ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಕು ಬೇಕೇ ಹೊರತು ಆಟಂಬಾಂಬ್‌ ಬೇಡ

By Staff
|
Google Oneindia Kannada News

ದೆಹಲಿ ಸರಕಾರವು ಅತಿಹೆಚ್ಚು ಶಬ್ದ ಮಾಡುವ ಹಾಗೂ ಅತಿಹೆಚ್ಚು ಸ್ಫೋಟಕ ಸಾಮರ್ಥ್ಯದ ಪಟಾಕಿಗಳ ಮಾರಾಟವನ್ನು ನಿಷೇಧಿಸಿದೆ. ದೆಹಲಿಯ ಆರೋಗ್ಯ ಸಚಿವರಾದ ಎ.ಕೆ. ವಾಲಿಯಾ ಅವರು ಸಹ ಪಟಾಕಿಗಳಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯದ ಬಗ್ಗೆ ಮಾತುಗಳನ್ನಾಡಿದ್ದಾರೆ.

ಬೆಂಗಳೂರಿನಲ್ಲಿ ಸಹ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಬಾಣ, ಬಿರುಸುಗಳ ಭರಾಟೆಯಿಂದ ಶಬ್ದಮಾಲಿನ್ಯ ಹಾಗೂ ವಾಯು ಮಾಲಿನ್ಯ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಸುರಕ್ಷತೆಯ ಮಾತುಗಳು ಕೇಳಿಬರುತ್ತವೆಯೇ ಹೊರತು, ಯಾರೂ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲವೇ ವರ್ಷಗಳ ಹಿಂದೆ ಕಡ್ಡಾಯವಾಗಿದ್ದ, ವಾಹನಗಳ ಹೊಗೆ ಪರೀಕ್ಷೆ, ಈಗ ಬಹುತೇಕ ಜನಮಾನಸದಿಂದ ಮರೆಯಾಗಿದೆ. ಪೊಲೀಸರೂ ಮರೆತು ಬಿಟ್ಟಿದ್ದಾರೆ. ಕಚೇರಿಯ ವೇಳೆಯಂತೂ ಜೆ.ಸಿ. ರಸ್ತೆ, ಕೆಂಪೇಗೌಡ ರಸ್ತೆ, ಎಂ.ಜಿ. ರಸ್ತೆ, ಮೇಖ್ರಿ ವೃತ್ತ, ಮಲ್ಲೇಶ್ವರ, ಹೊಸೂರು ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ರಾಜಾಜಿನಗರ ಕಾರ್ಡ್‌ರಸ್ತೆ, ರಿಂಗ್‌ರಸ್ತೆ, ಫ್ಲೈ ಓವರ್‌, ಕನ್ನಿಂಗ್‌ಹ್ಯಾಮ್‌ ರಸ್ತೆ, ಕ್ವೀನ್ಸ್‌ರಸ್ತೆಯೇ ಮೊದಲಾದ ನಗರದ ಬಹುತೇಕ ಎಲ್ಲ ರಸ್ತೆಗಳೂ ಹೊಗೆಯಿಂದ ತುಂಬಿ ಹೋಗಿರುತ್ತವೆ. ಕೆಲವೊಮ್ಮೆ ರಸ್ತೆಯೇ ಕಾಣದಂತೆ ಧೂಮ ಮುಚ್ಚಿರುತ್ತದೆ. ಇದರಲ್ಲಿ ಸೀಮೆ ಎಣ್ಣೆ ಬೆರೆಸಿದ ಪೆಟ್ರೋಲ್‌ ಬಳಸುವ ಆಟೋರಿಕ್ಷಾಗಳ ಪಾಲೂ ಅಪಾರವಾಗಿದೆ. ಹೀಗಾಗಿ ಪರಿಸರ ವಾದಿಗಳು ದೆಹಲಿಯಲ್ಲಿ ಕೈಗೊಂಡಿರುವ ಪಟಾಕಿ ವಿರೋಧಿ ಚಳವಳಿ, ರಾಜ್ಯದ ಮಹಾನಗರಗಳಲ್ಲೂ ನಡೆಯಬೇಕು. ವ್ಯರ್ಥವಾಗಿ ಸುಡುವ ಪಟಾಕಿಯ ಹಣ, ಸದುದ್ದೇಶಕ್ಕೆ ಬಳಸುವಂತಾಗಬೇಕು.

ಶಿವಕಾಶಿಯ ಪ್ರಕಟಣೆ : ಸುಮಾರು ಒಂದೂವರೆ ಲಕ್ಷ ಜನ ಕಾರ್ಮಿಕರು ದುಡಿಯುವಷ್ಟು ಪಟಾಕಿ ಕಾರ್ಖಾನೆಗಳನ್ನು ಉಳ್ಳ ಶಿವಕಾಶಿಯ ಪ್ರಕಟಣೆ ವಾಯುಮಾಲಿನ್ಯದಲ್ಲಿ ವಾಹನಗಳ ಪಾತ್ರವೇ ಹಿರಿದಾಗಿದೆ ಎಂಬುದನ್ನು ಸಾರುತ್ತದೆ. ಪಟಾಕಿ ನಿಷೇಧಿಸಿದರೆ, ಕೇಲವ ಕಾರ್ಮಿಕರಷ್ಟೇ ಅಲ್ಲ ಲಕ್ಷಾಂತರ ಪಟಾಕಿ ಮಾರಾಟಗಾರರೂ ನಿರುದ್ಯೋಗಿಗಳಾಗುತ್ತಾರೆ ಎನ್ನುತ್ತದೆ. ಈ ಸಂಬಂಧ ಪ್ರಕಟಣೆ ನೀಡಿರುವ ಸಂಘ ಈಗ ಬಾಲ ಕಾರ್ಮಿಕರೂ ಕಾರ್ಖಾನೆಗಳಲ್ಲಿಲ್ಲ ಎಂದು ಹೇಳಿದೆ. ಪಟಾಕಿ ವಿರುದ್ಧದ ಈ ಪ್ರಚಾರ ಲಾಭ ಮಾಡಲಾಗದ ಕೆಲವು ವಿದೇಶೀ ಕಂಪನಿಗಳ ಕುತಂತ್ರ ಎಂದೂ ಅದು ಬಣ್ಣಿಸಿದೆ.

ಆದರೂ, ಕೆಲವು ವರ್ಗದ ಸುರುಸುರು ಬತ್ತಿ (ಸ್ಪಾರ್ಕ್‌ಲರ್ಸ್‌), ಬಿರುಸಿನ ಕುಡಿಕೆ (ಫ್ಲವರ್‌ಪಾಟ್ಸ್‌), 7 ವರ್ಣ ಹಾಗೂ ಬಹುವರ್ಣದ ವರ್ಣಮಯ ಬಾಣಗಳು, ಹಾವಿನಮಾತ್ರೆ, ಪೆನ್ಸಿಲ್‌, 10000ವಾಲಾ ಮುಂತಾದ ಕೆಲವು ಪಟಾಕಿಗಳು ಉಂಟು ಮಾಡುವ ವಾಯು ಮಾಲಿನ್ಯ ಅಷ್ಟಿಷ್ಟಲ್ಲ. ಈಗಾಗಲೇ ವಾಹನಗಳಿಂದ ಹೆಚ್ಚುತ್ತಿರುವ ಮಾಲಿನ್ಯದ ಜತೆಗೆ ಗಂಧಕಯುಕ್ತವಾದ ಹೊಗೆ ಮತ್ತಷ್ಟು ಹಾನಿಕಾರಕ ಎಂಬುದರಲ್ಲಿ ಸಂಶಯವಿಲ್ಲ.

ದುಷ್ಟ ಶಕ್ತಿಯ ನಿಗ್ರಹಿಸಿ, ಶಿಷ್ಟತೆಯನ್ನು ಮೆರೆಯುವ ಸಂಕೇತವಾಗಿರುವ ದೀಪಾವಳಿಯಲ್ಲಿ ದೀಪಾಲಂಕಾರದಿಂದಲೇ ಮನ - ಮನೆಗಳಲ್ಲಿ ಬೆಳಕು ಮೂಡಿಸಬಹುದು. ಸ್ತ್ರೀ - ಪುರುಷ ಎಂಬ ಭೇದವಿಲ್ಲದೆ ದೀಪಾವಳಿಯ ಆನಂದವನ್ನು ಸವಿಯಬಹುದು. ಪಟಾಕಿಗಳು ಇಲ್ಲಿ ಮನರಂಜನೆ ಮಾತ್ರ. ಈ ಮನರಂಜನೆಯ ಕಾಲದಲ್ಲಿ ಇತರರ ಮನ ನೋಯದಂತೆ ಹಾಗೂ ನಮಗೂ ನೋವಾಗದಂತೆ ನಾವು ನೀವೆಲ್ಲಾ ಎಚ್ಚರ ವಹಿಸೋಣ. ಈ ನಿಟ್ಟಿನಲ್ಲಿ ಭಾರಿ ಸದ್ದು ಮಾಡುವ ಹಾಗೂ ಧೂಮಜ್ವಾಲೆಯನ್ನು ಹೊರಹೊಮ್ಮಿಸುವ ಪಟಾಕಿಗಳ ನಿಷೇಧ ಅತ್ಯಗತ್ಯ, ಅನಿವಾರ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X