ. "ನೋಡೋಣ... ಐಡಿಯಾ ಸಿಗುತ್ತೆ" ಅಂದ ಚಿಕ್ಕಪ್ಪ. ಕಾರನ್ನು ಮೈನ್ ರೋಡಿಗೆ ತಂದು ಒಂದೇ ಸವನೆ ವೇಗ ಹೆಚ್ಚಿಸಿ ಅರ್ಧ ಗಂಟೆಗೂ ಮಿಕ್ಕಿ ಚಲಾಯಿಸುತ್ತಿದ್ದ. ಕಿಟಿಕಿಯಿಂದ ಹೊರಗೇ ನೋಡುತ್ತಿದ್ದ ನನಗೆ ದಾರಿ ಫಲಕ ಒಂದರಲ್ಲಿ "ಆನೇಕಲ್" ಎಂದು ಬರೆದುದು ಕಾಣಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+