ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಂಗೀತ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರು

By Staff
|
Google Oneindia Kannada News

ಇವತ್ತು ನರಕ ಚತುರ್ದಶಿ. ಇವತ್ತಿಗೆ, ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ದೇಹತ್ಯಾಗ ಮಾಡಿ 173 ವರ್ಷಗಳಾದುವು. ತನ್ನಿಮ್ಮಿತ್ತ ಹಿರಿಯ ವಾಗ್ಗೇಯಕಾರ ಡಾ. ಬಾಲಮುರಳಿಕೃಷ್ಣ ಅವರ ರಚನೆಯೊಂದರಿಂದ ಮುತ್ತುಸ್ವಾಮಿ ದೀಕ್ಷಿತ ಅವರ ನೆನಕೆ.

* ಹಂಸಾನಂದಿ

Muthuswamy Dixit
ಮುತ್ತುಸ್ವಾಮಿ ದೀಕ್ಷಿತರು - ಕಲಾವಿದ ಎಸ್.ರಾಜಂ ಅವರ ಕಲ್ಪನೆಯಲ್ಲಿ
ತಮ್ಮ ಅರವತ್ತನೇ ವಯಸ್ಸಿನಲ್ಲಿ ದೀಪಾವಳಿ ಹಬ್ಬದಂದು (ಕ್ರಿ.ಶ.1835, ಅಕ್ಟೋಬರ್ 21ರಂದು) ಮುತ್ತುಸ್ವಾಮಿ ದೀಕ್ಷಿತರು ತಮ್ಮ ಶಿಷ್ಯರಿಗೆ, ತಾವೇ ಗಮಕಕ್ರಿಯಾ ರಾಗದಲ್ಲಿ ರಚಿಸಿದ ಮೀನಾಕ್ಷಿ ಮೇ ಮುದಂ ದೇಹಿ ಎಂಬ ಕೃತಿಯನ್ನು ಹಾಡಹೇಳಿದರಂತೆ. ಅನುಪಲ್ಲವಿಯ ಮೀನಲೋಚನಿ-ಪಾಶಮೋಚನಿ ಎಂಬ ಸಾಲನ್ನು ಹಾಡುವಾಗ, ಅದನ್ನೇ ಮರಳಿ ಮರಳಿ ಹಾಡುವಂತೆ ಹೇಳಿ ಆ ಸಮಯದಲ್ಲೇ, ಅವರ ಜೀವ ದೇಹವನ್ನು ಬಿಟ್ಟು ಹೋಯಿತೆಂದು ಐತಿಹ್ಯ.

ದೀಕ್ಷಿತರು ಕರ್ನಾಟಕ ಸಂಗೀತ ಕಂಡ ಅನನ್ಯ ವಾಗ್ಗೇಯಕಾರ. ಅವರ ಶೈಲಿಯನ್ನು ಎಳನೀರಿಗೆ ಹೋಲಿಸಲಾಗುತ್ತೆ. ಹೇಗೆ ಎಳನೀರಿನ ಸವಿಯನ್ನು ಸವಿಯಬೇಕಾದರೆ ಮೊದಲಿಗೆ, ಗಟ್ಟಿಯಾದ ಕರಟವನ್ನು ಒಡೆಯಬೇಕಾಗುತ್ತೋ, ಹಾಗೆ, ದೀಕ್ಷಿತರ ರಚನೆಗಳು ಮೇಲ್ತೋರಿಕೆಗೆ ಸ್ವಲ್ಪ ಗಡುಸು. ಒಳಹೊಕ್ಕರೆ ಬಹಳ ಸವಿ. ಇವರ ಸುಮಾರು ನಾನೂರು ಕೃತಿಗಳು ದೊರೆತಿವೆ. ವೆಂಕಟಮಖಿ ಎಂಬ ಕನ್ನಡಿಗ ಸಂಗೀತಜ್ಞನ ಪರಂಪರೆಯ ಶಿಷ್ಯರಾದ ಮುತ್ತುಸ್ವಾಮಿ ದೀಕ್ಷಿತರು ವೆಂಕಟಮಖಿ ಪ್ರತಿಪಾದಿಸಿದ ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿಯೂ ಕೃತಿ ರಚನೆ ಮಾಡಿದ ಮೊದಲ ವಾಗ್ಗೇಯಕಾರರು.

ಇವತ್ತು ಮುತ್ತುಸ್ವಾಮಿ ದೀಕ್ಷಿತರನ್ನು, ನಮ್ಮ ಕಾಲದ ಒಬ್ಬ ಹಿರಿಯ ವಾಗ್ಗೇಯಕಾರರಾದ ಡಾ.ಬಾಲಮುರಳಿಕೃಷ್ಣ ಅವರ ರಚನೆಯೊಂದರಿಂದ ನಾನು ನೆನೆಯುತ್ತೇನೆ. ದೀಕ್ಷಿತರ ಶೈಲಿಯಲ್ಲೇ, ಇರುವ ಈ ಸುಚರಿತ್ರ ರಾಗದ ರಚನೆ ಅವರ ನೆನಪಿಗೆ ಸಾರ್ಥಕ ಎಂದು ನನ್ನೆಣಿಕೆ.

ಈ ಕೃತಿಯ ಸಾಹಿತ್ಯ ಹೀಗಿದೆ:

||ಪಲ್ಲವಿ||

ಚಿಂತಯಾಮಿ ಸಂತತಂ ಶ್ರೀ ಮುತ್ತುಸ್ವಾಮಿ ದೀಕ್ಷಿತಂ

||ಅನುಪಲ್ಲವಿ||

ಅಂತಕಾರಿ ಸುತ ಮಂತ್ರೋಪಾಸನ ತತ್ಪರಂ
ಆನಂದಾಮೃತವರ್ಷಣ ಕಾರಕಂ ವರಂ
ಅಪಾರರಾಗ ಲಯಾಭಿಜ್ಞಂ ರಾಮಸ್ವಾಮಿ ಸುಪುತ್ರಂ
ಪರಮ ಪವಿತ್ರಂ ಸುಚರಿತ್ರಂ

||ಚರಣ||

ಅಪೂರ್ವ ಪಂಚಲಿಂಗ ನವಾವರಣಾದಿ ದೈವಪರ ಕೃತಿಕರ್ತಾರಂ ಮುರಳೀರವಹಿತಂ
ನಿಪುಣಂ ಗಾನನಿಪುಣಂ ದೇಶೀಯಗಾನ ನಿಪುಣಂ ಮಾರ್ಗದೇಶೀಯಗಾನ ನಿಪುಣಂ

ಮುತ್ತುಸ್ವಾಮಿದೀಕ್ಷಿತರು ತಮ್ಮ ಕೃತಿಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಶ್ರೋತೋವಹಯತಿಯನ್ನು (ನದಿಯು ಹರಿಯುತ್ತಾ ಹೋದಂತೆ, ಅದರ ಅಗಲ ಹೆಚ್ಚುವಂತೆ, ಪದಕ್ಕೆ ಪದ ಜೋಡಿಸಿ ಅರ್ಥ ವಿಸ್ತಾರ ಮಾಡುವ ಪದ ಚಮತ್ಕಾರಕ್ಕೆ ಶ್ರೋತೋವಹಯತಿ ಎಂದು ಹೆಸರು: ಮೇಲಿನ ಕೃತಿಯಲ್ಲಿ ಕೊನೆಯ ಸಾಲಿನಲ್ಲಿ ಬರುವ - ನಿಪುಣಂ ಗಾನ ನಿಪುಣಂ ದೇಶೀಯ ಗಾನ ನಿಪುಣಂ ಮಾರ್ಗ ದೇಶೀಯ ಗಾನ ನಿಪುಣಂ ಎನ್ನುವುದನ್ನು ಗಮನಿಸಿ) ಮತ್ತು ರಾಗದ ಹೆಸರನ್ನು ಚಮತ್ಕಾರಿಕವಾಗಿ ಹಾಡಿನೊಳಗೆ ಸೇರಿಸುವುದು (ಪರಮಪವಿತ್ರಂ ಸುಚರಿತ್ರಂ ಎಂಬ ಸಾಲನ್ನು ಗಮನಿಸಿ) - ಈ ಎರಡನ್ನೂ ಬಾಲಮುರಳಿ ಅವರು ಬಹಳ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಮಾರ್ಗ-ಮತ್ತು ದೇಶೀ ಎರಡೂ ಸಂಗೀತ ಪ್ರಕಾರಗಳಲ್ಲಿ ನಿಪುಣರಾದ ಮುತ್ತುಸ್ವಾಮಿ ದೀಕ್ಷಿತರನ್ನು ಅವರ ಪುಣ್ಯ ತಿಥಿಯ ದಿನ ನೆನೆಯಲು ಈ ಹಾಡನ್ನು ಕೇಳುವುದೂ ಒಂದು ದಾರಿ ಎಂದು ನನ್ನೆಣಿಕೆ.

ಆಸಕ್ತರು ಬಾಲಮುರಳಿಕೃಷ್ಣ ಅವರ ರಚನೆಯನ್ನು ಕೆಳಗಿನ ಕೊಂಡಿಯನ್ನು ಚಿಟಕಿಸಿ ಕೇಳಬಹುದು.

ಸೂಸರ್ಲ ಶಿವರಾಮ್ ಅವರ ಕಂಠದಲ್ಲಿ - ಚಿಂತಯಾಮಿ ಸಂತತಂ ಶ್ರೀ ಮುತ್ತುಸ್ವಾಮಿ ದೀಕ್ಷಿತಂ - ಸುಚರಿತ್ರ ರಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X