ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಮನಕೆ ಬೆಳಕು ತರಲಿ ದೀಪಾವಳಿ

By Staff
|
Google Oneindia Kannada News

ಏರು ಬಜೆಟ್ಟಿನಲ್ಲಿ ಕರಗುವ ಜೇಬು, ಏನು ಮಾಡೋಕಾಗುತ್ತೆ ವರುಷಕ್ಕೊಂದೇ ದೀಪಾವಳಿ ನೋಡು. ಬೆಳಕಿನ ಹಬ್ಬದ ಸಂಭ್ರಮದಲ್ಲಿ ಸಿಡಿ ಪಟಾಕಿ ಕೈಗೆತ್ತಿಕೊಳ್ಳುವಾಗ ಜೋಪಾನ.

*ಎಂ.ವಿನೋದಿನಿ

ಬರ, ರಾಜಕೀಯ ಜಗಳಗಳು, ಮೂಲಭೂತ ಹಕ್ಕಿಗಾಗಿ ಯಥಾ ಪ್ರಕಾರ ನಡೆದು ಬರುತ್ತಿರುವ ಹಲವು ಹೋರಾಟಗಳ ಟ್ರಾಫಿಕ್ಕು ಸಿಗ್ನಲ್ಲುಗಳನ್ನು ನಿರಾಳವಾಗಿ ದಾಟಿಕೊಂಡು ಮತ್ತೆ ದೀಪಾವಳಿ ಬಂದಿದೆ.

ಆಫೀಸಿಗೆ ಹೋಗುವವರಿಗೆ ಬೋನಸ್ಸು ಬಂತೆಂಬ ಸಂಭ್ರಮ. ಫ್ಯಾಕ್ಟರಿ ಕೆಲಸಗಾರರಿಗೆ ಹಬ್ಬದ ಹೆಚ್ಚುವರಿ ಭಕ್ಷೀಸು, ಇಂಕ್ರಿಮೆಂಟು, ಹೊಸ ಬಟ್ಟೆ - ಗಿಫ್ಟುಗಳ ಖರೀದಿ, ಹಣತೆಗಳ ಖರೀದಿ, ಉದ್ರಿ ಅಂಗಡಿಯ ಸಾಲ ಚುಕ್ತಾ, ಮೆಚ್ಯೂರ್‌ ಆದ ಪಟಾಕಿ ಚೀಟಿ, ಹೊಸ ನಮೂನಿ ಪಟಾಕಿಗಳು, ಸಾಲು ದೀಪಗಳ ಮಿನುಗುವಿಕೆ- ಸಂಭ್ರಮಕ್ಕೆ ಅದೆಷ್ಟು ಕಾರಣಗಳು !

ಧೂಳು ಪಾಳುಗಳನ್ನು ಗುಡಿಸಿ ಚೊಕ್ಕ ಮಾಡುತ್ತಿರುವ ಹೆಂಗಸರು, ಬಣ್ಣದ ಪೇಪರುಗಳ ಶೃಂಗಾರ, ಮನೆಯಲ್ಲಿ ಮಾಡಬೇಕಾದ ಸಿಹಿ ತಿಂಡಿಗೆ ತಯಾರಿ, ಅಂಗಡಿಯಿಂದ ಖರೀದಿಸಬೇಕಾದ ತಿಂಡಿಗಳ ಪಟ್ಟಿ, ರೆಡಿಯಾಗುತ್ತಿರುವ ತಿಂಡಿಗಳ- ಗಿಫ್ಟುಬಾಕ್ಸ್‌ಗಳು... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಆದರೆ ಜೇಬು ?

ಬಜೆಟ್ಟು ಮಿತಿ ಮೀರುತ್ತಿದೆಯೇ ? ಆದರೆ ಏನು ಮಾಡಲಿಕ್ಕಾಗತ್ತೆ. ಆಫೀಸಿನಲ್ಲಿ ಸಿಕ್ಕಿದ ಬೋನಸ್ಸಿನ ಹಣವೆಲ್ಲಾ ಖರ್ಚು ಮಾಡುವುದರ ಜೊತೆಗೆ ಒಂದಿಷ್ಟು ಕೂಡಿಟ್ಟ ಹಣವನ್ನೂ ಖರ್ಚು ಮಾಡಬೇಕು. ವರ್ಷಕ್ಕೊಂದೇ ಸಾರಿ ಬರುವ ಹಬ್ಬ.

ಒಮ್ಮೆ ಅಂಗಡಿಗಳತ್ತ ಕಣ್ಣು ಹಾಯಿಸಿ. ಮಿರುಗುವ ಮಿನಿಯೇಚರ್‌ ಬಲ್ಬುಗಳು, ಗ್ರಾಂಡ್‌ ಡಿಸ್ಕೌಂಟು ಎಂಬ ಬಣ್ಣ ಬಣ್ಣದ ಬೋರ್ಡುಗಳು, ಹೊಸ ನಮೂನೆಯ ಎಕ್ಸ್‌ಚೇಂಜ್‌ ಆಫರುಗಳು, ದೀಪಾವಳಿ ವಿಶೇಷ ಲಕ್ಕಿ ಡ್ರಾಗಳು, ಜನರಲ್ಲಿ ದೀಪಾವಳಿ ಸಮಯಕ್ಕೇ ಹೆಚ್ಚಾಗುವ ಕೊಳ್ಳುವ ಸಂಸ್ಕೃತಿಯನ್ನು ಕ್ಯಾಶ್‌ ಮಾಡಿಕೊಳ್ಳಲು ತರ ತರದ ಬಲೆ ಹೆಣೆಯುವ ಅಂಗಡಿಗಳು. ವ್ಯಾಪಾರಿಗಳು.

ಬೆಂಗಳೂರಿನಲ್ಲಿ ಫುಡ್‌ ವರ್ಲ್ಡ್‌ ಕಡೆಗೆ ಹೋಗಿದ್ದೀರಾ. ಅಲ್ಲಿ ದೀಪಾವಳಿ ಖರೀದಿಗೆಂದೇ ವಿಶೇಷ ಕೌಂಟರ್‌. ತರತರದ ಹಣತೆಗಳು, ದೀಪಗಳು, ಚಿತ್ತಾರದ ಕ್ಯಾಂಡಲ್‌ಗಳು, ಪಟಾಕಿ ಪೆಟ್ಟಿಗೆಗಳು, ತೂಗುತ್ತಿರುವ ಗೂಡು ದೀಪಗಳು, ನಕ್ಷತ್ರಗಳು- ದೀಪಾವಳಿ ಎಂದರೆ ಎಂಥಾ ಆಕರ್ಷಣೆಯ ಹಬ್ಬ !

ಅನಾಥ ಮಕ್ಕಳ ಬದುಕಿಗೆ ದೀಪ : ನಗರದ 'ಸ್ನೇಹಾಲಯ" ಮಕ್ಕಳ ಮನೆ ದೀಪಾವಳಿಗೆ ಹೊಸ ಪ್ಲಾನ್‌ ಘೋಷಿಸಿದೆ. ಅದು ಕ್ರ್ಯಾಕರ್‌ ಪ್ರೋಜೆಕ್ಟ್‌. ಈ ಯೋಜನೆಯ ಮುಖಾಂತರ ಅನಾಥ ಮಕ್ಕಳಿಗೆ ಅನ್ನ, ವಸತಿ ನೀಡುವುದು ಸ್ನೇಹಾಲಯದ ಉದ್ದೇಶ. ಅಯ್ಯನ್‌ ಫೈರ್‌ವರ್ಕ್ಸ್‌ ಎಂಬ ಫ್ಯಾಕ್ಟರಿಯಿಂದಲೇ ಪಟಾಕಿಗಳನ್ನು ತಂದು ಇಲ್ಲಿ ಮಾರಲಾಗುತ್ತದೆ. ಅಯ್ಯನ್‌ ಪಟಾಕಿ ಫ್ಯಾಕ್ಟರಿಯಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದಿಲ್ಲ. ಈ ಮೂಲಕ ಬಾಲಕಾರ್ಮಿಕತೆಯನ್ನು ವಿರೋಧಿಸುವ ಉದ್ದೇಶ ಸ್ನೇಹಾಲಯದ್ದು ಹಾಗೂ ಅಯ್ಯನ್‌ ಫ್ಯಾಕ್ಟರಿಯದ್ದೂ ಕೂಡ. 300 ರೂಪಾಯಿಯಿಂದ 4, 000 ರೂಪಾಯಿಯವರೆಗೆ ಪಟಾಕಿ ಪೆಟ್ಟಿಗೆಗಳು ಇಲ್ಲಿ ಲಭ್ಯ.

ಕಳ್ಳಮಾಲು ಬೇಡ : ಲೈಸನ್ಸ್‌ ಇರುವ ಅಂಗಡಿಯಿಂದಲೇ ಪಟಾಕಿ ಕೊಳ್ಳಿ ಎಂಬುದು ಪೊಲೀಸರ ಮನವಿ. ಕ್ರೀಡಾಂಗಣಗಳಲ್ಲಿ, ಬಯಲುಗಳಲ್ಲಿ ಫ್ಯಾಕ್ಟರಿಯವರು ಹಾಕುವ ವಿಶೇಷ ಮಳಿಗೆಯಿಂದಲೇ ಪಟಾಕಿ ಖರೀದಿಸಿ. ಅಂಗಡಿಗಳಲ್ಲಿ ಸಿಗುವ ಪಟಾಕಿ ಕಳ್ಳ ಮಾಲಾಗಿರಬಹುದು ಎಂಬುದು ಪೊಲೀಸರ ಕಿವಿ ಮಾತು.

ಪಟಾಕಿ ಖರೀದಿಗೋಸ್ಕರ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಹೋಗಬೇಡಿ ಎಂಬುದು ಪೊಲೀಸರ ಇನ್ನೊಂದು ಎಚ್ಚರಿಕೆ. ಪ್ರಯಾಣದ ವೇಳೆ ಪಟಾಕಿ ಸುಟ್ಟು ಅನಾಹುತವಾಗಬಹುದು ಎಂಬುದು ಈ ಎಚ್ಚರಿಕೆಯ ಹಿಂದಿರುವ ಕಾಳಜಿ. ಹಾಗೇ ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಟಂಬಾಂಬು ಸಿಡಿಸಿ, ಢಂ ಸದ್ದು ಕೇಳಿ ಖುಷಿ ಪಡುವಂತಿಲ್ಲ. ಢಂ ಪಟಾಕಿಗಳನ್ನು ಸಿಡಿಸಬಾರದು ಎಂದು ಪೊಲೀಸರು ವಾರ್ನಿಂಗ್‌ ನೀಡಿದ್ದಾರೆ. ಅದನ್ನೂ ಮೀರಿ ಹಚ್ಚಿದಿರೋ, ಪೊಲೀಸರ ಕಣ್ಣಿಗೆ ಬಿದ್ದರೆ ಒಳಗೆ ಹಾಕುತ್ತಾರೆ ಎಚ್ಚರ.

ಮತ್ತವೇ ಎಚ್ಚರಿಕೆಗಳು-

  • ಪಟಾಕಿ ಸುಡುವಾಗ ನೈಲಾನ್‌ ಬಟ್ಟೆ ಧರಿಸಬೇಡಿ.
  • ಮಕ್ಕಳ ಕೈಗೆ ರ್ಯಾಕೆಟ್‌ ಕೊಡಲೇಬೇಡಿ.
  • ಕೈಯಿಂದಲೇ ಪಟಾಕಿ ಸಿಡಿಸುವ ಹುಚ್ಚು ಸಾಹಸ ಬೇಡ.
  • ಪಟಾಕಿ ಹಚ್ಚುವ ಜಾಗದಲ್ಲಿ ಕೂತು ಹೆಂಡ ಕುಡಿಯಬೇಡಿ. ಹೆಂಡಕ್ಕೆ ಅಪ್ಪಿ ತಪ್ಪಿ ಕಿಡಿ ತಗುಲಿದರೆ, ಗೋವಿಂದ !
  • ಪಟಾಕಿ ಹಚ್ಚುವ ಕಡೆ ಯಾವುದಕ್ಕೂ ಒಂದು ಬಕೆಟ್ಟು ನೀರಿಟ್ಟುಕೊಂಡಿರಿ.
  • ಸುರ್‌ಸುರ್‌ ಬಾಣವನ್ನು ಉರಿಸಿದ ನಂತರ ಅದರ ಕೆಂಡ ಕೆಲ ನಿಮಿಷ ಜೀವಂತವಾಗಿರುತ್ತದೆ. ಉರಿಸಿದ ಸುರ್‌ಸುರ್‌ ಬಾಣಗಳನ್ನು ತೇವದ ಬಕೆಟ್ಟಿನೊಳಗೆ ಹಾಕುವುದು ಸೇಫು.
  • ಹೂವಿನ ಕುಂಡಗಳು ಕೂಡ ಢಂ ಎಂದು ಸಿಡಿಯುವ ಆತಂಕವಿದೆ. ಅದು ಹೂವಿನಷ್ಟು ಸಲೀಸು ಎಂದು ಕೈಮೇಲೆ ಇಟ್ಟುಕೊಂಡು ಹಚ್ಚಬೇಡಿ.
  • ಢಂ ಢಂ ಪಟಾಕಿ ಹಚ್ಚುವಾಗ ನಿಮ್ಮ ಕೈಯಳತೆ ದೂರದಲ್ಲೇ ನಿಲ್ಲಿ.
  • ಅಕಸ್ಮಾತ್ತಾಗಿ ಸುಟ್ಟ ಗಾಯವಾದರೆ, ಅದನ್ನು ತಣ್ಣೀರಿನಿಂದ ತೊಳೆದು, ಡೆಟಾಲ್‌ ಹಾಕಿ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡುಹೋಗಿ. ಬಟ್ಟೆ ಸುತ್ತುವುದಾಗಲೀ, ಪ್ಲಾಸ್ಟರ್‌ ಹಾಕುವುದಾಗಲೀ ಬೇಡ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X