ಮೈಸೂರು ದಸರಾ ಖಾಸಗಿ ದರ್ಬಾರ್ ಅಂದರೆ...

ಮೈಸೂರು ದಸರಾದ ಮೆರುಗು ದಿನದಿನಕ್ಕೂ ಹೆಚ್ಚುತ್ತಿದೆ. ಪುರಾಣಗಳಲ್ಲಿ ಓದಿದ್ದ ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತಿರುವ ಅರಮನೆಯಲ್ಲಿ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನತಣಿಸುತ್ತಿದ್ದರೆ, ಮತ್ತೊಂದೆಡೆ ಖಾಸಗಿ ದರ್ಬಾರ್ ರಾಜವೈಭವ ಮರುಕಳಿಸುವಂತೆ ಮಾಡಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಿಕ ಪಟ್ಟದ ಕತ್ತಿಯನ್ನಿಟ್ಟು ಸಾಂಪ್ರದಾಯಿಕ ದರ್ಬಾರ್ ನಡೆಸಲಾಗಿತ್ತು. ಈ ಬಾರಿ ಖಾಸಗಿ ದರ್ಬಾರ್ ಗೆ ಕಳೆ ಬಂದಿದೆ. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ, ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ.[ಯುವ ದಸರಾದಲ್ಲಿ ಟುವ್ವಿ ಟುವ್ವಿ ಎಂದ ಶಿವರಾಜ್ ಕುಮಾರ್]

ರೇಷ್ಮೆ, ರತ್ನ ಖಚಿತ ಪೋಷಾಕು
ದರ್ಬಾರ್ ವೀಕ್ಷಿಸುವ ಮಂದಿಗೆ ಇತಿಹಾಸದ ರಾಜರ ಆಡಳಿತ ಕಣ್ಮುಂದೆ ಬಂದ ಅನುಭವವಾಗುತ್ತಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರೇಷ್ಮೆ,ರತ್ನಖಚಿತ ಪ್ರಜ್ವಲಿಸುವ ರಾಜಪೋಷಾಕು ಧರಿಸಿ ಮಹಾರಾಜರ ಗತ್ತು-ಗಾಂಭೀರ್ಯದಲ್ಲಿ ಸಿಂಹಾಸನವನ್ನೇರಿ ಎಲ್ಲರಿಗೂ ಬಲಗೈಎತ್ತಿ ಸೆಲ್ಯೂಟ್ ಮಾಡಿ ಬಳಿಕ ಆಸೀನರಾಗುವ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಅರಮನೆಯಲ್ಲಿ ಚಂಡಿಕಾ ಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಅನೇಕ ಪೂಜಾವಿಧಿಗಳು ಸಾಂಗೋಪವಾಗಿ ನಡೆದು, ದೇವಿ ಭಾಗವತ ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ರಕ್ತವರ್ಣವನ್ನು ಸುರಿಯಲಾಗುತ್ತದೆ.[ದಸರಾ ಹಬ್ಬಕ್ಕಾಗಿ ಮೈಸೂರಿಗೆ ತತ್ಕಾಲ್ ರೈಲು ಓಡಲಿದೆ!]

ಯದುವೀರ್ ಒಡೆಯರ್ ದಂಪತಿ ಪೂಜೆ
ಕಾಳಿಕಾ ಪುರಾಣದ ಪ್ರಕಾರ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುನ್ನ ಬೆಳಗ್ಗೆ ರತ್ನಸಿಂಹಾಸನಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಈ ಮಧ್ಯೆ ಕಂಕಣಧಾರಿಗಳಾದ ಯದುವೀರ್ ಒಡೆಯರ್ ದಂಪತಿಗೆ ದಂಪತಿಪೂಜೆ ಮಾಡಲಾಗುತ್ತದೆ. ಹಾಗೆಯೇ ದರ್ಬಾರಿಗೆ ಬರುವುದಕ್ಕೂ ಮೊದಲು ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸುಮಂಗಲೆಯರೊಡನೆ ಯದುವೀರ್ ಅವರ ಪಾದಪೂಜೆ ಮಾಡಿ, ಹಣೆಗೆ ತಿಲಕ ಇಡುತ್ತಾರೆ.

ಹತ್ತು ದಿನಗಳೂ ಒಡೆಯರ್ ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತದೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ನಡೆಯುತ್ತದೆ. ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆ ಆರತಿ ಮಾಡಲಾಗುತ್ತದೆ.[ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..]

ಹೊಗಳುಭಟರಿಂದ ಬಹುಪರಾಕ್
ಆ ನಂತರ ರಾಜ ಗಾಂಭೀರ್ಯದಿಂದ ರತ್ನಸಿಂಹಾಸನ ಏರಿ, ಆ ಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಾರೆ. ಆಗ ಹೊಗಳು ಭಟರು ರಾಜಾಧಿರಾಜ, ರಾಜ ಮಾರ್ತಾಂಡ, ಶ್ರೀಮನ್ಮಹಾರಾಜ, ಬಹುಪರಾಕ್... ಮುಂತಾದ ಪರಾಕುಗಳನ್ನು ಮೊಳಗಿಸುತ್ತಾರೆ.

ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಬೆಳಿಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತದೆ. ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತದೆ. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಮಾತ್ರ ಖಾಸಗಿ ದರ್ಬಾರಿನಲಿ ಪಾಲ್ಗೊಳ್ಳುತ್ತಾರೆ.[ಗಾಂಧೀಜಿಗೂ ಪ್ರಿಯವಾಗಿತ್ತಂತೆ ಮೈಸೂರು!]

ಖಾಸಗಿ ದರ್ಬಾರ್
ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ, ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಆರಂಭವಾಗುತ್ತದೆ.

ಸಿಂಹಾಸನಾರೂಢರಾದ ಯದುವೀರ್ ಒಡೆಯರ್ ಗೆ ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವುದು ನಡೆಯುತ್ತದೆ. ನಂತರ ಸಿಂಹಾಸನಾರೂಢ ಯದುವೀರ್ ಒಡೆಯರ್ ಅವರು ರಾಜಪರಿವಾರದ ಮಂದಿಗೆ ಕಾಣಿಕೆ ನೀಡುತ್ತಾರೆ. ಪ್ರತಿ ದಿನವೂ ಸಂಪ್ರದಾಯ ಬದ್ಧವಾಗಿ ದರ್ಬಾರ್ ನಡೆಯುತ್ತದೆ.[ಮೈಸೂರು ದಸರಾ ಗಜಪಡೆಗಳಿಗೆ ನಡೆಯುತ್ತಿದೆ ರಾಜಾತಿಥ್ಯ!]

ಸಪ್ತಶತಿ ಪಾರಾಯಣ
ದರ್ಬಾರ್ ಸಂದರ್ಭದಲ್ಲಿ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿ ರಾತ್ರಿ ಆಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಟಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ ದರ್ಬಾರ್ ಎಂದರೆ ರಾಜಪ್ರತಿಷ್ಠೆ ಮೆರೆಯುವುದಲ್ಲ. ಪ್ರಜೆಗಳ ಕಷ್ಟ ಅರಿಯುವುದು. ಹೀಗಾಗಿಯೇ ಹಿಂದಿನ ಕಾಲದಿಂದಲೂ ಕಠಿಣ ವ್ರತ, ಸಂಪ್ರದಾಯ ಪಾಲನೆ, ಧಾರ್ಮಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

ಜನ ಸಾಮಾನ್ಯರಿಗೆ ಪ್ರವೇಶ ನಿಷೇಧ

ಜನ ಸಾಮಾನ್ಯರಿಗೆ ಪ್ರವೇಶ ನಿಷೇಧ

ಅರಮನೆ ಹೊರಗೆ ದಸರಾ ಅಂಗವಾಗಿ ನೂರಾರು ಕಾರ್ಯಕ್ರಮಗಳು ನಡೆದರೂ ಅರಮನೆ ಒಳಗೆ ದರ್ಬಾರ್ ಹಾಲ್ ನಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧ. ಕೆಲವರಿಗೆ ಮಾತ್ರ ಇದನ್ನು ನೋಡುವ ಅವಕಾಶ ಸಿಗುತ್ತದೆ. ಹಾಗಾಗಿಯೇ ಇದನ್ನು ಖಾಸಗಿ ದರ್ಬಾರ್ ಅನ್ನುತ್ತಾರೆ.

ಸಂಪ್ರದಾಯಬದ್ಧ ಪೂಜೆ

ಸಂಪ್ರದಾಯಬದ್ಧ ಪೂಜೆ

ಹಿಂದಿನ ಮಹಾರಾಜರು ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯ ನೆರವೇರಿಸಿ, ನಿತ್ಯವೂ ಮುಕ್ಕಾಲು ಗಂಟೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸುತ್ತಿದ್ದರು. ಅದನ್ನು ಇದೀಗ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಇದು ಖಾಸಗಿ ದರ್ಬಾರ್ ಆಗಿ ಬದಲಾಗಿದೆ. ಕಳೆದ ವರ್ಷದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಅಲಂಕರಿಸಿ ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುತ್ತಿದ್ದಾರೆ.

ಮೊದಲ ದಿನ..

ಮೊದಲ ದಿನ..

ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಆರತಿ ಎತ್ತಿ, ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಕ್ಷೌರ ಮಾಡಿಸಿ, ನಂತರ ಮಂಗಳಸ್ನಾನ ಮಾಡಿಸಲಾಗುತ್ತದೆ. ನಂತರ ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗುತ್ತಾರೆ.

ರಾಜಮನೆತನದ ಪದ್ಧತಿ

ರಾಜಮನೆತನದ ಪದ್ಧತಿ

ಆ ನಂತರ ಪೂಜೆಗೆ ಅಣಿಯಾದ ಯದುವೀರ್ ಒಡೆಯರ್, ಮೊದಲಿಗೆ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡುತ್ತಾರೆ. ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ, ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಯದುವೀರ್ ಒಡೆಯರ್ ಜೊತೆಗೆ ಅವರ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಾರೆ.

ಪೂಜೆ, ಅಷ್ಟೋತ್ತರ

ಪೂಜೆ, ಅಷ್ಟೋತ್ತರ

ದುರ್ಗೆಯ ದಿವ್ಯಸ್ವರೂಪಗಳನ್ನು ಆರಾಧಿಸಿ ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸಿ, ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತದೆ. ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳು ನಡೆದು, ಅಷ್ಟೋತ್ತರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+