ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಸುಂದರ ಪರಿಸರ.... ಸುಣ್ಣ, ಬಣ್ಣ ಬಳಿದು ಸ್ವಚ್ಛವಾಗಿ ಕಾಣುವ ಕಟ್ಟಡ, ಜನ ವಸತಿ ಪ್ರದೇಶಗಳು, ಹೂಬನಗಳು ಅರಮನೆಯಿಂದ ನಿಂತು ದೃಷ್ಟಿ ನೆಟ್ಟರೆ ಸಾಕು, ಕಣ್ಮುಂದೆ ಬಂದು ನಿಲ್ಲುತ್ತವೆ.

ಸಾಮಾನ್ಯವಾಗಿ ಹೆಚ್ಚಿನ ಪ್ರವಾಸಿಗರು, ಛಾಯಾಗ್ರಾಹಕರು ಹೊರಗೆ ನಿಂತು ಅರಮನೆಯ ದೃಶ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಖುಷಿಡುತ್ತಾರೆ. ಆದರೆ ಅದೇ ಅರಮನೆಯಿಂದ ನಿಂತು ಹೊರಗೆ ನೋಡಿದರೆ ಅದಕ್ಕಿಂತ ಹೆಚ್ಚಿನ ಸುಂದರ ದೃಶ್ಯಗಳು ಕಾಣುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಹಿಂದಿನ ಒಡೆಯರ ಕಾಲದಲ್ಲಿ ರಾಜಪರಿವಾರ ಅರಮನೆ ಮೇಲೆ ಕುಳಿತು ನಗರದ ಸೌಂದರ್ಯವನ್ನು ಸವಿಯುತ್ತಾ ಸಮಯ ಕಳೆಯುತ್ತಿತ್ತು. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅರಮನೆ ಒಳಾಂಗಣವನ್ನು ವೀಕ್ಷಿಸುವುದರಲ್ಲೇ ಸಮಯ ಕಳೆದು ಬಿಡುತ್ತಾರೆ. ಜೊತೆಗೆ ಅರಮನೆಯ ಮೇಲ್ಭಾಗಕ್ಕೆ ತೆರಳಲು ಸಾರ್ವಜನಿಕರಿಗೆ ಅವಕಾಶವಿಲ್ಲದ ಕಾರಣ ಅರಮನೆಯಿಂದ ಹೊರ ನೋಟ ಅಲಭ್ಯ.[ಮೈಸೂರು ದಸರಾ 2016: ಕಣ್ಮನ ಸೆಳೆಯುವ ಚಿತ್ರಗಳು]

ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ. ಕಟ್ಟಡದ ವಿವಿಧೆಡೆ ಸ್ಫಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯ ಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲಾಗಿವೆ.

ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ.[ಮೈಸೂರು ಯುವ ದಸರಾ: ಸ್ಯಾಂಡಲ್ ವುಡ್ ನೈಟ್ಸ್ ಮೂಲಕ ತೆರೆ]

ಅರಮನೆಯ ಸುತ್ತಲೂ ಇರುವ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ ದಿಡ್ಡಿ ಬಾಗಿಲುಗಳು ಗೋಪುರ ಶಿಖರಗಳಿಂದ ಕೆತ್ತನೆಯ ಕಮಾನು ರಚನೆಗಳಿಂದ ಶೋಭಿಸುತ್ತಿದ್ದು, ಅರಮನೆ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಈಗ ಕಾಣುತ್ತಿರುವ ಅರಮನೆಯಂತೆ ಆಗಿನ ಅರಮನೆ ಇರಲಿಲ್ಲವಂತೆ. ಈ ಅರಮನೆಯನ್ನು ಎರಡು ಬಾರಿ ನಿರ್ಮಿಸಲಾಗಿದೆಯಂತೆ.

ದಸರಾ ಬಂತೆಂದರೆ ಮೈಸೂರು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತದೆ. ಇದರೊಂದಿಗೆ ಅರಮನೆಯು ಇಂದ್ರನ ಅಮರಾವತಿ ಹಿಗಿರಬಹುದೇನೋ ಎಂಬ ಊಹೆ ಮೂಡಿಸುತ್ತದೆ. ಇಂತಹ ಅರಮನೆಯ ಮತ್ತೊಂದು ನೋಟದ ಒಂದಷ್ಟು ಅಪರೂಪದ ಚಿತ್ರಗಳು ಇಲ್ಲಿವೆ. ಮೈಸೂರು ಅರಮನೆ ಬಗ್ಗೆ ಹೇಳುವುದಾದರೆ ಅದಕ್ಕೆ ತನ್ನದೇ ಇತಿಹಾಸವಿದೆ. ಜೊತೆಗೆ ಸೌಂದರ್ಯದಿಂದ ವಿಶ್ವವಿಖ್ಯಾತಿಯನ್ನು ಪಡೆದಿದೆ.

ಕಟ್ಟಿಗೆ ಮತ್ತು ಇಟ್ಟಿಗೆ

ಕಟ್ಟಿಗೆ ಮತ್ತು ಇಟ್ಟಿಗೆ

ಮೈಸೂರು ಅರಮನೆ ಎಂದಾಕ್ಷಣ ವಿದ್ಯುತ್ ದೀಪಗಳಿಂದ ಝಗಮಗಿಸುವ ಭವ್ಯ ಅಂಬಾವಿಲಾಸ ಅರಮನೆಯ ಚಿತ್ರಣ ಎಲ್ಲರ ಕಣ್ಮುಂದೆ ಹಾದುಹೋಗುತ್ತದೆ. ವಿದ್ಯುದ್ದೀಪವಿಲ್ಲದಿದ್ದರೂ ಅರಮನೆಯ ಅಂದಕ್ಕೆ ಅರಮನೆಯೇ ಸಾಟಿ. ಇತಿಹಾಸದ ಮೆಲುಕು ಹಾಕಿದರೆ ಹಳೆಯ ಅರಮನೆ 1800 ಮತ್ತು 1804ರಲ್ಲಿ ಕಟ್ಟಲಾಗಿತ್ತು. ಈ ಅರಮನೆಯು ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದರಿಂದ ಆಕಸ್ಮಿಕ ಬೆಂಕಿಗೆ ಆಹುತಿಯಾಯಿತು.

ಸಾಂಬ್ರಾಣಿ ಕೆಂಡ

ಸಾಂಬ್ರಾಣಿ ಕೆಂಡ

1897ರ ಫೆಬ್ರುವರಿ 28ರಂದು ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದ ಹಿರಿಯ ಪುತ್ರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ಜರುಗಿತು. ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಕೆಂಡವೊಂದು ಕೆಳಗೆ ಬಿದ್ದು ತೇಗದ ಮರಕ್ಕೆ ಬೆಂಕಿ ಹತ್ತಿಕೊಂಡು ಉರಿಯತೊಡಗಿತ್ತು.

ಎಂಟು ಸಾವಿರ ಮಂದಿ ಪ್ರಯತ್ನ

ಎಂಟು ಸಾವಿರ ಮಂದಿ ಪ್ರಯತ್ನ

ಈ ಬೆಂಕಿಯನ್ನು ಸುಮಾರು 8000 ಮಂದಿ ಸೇರಿ ನಂದಿಸಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ. ಆದರೆ ಅರಮನೆಯಲ್ಲಿದ್ದ ರಾಜವಂಶಸ್ಥರನ್ನು ಯಾವುದೇ ಪ್ರಾಣಾಪಾಯವಾಗದಂತೆ ಕಾಪಾಡಲಾಗಿತ್ತು. ಬಳಿಕ ರಾಜವಂಶಸ್ಥರು ಸಮೀಪದ ಜಗನ್ಮೋಹನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಹೊಸ ಮಾದರಿ

ಹೊಸ ಮಾದರಿ

ಆ ನಂತರ ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹೊಸ ಮಾದರಿಯಲ್ಲಿ ಅರಮನೆ ನಿರ್ಮಿಸಲು ತೀರ್ಮಾನಿಸಲಾಯಿತು. ಇದರ ಜವಾಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿ ಇರ್ವಿನ್ ಅವರಿಗೆ ವಹಿಸಲಾಯಿತು.

ಬ್ರಿಟಿಷ ಸೈನಿಕ ತೆಗೆದ ಫೋಟೋ

ಬ್ರಿಟಿಷ ಸೈನಿಕ ತೆಗೆದ ಫೋಟೋ

ಆದರೆ, ಹಿಂದೆಯಿದ್ದ ಕಟ್ಟಿಗೆಯ ಅರಮನೆಯಂತೆ ಅದೇ ವಿನ್ಯಾಸದಲ್ಲಿ ಹೊಸ ಅರಮನೆಯನ್ನು ನಿರ್ಮಿಸಬೇಕಾಗಿತ್ತು. ಆದರೆ ಅದರ ನೀಲಿ ನಕ್ಷೆ ಇರಲಿಲ್ಲ. ಆ ಬ್ರಿಟಿಷ್ ಸೈನಿಕನೊಬ್ಬ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಫೋಟೋ ಅಧಿಕಾರಿಗಳ ಬಳಿಯಿತ್ತು. ಅದನ್ನು ಪಡೆದುಕೊಂಡ ಹೆನ್ರಿ ಇರ್ವಿನ್ ಅದರಂತೆ ಅರಮನೆ ನಿರ್ಮಿಸಲು ಮುಂದಾದ.

ಹನ್ನೆರಡು ಸಾವಿರ ಖರ್ಚು

ಹನ್ನೆರಡು ಸಾವಿರ ಖರ್ಚು

ಅರಮನೆಯ ನಕಾಶೆ ರೂಪಿಸಿದ ಹೆನ್ರಿ ಇರ್ವಿನ್ ಗೆ ಅವತ್ತು ನೀಡಿದ ಶುಲ್ಕ 12 ಸಾವಿರವಂತೆ. ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರ ರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು. ಇದಕ್ಕಾಗಿ ಒಡೆಯರ್ ಮಾಡಿದ ಖರ್ಚು 2439 ರುಪಾಯಿ 4 ಆಣೆ 8 ಕಾಸಂತೆ.

ಕುಸುರಿ ಕೆತ್ತನೆ

ಕುಸುರಿ ಕೆತ್ತನೆ

ಜೊತೆಗೆ ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಅರಮನೆಯ ನಿರ್ಮಾಣದ ಸಂದರ್ಭ ಅನುಸರಿಸಲಾಯಿತು ಎನ್ನಲಾಗಿದೆ. ನಂತರ 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913 ರುಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು.

ಸ್ಫಟಿಕದ ಗಟ್ಟಿ ಶಿಲೆ

ಸ್ಫಟಿಕದ ಗಟ್ಟಿ ಶಿಲೆ

ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆ ನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಫಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ವಿಶಾಲ ಸಭಾಮಂದಿರ

ವಿಶಾಲ ಸಭಾಮಂದಿರ

ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲಾಗಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ.

ಆಯುಧಶಾಲೆ, ಪುಸ್ತಕ ಭಂಡಾರ

ಆಯುಧಶಾಲೆ, ಪುಸ್ತಕ ಭಂಡಾರ

ಅಂಗಳದ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ.

ಹೊಯ್ಸಳ ರೀತಿ ಕಲಾಕೃತಿ

ಹೊಯ್ಸಳ ರೀತಿ ಕಲಾಕೃತಿ

ಅರಮನೆಯ ದಕ್ಷಿಣ ಭಾಗದಲ್ಲಿ ರಾಣೀವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಇವು ಅಂಬಾವಿಲಾಸ ಸಭಾಭವನದವರೆಗೂ ವಿಸ್ತರಿಸಿವೆ. ಮಧ್ಯಭಾಗದ ಮೂರು, ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ.

ಪ್ರಭಾವಯುತ ಗೋಪುರ

ಪ್ರಭಾವಯುತ ಗೋಪುರ

ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ. ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ.

ಹಿಂದೂ-ಗ್ರೀಕ್ ಶಿಲ್ಪಕಲೆ

ಹಿಂದೂ-ಗ್ರೀಕ್ ಶಿಲ್ಪಕಲೆ

ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ. ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲಾಗಿದೆ. ಅಲ್ಲದೆ ಉಚ್ಚ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ.

ಅರಮನೆ ಝಗಮಗ

ಅರಮನೆ ಝಗಮಗ

1939ರಲ್ಲಿ ಅರಮನೆಯ ಮುಂದೆ ಇದ್ದಂತಹ ಪೋರ್ಟಿಕೋವನ್ನು ತೆರವುಗೊಳಿಸಿ ಅಲ್ಲಿಂದ ನೇರವಾಗಿ ದರ್ಬಾರ್ ಹಾಲ್ ಕಾಣುವಂತೆ ಮಾಡಲಾಯಿತು. ಅರಮನೆಯ ಮುಂಭಾಗದಲ್ಲಿರುವ ಉದ್ಯಾನವನ ಸುಂದರವಾಗಿದ್ದು ಅರಮನೆಗೆ ಶೋಭೆ ತಂದಿದೆ. ಅರಮನೆಯನ್ನು ಸುಮಾರು 97 ಸಾವಿರ ವಿದ್ಯುತ್ ಬಲ್ಬ್ ಗಳಿಂದ ಅಲಂಕರಿಸಲಾಗಿದೆ. ರಾತ್ರಿ ವೇಳೆ ಝಗಮಗಿಸುವ ಅರಮನೆ ಕಣ್ಣಿಗೆ ಹಬ್ಬ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore palace is very beautiful. Tourists take pictures of palace from outside. It is very rare to take outside the palace pictures when they are in. Here some of the photos which helps to enjoy the beauty of Mysore palace.
Please Wait while comments are loading...